ಶುಕ್ರವಾರ, ಆಗಸ್ಟ್ 19, 2022
22 °C
ಧರಣಿ ಹಿಂಪಡೆದ ಎನ್‌ಇಕೆಆರ್‌ಟಿಸಿ ಸಿಬ್ಬಂದಿ, ಸೋಮವಾರ ಶೇ 60ರಷ್ಟು ಬಸ್‌ಗಳ ಓಡಾಟ, ಮುಷ್ಕರದಿಂದ ₹ 15 ಕೋಟಿ ಆದಾತಕ್ಕೆ ಕತ್ತರಿ

ಬಸ್‌ ಆರಂಭ; ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಸೋಮವಾರ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ಧರಣಿ ನಿರತ ಮುಖಂಡರು ಕರೆ ಮಾಡಿ, ಮುಷ್ಕರ ಹಿಂತೆಗೆದುಕೊಳ್ಳುವಂತೆ ತಿಳಿಸಿದ ಬಳಿಕವೇ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಸಿಬ್ಬಂದಿ ಉಪವಾಸ ಸತ್ಯಾಗ್ರಹ ಕೈಬಿಟ್ಟರು. ಸಂಜೆ 4ರ ನಂತರ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಂದ ಬಸ್‌ ರೂಟ್‌ಗಳನ್ನು ಆರಂಭಿಸಲಾಯಿತು.

ಸೋಮವಾರ ಬೆಳಿಗ್ಗೆ 8ರಿಂದಲೇ ಕೆಲವು ಬಸ್‌ಗಳನ್ನು ಪೊಲೀಸ್‌ ಭದ್ರತೆಯಲ್ಲಿ ಆರಂಭಿಸಲಾಯಿತು. ಮಧ್ಯಾಹ್ನ 2ರವರೆಗೂ ಈಶಾನ್ಯ ಸಾರಿಗೆಯ ಶೇ 40ರಷ್ಟು ಬಸ್‌ಗಳು ಒಡಾಟ ಆರಂಭಿಸಿದವು. ಸಂಜೆ ಸಿಬ್ಬಂದಿ ಮುಷ್ಕರ ಹಿಂದಕ್ಕೆ ಪಡೆದ ನಂತರ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಮುಷ್ಕರದಿಂದ ಬೇಸತ್ತಿದ್ದ ಹೆಚ್ಚಿನ ಪ್ರಯಾಣಿಕರು ಸೋಮವಾರ ಬಸ್‌ ನಿಲ್ದಾಣಗಳತ್ತ ಸುಳಿಯಲಿಲ್ಲ. ಹೀಗಾಗಿ, ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಳ್ಳಿಗಳತ್ತ ಪ್ರಯಾಣ ಬೆಳೆಸಿದರು.

‘ಈ ನಾಲ್ಕು ದಿನಗಳ ಮುಷ್ಕರದಿಂದಾಗಿ ಎನ್‌ಇಕೆಆರ್‌ಟಿಸಿಗೆ ಒಟ್ಟಾರೆ ಬರಬೇಕಾಗಿದ್ದ ಆದಾಯ ಹಾಗೂ ಹಾನಿ ಲೆಕ್ಕ ಹಾಕಿದರೆ ₹ 15 ಕೋಟಿ ಆಗುತ್ತದೆ’ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರಪ್ಪ ಮಾಹಿತಿ ನೀಡಿದ್ದಾರೆ.

ತುರ್ತು ಸೇವೆ ಮಾತ್ರ ನೀಡಿದ್ದೇವೆ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇರುವ 19 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯಲ್ಲಿರುವ 4,600 ಬಸ್‌ಗಳ ಪೈಕಿ 3,800 ಬಸ್‌ಗಳು ಡಿಪೊದಲ್ಲಿ ನಿಂತಿದ್ದವು. ನಾಲ್ಕು ದಿನಗಳಿಂದ ಅತ್ಯಂತ ತುರ್ತು ಸಂದರ್ಭ ಹಾಗೂ ಹೊರ ರಾಜ್ಯದ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಬೀದರ್‌ ಜಿಲ್ಲೆಯ ಗಡಿ ಭಾಗದವರೆಗೆ ಮಾತ್ರ ಕೆಲವು ಬಸ್‌ಗಳನ್ನು ಓಡಿಸಲಾಯಿತು. ಬಸ್‌ ಚಾಲಕರು, ನಿರ್ವಾಹಕರು, ತಂತ್ರಜ್ಞರು, ಮೆಕ್ಯಾನಿಕಲ್‌ ವಿಭಾಗದ ಸಿಬ್ಬಂದಿ ಕೂಡ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಎನ್‌ಇಕೆಆರ್‌ಟಿಸಿಗೆ ಒಳಪಡುವ ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕೂಡ ಮುಷ್ಕರ ಪರಿಣಾಮಕಾರಿಯಾಗಿ ನಡೆಯಿತು. ಇದರಿಂದಾಗಿ ಪ್ರತಿ ದಿನವೂ ಸಂಸ್ಥೆಗೆ ಬರಬೇಕಿದ್ದ ಅಂದಾಜು ₹ 4 ಕೋಟಿ ಆದಾಯಕ್ಕೆ ಕಡಿತವಾಯಿತು ಎಂದೂ ಅಧಿಕಾರಿಗಳು ಹೇಳಿದರು.

ಕಲಬುರ್ಗಿ ಜಿಲ್ಲೆಯಲ್ಲಿ ಕೂಡ ಸುಮಾರು 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಮುಷ್ಕರದ ಕಾರಣ ಕರ್ತವ್ಯದಿಂದ ದೂರ ಉಳಿದರು. ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದ 800ಕ್ಕೂ ಹೆಚ್ಚು ಬಸ್‌ಗಳು ಸ್ತಬ್ಧಗೊಂಡಿದ್ದವು. ಇದರಿಂದ ಪ್ರತಿ ದಿನ ₹ 60 ಲಕ್ಷದಷ್ಟು ಆದಾಯ ನಿಂತುಹೋಯಿತು ಎಂದು ಅಧಿಕಾರಿಗಳು ತಿಳಿಸಿದದರು.

ನಿಟ್ಟುಸಿರು ಬಿಟ್ಟ ಪ್ರಯಾಣಿಕರು: ಸೋಮವಾರ ಬೆಳಿಗ್ಗೆ ಗ್ರಾಮೀಣ ವಿಭಾಗ ಹಾಗೂ ನೆರೆಯ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ಬಸ್‌ಗಳನ್ನು ಓಡಿಸಲಾಯಿತು. ತುರ್ತಾಗಿ ಪ್ರಯಾಣ ಬೆಳೆಸಬೇಕಿದ್ದ ಹಲವು ಪ್ರಯಾಣಿಕರು ಬೆಳಿಗ್ಗೆಯೇ ನಿಲ್ದಾಣಗಳಲ್ಲಿ ಠಿಕಾಣೆ ಹೂಡಿದ್ದರು. ಬಸ್‌ಗಳು ನಿಲ್ದಾಣದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಓಡಿ ಹೋಗಿ ಹತ್ತಿ ಕುಳಿತರು. ಕಳೆದ ನಾಲ್ಕು ದಿನಗಳಿಂದ ಖಾಸಗಿ ವಾಹನಗಳಿಗೆ ಹೆಚ್ಚು ದುಡ್ಡು ತೆತ್ತ ಬೇಸತ್ತಿದ್ದ ಪ್ರಯಾಣಿಕರು, ನಿಟ್ಟುಸಿರು ಬಿಟ್ಟರು.

ಬಾಕ್ಸ್–1

ಎಲ್ಲೆಲ್ಲಿಗೆ ಬಸ್‌ ಸಂಚಾರ?

ಕಲಬುರ್ಗಿ: ಹೈದರಾಬಾದ್, ಮಂಗಳೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಸೊಲ್ಲಾಪುರ, ಮುಂಬೈ ಸೇರಿದಂತೆ ದೂರದ ಪ್ರಯಾಣ ಮಾಡುವ ಎಲ್ಲ ಬಸ್‌ಗಳನ್ನು ಸೋಮವಾರ ರಾತ್ರಿಯಿಂದ ಓಡಿಸಲಾಯಿತು. ಹೆಚ್ಚಿನ ಪ್ರಯಾಣಿಕರು ಇಲ್ಲದ ಕಾರಣ ಕೆಲವು ಬಸ್‌ಗಳನ್ನು ಮರಳಿ ಡಿಪೊಗೆ ಸೇರಿಸಲಾಯಿತು.

ಉಳಿದಂತೆ, ವಿಜಯಪುರ, ಬೀದರ್, ಶಹಾಪುರ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲಾ ಕೇಂದ್ರ ಹಾಗೂ ಆಯಾ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಿಗೂ ಬಸ್‌ಗಳನ್ನು ಓಡಿಸಲಾಯಿತು.

ರಾತ್ರಿ 8ರ ಸುಮಾರಿಗೆ ಶೇ 60ರಷ್ಟು ಬಸ್‌ಗಳು ಸಂಚಾರ ಆರಂಭಸಿವೆ ಎಂದು ಸಂಚಾರ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದರು.

ಬಾಕ್ಸ್–1

ಪೊಲೀಸ್‌ ಭದ್ರತೆಯಲ್ಲಿ ಸಂಚಾರ‌

ಕಲಬುರ್ಗಿ: ಸೋಮವಾರ ಬೆಳಿಗ್ಗೆ ಕೆಲವು ಬಸ್‌ಗಳು ನಿಲ್ದಾಣಕ್ಕೆ ಬಂದು ನಿಂತವು. ಈ ವೇಳೆ ಧರಣಿ ನಿರತ ಕೆಲವು ಸಿಬ್ಬಂದಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ವಿರುದ್ಧ ಘೋಷಣೆ ಮೊಳಗಿಸಿದರು. ಸ್ಥಳದಲ್ಲಿದ್ದ ಎಸಿಪಿ‌ ಗಂಗಾಧರ ‌ಚಿಕ್ಕಮಠ ಅವರ ನೇತೃತ್ವದಲ್ಲಿ ‌ಪೊಲೀಸರು ಭದ್ರತಾ ಉಸ್ತುವಾರಿ ನೋಡಿಕೊಂಡರು.

ಮಧ್ಯಾಹ್ನದವರೆಗೂ ಪೊಲೀಸ್‌ ಕಾವಲಿನಲ್ಲೇ ಬಸ್‌ಗಳನ್ನು ಓಡಿಸಲಾಯಿತು. ಪ್ರತಿಯೊಂದು ಬಸ್‌ ನಗರದಿಂದ ಹೊರಗೆ ಹೋಗುವವರೆಗೂ ಅದರ ಮುಂದೆ ಪೊಲೀಸ್‌ ವಾಹನ ಸಂಚರಿಸಿತು.

ಕಲ್ಲು ತೂರಾಟ; ಬಸ್ ಜಖಂ

ಕಲಬುರ್ಗಿ: ಕಲಬುರ್ಗಿಯಿಂದ ಬೀದರ್‌ಗೆ ಬರುತ್ತಿದ್ದ ಕಲಬುರ್ಗಿ ಘಟಕದ ಬಸ್‍ಗೆ ಬೀದರ್‌ ನಗರದ ಬರೀದ್‍ಶಾಹಿ ಉದ್ಯಾನ ಬಳಿ ಕಲ್ಲು ತೂರಿದ ಘಟನೆ ಬೆಳಿಗ್ಗೆ ನಡೆದಿದೆ.

ಕಲ್ಲು ತೂರಿದ್ದರಿಂದ ಬಸ್‍ನ ಮುಂಭಾಗ ಹಾಗೂ ಹಿಂಭಾಗದ ಗಾಜುಗಳು ಜಖಂಗೊಂಡಿವೆ. ಸಿಬ್ಬಂದಿಯೊಬ್ಬರು ಕಲ್ಲು ತೂರಿದ್ದಾರೆಂಬ ಮಾಹಿತಿ ಇದೆ. ಆದರೆ, ಈ ಪ್ರಕರಣದಲ್ಲಿ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕೆಲ ನೌಕರರನ್ನು ಸಿಲುಕಿಸುವ ಪ್ರಯತ್ನ ನಡೆಸಲಾಗಿದೆ. ಅಮಾಯಕರ ಮೇಲಿನ ದಬ್ಬಾಳಿಕೆ ಮತ್ತೆ ಪ್ರತಿಭಟನೆಗೆ ದಾರಿಮಾಡಿಕೊಡಲಿದೆ ಎಂದು ಹೆಸರು ಹೇಳಲಿಚ್ಛಿಸದ ಮುಷ್ಕರ ನಿರತ ನೌಕರರು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು