ಬುಧವಾರ, ಆಗಸ್ಟ್ 4, 2021
25 °C
ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ವರ್ಷದ ಫಲಿತಾಂಶ ಟಾಪ್‌–10 ಒಳಗೆ ತರಲು ಯತ್ನ

ಫಲಿತಾಂಶ ಸುಧಾರಣೆಗೆ ಪರಿಣಾಮಕಾರಿ ಹೆಜ್ಜೆ: ಸಚಿವ ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಮುಂದಿನ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಫಲಿತಾಂಶಗಳಲ್ಲಿ ಜಿಲ್ಲೆಯನ್ನು ಟಾಪ್‌–10 ಸ್ಥಾನದಲ್ಲಿ ತರುವ ಯತ್ನ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

‘ಕಳೆದ ಹಲವು ವರ್ಷಗಳಿಂದಲೂ ಫಲಿತಾಂಶದಲ್ಲಿ ಜಿಲ್ಲೆಯ ಅತ್ಯಂತ ಕಳಪೆ ಫಲಿತಾಂಶ ಪಡೆಯುತ್ತಿದೆ. ಇದನ್ನು ಸುದಾರಿಸಲು ಪರಿಣಾಮಕಾರಿ ಕ್ರಮ ಅನುಸರಿಸಲಾಗುವುದು. ಗುರುರಾಜ ಕರಜಗಿ ಅವರಂಥ ಶಿಕ್ಷಣ ತಜ್ಞರು, ಅನುಭವಿಗಳು, ನಿವೃತ್ತ ಅಧಿಕಾರಿಗಳು, ಈಗಾಗಲೇ ಉತ್ತಮ ಫಲಿತಾಂಶ ಪಡೆಯುತ್ತಿರುವ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳನ್ನು ಕರೆತಂದು ರೂಪುರೇಶೆ ಸಿದ್ಧಪಡಿಸಲಾಗುವುದು’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಲಬುರ್ಗಿ ವಿಷನ್‌:2050’ ಮೂವತ್ತು ವರ್ಷಗಳ ನಂತರದ ಯೋಜನೆ ಎಂಬ ಕಲ್ಪನೆ ಇದೆ. ಆದರೆ, ಇದರಲ್ಲಿ ಮೂರು ಭಾಗಗಳಿವೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಅಭಿವೃದ್ಧಿ. ಕೆಲವು ಪ್ರಯತ್ನಗಳನ್ನು ಕೆಲವೇ ವರ್ಷಗಳಲ್ಲಿ ಮಾಡಿ ಮುಗಿಸಬೇಕಿದೆ. ಅಂಥವುಗಳಲ್ಲಿ ಶಿಕ್ಷಣ ಸುಧಾರಣೆಯೂ ಸೇರಿದೆ. ಮುಂದಿನ ಎರಡು ವರ್ಷಗಳಲ್ಲಿ ಶತಾಯ– ಗತಾಯ ಸುಧಾರಣೆ ಮಾಡುವ ಪಣ ತೊಟ್ಟಿದ್ದೇವೆ’ ಎಂದೂ ಹೇಳಿದರು.‌

‘ಜಿಲ್ಲೆಯ ಶಿಕ್ಷಣ ತಜ್ಞರ ಜತೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ, ಶಿಕ್ಷಣ ಆಯುಕ್ತರು ಹಾಗೂ ಎಲ್ಲ ಹಂತದ ಶಿಕ್ಷಣಾಧಿಕಾರಿಗಳು ಚರ್ಚೆ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ಇದರ ಪೂರ್ಣ ಜವಾಬ್ದಾರಿ ಹೊರಲಿದ್ದಾರೆ’ ಎಂದರು.

‌ಸಮಗ್ರ ವರದಿಯ ಸಿದ್ಧತೆ: ‘ವಿಷನ್: 2050’ ಅನುಷ್ಠಾನ ಕುರಿತು ಇನ್ನೂ ಯಾವುದೇ ಸಮಿತಿಗಳನ್ನು ರಚನೆ ಮಾಡಿಲ್ಲ. ಕರಡು ಪ್ರತಿಗಳನ್ನು ಮಾತ್ರ ಸಿದ್ಧಗೊಳಿಸಲಾಗಿದೆ. ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಸರಿ– ತಪ್ಪುಗಳನ್ನು ಗಮನಿಸಿ ಅಂತಿಮಗೊಳಿಸಲಾಗುವುದು. ಈ ಭಾಗದ ಅಭಿವೃದ್ಧಿಗೆ ಡಾ.ಡಿ.ಎಂ. ನಂಜುಂಡಪ್ಪ ಅವರು ನೀಡಿದ ವರದಿ, ಕೆಕೆಆರ್‌ಡಿಬಿ ಸಿದ್ಧಪಡಿಸಿದ ಮೂಲಸೌಕರ್ಯಗಳ ವರದಿ, ಹಿಂದಿನ ಯೋಜನೆಗಳಲ್ಲಾದ ಸೋಲಿಗೆ ಕಾರಣಗಳು... ಹೀಗೆ ಎಲ್ಲವನ್ನೂ ಸೇರಿಸಿ ಮುನ್ನಡೆಯಲಾಗುವುದು’ ಎಂದೂ ನಿರಾಣಿ ತಿಳಿಸಿದರು.

‘‌ಜಿಮ್ಸ್‌ ಘಟನೆ: ತಪ್ಪಿತಸ್ಥರ ವಿರುದ್ಧ ಕ್ರಮ’: ಜಿಮ್ಸ್ ಆಸ್ಪತ್ರೆಯಲ್ಲಿ ನಡೆದ ಮಹಿಳೆ ಮೇಲಿನ ಅತ್ಯಾಚಾರ ಯತ್ನ, ಚುಚ್ಚುಮದ್ದು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿಸ್ಥರ ಮೇಲೆ ಕ್ರಮ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಸಚಿವ ಹೇಳಿದರು.

ಸ್ಥಳಾಂತರ: ಅಧ್ಯಯನಕ್ಕೆ ಸಮಿತಿ

‘‌ಪದೇಪದೇ ಪ್ರವಾಹಕ್ಕೆ ಒಳಗಾಗುವ ನದಿ ತೀರದ ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಿದೆ. ಆದರೆ, ಸ್ಥಳಾಂತರ ಮಾಡಿದರೂ ಜನರು ಅಲ್ಲಿಗೆ ಹೋಗದೇ ಹಳೆಯ ಊರುಗಳಲ್ಲೇ ಉಳಿಯುತ್ತಾರೆ. ಇದಕ್ಕೆ ಕಾರಣವೇನು ಎಂದು ಅರಿಯಲು ಒಂದು ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

‌‌‘ರಾಜ್ಯದ 330ಕ್ಕೂ ಹೆಚ್ಚು ಹಳ್ಳಿಗಳನ್ನು ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಳಾಂತರಿಸಲಾಗಿದೆ. ಅಲ್ಲಿ ಎಲ್ಲ ಸೌಕರ್ಯಗಳು ಇದ್ದಾಗಲೂ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲಿಲ್ಲ. ಕಾರಣವೇನು ಅರ್ಥ ಮಾಡಿಕೊಳ್ಳಲು ಸಮಿತಿಯೊಂದನ್ನು ರಚಿಸಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು