ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಮುಂಗಾರು ಬಿತ್ತನೆ ಶೇ 85 ಪೂರ್ಣ

Published 26 ಜೂನ್ 2024, 5:12 IST
Last Updated 26 ಜೂನ್ 2024, 5:12 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಈಗಾಗಲೇ ಐನಾಪುರ ಸುತ್ತಲಿನ ಪ್ರದೇಶದಲ್ಲಿ ಶೇ 90ರಷ್ಟು ಬಿತ್ತನೆಯಾದರೆ, ಉಳಿದ ಕಡೆ ಶೇ 80ರಷ್ಟು ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ ಒಟ್ಟಾರೆ ಮುಂಗಾರು ಬಿತ್ತನೆ ಶೇ 85 ಪೂರ್ಣಗೊಂಡಿದೆ.

ಉದ್ದು, ಹೆಸರು, ತೊಗರಿ, ಸೋಯಾ ಮೊಳಕೆ ಹಂತದಲ್ಲಿದ್ದರೆ, ಕೆಲವು ಕಡೆ ಎಡೆ ಹೊಡೆಯುವ ಚಟುವಟಿಕೆಯೂ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆ ನಡೆಸಿದ ಹೊಲಗಳಲ್ಲಿ 15 ದಿನಗಳ ಬೆಳೆ ಗೋಚರಿಸುತ್ತಿದ್ದು, ಬೆಳೆಗಳ ಸಾಲು ಹರಿದು ಗಮನ ಸೆಳೆಯುತ್ತಿವೆ.

ಪ್ರಸಕ್ತ ಮುಂಗಾರಿನಲ್ಲಿ ಹದವಾದ ಮಳೆಯಿಂದ ಬಿತ್ತನೆ ಬೇಗ ಆರಂಭವಾಗಿ ಬೇಗ ಪೂರ್ಣಗೊಳ್ಳುತ್ತಿರುವುದು ರೈತ ಸಮುದಾಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಹಿಂದಿನ ದಿನಗಳಲ್ಲಿ ಎತ್ತುಗಳ ಮೂಲಕ ರಂಟೆ, ಕೂರಿಗೆಯಿಂದ ಬಿತ್ತನೆ ನಡೆಸಲಾಗುತ್ತಿತ್ತು. ಆದರೆ ಈಗ ಕೃಷಿಕರ ಬಳಿ ಎತ್ತುಗಳು ಕಡಿಮೆಯಾಗಿದ್ದು ಬಿತ್ತನೆಗೆ ಬಹುತೇಕ ಟ್ರಾಕ್ಟರ್ ಅವಲಂಬಿಸಿರುವುದು ಗೋಚರಿಸಿದೆ.

‘ಎತ್ತುಗಳಿಂದ ದಿನಕ್ಕೆ ನಾಲ್ಕೈದು ಎಕರೆ ಬಿತ್ತನೆ ಪೂರ್ಣಗೊಳ್ಳುತ್ತಿದ್ದರೆ, ಟ್ರಾಕ್ಟರ್‌ನಿಂದ ಹತ್ತರಿಂದ ಹನ್ನೆರಡು ಎಕರೆ ಬಿತ್ತನೆಯಾಗುತ್ತದೆ. ಹೀಗಾಗಿ ಪ್ರಸಕ್ತ ವರ್ಷ ಮುಂಗಾರು ಬಿತ್ತನೆ ಬೇಗ ಪೂರ್ಣಗೊಳ್ಳುತ್ತಿದೆ’ ಎನ್ನುತ್ತಾರೆ ನಾಗಾಯಿದಲಾಯಿ ಗ್ರಾಮದ ಕೃಷಿಕ ಮಲ್ಲಿಕಾರ್ಜುನ ನೆಲ್ಲಿ.

ತಾಲ್ಲೂಕಿನಲ್ಲಿ ಕಳೆದ ಎಂಟು ದಿನಗಳಿಂದ ಮಳೆಯಾಗಿಲ್ಲ. ಸದ್ಯ ಒಣಗಾಳಿ ಬೀರುತ್ತಿದ್ದು ಭೂಮಿ ತೇವಾಂಶ ಕಳೆದುಕೊಳ್ಳುತ್ತಿದೆ. ಬಹುತೇಕ ಬಿತ್ತನೆಯಾದ ಎಲ್ಲಾ ಕಡೆ ಬೀಜ ಮೊಳಕೆಯೊಡೆದಿದ್ದು ಮುಂಗಾರು ಬೆಳೆಗಳಿಗೆ ಪೂರಕವಾಗಿದೆ. ಒಂದೆರಡು ದಿನಗಳಲ್ಲಿ ಮಳೆಯಾದರೆ ಈ ಬೆಳೆಗಳಿಗೆ ವರದಾನವಾಗಲಿದೆ.

ವಾರದಲ್ಲಿ ಎಲ್ಲ ಕಡೆ ಬೆಳೆಗಳ ಮಧ್ಯೆ ಎಡೆ ಹೊಡೆಯ ಚಟುವಟಿಕೆ ಬಿರುಸುಗೊಳ್ಳಲಿದೆ. ತಾಲ್ಲೂಕಿನಲ್ಲಿ 85 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 60 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

‘ರಸಗೊಬ್ಬರದ ಕೊರತೆಯಿಲ್ಲ, ಮಳೆಗಾಗಿ ರೈತರು ಆಕಾಶ ನೋಡುತ್ತಿದ್ದಾರೆ. ಬೆಳೆಗಳಿಗೆ ಒಣಹವೆ ಬಾಧೆ ಪ್ರಾರಂಭವಾಗಿದೆ. ರಸಗೊಬ್ಬರ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ ಆರೋಪದ ಮೇರೆಗೆ ತಾಲ್ಲೂಕಿನ ಸುಲೇಪೇಟದ ಎರಡು ರಸಗೊಬ್ಬರ ಮಾರಾಟ ಅಂಗಡಿಯ ಲೈಸೆನ್ಸ್ ಅಮಾನತುಪಡಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.

ಪಂಚಪೂರ ಗ್ರಾಮಗಳ ಸುತ್ತ ಮಳೆಯ ಕೊರತೆಯಿದೆ ಆದರೂ ರೈತರು ಬಿತ್ತನೆ ನಡೆಸಿದ್ದಾರೆ. ಈಗಾಗಲೇ ಶೇ 80ರಷ್ಟು ಬಿತ್ತನೆಯಾಗಿದೆ. ಬೇಗ ಮಳೆಯಾದರೆ ಉತ್ತಮ.
ಲಿಂಗಶೆಟ್ಟಿ ತಟ್ಟೆಪಳ್ಳಿ, ರೈತ ರುದ್ನೂರು
ತಾಲ್ಲೂಕಿನಲ್ಲಿ ತೊಗರಿ 60 ಸಾವಿರ ಹೆಕ್ಟೇರ್ ಉದ್ದು 13 ಸಾವಿರ ಹೆಕ್ಟೇರ್ ಹೆಸರು 7 ಸಾವಿರ ಹೆಕ್ಟೇರ್ ಸೋಯಾ 7 ಸಾವಿರ ಹೆಕ್ಟೇರ್ ಇತರೆ 2 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು ಶೇ 85ರಷ್ಟು ಬಿತ್ತನೆಯಾಗಿದೆ.
ವೀರಶೆಟ್ಟಿ ರಾಠೋಡ್, ಸಹಾಯಕ ಕೃಷಿ ನಿರ್ದೆಶಕ, ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT