ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಸಾಯಿಖಾನೆ ಮುಚ್ಚಲು ಕಟ್ಟುನಿಟ್ಟಿನ ಆದೇಶ

ಗೋಹತ್ಯೆ ನಿಷೇಧವೇ ಆದ್ಯತೆ: ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಪ್ರಭು ಚವಾಣ್ ತಾಕೀತು
Last Updated 9 ಅಕ್ಟೋಬರ್ 2021, 6:47 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದ ಇತರ ಭಾಗಗಳಿಗಿಂತ ಕಲಬುರ್ಗಿ ಜಿಲ್ಲೆಯಲ್ಲಿಯೇ ಗೋಹತ್ಯೆ ವಿಪರೀತವಾಗಿದೆ. ಇದನ್ನು ನಿಯಂತ್ರಿಸಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಇನ್ನೂ ಚಾಲ್ತಿಯಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾಯ್ದೆಯನ್ನು ಈ ಹಿಂದಿಗಿಂತ ಈಗ ಹೆಚ್ಚು ಪರಿಷ್ಕರಣೆ ಮಾಡಲಾಗಿದೆ. ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ಓದಿ, ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಕಾನೂನು ತಿಳಿವಳಿಕೆ ಇದ್ದರೆ ಮಾತ್ರ ಅಪರಾಧ ನಿಯಂತ್ರಣ ಮಾಡಲು ಸಾಧ್ಯ. ಕಾರಣ, ಯಾವ ಅಧಿಕಾರಿ ಇದನ್ನು ನಿರ್ಲಕ್ಷ್ಯ ಮಾಡುತ್ತಾರೋ ಅವರಿಗೆ ನಾನೇ ‘ಪಾಠ’ ಕಲಿಸಬೇಕಾಗುತ್ತದೆ’ ಎಂದರು.

‘ಇಲಾಖೆ ಅಧಿಕಾರಿಗಳು, ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಈ ಕಾನೂನಿನ ಆಶಯ ಈಡೇರಿಸಬೇಕು’ ಎಂದರು.

ಪ್ರಾಣಿ ಕಲ್ಯಾಣ ಮಂಡಳಿ: ‘ಪ್ರಾಣಿಗಳ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ.ಪ್ರಾಣಿಗಳ ಹಿಂಸೆ ತಡೆಯಲು, ವೈಜ್ಞಾನಿಕ ಸಾಗಣೆ ಮತ್ತು ಸಂರಕ್ಷಣೆಗೆ ಈ ಮಂಡಳಿ ಕಾರ್ಯಸೂಚಿ ನೀಡುತ್ತದೆ. ಮಂಡಳಿ ಸದಸ್ಯರು ನೀಡುವ ಸಲಹೆಗಳನ್ನು ಹಗುರವಾಗಿ ನೋಡುವಂತಿಲ್ಲ’ ಎಂದೂ ಸಚಿವ ಚವಾಣ್‌ ಹೇಳಿದರು.

12 ವರ್ಷಗಳ ಬಳಿಕ ಬಡ್ತಿ: ‘ಇಲಾಖೆ ಯಲ್ಲಿ 12 ವರ್ಷಗಳಿಂದ ನನೆಗು ದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಬಹುಪಾಲು ಸಿಬ್ಬಂದಿ ಬಡ್ತಿ ಪಡೆದಿದ್ದಾರೆ. ಇನ್ನೂ ಹಲವು ಹುದ್ದೆಗಳು ಖಾಲಿ ಇದ್ದು, ಆದಷ್ಟು ಬೇಗ ಭರ್ತಿ ಮಾಡಲಾಗುವುದು’ ಎಂದರು.

ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ, ನಗರ ಪೊಲೀಸ್‌ ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಶ್‌ ಶಶಿ,ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎಸ್.ಪಾಟೀಲ ಇದ್ದರು.

ಅಧಿಕಾರಿಗಳಿಗೆ ಪಾಠ: ಸಭೆಯ ಆರಂಭದಲ್ಲಿ ಎಲ್ಲ ತಾಲ್ಲೂಕಿನ ಅಧಿಕಾರಿಗಳು ಹಾಗೂ ಪಶುವೈದ್ಯರಿಂದ ಸಚಿವ ಮಾಹಿತಿ ಪಡೆಯಲು ಮುಂದಾದರು. ಈ ಹಿಂದಿನ ಕಾನೂನು ಏನಿತ್ತು? ನಾನು ಮಂತ್ರಿಯಾದ ಮೇಲೆ ಏನೇನು ಬದಲಾವಣೆ ಮಾಡಿದ್ದೇನೆ? ಹೊಸ ಕಾಯ್ದೆ ಏನು ಹೇಳುತ್ತದೆ..? ಎಂಬಿತ್ಯಾದಿ ಪ್ರಶ್ನೆಗಳನ್ನು ಎಲ್ಲರನ್ನೂ ಸಾಲಾಗಿ ಕೇಳಿದರು. ಈ ವೇಳೆ ಸಚಿವರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಕೆಲ ಅಧಿಕಾರಿಗಳನ್ನೂ ಅವರು ತರಾಟೆ ತೆಗೆದುಕೊಂಡರು.

100 ಎಕರೆ ಗೋಮಾಳ ಗುರುತಿಸಿ
‘ನಗರ ಹೊರವಲಯದಲ್ಲಿ ಗೋಮಾಳಕ್ಕಾಗಿ 100 ಎಕರೆ ಜಾಗ ಗುರುತಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಈ ಕೆಲಸ ಬೇಗ ಮುಗಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸಚಿವ ಪ್ರಭು ಚವಾಣ್‌ ಸೂಚಿಸಿದರು.

ಪ್ರತಿ ತಾಲ್ಲೂಕಿನಲ್ಲಿರುವ ಗೋಮಾಳ ಜಮೀನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಬೇಕು. ತಾಲ್ಲೂಕಿಗೊಂದು ಗೋಶಾಲೆ ತೆರೆಯಲು ಇದು ಸಹಕಾರಿ. ಈ ಹಿಂದೆ ಇದ್ದ ಗೋಮಾಳಗಳ ಸರ್ವೆ ಮಾಡಬೇಕು. ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿ ಅತಿಕ್ರಮಣ ಗೋಮಾಳಗಳನ್ನು ತರವು ಮಾಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT