ಮಂಗಳವಾರ, ಡಿಸೆಂಬರ್ 1, 2020
24 °C
ನೆರೆ ಸಂತ್ರಸ್ತರಿಗೆ ಧಾನ್ಯ, ಬಟ್ಟೆ ಕಲಿಕಾ ಸಾಮಗ್ರಿ ಹಂಚಿಕೆ

ಪ್ರವಾಹ ಸಂತ್ರಸ್ತರೊಂದಿಗೆ ದೀಪಾವಳಿ: ನಾಗತಿಹಳ್ಳಿ ಚಂದ್ರಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಭಾನುವಾರ (ನ. 15) ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಜತೆಗೆ, ಅವರೊಂದಿಗೆ ದೀಪಾವಳಿ ಆಚರಿಸಲಾಗುವುದು’ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

‌‘ಈಚೆಗೆ ಬಂದ ಬೀಮಾ ಪ್ರವಾಹದಿಂದ ಈ ಭಾಗದಲ್ಲಿ ಅಪಾರ ಹಾನಿ ಸಂಭವಿಸಿದೆ. ಅದನ್ನು ಕಟ್ಟಿಕೊಡಲು ನಮ್ಮಿಂದ ಸಾಧ್ಯವಿಲ್ಲ. ಆದರೆ, ಸಂತ್ರಸ್ತರ ದುಃಖದಲ್ಲಿ ಭಾಗಿಯಾವುದು ಮತ್ತು ಕೈಲಾದ ನೆರವು ನೀಡುವುದು ನಮ್ಮ ಕರ್ತವ್ಯ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾಗತಿಹಳ್ಳಿಯ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್‌ ಸಿನಿಮಾ ಶಾಲೆ ವತಿಯಿಂದ ಶಿಕ್ಷಕರು, ಕಲಾವಿದರು, ವಿದ್ಯಾರ್ಥಿಗಳು, ಸ್ನೇಹಿತರನ್ನು ಒಳಗೊಂಡು ಸಣ್ಣ ನೆರವು ನೀಡಲು ಬಂದಿದ್ದೇವೆ. ಸಂತ್ರಸ್ತರಿಗೆ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ದೀಪ, ಮಕ್ಕಳಿಗೆ ಓದುವ– ಬರೆಯುವ ಸಲಕರಣೆಗಳು, ಸಿಹಿ ಹಂಚಿ ದೀಪಾವಳಿ ಆಚರಿಸಲಾಗುವುದು’ ಎಂದರು.

‘ಈ ವೇದಿಕೆಯಿಂದ ಕಳೆದ 35 ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ, ಆರೋಗ್ಯ ಹಾಗೂ ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ. ಪ್ರತಿ ವರ್ಷ ‘ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ ಆಚರಿಸುವ ಮೂಲಕ ಹಳ್ಳಿ ಸಂಸ್ಕೃತಿಗೆ ಪೋಷಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

ಸಂಕಷ್ಟದಲ್ಲಿ ವಿಶ್ವ ಚಿತ್ರರಂಗ: ‘ಚಂದನವನವೂ ಸೇರಿದಂತೆ ಇಡೀ ವಿಶ್ವದ ಚಿತ್ರರಂಗವು ಕೊರೊನಾ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಸೋಂಕಿಗೆ ಲಸಿಕೆ ಬಂದು, ಅದು ಎಲ್ಲರಿಗೂ ತಲುಪಿ ಮತ್ತೆ ಉದ್ಯಮ ಸರಿದಾರಿಗೆ ಬರಲು ಇನ್ನೂ ಆರು ತಿಂಗಳು ಬೇಕಾಗುತ್ತದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ನಿರ್ಮಾಪಕರು ಹಾಗೂ ಚಿತ್ರಮಂದಿರಗಳ ಆದಾಯ ನಿಂತಿದೆ. ಈಗಲೂ ಶೇ 4ರಷ್ಟು ಜನ ಮಾತ್ರ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ’ ಎಂದು ನಾಗತಿಹಳ್ಳಿ ಚಂದ್ರಶೇಖರ ಮಾಹಿತಿ ನೀಡಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಐತಿಹಾಸಿಕ, ಪೌರಾಣಿಕ, ಪ್ರಕೃತಿ ಸೌಂದರ್ಯದ ಸ್ಥಳಗಳಿವೆ. ಆದರೂ ಈ ಭಾಗದಲ್ಲಿ ಚಿತ್ರೀಕರಣ ಅಷ್ಟಾಗಿ ಬೆಳೆದಿಲ್ಲ ಎಂಬುದು ನಿಜ. ಈ ಭಾಗವನ್ನು ಪ್ರತಿನಿಧಿಸುವಂಥ ಕತೆಗಳ ಕೊರತೆಯೂ ಇದಕ್ಕೆ ಕಾರಣ. ಇಲ್ಲಿನ ಕಲಾವಿದರು, ಸ್ಥಳಗಳಿಗೆ ಉತ್ತಮ ಭವಿಷ್ಯವಂತೂ ಇದೆ’ ಎಂದು ಅವರು ಅಭಿಪ್ರಾಯ ಪಟ್ಟರು.

ಸುಜಾತಾ ಜಂಗಮಶೆಟ್ಟಿ, ಮಹಿಪಾಲರೆಡ್ಡಿ ಮುನ್ನೂರ, ಪ್ರಕಾಶ ಹರಕೋಡೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು