ಮಂಗಳವಾರ, ಅಕ್ಟೋಬರ್ 27, 2020
23 °C
ದಶಕಗಳ ನಂತರ ಭರ್ತಿಯಾದ ಕೆರೆಗಳು; ಮನಮೋಹಕ ದೃಶ್ಯ ನೋಡಲು ಜನರ ದೌಡು

ಮೈದುಂಬಿದ ರಾಮ ಕೆರೆ, ಊರ ಕೆರೆ

ಅವಿನಾಶ ಎಸ್.ಬೋರಂಚಿ Updated:

ಅಕ್ಷರ ಗಾತ್ರ : | |

Prajavani

ಸೇಡಂ: ತಾಲ್ಲೂಕಿನ ಮುಧೋಳ ಗ್ರಾಮದ ಬೃಹತ್ ಕೆರೆಗಳಾದ ರಾಮ ಕೆರೆ ಮತ್ತು ಊರ ಕೆರೆಗಳು ಭಾರಿ ವರ್ಷಧಾರೆಯ ಕೃಪೆಯಿಂದಾಗಿ ತುಂಬಿ ಹರಿಯುತ್ತಿವೆ.

ದಶಕಗಳ ನಂತರ ಕೆರೆಗಳು ತುಂಬಿ ಹರಿಯುತ್ತಿರುವುದು ರೈತರಿಗೆ ಒಂದೆಡೆ ಖುಷಿಯಾದರೆ ಮತ್ತೊಂದೆಡೆ ಕೆರೆ ಕೆಳಗಡೆ ಇರುವ ರೈತರಿಗೆ ನೀರು ನುಗ್ಗಿ ಸಂಕಷ್ಟ ತಂದಿದೆ. ಸುಮಾರು 5 ದಶಕಗಳ ಹಿಂದೆ ಇಂತಹ ಮಳೆ ಸುರಿದಿತ್ತು ಎನ್ನುತ್ತಾರೆ ಮುಧೋಳ ಗ್ರಾಮಸ್ಥರು.

‘ಈ ಹಿಂದೆ ಎಂದು ಕೂಡ ಇಷ್ಟೊಂದು ಮಳೆಯಾಗಿಲ್ಲ. ನಮ್ಮೂರಿನ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದಾಡಿತು. ಹೊಲಗದ್ದೆಗಳಲ್ಲಿ ನೀರೇ ನೀರು. ಇಷ್ಟೊಂದು ಮಳೆಯಾಗಿದ್ದು ನೋಡಿಯೇ ಇರಲಿಲ್ಲ ಎನ್ನುತ್ತಾರೆ ಮುಖಂಡ ಅನೀಲರೆಡ್ಡಿ ಸಂಗ್ಯಂಪಲ್ಲಿ.

ಸೆಪ್ಟೆಂಬರ್ 25ರಂದು ಒಂದೇ ದಿನ ಏಕಾಏಕಿ ಮಳೆಯಾಗಿದ್ದರಿಂದ ಮುಧೋಳ ಸುತ್ತಲಿನ ಪ್ರದೇಶಗಳಲ್ಲಿ 147 ಮಿ.ಮೀ ದಾಖಲೆ ಮಳೆಯಾಗಿದ್ದು ರಾಜ್ಯದಲ್ಲಿಯೇ ಹೆಚ್ಚು ಮಳೆಯಾದ ದಾಖಲೆ ಪಟ್ಟಿಗಳ ಸಾಲಿನಲ್ಲಿ ಮುಧೋಳ ಸೇರಿತ್ತು. ಇದರಿಂದಾಗಿ ಉಭಯ ಕೆರೆಗಳಂತು ದಶಕಗಳ ನಂತರ ತುಂಬಿ ಜಲಾಧಾರೆಯಂತೆ ಹರಿಯುತ್ತಿವೆ. ಕೆರೆಯ ದಡದ ಮೇಲಿಂದ ಹರಿಯುವ ನೀರಿನ ರಭಸ ಹಾಗೂ ಮೋಹಕ ನೋಡಲು ಜನರ ದೌಡೇ ಆಗಮಿಸಿತ್ತು. ಈಗಲೂ ಕೂಡ ನೀರು ತುಂಬಿ ಹರಿಯುತ್ತಿದ್ದು, ನೀರಿನ ವೇಗ ಕಡಿಮೆಯಾಗಿದೆ.

ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಉಭಯ ಕೆರೆಗಳು ನರೇಗಾ ಯೋಜನೆಯಡಿ ಹೂಳೆತ್ತಿದ್ದರಿಂದ ಕೆರೆಯಲ್ಲಿ ನೀರು ಹೆಚ್ಚು ಸಂಗ್ರಹವಾಗಿದೆ. ಈ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಮಾನವ ದಿನಗಳ ಕೆಲಸವಾಗಿದೆ. ಜೊತೆಗೆ ರೈತರೇ ಖುದ್ದಾಗಿ ಕೆರೆಯಲ್ಲಿನ ಮಣ್ಣನ್ನು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆರೆಯ ಸಂಗ್ರಹ ಸಾಮರ್ಥ್ಯ ಹೆಚ್ಚಿದೆ. ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ನರೇಗಾದಡಿ ಈ ವರ್ಷ ಕೆರೆಯಲ್ಲಿ ಹೆಚ್ಚಿನ ಮಾನವ ದಿನಗಳ ಕೆಲಸಗಳನ್ನು ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕೆರೆ ಸುತ್ತಮುತ್ತಲಿನ ರೈತರು ಒಂದು ವೇಳೆ ಈಗಿರುವ ಭೂಮಿಯನ್ನು ಸ್ವಚ್ಛಗೊಳಿಸಿ ಉಳುಮೆ ಮಾಡಿದ್ದಲ್ಲಿ ಬೇಸಿಗೆ ದಿನಗಳಲ್ಲಿ ಮತ್ತೇ ಭತ್ತ ಹಾಕಿ ಕೆರೆ ನೀರನ್ನು ಬಳಕೆ ಮಾಡುವ ಇರಾದೆಯನ್ನು ರೈತರು ಹೊಂದಿದ್ದಾರೆ. ಉಭಯ ಕೆರೆಗಳಲ್ಲಿ ಸಾಕಷ್ಟು ನೀರು ಸಂಗ್ರವಿದ್ದು ಪ್ರಾಣಿ, ಪಕ್ಷಿಗಳಿಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತಿದೆ. ಜೊತೆಗೆ ಸರ್ಕಾರ ಈ ಉಭಯ ಕೆರೆಗಳತ್ತ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಸುತ್ತಲೂ ಗಡಿ ಕಟ್ಟಿ, ನೀರನ್ನೂ ಪೋಲಾಗದಂತೆ ನೋಡಿಕೊಳ್ಳುವುದು ಬಹಳ ಉತ್ತಮ ಎನ್ನುತ್ತಾರೆ ರೈತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು