ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಿಪತ್ತು ಘೋಷಣೆಗೆ ಕೇಂದ್ರಕ್ಕೆ ಶಿಫಾರಸು: ಸಚಿವ ಆರ್‌. ಅಶೋಕ್‌

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ‌
Last Updated 16 ಅಕ್ಟೋಬರ್ 2020, 7:34 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುಪಾಲು ಜಿಲ್ಲೆಗಳು ಅತಿವೃಷ್ಟಿ‌ ಮತ್ತು ಪ್ರವಾಹದಿಂದ ತತ್ತರಿಸಿವೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು‌ ಪರಿಗಣಿಸಿ ಘೋಷಣೆ ಮಾಡುವಂತೆ ಕೇಂದ್ರಕ್ಕೆ ಪ್ರತ್ರ ಬರೆದು ಶಿಫಾರಸು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಪ್ರವಾಹ ಪೀಡಿತ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ, ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನೆರೆಯ ತೆಲಂಗಾಣ, ಅಂಧ್ರ, ಮಹಾರಾಷ್ಟ್ರ ಇನ್ನಿತರೆ ರಾಜ್ಯಗಳು ಸಹ ಪ್ರವಾಹ ಪೀಡಿತವಾಗಿರುವುದರಿಂದ ಅವರೂ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಉತ್ತರ ಕರ್ನಾಟಕವನ್ನು ಪರಿಗಣಿಸುವಂತೆ ನಾವು ಕೋರುತ್ತೇವೆ ಎಂದರು.

ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಕಲಬುರ್ಗಿ ಜಿಲ್ಲೆಗೆ ರೂ 20 ಕೋಟಿ, ಯಾದಗಿರಿ ಜಿಲ್ಲೆಗೆ ರೂ 15 ಕೊಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಎಲ್ಕ ಜಿಲ್ಲಾಧಿಕಾರಿಗಳ ಖಾತೆಗೆ ತಲಾ ರೂ 5 ಕೋಟಿ ತಕ್ಷಣಕ್ಕೆ ಜಮೆ ಮಾಡಲಾಗುವುದು. ಕೇಂದ್ರದ ‌ನೆರವಿಗೂ ಕೋರಿಕೆ ಸಲ್ಲಿಸಲಾಗುತ್ತದೆ. ಪ್ರವಾಹ ಪರಿಶೀಲನೆಗೆ ಕೇಂದ್ರದ ತಂಡ ಕಳುಹಿಸಿ ಕೊಡುವಂತೆ ಕೋರಲಾಗುವುದು ಎಂದರು.

ನಾನು ಬೆಂಗಳೂರಿಗೆ ಹೋದ ತಕ್ಷಣ ಮುಖ್ರಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವ ಅಶೋಕ ತಿಳಿಸಿದರು.

ಮುಂದಿನ ವರ್ಷದಿಂದ ಐದು ಪಟ್ಟು ಪರಿಹಾರಕ್ಕೆ ಕೇಂದ್ರ ಒಪ್ಪಿಗೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದಿಂದ ನೀಡುವ ಪರಿಹಾರ ಮೊತ್ತವನ್ನು ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಶುಕ್ರವಾರ ಪ್ರವಾಹ ಪೀಡಿತ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಕಲಬುರ್ಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ಈಗಾಗಲೇ ರೂ 20 ಕೋಟಿ ಇದೆ. ಜಿಲ್ಲಾಧಿಕಾರಿಯೂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶದ ಜನರಿಗೆ ನೆರವಾಗದಿದ್ದರೆ, ಕೆಲಸ ಮಾಡದೇ ಇದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸೋಮಾರಿಗಳನ್ನು ಮನೆಗೆ ಕಳಿಸುತ್ತೇನೆ ಎಂದರು.

ರಾಜ್ಯದಲ್ಲಿ ಪ್ರವಾಹದಿಂದ 3.31 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 23,996 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ 1268 ಸೇತುವೆಗಳು ಕುಸಿದಿವೆ. 10978 ಮನೆಗಳು ಬಿದ್ದಿವೆ. 360 ಕೆರೆ ಒಡೆದಿವೆ. 3168 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಒಟ್ಟು 173 ತಾಲ್ಲೂಕುಗಳು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.

ಕಲಬುರ್ಗಿ ಜಿಲ್ಲೆಯ ಅಫಜಲಪುರ, ಆಳಂದ, ಕಲಬುರ್ಗಿ, ಕಮಲಾಪುರ, ಚಿಂಚೋಳಿ , ಯಡ್ರಾಮಿ, ಕಾಳಗಿ, ಚಿತ್ತಾಪುರ ತಾಲ್ಲೂಕುಗಳನ್ನೂ ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ, ಬಿ.ಜಿ.ಪಾಟೀಲ, ಬಸವರಾಜ ಮತ್ತಿಮೂಡ, ಅವಿನಾಶ ಜಾಧವ, ರಾಜುಗೌಡ, ಎ.ಸಿ ರಾಮಚಂದ್ರ ಗಡಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT