ಕಲಬುರಗಿ: ‘ಆಳಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದಕ್ಕೆ ಶಾಸಕ ಬಿ.ಆರ್.ಪಾಟೀಲ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಪಡಿತರ ಆಹಾರ ಧಾನ್ಯ, ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಹಾರ ಧಾನ್ಯ ಮತ್ತು ಮೊಟ್ಟೆ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಬಿ.ಆರ್. ಪಾಟೀಲ ಮತ್ತು ಆರ್. ಕೆ. ಪಾಟೀಲ ಅವರೇ ಹೊಣೆ’ ಎಂದು ಆಪಾದಿಸಿದರು.
‘ಬಿ.ಆರ್. ಪಾಟೀಲ ಮತ್ತು ಅವರ ಬೆಂಬಲಿಗರ ಅಕ್ರಮ ಬಯಲಿಗೆಳೆಯುತ್ತಿರುವುದರಿಂದ ಸಂಬಂಧವೇ ಇರದ ಲಾರಿಯನ್ನು ಹಿಡಿದು ಚಾಲಕನನ್ನು ಹೊಡೆದು ಬೆದರಿಸಿ ಪಡಿತರ ಅಕ್ಕಿ ಅಕ್ರಮ ಸಾಗಣೆಯಲ್ಲಿ ನನ್ನ ಹೆಸರು ಹೇಳಲು ಒತ್ತಾಯಿಸಿದ್ದಾರೆ. ಲಾರಿ ಚಾಲಕ ದೂರು ಕೊಟ್ಟರೂ ಪ್ರಕರಣ ದಾಖಲಿಸುತ್ತಿಲ್ಲ. ಲಾರಿ ಚಾಲಕನಿಗೆ ಜೀವ ಬೆದರಿಕೆ ಹಾಕಿದ ಶಾಸಕರ ಬೆಂಬಲಿಗರಾದ ಫಿರ್ದೋಸ್ ಅನ್ಸಾರಿ, ಪಿಂಟು ಜಮಾದಾರ ಮತ್ತು ಅವರ ಸಂಗಡಿಗರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದರು.
‘ಶಾಸಕರು ಯಾರ ಕೈಗೂ ಸಿಗುತ್ತಿಲ್ಲ. ಬೇಡಿಕೆ ತೆಗೆದುಕೊಂಡ ಹೋದ ಜನರನ್ನು ಬೈಯುತ್ತಾರೆ. ಇಲಾಖೆಗೆ ಒಬ್ಬರು ಕಾರ್ಯಕರ್ತರನ್ನು ನೇಮಿಸಿಕೊಂಡು ಆರ್.ಕೆ. ಪಾಟೀಲ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಕೋರ್ಟ್‌ನಿಂದ ಗಡಿಪಾರು ಶಿಕ್ಷೆಗೆ ಒಳಗಾಗಿ ಜೈಲು ಶಿಕ್ಷೆ ಅನುಭವಿಸಿ ಬಂದಿರುವ ಫಿರ್ದೋಸ್ ಅನ್ಸಾರಿ ಪುರಸಭೆ ಸದಸ್ಯನಾಗಿದ್ದು, ನಿಯಮದಂತೆ ಸಭೆಗೆ ಹಾಜರಾಗಿಲ್ಲ. ಆತನ ಸದಸ್ಯತ್ವ ರದ್ದು ಮಾಡಲು ದೂರು ನೀಡಲಾಗಿದೆ. ಆದರೆ ಜಿಲ್ಲಾಧಿಕಾರಿ ಒತ್ತಡದಲ್ಲಿದ್ದಂತೆ ಕಂಡುಬರುತ್ತಿದೆ. ಅದಕ್ಕೆ ಪ್ರಕರಣ ದಾಖಲಾಗಿಲ್ಲ. ಈಗ ಫಿರ್ದೋಸ್ ಆಳಂದದಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ’ ಎಂದು ಆಪಾದಿಸಿದರು.
‘ತಾಲ್ಲೂಕಿನಲ್ಲಿ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಕುರಿತು ದೂರು ನೀಡಲಾಗಿದೆ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಹರ್ಷಾನಂದ ಎಚ್ಚರಿಸಿದರು.
ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡ ಹಣಮಂತರಾವ ಮಾಲಾಜಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ಬಾಬುರಾವ್ ಸರಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.