ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನವರಾತ್ರಿ ಸಡಗರವಿಲ್ಲ; ಅತಿ ಸರಳ

ಎಲ್ಲ ದೇವಸ್ಥಾನಗಳಲ್ಲೂ ಅತ್ಯಂತ ಸರಳ ಆಚರಣೆಗೆ ನಿರ್ಧಾರ
Last Updated 13 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ನವರಾತ್ರಿ ಹಾಗೂ ದಸರೆಯ ಸಡಗರ ಈ ಬಾರಿ ಇರುವುದಿಲ್ಲ.ಝಗಮಗಿಸುವ ವಿದ್ಯುದ್ದೀಪಾಲಂಕಾರ, ತಳಿರು– ತೋರಣ, ಭಕ್ತಿ ಸಂಗೀತದ ಕಲರವಕ್ಕೆ ಕೊರೊನಾ ಅಡ್ಡಗಾಲು ಹಾಕಿದೆ. ವೈರಾಣು ಭಯದಿಂದಾಗಿಯೇ ಬಹುಪಾಲು ಉತ್ಸವ ಸಮಿತಿಗಳವರು ಹಾಗೂ ದೇವಸ್ಥಾನಗಳಲ್ಲಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಅಂಬಾಭವಾನಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವುದೇ ಈ ಭಾಗದ ವೈಶಿಷ್ಟ್ಯ. ಉಳೆದಲ್ಲ ಕಡೆ ದೇವಿಪೂಜೆ ಮಂದಿರ ಮತ್ತು ಮನೆಗಳಿಗೆ ಸೀಮಿತ. ನಗರವೂ ಸೇರಿದಂತೆ ಎಲ್ಲ ‍ಪಟ್ಟಣಗಳಲ್ಲೂ ಇಷ್ಟೊತ್ತಿಗಾಗಲೇ ವೃತ್ತ, ಚೌಕ, ಸಾರ್ವಜನಿಕ ಮಂಟಪಗಳಲ್ಲಿ ಶಾಮಿಯಾನಗಳು ತಲೆ ಎತ್ತಬೇಕಾಗಿತ್ತು.ಶಕ್ತಿಮಾತೆಯ ಆರಾಧನೆಗೆ ಸಕಲ ಸಿದ್ಧತೆಗಳು ಆರಂಭವಾಗಬೇಕಿತ್ತು. ಆದೆರೆ, ಈ ಬಾರಿ ಕೂಡ ನಗರದ ಯುವತಿ ಮಂಡಳಗಳು, ತರುಣ ಸಂಘಗಳು, ಗೆಳೆಯರ ಬಳಗಗಳು ಉತ್ಸವದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿವೆ. ಹಾಗಾಗಿ, ಲೋಕಮಾತೆ ಮನೆಯಲ್ಲೇ ಪೂಜೆಗೊಳ್ಳಲಿದ್ದಾಳೆ.

ಹಳೆ ಜೇವರ್ಗಿ ರಸ್ತೆ,ಶಿವಶಕ್ತಿ ಬಡಾವಣೆ,ಎನ್‌ಜಿಒ ಕಾಲೊನಿ, ಪಂಚಶೀಲ ನಗರ, ಪುಟಾಣಿ ಗಲ್ಲಿ, ಗುಬ್ಬಿ ಕಾಲೊನಿ,ಸೂಪರ್‌ ಮಾರ್ಕೆಟ್‌ ಸರ್ಕಲ್‌,ಸಂಗಮ ಚಲನಚಿತ್ರ ಮಂದಿರ, ಬ್ರಹ್ಮಪೂರದ ಭವಾಣಿ ಮಂದಿರ ರಸ್ತೆ ಮುಂತಾದ ಸ್ಥಳಗಳಲ್ಲಿ ಬೃಹತ್‌ ಪೆಂಡಾಲುಗಳನ್ನು ಹಾಕಿ ಉತ್ಸವ ಆಚರಿಸಲಾಗುತ್ತಿತ್ತು. ನಗರದಲ್ಲೇ 55ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂಥ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿತ್ತು. ಆದರೆ, ಎಲ್ಲಿಯೂ ಸಿದ್ಧತೆಗಳು ಆರಂಭವಾಗಿಲ್ಲ. ಎಲ್ಲರೂ ಅನುಮತಿ ಹಾಗೂ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ.

ದೇವಸ್ಥಾನಗಳಲ್ಲೂ ಸರಳ: ನಗರದಲ್ಲೇ 12 ಕಡೆ ಅಂಬಾಭವಾನಿ ದೇವಸ್ಥಾನಗಳಿವೆ. ಅದರಲ್ಲಿ, ಟ್ಯಾಂಕ್‌ ಬಂಡ್‌ ರಸ್ತೆಯ ಯಲ್ಲಮ್ಮ ದೇವಸ್ಥಾನ, ಲಾಳಗೇರಿಯ ತುಳಜಾಭವಾನಿ ದೇವಸ್ಥಾನ, ಶಹಾಬಜಾರ್‌ನ ಜಗದಂಬಾ, ಮಕ್ತುಂಪುರದ ಅಂಬಾಭವಾನಿ,ಅಯ್ಯಾರವಾಡಿಯ ಭವಾನಿ ಮಂದಿರ, ಆಳಂದ ಚೆಕ್‌ಪೋಸ್ಟ್‌ ಬಳಿಯ ವೈಷ್ಣೋದೇವಿ ಮಂದಿರ ಪ್ರಮುಖವಾದವು. ಈ ಎಲ್ಲ ದೇವಸ್ಥಾನಗಳ ಮುಖ್ಯಸ್ಥರೂ ಸೇರಿಕೊಂಡು ಈಗಾಗಲೇ ಚರ್ಚೆ ಮಾಡಿದ್ದಾರೆ. ಮಂದಿರಗಳಲ್ಲಿ ನವರಾತ್ರಿ ನಡೆಸಲು ಯಾವುದೇ ಅಡ್ಡಿ ಇಲ್ಲ. ಆದರೂ ಆರೋಗ್ಯದ ದೃಷ್ಟಿಯಿಂದ ಎಲ್ಲ ದೇವಸ್ಥಾನಗಳಲ್ಲೂ ಅತ್ಯಂತ ಸರಳವಾಗಿ, ಸಾಂಕೇತಿಕವಾಗಿ ಮಾತ್ರ ಆಚರಿಸಲು ನಿರ್ಧರಿಸಲಾಗಿದೆ.

ಅಕ್ಟೋಬರ್ 17ರಿಂದ 25ರವರೆಗೆ ದಸರೆ ಆಚರಿಸಲಾಗುತ್ತಿದೆ. ಆದರೆ, ಯಾವ ದಿನಗಳಲ್ಲೂ ಭಕ್ತರು ದೇವಸ್ಥಾನಕ್ಕೆ ಬರಬಾರದು, ಮನೆಗಳಲ್ಲೇ ಪೂಜೆ ಮಾಡಿಕೊಳ್ಳಬೇಕು ಎಂದು ಎಲ್ಲ ದೇವಸ್ಥಾನಗಳಿಂದಲೂ ಈಗಾಗಲೇ ಮಾಹಿತಿ ರವಾನಿಸಲಾಗುತ್ತಿದೆ. ಅ.23ಕ್ಕೆ ಅಷ್ಟಮಿ, 24ಕ್ಕೆ ನವಮಿ, 25ಕ್ಕೆ ವಿಜಯದಶಮಿ ದಿನಗಳಂದು ಭಕ್ತರು ಹೆಚ್ಚಿಗೆ ಬರುವುದು ರೂಢಿ. ಅದಕ್ಕೂ ಅವಕಾಶ ನೀಡದೇ, ಅರ್ಚಕರು ಹಾಗೂ ಸಮಿತಿ ಸದಸ್ಯರು ಮಾತ್ರ ಅಭಿಷೇಕ, ಪೂಜೆ ನೆರವೇರಿಸಲು ನಿರ್ಧರಿಸಿದ್ದಾರೆ.

ಮನೆಗಳಲ್ಲಿ ಮಾತ್ರ ಸಂಭ್ರಮ: ಈ ಬಾರಿ ಗಣೇಶ ಉತ್ಸವದಂತೆಯೇ ಶಕ್ತಿಮಾತೆಯ ಆರಾಧನೆ ಕೂಡ ಮನೆಗಳಿಗೆ ಸೀಮಿತವಾಗಲಿದೆ. ಆದರೆ, ಪ್ರತಿ ವರ್ಷದಂತೆ ಬಂಧು–ಬಳಗ– ಮಿತ್ರರನ್ನು ಕರೆದು ಸಂಭ್ರಮಿಸಲು ಆಗುತ್ತಿಲ್ಲ. ಹಬ್ಬಕ್ಕೆ ಹತ್ತು ದಿನ ಬೇಕಾದ ಪದಾರ್ಥಗಳನ್ನು ಮಾಡುತ್ತೇವೆ. ಪೂಜಾ ಕಾರ್ಯ ನೆರವೇರಿಸುತ್ತೇವೆ. ಹಿರಿಯರು ಮಾಡಿಕೊಂಡು ಬಂದ ಪದ್ಧತಿಯನ್ನು ಮರಿಯಲಾಗುವುದಿಲ್ಲ. ಸಾಮಾಜಿಕ ಆರೋಗ್ಯಕ್ಕಾಗಿ ಇಡೀ ದೇಶವೇ ಹೋರಾಡುತ್ತಿದೆ. ನಾವು ಅದಕ್ಕೆ ಬೆಲೆ ಕೊಟ್ಟು ಈ ಬಾರಿ ಮನೆಯಲ್ಲೇ ಹಬ್ಬ ಆಚರಿಸಬೇಕು ಎಂದುಕೊಂಡಿದ್ದೇವೆ ಎನ್ನುವುದು ಅರ್ಚನಾ ಗಡದೆ ಅವರ ಮಾತು.

ದಾಂಡಿಯಾ, ಲೈಂಟಿಂಗ್‌ ಇರುವುದಿಲ್ಲ
ನಗರದ ಎಲ್ಲ ಕಡೆಯೂ ಈ ಬಾರಿ ದಾಂಡಿಯಾ ನೃತ್ಯ ನಡೆಸದಿರಲು ಮಂಡಳಿಗಳು ನಿರ್ಧರಿಸಿವೆ. ಜತೆಗೆ, ಪ್ರತಿ ವರ್ಷ ಯುವಕ– ಯುವತಿಯರು ತೋರುತ್ತಿದ್ದ ಉತ್ಸಾಹ ಈ ಬಾರಿ ಕಾಣಿಸುತ್ತಿಲ್ಲ. ಸಂಗೀತ, ನೃತ್ಯ, ಕೋಲಾಟ, ದೇವಿಸ್ತುತಿ, ಪುರಾಣ, ಪ್ರವಚನ, ಭಜನೆಗಳಿಂದ ನಡೆಯಬೇಕಿದ್ದ ಹಬ್ಬ ಈ ಬಾರಿ ನಿಶಬ್ದವಾಗಿರಲಿದೆ.

ವ್ಯಾ‍‍ಪಾರಿಗಳಿಗೂ ಇಲ್ಲ ಆದಾಯ
ಹೂವು, ಹಣ್ಣು, ಕಾಯಿ– ಕರ್ಪೂರ, ಬಳೆ, ಫಲ ತಾಂಬೂಲ, ಸೀರೆ– ಕಣ ಮುಂತಾದ ಪೂಜಾ ಸಾಮಗ್ರಿಗಳ ವ್ಯಾಪಾರಿಗಳಿಗೆದಸರೆಯ ಹತ್ತು ದಿನಗಳೇ ಆಸರೆ. ಗಣಪತಿ ಉತ್ಸವದಲ್ಲೂ ಏನನ್ನೂ ವ್ಯಾಪಾರ ಮಾಡಲಾಗಿದೇ, ಲಾಕ್‌ಡೌನ್‌ ಅವಧಿಯಲ್ಲೂ ಹಾನಿ ಅನುಭವಿಸಿದ ಸಣ್ಣ ವ್ಯಾಪಾರಿಗಳಿಗೆ ನವರಾತ್ರಿ ಉತ್ಸವ ಕೂಡ ಸಿಹಿಯಾಗಿಲ್ಲ. ತುಳಜಾಭವಾನಿ ದೇವಸ್ಥಾನದಲ್ಲೇ ಪ್ರತಿ ವರ್ಷ 2,000ಕ್ಕೂ ಹೆಚ್ಚು ಸೀರೆ– ಕಣಗಳ ದೇಣಿಗೆ ಆಗುತ್ತಿತ್ತು. ಪ್ರತಿ ದಿನ 3,000ಕ್ಕೂ ಹೆಚ್ಚು ಬಾಳೆಹಣ್ಣು ಮಾರಾಟ ಆಗುತ್ತಿದ್ದವು. ಆದರೆ, ಈ ಬಾರಿ ತುಂಬ ಹಾನಿ ಅನುಭವಿಸುತ್ತಿದ್ದೇವೆ ಎನ್ನುವುದು ವ್ಯಾಪಾರಿಗಳ ಗೋಳು.

ಜತೆಗೆ, ದೀಪಾಲಂಕಾರ ಮಾಡುವರಿಗೂ ಈ ಬಾರಿ ನಷ್ಟವಾಗಿದೆ. ಮದುವೆ, ಉತ್ಸವಗಳು ಮುಗಿದೇ ಹೋಗಿವೆ. ಈಗ ನವರಾತ್ರಿಗೂ ಆರ್ಡರ್‌ ಹೆಚ್ಚಾಗಿ ಸಿಕ್ಕಿಲ್ಲ. ಮಳಿಗೆಗಳ ಬಾಡಿಗೆ ನೀಡುವುದೂ ಕಷ್ಟವಾಗಿದೆ ಎನ್ನುತ್ತಾರೆ ಸುರೇಶ.

ಯಾವ ದಿನ, ಯಾವ ಅವತಾರ?
ಅ. 17 ಶೃಂಗೇರಿ ಶಾರದಾಂಬೆ, 18 ಕಂಚಿ ಕಾಮಾಕ್ಷಿ, 19 ಮಧುರೈ ಮೀನಾಕ್ಷಿ, 20 ಅನ್ನೊಪೂರ್ಣೇಶ್ವರಿ, 21 ಪಾರ್ವತಿ, 22 ಸರಸ್ವತಿ, 23 ಸಂತಾನಲಕ್ಷ್ಮಿ, 24 ದುರ್ಗಾಪರಮೇಶ್ವರಿ, 25 ಸಂತೋಷಿಮಾತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT