ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ: ಶಾಲೆಯೊಂದು ಮೂರು ಬಾಗಿಲು
ಒಳನೋಟ: ಶಾಲೆಯೊಂದು ಮೂರು ಬಾಗಿಲು
ಕೆಪಿಎಸ್‌; ಒಂದೇ ಸೂರಿನಡಿ ಬಾರದ ಪ್ರಾಥಮಿಕ, ಪ್ರೌಢಶಾಲೆ, ಪಿಯು
ಫಾಲೋ ಮಾಡಿ
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
Comments

ಮಂಡ್ಯ: ‘ನನ್ನ ಮಗಳು ಇಂಗ್ಲಿಷ್‌ನಲ್ಲಿ ಮಾತಾಡಬೇಕು, ಬರೆಯಬೇಕೆಂಬ ಆಸೆಯಿಂದ ಕರ್ನಾಟಕ ಪಬ್ಲಿಕ್‌ ಶಾಲೆಗೆ ಸೇರಿಸಿದ್ದೆ. ಆದರೆ ಅದು ಹೆಸರಿಗಷ್ಟೇ ಇಂಗ್ಲಿಷ್‌ ಮಾಧ್ಯಮ ಶಾಲೆ. ಇಂಗ್ಲಿಷ್‌ನಲ್ಲಿ ಪಾಠ ಮಾಡುವ ಶಿಕ್ಷಕರೇ ಇಲ್ಲ, ಇರುವ ಶಿಕ್ಷಕರಿಗೂ ಇಂಗ್ಲಿಷ್‌ ಬರುವುದಿಲ್ಲ. ಹೀಗಾಗಿ ಮಗಳನ್ನು ಅಲ್ಲಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ್ದೇನೆ...’

–ನಗರದ ಗುತ್ತಲು ಬಡಾವಣೆ, ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌)ಯಲ್ಲಿ ಓದುತ್ತಿರುವ ಬಾಲಕಿಯ ಪೋಷಕಿಯೊಬ್ಬರ ಮಾತುಗಳಿವು. ಕೆಪಿಎಸ್‌ಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿರುವ ಬಹುತೇಕ ಪೋಷಕರೂ ಹೀಗೇ ಹೇಳುತ್ತಾರೆ.

‘ಕೆಪಿಎಸ್ ಆದಮೇಲೆ ನಮ್ಮ ಊರಿನ ಶಾಲೆ ಸುಧಾರಿಸಬಹುದು ಎಂಬ ಕನಸಿತ್ತು. ಆದರೆ ಶಾಲಾ ಕಟ್ಟಡಗಳು ಹಳೆಯದಾಗಿದ್ದು ಶಿಥಿಲಗೊಳ್ಳುತ್ತಿವೆ, ರಿಪೇರಿಯಾಗದ ಕಟ್ಟಡಗಳಲ್ಲಿ ಮಕ್ಕಳು ಜೀವ ಕೈಯಲ್ಲಿಡಿದು ಕಲಿಯಬೇಕಾದ ಪರಿಸ್ಥಿತಿ ಇದೆ. ಪೀಠೋಪಕರಣ, ಪುಸ್ತಕಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರೇ ಕೊರತೆ ಕಾಡುತ್ತಿದೆ’ ಎಂದು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ರಂಗಪೇಠ ಗ್ರಾಮದ ಪೋಷಕರೊಬ್ಬರು ಬೇಸರದಿಂದ ನುಡಿಯುತ್ತಾರೆ.

‘ನಮ್ಮಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಸಿಬ್ಬಂದಿ ಮಧ್ಯೆ ಸಮನ್ವಯವಿಲ್ಲ. ಹುದ್ದೆಯಲ್ಲಿ ಮೇಲು–ಕೀಳು ಎಂಬ ಭಾವನೆ ಹಲವು ಶಿಕ್ಷಕರು, ಉಪನ್ಯಾಸಕರಲ್ಲಿದೆ. ಇದರ ಪರಿಣಾಮ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿದೆ’ ಎಂದು ಬೆಳಗಾವಿಯ ಶಿಕ್ಷಕರೊಬ್ಬರು ಕೆಪಿಎಸ್‌ ಸ್ಥಿತಿಯನ್ನು ಬಿಚ್ಚಿಡುತ್ತಾರೆ.

ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಭಾಷಾ ಮಾಧ್ಯಮದ ಸಮಸ್ಯೆಯೊಂದಿಗೆ ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳೂ ಇವೆ. ಮಕ್ಕಳು–ಪೋಷಕರು ಇದರಿಂದ ಗೊಂದಲಕ್ಕೀಡಾಗಿದ್ದಾರೆ.

ಶಾಲೆ ಆವರಣ ಒಂದೇ ಆದರೂ ಪ್ರಾಥಮಿಕ–ಪ್ರೌಢ– ಪದವಿ ಪೂರ್ವ ಕಾಲೇಜು ಪ್ರತ್ಯೇಕವಾಗಿಯೇ ನಡೆಯುತ್ತಿವೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಗೆ ಅನುಗುಣವಾಗಿ ಆರಂಭವಾಗಿರುವ ಶಾಲೆಗಳ ಉದ್ದೇಶ ಕಡತದಲ್ಲಷ್ಟೇ ಉಳಿದಿದೆ. ಮೂರು ವಿಭಾಗಗಳ ಶಿಕ್ಷಣವನ್ನು ಒಂದೆಡೆ ಕೂಡಿಸುವ ಪ್ರಯತ್ನ ಮೂಲದಲ್ಲೇ ವಿಫಲವಾಗಿದ್ದು, ಶಾಲೆಗಳ ಸ್ಥಿತಿ ‘ಶಾಲೆಯೊಂದು ಮೂರು ಬಾಗಿಲು’ ಎಂಬಂತಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆದು, ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ, ಈ ಶಾಲೆಗಳತ್ತ ಮಕ್ಕಳು–ಪೋಷಕರನ್ನು ಆಕರ್ಷಿಸುವ, ಶಿಕ್ಷಣ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ, ಇರುವ ಶಾಲೆಗಳನ್ನೇ ವಿಲೀನಗೊಳಿಸಿ ಕೆಪಿಎಸ್‌ ಪರಿಕಲ್ಪನೆ ನೀಡಲಾಯಿತು. ಕರ್ನಾಟಕ ಜ್ಞಾನ ಆಯೋಗದ ಶಿಫಾರಸು ಆಧರಿಸಿ 2015ರಲ್ಲಿ ಹುಟ್ಟಿಕೊಂಡ ಯೋಜನೆಗೆ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ರೂಪ ಕೊಟ್ಟಿದ್ದರು.

ಶಾಲೆಗಳಿಗೆ ಮಕ್ಕಳ ಕೊರತೆಯಾಗಿಲ್ಲ, ಎಲ್‌ಕೆಜಿ ಯುಕೆಜಿ ತರಗತಿಗಳಿಗೆ ಭಾರಿ ಬೇಡಿಕೆ ಇದೆ. ಹಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸಾವಿರ ದಾಟಿದೆ. ಆದರೆ ಆಡಳಿತಾತ್ಮಕ ಗೊಂದಲಗಳಿಂದ ಶಾಲೆಗಳು ಮಕ್ಕಳನ್ನು ಕಳೆದುಕೊಳ್ಳುವಂತಾಗಿದೆ. ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ, ಇದ್ದರೂ ನೀರಿಲ್ಲ. ದಾನಿಗಳು ಕೊಟ್ಟಿರುವ ಕಂಪ್ಯೂಟರ್‌, ಫ್ಯಾನ್‌ ಬಳಸಲು ವಿದ್ಯುತ್ತಿಲ್ಲ. ವಿದ್ಯುತ್ ಬಿಲ್‌ ಕಟ್ಟದ ಕಾರಣ ಸಂಪರ್ಕ ಕಿತ್ತು ಹಾಕಿ ತಿಂಗಳುಗಳಾಗಿವೆ. ಕೊಠಡಿಗಳ ಕೊರತೆಯಿಂದ ತರಗತಿಗಳು ಕುರಿದೊಡ್ಡಿಯಂತಾಗಿವೆ. ಒಂದು ಕೊಠಡಿಯಲ್ಲಿ 120 ಮಕ್ಕಳು! ಹೀಗೆ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಪೋಷಕರು ಮಕ್ಕಳ ಟಿ.ಸಿ ಪಡೆದು ಖಾಸಗಿ ಶಾಲೆಗಳತ್ತ ಹೊರಟಿದ್ದಾರೆ.

ಹಳೇ ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳು ಕಡೇಪಕ್ಷ ಒಂದೇ ಆವರಣದಲ್ಲಿವೆ. ಆದರೆ ಕಲ್ಯಾಣ ಕರ್ನಾಟಕದ ಹಲವೆಡೆ ಈ ಮೂರೂ ವಿಭಾಗಗಳು ಪ್ರತ್ಯೇಕವಾಗಿವೆ. ಶಿಕ್ಷಕರ ಕೊರತೆಯೂ ಹೆಚ್ಚಾಗಿದೆ.

ನಿರ್ವಹಣೆ ಯಾರ ಹೊಣೆ?: ಪಿಯು ಕಾಲೇಜು ಪ್ರಾಚಾರ್ಯ ಕೆಪಿಎಸ್‌ ಪ್ರಾಚಾರ್ಯರೂ ಆಗಿದ್ದು ಶಾಲೆಯ ಸಮಗ್ರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಉಪ ಪ್ರಾಚಾರ್ಯರಾಗಿದ್ದು, ಬಿಸಿಯೂಟದ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಆಡಳಿತಾತ್ಮಕವಾಗಿ ಯಾವುದೇ ಜವಾಬ್ದಾರಿ ಇಲ್ಲ. ಅವರು ಉಪ ಪ್ರಾಚಾರ್ಯರ ಅಣತಿಯಂತೆ ನಡೆದುಕೊಳ್ಳುತ್ತಾರೆ.

‘ಬಹುತೇಕ ಶಾಲೆಗಳಲ್ಲಿ ಪ್ರಾಚಾರ್ಯ ಹಾಗೂ ಉಪ ಪ್ರಾಚಾರ್ಯರ ನಡುವೆ ಸಮನ್ವಯವಿಲ್ಲ. ಪ್ರಾಚಾರ್ಯರು ಕಾಲೇಜು ಬಿಟ್ಟು ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳತ್ತ ನೋಡುವುದಿಲ್ಲ. ಅವುಗಳ ಜವಾಬ್ದಾರಿಯನ್ನೇಕೆ‌ ಹೊರಬೇಕೆಂಬ ನಿರಾಸಕ್ತಿಯೇ ‌ಕೆಪಿಎಸ್‌ ಪರಿಕಲ್ಪನೆ ಸಾಕಾರಗೊಳ್ಳದಿರಲು ಕಾರಣ’ ಎಂದು ಶಿಕ್ಷಕರು ಆರೋಪಿಸುತ್ತಾರೆ.

ಕೆಪಿಎಸ್‌ ಅಡಿ ಬರುವ ಪಿಯು ವಿಭಾಗಗಳು ಈಗಲೂ ‘ಪದವಿ ಪೂರ್ವ ಶಿಕ್ಷಣ ಇಲಾಖೆ’ ವ್ಯಾಪ್ತಿಯಲ್ಲಿವೆ. ಪ್ರಾಥಮಿಕ–ಪ್ರೌಢಶಾಲೆಗಳು ‘ಶಾಲಾ ಶಿಕ್ಷಣ ಮತ್ತು ಸಾರಕ್ಷತಾ ಇಲಾಖೆ’ಯ ಅಡಿಯಲ್ಲಿವೆ. ಸರ್ಕಾರದ ಹಂತದಲ್ಲೇ ಆಡಳಿತ ಬೇರೆಯಾಗಿರುವುದರಿಂದ ಪ್ರಾಥಮಿಕ–ಪ್ರೌಢ ಶಾಲೆ–ಪಿಯು ಕಾಲೇಜುಗಳನ್ನು ಬೆಸೆಯಲು ಸಾಧ್ಯವಾಗಿಲ್ಲ ಎನ್ನುವುದು ಸಾಕಷ್ಟು ಶಿಕ್ಷಕರ ಅಭಿಪ್ರಾಯ. ಶಾಲೆ ಮೂರು ಬಾಗಿಲಾಗಲು ಇದೇ ಮೂಲ ಕಾರಣವಾಗಿದೆ..

ಜಿಲ್ಲಾ ಮಟ್ಟದಲ್ಲಿ ಕೆಪಿಎಸ್‌ ಮೇಲುಸ್ತುವಾರಿ ಜವಾಬ್ದಾರಿ ಡಿಡಿಪಿಐ ಮೇಲಿದೆ. ಕೆಪಿಎಸ್‌ ಪ್ರಾಚಾರ್ಯರು ಹಾಗೂ ಡಿಡಿಪಿಐ ಸಮಾನ ಹುದ್ದೆಗಳಾಗಿದ್ದು ಇಬ್ಬರ ನಡುವೆ ಸಮನ್ವಯತೆ ಸಾಧ್ಯವಾಗುತ್ತಿಲ್ಲ. ಡಿಡಿಪಿಐ ಸೂಚನೆಗಳು ಪ್ರಾಥಮಿಕ–ಪ್ರೌಢಶಾಲೆಗಷ್ಟೇ ಅನ್ವಯವಾಗುತ್ತಿದ್ದು, ಪಿಯು ಕಾಲೇಜುಗಳಲ್ಲಿ ಪಾಲನೆಯಾಗುತ್ತಿಲ್ಲ. ‘ಡಿಡಿಪಿಐಗಿಂತ ತಾವೇನೂ ಕಡಿಮೆಯಿಲ್ಲ, ಅವರ ಮಾತೇಕೆ ಕೇಳಬೇಕು’ ಎಂಬ ಭಾವ ಕೆಪಿಎಸ್‌ ಪ್ರಾಚಾರ್ಯರಲ್ಲಿದೆ.

‘ಪರಿಶೀಲನೆಗೆ ಬರುವ ಡಿಡಿಪಿಐ ಕೆಪಿಎಸ್‌ ಪ್ರಾಚಾರ್ಯರ ಬಳಿ ಹೋಗುವುದಿಲ್ಲ. ಉಪ ಪ್ರಾಚಾರ್ಯರನ್ನಷ್ಟೇ ಭೇಟಿ ಮಾಡುತ್ತಾರೆ. ಶಾಲೆಗಳ ಸಮರ್ಪಕ ಮೇಲುಸ್ತುವಾರಿಗೆ ಜಿಲ್ಲಾ ಮಟ್ಟದಲ್ಲಿ ಉನ್ನತ ಮಟ್ಟದ ನಿಯಂತ್ರಣ ವ್ಯವಸ್ಥೆ ಇರಬೇಕು. ಡಿಡಿಪಿಐಗಿಂತಲೂ ಹೆಚ್ಚು ಅಧಿಕಾರವುಳ್ಳ ಮೇಲಾಧಿಕಾರಿಯ ನೇಮಕವಾಗಬೇಕು’ ಎಂದು ಶಿಕ್ಷಕರು ಒತ್ತಾಯಿಸುತ್ತಾರೆ.

ಶೈಕ್ಷಣಿಕ ಪ್ರತ್ಯೇಕತೆ: ಕೆಪಿಎಸ್‌ ಮಾರ್ಗಸೂಚಿ ಅನ್ವಯ ಪಿಯು ಕಾಲೇಜುಗಳ ಉಪನ್ಯಾಸಕರು ಪ್ರೌಢಶಾಲೆಗಳಿಗೂ ಪಾಠ ಮಾಡಬೇಕು. ಅದೇ ಉದ್ದೇಶಕ್ಕೆ ಅವರಿಗೆ ಬಿ.ಇಡಿ ಪದವಿ ಕಡ್ಡಾಯಗೊಳಿಸಲಾಗಿದೆ. ಆದರೆ ಅವರು ಪ್ರೌಢಶಾಲೆಗೆ ಪಾಠ ಮಾಡಲು ನಿರಾಸಕ್ತಿ ತೋರಿಸುತ್ತಿರುವುದು ಶೈಕ್ಷಣಿಕವಾಗಿಯೂ ಶಾಲೆಗಳು ಪ್ರತ್ಯೇಕವಾಗಿ ಉಳಿಯುವಂತಾಗಿದೆ. ಪ್ರಾಥಮಿಕ– ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳ ತರಗತಿ ಅವಧಿ ಕೂಡ ಬೇರೆ ಬೇರೆಯಾಗಿದೆ, ಸಮವಸ್ತ್ರದಲ್ಲೂ ಏಕರೂಪವಿಲ್ಲ. 

ಆರ್ಥಿಕ ಚಟುವಟಿಕೆಗಳೂ ಪ್ರತ್ಯೇಕವಾಗಿದ್ದು ವೇತನ ಹಂಚಿಕೆ ಮಾಡುವ ಅಧಿಕಾರಿಗಳೂ (ಡ್ರಾಯಿಂಗ್‌ ಆಫೀಸರ್‌) ಬೇರೆಬೇರೆಯಾಗಿ ಕೆಲಸ ಮಾಡುತ್ತಾರೆ. ಪ್ರಾಥಮಿಕ ಶಾಲೆಗಳಲ್ಲಿ ಬಿಇಒ ವೇತನ ಹಂಚಿದರೆ, ಪ್ರೌಢಶಾಲೆಯಲ್ಲಿ ಉಪ ಪ್ರಾಚಾರ್ಯರು, ಪಿಯು ಕಾಲೇಜುಗಳಲ್ಲಿ ಪ್ರಾಚಾರ್ಯರು ವೇತನ ಹಂಚುತ್ತಾರೆ. ಅನುದಾನಗಳ ಹಂಚಿಕೆ ಹೊರತುಪಡಿಸಿ ಮಿಕ್ಕೆಲ್ಲಾ ವಹಿವಾಟುಗಳಿಗೆ ಪ್ರತ್ಯೇಕ ಖಾತೆಗಳಿವೆ. ಈ ಪ್ರತ್ಯೇಕತೆಯೂ ಕೆಪಿಎಸ್‌ಗಳನ್ನು ಬೇರೆಬೇರೆ ಮಾಡಿದೆ.

ಕೆಪಿಎಸ್‌ಗಳು ಮೂರು ರೀತಿಯ ಅನುದಾನ ಪಡೆಯಬಹುದು. ನಿರ್ವಹಣೆಗೆ ‘ಅಭಿವೃದ್ಧಿ ಅನುದಾನ’ ಪ್ರತಿ ವರ್ಷ ದೊರಕುತ್ತದೆ‌‌. ಉನ್ನತೀಕರಣಕ್ಕೆ ಕ್ರಿಯಾ ಯೋಜನೆ ಸಲ್ಲಿಸಿ ‘ವಿಶೇಷ ಅನುದಾನ’ ಪಡೆಯಬಹುದು. ಮಾಸ್ಟರ್‌ ಪ್ಲಾನ್‌ ಸಲ್ಲಿಸಿದರೆ ‘ಹೆಚ್ಚುವರಿ ವಿಶೇಷ ಅನುದಾನ’ ಪಡೆದು ಶಾಲೆಗಳಿಗೆ ಹೈಟೆಕ್‌ ರೂಪ ನೀಡಬಹುದು.

ಶಾಲಾ ಅಭಿವೃದ್ಧಿಯ ಸ್ಪಷ್ಟ ರೂಪ ಸಲ್ಲಿಸಿ ವಿಶೇಷ ಅನುದಾನ ಪಡೆಯುವಲ್ಲಿ ಶಾಲಾ ಪ್ರಾಚಾರ್ಯರು ವಿಫಲರಾಗುತ್ತಿದ್ದಾರೆ, ಇದಕ್ಕೆ ಅವರ ನಿರಾಸಕ್ತಿಯೇ ಕಾರಣ. ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ ಹಾಗೂ ಇತರ ಉದ್ದೇಶಕ್ಕೆ ಕೊಡುವ ಅಲ್ಪ ಪ್ರಮಾಣದ ಅಭಿವೃದ್ಧಿ ಅನುದಾನವನ್ನಷ್ಟೇ ಪಡೆಯಲು ಬಹುತೇಕ ಶಾಲೆಗಳು ಶಕ್ತವಾಗಿವೆ.

‘ಕೆಪಿಎಸ್‌ಗಳಿಗೆ ಹಣ ಇಲ್ಲ ಎಂದು ಸರ್ಕಾರ ಎಲ್ಲೂ ಹೇಳಿಲ್ಲ, ಶಾಲೆ ಆರಂಭವಾಗಿ ನಾಲ್ಕೈದು ವರ್ಷವಾದರೂ ಇಲಾಖೆಗೆ ಒಮ್ಮೆಯೂ ಆ್ಯಕ್ಷನ್‌ ಪ್ಲಾನ್‌, ಮಾಸ್ಟರ್‌ಪ್ಲಾನ್‌ಗಳನ್ನೇ ಕಳುಹಿಸದ ಬಹಳಷ್ಟು ಶಾಲೆಗಳಿವೆ. ಆದರೆ ಪ್ರಾಚಾರ್ಯ, ಉಪ ಪ್ರಾಚಾರ್ಯರ ನಿರಾಸಕ್ತಿಯಿಂದಾಗಿ ವಿಶೇಷ ಅನುದಾನ ಪಡೆಯಲು ಸಾಧ್ಯವಾಗಿಲ್ಲ’ ಎಂದು ಡಿಡಿಪಿಐವೊಬ್ಬರು ತಿಳಿಸಿದರು.

‘ಈ ಬಾರಿ ನಮಗೆ ₹ 13,500 ಅನುದಾನ ಬಂದಿದೆ. ಬರಬೇಕಿದ್ದ ಅನುದಾನದಲ್ಲಿ ಕಾಲು ಭಾಗವದು. ಶೌಚಾಲಯ ಸ್ವಚ್ಛಗೊಳಿಸುವ ಕೆಲಸಗಾರನ ಕೂಲಿಗೂ ಸಾಕಾಗುತ್ತಿಲ್ಲ. ಇಷ್ಟು ಕಡಿಮೆ ಅನುದಾನದಲ್ಲಿ ಶಾಲೆ ನಿರ್ವಹಿಸುವುದು ಹೇಗೆ’ ಎಂದು ಹೆಸರು ಬಹಿರಂಗ ಮಾಡಬಾರದು ಎನ್ನುವ ಷರತ್ತಿನ ಮೇಲೆ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕಿ ಅಸಹಾಯಕತೆ ವ್ಯಕ್ತಪಡಿಸಿದರು.

ಬೇಡಿಕೆಗೆ ಅನುಗುಣವಾಗಿ ಅನುದಾನ: ಐದು ವರ್ಷಗಳ ಹಿಂದೆ ಶಾಲೆಗಳನ್ನು ‌‌ಆರಂಭಿಸಿದಾಗ ಪ್ರತಿ ತಾಲ್ಲೂಕಿಗೆ ಒಂದು ಕೆಪಿಎಸ್‌ ಎಂದು ನಿರ್ಧರಿಸಲಾಗಿತ್ತು. ಈಗ ಸಂಖ್ಯೆ ಹೆಚ್ಚಿದೆ. ಆರಂಭದಲ್ಲಿ ಶಾಲೆಗಳ ಮೂಲ ಸೌಕರ್ಯಕ್ಕೆ ಸರ್ವ ಶಿಕ್ಷಣ ಅಭಿಯಾನ ಹಾಗೂ ಇತರೆ ಅನುದಾನದ ಅಡಿ ಪ್ರತಿ ಶಾಲೆಗೆ ₹ 15 ಲಕ್ಷ ನೀಡಲಾಗಿತ್ತು. ನಂತರ ಬೇಡಿಕೆಗಳಿಗೆ ಅನುಗುಣವಾಗಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

2022–23ನೇ ಸಾಲಿನಲ್ಲಿ ಮೂಲ ಸೌಕರ್ಯಗಳಿಗೆ ಸಾಕಷ್ಟು ಅನುದಾನ ದೊರಕಿದೆ. ಕ್ರಿಯಾ ಯೋಜನೆ ಸಲ್ಲಿಸಿದ ಶಾಲೆಗಳಲ್ಲಿ ಕೊಠಡಿಗಳು, ಬಾಲಕ–ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳಿಗೆ ₹ 70 ಕೋಟಿ ಬಿಡುಗಡೆ ಮಾಡಲಾಗಿತ್ತು. ಕಂಪ್ಯೂಟರ್‌ ಲ್ಯಾಬ್‌ ನಿರ್ಮಾಣ, ಕಂಪ್ಯೂಟರ್‌ ಖರೀದಿ, ಎಲ್‌ಇಡಿ ಪ್ರೊಜೆಕ್ಟರ್‌, ಪ್ಯಾನಲ್‌ ಬೋರ್ಡ್‌ಗಳ ಖರೀದಿಗೆ ₹ 15 ಕೋಟಿ ನೀಡಲಾಗಿದೆ. ವಿಜ್ಞಾನ ಪ್ರಯೋಗಾಲಯ, ಕಲೆ, ಕುಶಲ ಕೊಠಡಿಗಳು, ಗ್ರಂಥಾಲಯ ನಿರ್ಮಾಣಕ್ಕಾಗಿ ₹ 50 ಕೋಟಿ ದೊರೆತಿದೆ. 

ತಂತ್ರಜ್ಞಾನ ಆಧಾರಿತ ಶಿಕ್ಷಣವಿಲ್ಲ: ಶಾಲಾ ಹಂತದಿಂದಲೇ ಮಕ್ಕಳಿಗೆ ಕಂಪ್ಯೂಟರ್‌ನ ಮೂಲ ಜ್ಞಾನ ಒದಗಿಸಲು ತಂತ್ರಜ್ಞಾನ ಆಧಾರಿತ ಕಲಿಕೆ (ಟಿಎಎಲ್‌ಪಿ)ಗೂ ಆದ್ಯತೆ ನೀಡಲಾಗಿತ್ತು. ವೃತ್ತಿ ಶಿಕ್ಷಣ, ಕಲೆ, ಸಂಗೀತದಂಥ ಪಠ್ಯೇತರ ಚಟುವಟಿಕೆಗಳ ತರಬೇತಿಗೂ ಒತ್ತು ನೀಡಲು ಉದ್ದೇಶಿಸಲಾಗಿತ್ತು. ‘ಗುರು ಚೇತನ’ ಕಾರ್ಯಕ್ರಮದಲ್ಲಿ ವಿಶೇಷ ಶಿಕ್ಷಕರನ್ನು ನೇಮಿಸಲು ಆದೇಶಿಸಲಾಗಿತ್ತು. ಆದರೆ ಇವೆಲ್ಲವೂ ಕಡತಗಳಲ್ಲಿ ಮಾತ್ರ ಇವೆ. ಅನುಷ್ಠಾನ ಆಗೇ ಇಲ್ಲ.

‘ಕೆಪಿಎಸ್‌ ಉದ್ದೇಶಗಳು ಚೆನ್ನಾಗಿವೆ, ಆದರೆ ಎಷ್ಟು ಶಾಲೆಗಳಲ್ಲಿ ಸಾಕಾರಗೊಂಡಿವೆಯೆಂದು ಹುಡುಕಿದರೆ ಬೇಸರವಾಗುತ್ತದೆ. ಶಾಲೆಗಳ ರಚನೆಯ ಉದ್ದೇಶ, ಸೌಲಭ್ಯಗಳ ಬಗ್ಗೆ ಪ್ರಾಚಾರ್ಯರೂ ಸೇರಿದಂತೆ ಶಿಕ್ಷಕರಿಗೆ, ಸಿಬ್ಬಂದಿಗೆ ತರಬೇತಿ ಅವಶ್ಯಕ’ ಎಂಬುದು ಹೆಸರು ಬಹಿರಂಗಪಡಿಸಲು ಬಯಸದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರ ಪ್ರತಿಪಾದನೆ.

‘ಇಂಗ್ಲಿಷ್‌ ಮಾಧ್ಯಮದ ಹೆಸರಿನಲ್ಲಿ ಕೆಪಿಎಸ್‌ಗಳು ಕಂಗ್ಲಿಷ್‌ ಶಾಲೆಗಳಾಗಿಬಿಟ್ಟಿವೆ. ಕೇಂದ್ರೀಯ ವಿದ್ಯಾಲಯ, ಆದರ್ಶ ವಿದ್ಯಾಲಯ, ನವೋದಯ ವಿದ್ಯಾಲಯಗಳ ಮಾದರಿಯಲ್ಲಿ ಶಿಕ್ಷಕರ ನೇರ ನೇಮಕಾತಿಯಾಗಬೇಕು. ಇಂಗ್ಲಿಷ್‌ ಬಲ್ಲ ಶಿಕ್ಷಕರನ್ನು ನೇರವಾಗಿ ನೇಮಿಸಿದರೆ ಪಬ್ಲಿಕ್‌ ಶಾಲೆಯಲ್ಲಿರುವ ಭಾಷಾ ಮಾಧ್ಯಮದ ಗೊಂದಲ ಬಗೆಹರಿಯಬಹುದು. ಕೆಪಿಎಸ್‌ಸಿ ಮೂಲಕವೂ ನೇಮಕಾತಿ ಮಾಡಿಕೊಳ್ಳಲು ಅಡ್ಡಿಯಿಲ್ಲ’ ಎಂದು ಶಿಕ್ಷಣ ತಜ್ಞೆ ಡಿ.ವಿ.ಸುವರ್ಣಾ ಅಭಿಪ್ರಾಯಪಡುತ್ತಾರೆ.

ಕನ್ನಡ ಮಾಧ್ಯಮಕ್ಕೆ ಪಾಠ ಮಾಡುತ್ತಿದ್ದವರೇ ಇಂಗ್ಲಿಷ್‌ ಮಾಧ್ಯಮದ ಕೆಪಿಎಸ್‌ಗಳಿಗೂ ಪಾಠ ಮಾಡಬೇಕೆಂದು ಸೂಚಿಸಿರುವುದು ಶಿಕ್ಷಕರಲ್ಲಿ ಅಸಮಾಧಾನ ತರಿಸಿದೆ. ಸರ್ಕಾರಿ ಶಾಲೆಗಳ ಬಹುತೇಕರಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಕೌಶಲವಿಲ್ಲ. ಸಮರ್ಪಕ ತರಬೇತಿಯೂ ಇಲ್ಲದೆ, ಕನ್ನಡ ಮಾಧ್ಯಮದಲ್ಲೇ ಪಾಠ ಮಾಡುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಬೋಧನೆ –ಕಲಿಕೆ ದೂರವೇ ಉಳಿದಿದೆ.

ಪೂರಕ ಮಾಹಿತಿ: ಸಂಧ್ಯಾ ಹೆಗಡೆ, ಮನೋಜ್‌ ಕುಮಾರ್‌ ಗುದ್ದಿ, ಎಂ.ಮಹೇಶ್‌, ಜಿ.ಶಿವಕುಮಾರ, ಇಮಾಮ್‌ಹುಸೇನ್‌ ಗೂಡುನವರ

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಕೆಪಿಎಸ್‌ ನೋಟ
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಕೆಪಿಎಸ್‌ ನೋಟ
ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆ ಶಿಥಿಲಾವಸ್ಥೆ ತಲುಪಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆ ಶಿಥಿಲಾವಸ್ಥೆ ತಲುಪಿದೆ.
ಕೆ.ಆರ್‌.ಪೇಟೆ ಕೆಪಿಎಸ್‌ಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲುಗಟ್ಟಿ ನಿಂತಿದ್ದರು
ಕೆ.ಆರ್‌.ಪೇಟೆ ಕೆಪಿಎಸ್‌ಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲುಗಟ್ಟಿ ನಿಂತಿದ್ದರು
ಚಿತ್ರದುರ್ಗ ತಾಲ್ಲೂಕು ಹಿರಿಯೂರಿನ ಹೊಸ ಯಳನಾಡು ಕೆಪಿಎಸ್‌ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳಿಗೆ ಪಾಠ
ಚಿತ್ರದುರ್ಗ ತಾಲ್ಲೂಕು ಹಿರಿಯೂರಿನ ಹೊಸ ಯಳನಾಡು ಕೆಪಿಎಸ್‌ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳಿಗೆ ಪಾಠ
ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿಯ ಕೆಪಿಎಸ್‌ ಹೊರನೋಟ
ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿಯ ಕೆಪಿಎಸ್‌ ಹೊರನೋಟ

ಅತಿಥಿ ಶಿಕ್ಷಕರೇ ಆಧಾರ

ಬಹುತೇಕ ಶಾಲೆಗಳಲ್ಲಿ ವಿಜ್ಞಾನ ಇಂಗ್ಲಿಷ್‌ ಗಣಿತ ಶಿಕ್ಷಕ ಹುದ್ದೆಗಳು ಖಾಲಿ ಇದ್ದು ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ. ಹೆಚ್ಚು ಮಕ್ಕಳು ಪಾಠ ಬೋಧನೆಯ ಹೊರೆ ಇಂಗ್ಲಿಷ್‌ ಮಾಧ್ಯಮದ ಕಾರಣಗಳಿಂದ ಶಿಕ್ಷಕರು ದೂರವೇ ಉಳಿಯುತ್ತಾರೆ. ಕೇಳಿದ ಶಾಲೆಗಳಿಗೆ ಕೊಟ್ಟರೂ ಕೇಂದ್ರ ಸ್ಥಾನಕ್ಕೆ ತೆರಳುವ ಅವಕಾಶ ಸಿಕ್ಕರೂ ಬೇಡವೆನ್ನುತ್ತಾರೆ. ಸಾಮಾನ್ಯ ವರ್ಗಾವಣೆ ಸಮಯದಲ್ಲೂ ಬೇಡವೆನ್ನುವವರೇ ಹೆಚ್ಚು. ‘ಕೆಪಿಎಸ್‌ಗಳು ಸಮಸ್ಯೆಯ ಸುಳಿಯಲ್ಲಿವೆ ಎಂದು ಶಿಕ್ಷಕರೇ ಒಪ್ಪಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಆ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಇದೇ ರೀತಿಯಾದರೆ ಇನ್ನೊಂದೆರಡು ವರ್ಷದಲ್ಲಿ ಕೆಪಿಎಸ್‌ಗಳನ್ನು ಮುಚ್ಚುವ ಪರಿಸ್ಥಿತಿ ಬರಬಹುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರೊಬ್ಬರು ಆತಂಕ ವ್ಯಕ್ತಪಡಿಸಿದರು.

ಎರಡು ವರ್ಷಗಳಲ್ಲಿ ಇನ್ನೂ 200 ಕೆಪಿಎಸ್‌
ಹೋಬಳಿ ಮಟ್ಟದಲ್ಲಿ ಪಬ್ಲಿಕ್‌ ಶಾಲೆ ಆರಂಭಿಸಲು ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ಕೆಪಿಎಸ್‌ ಶಾಲೆಗಳ ಸಂಖ್ಯೆ 300 ಗಡಿ ತಲುಪಿದೆ. ಎರಡು ವರ್ಷದಲ್ಲಿ ಇನ್ನೂ 200 ಶಾಲೆಗಳನ್ನು ತೆರೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶೌಚಾಲಯ, ಸ್ವಚ್ಛತೆ ನಿರ್ವಹಣೆಗಾಗಿಯೇ ₹153 ಕೋಟಿ, ಕೊಠಡಿಗಳ ನಿರ್ಮಾಣಕ್ಕಾಗಿ ₹550 ಕೋಟಿ, ಶೌಚಾಲಯಗಳ ನಿರ್ಮಾಣಕ್ಕೆ ₹ 200 ಕೋಟಿ, ಶಿಥಿಲಗೊಂಡಿರುವ ಶಾಲೆಗಳ ದುರಸ್ತಿಗೆ ₹100 ಕೋಟಿ ಒದಗಿಸಲಾಗಿದೆ. ಹಂತಹಂತವಾಗಿ ಎಲ್ಲ ಶಾಲೆಗಳಿಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಕೆಲ ಕೆಪಿಎಸ್‌ನಲ್ಲಿ ಆಶಾಕಿರಣ

ನಸುಕಿನಲ್ಲೇ ಸಾಲುಗಟ್ಟುವ ಪೋಷಕರು

ರಾಜ್ಯದ ಕೆಲವು ಕರ್ನಾಟಕ ಪಬ್ಲಿಕ್‌ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ವಿವಿಧ ಕ್ಷೇತ್ರಗಳ ಸಾಧಕರು ಧಾರಾಳವಾಗಿ ದಾನ ನೀಡುತ್ತಿದ್ದು ಮಕ್ಕಳ ಭವಿಷ್ಯಕ್ಕೆ ಬೆಂಗಾವಲಾಗಿದ್ದಾರೆ. ಕೆ.ಆರ್‌.ಪೇಟೆಯ ಶತಮಾನದ ಶಾಲೆ ಕೆಪಿಎಸ್‌ ರೂಪ ಪಡೆದಿದ್ದು ಗುಣಮಟ್ಟದ ಶಿಕ್ಷಣದಿಂದ ರಾಜ್ಯದ ಗಮನ ಸೆಳೆದಿದೆ. ದಾಖಲಾತಿ ವೇಳೆಯಲ್ಲಿ ಪೋಷಕರು ನಸುಕಿನಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದ್ದ ಕೀರ್ತಿ ಶಾಲೆಗಿದೆ.  ಚಿತ್ರನಟ ಪ್ರಕಾಶ್‌ ರಾಜ್‌ ಸೇರಿದಂತೆ ಹಲವರು ಅಪಾರ ಪ್ರಮಾಣ ಸಂಪನ್ಮೂಲ ಒದಗಿಸಿದ್ದಾರೆ.

***

ಗಾವಡಗೆರೆಯಲ್ಲಿ ನವಚೈತನ್ಯ

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆಯ ಕೆಪಿಎಸ್‌ ಸಮಗ್ರ ಮೂಲ ಸವಲತ್ತು ಹಾಗೂ ಕಲಿಕೆಗೆ ಪೂರಕವಾದ ಪರಿಸರದಿಂದ ಗ್ರಾಮೀಣ ಭಾಗದಲ್ಲಿ ಹೊಸ ಚೈತನ್ಯ ಮೂಡಿಸಿದೆ. 6 ಎಕರೆ ಪ್ರದೇಶದಲ್ಲಿ ಆರಂಭವಾದ ಶಾಲೆಯಲ್ಲಿ 1235 ಮಕ್ಕಳಿದ್ದಾರೆ. ಸುಸಜ್ಜಿತ ಗ್ರಂಥಾಲಯದಲ್ಲಿ 2330 ಪುಸ್ತಕಗಳಿವೆ. ಅಚ್ಚುಕಟ್ಟಾದ ವಿಜ್ಞಾನ ಪ್ರಯೋಗಾಲಯವಿದೆ. ಪ್ರತ್ಯೇಕ ಶೌಚಾಲಯ ಉದ್ಯಾನ ತರಗತಿಯಲ್ಲಿ ಸ್ಮಾರ್ಟ್ ಬೋರ್ಡ್ ಸಿಸಿ ಕ್ಯಾಮೆರಾ ಕಣ್ಗಾವಲು ಪೋಷಕರ ಗಮನ ಸೆಳೆದಿದೆ. ವೈಜ್ಞಾನಿಕವಾಗಿ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪ್ರತಿ ತರಗತಿಯಲ್ಲಿ 30 ವಿದ್ಯಾರ್ಥಿಗೊಬ್ಬರಂತೆ ಶಿಕ್ಷಕರಿದ್ದಾರೆ. ‘ಕೆಪಿಎಸ್‌ ಆರಂಭವಾದ ನಂತರ ನಮ್ಮ ಭಾಗದಲ್ಲಿ ಖಾಸಗಿಯವರ ಹಾವಳಿಯೂ ಕಡಿಮೆಯಾಗಿದೆ’ ಎಂದು ಪ್ರಾಚಾರ್ಯ ಜನಾರ್ಧನ್ ಹೇಳುತ್ತಾರೆ.

***

ಹೊಸ ಯಳನಾಡಿನಲ್ಲಿ ಹೈಟೆಕ್‌ ಸ್ಪರ್ಶ

ಚಿತ್ರದುರ್ಗದ ಹಿರಿಯೂರಿನ ಹೊಸ ಯಳನಾಡು ಕೆಪಿಎಸ್‌ಗೆ ಹೈಟೆಕ್‌ ಸ್ಪರ್ಶ ನೀಡಲಾಗಿದ್ದು ಮಕ್ಕಳು–ಪೋಷಕರ ಗಮನ ಸೆಳೆಯುತ್ತಿದೆ. ವಿಶಾಲ ಮೈದಾನ ಅತ್ಯಾಧುನಿಕ ತರಗತಿ ಕೊಠಡಿಗಳು ಸುಸಜ್ಜಿತ ಪ್ರಯೋಗಾಲಯ ಮಕ್ಕಳಿಗಾಗಿಯೇ ಮೀಸಲಿಟ್ಟಿರುವ ಬಸ್‌ಗಳು ಜಿಮ್‌ –ಇಲ್ಲಿನ ವಿಶೇಷ. ಕಲಾ ವಾಣಿಜ್ಯ ವಿಭಾಗಕ್ಕೆ ಸೀಮಿತವಾಗಿದ್ದ ಕಾಲೇಜಿನಲ್ಲಿ ಕೆಲ ವರ್ಷಗಳ ಹಿಂದೆ ವಿಜ್ಞಾನ ವಿಭಾಗ ಆರಂಭವಾಗಿದೆ. ಅದರ ಬೆನ್ನಲ್ಲೇ ‘ಸೈನ್ಸ್‌ ಪಾರ್ಕ್‌’ ತಲೆ ಎತ್ತಿದೆ.  ಕಂಪ್ಯೂಟರ್‌ ಲ್ಯಾಬ್‌ ಇ–ಲೈಬ್ರೆರಿ ಇನ್ಫೋಸಿಸ್‌ ಸಂಸ್ಥೆಯ ನೆರವಿನಿಂದ ₹4 ಕೋಟಿ ವೆಚ್ಚದಲ್ಲಿ ‘ಸುಜ್ಞಾನ ಭವನ’ವನ್ನೂ ನಿರ್ಮಿಸಲಾಗಿದೆ. ಏಕಕಾಲಕ್ಕೆ ಒಂದು ಸಾವಿರ ಮಂದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ₹25 ಲಕ್ಷ ವೆಚ್ಚದಲ್ಲಿ ಕಬಡ್ಡಿ ವಾಲಿಬಾಲ್ ಟೆನಿಸ್ ಅಂಕಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರೌಢಶಾಲೆಗೆ ಪ್ರತ್ಯೇಕ ಕಂಪ್ಯೂಟರ್‌ ಲ್ಯಾಬ್‌ ಇದೆ. ಇಲ್ಲಿ ಪ್ರತಿ ವರ್ಷ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಸಿಇಟಿ ತರಬೇತಿ ನೀಡಲಾಗುತ್ತಿದೆ. 19 ಎಕರೆ ವಿಸ್ತೀರ್ಣದ ಶಾಲೆಯ 16 ಎಕರೆ ಭೂಮಿಯನ್ನು ದಾನಿಗಳೇ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಯರಗಟ್ಟಿ ಗ್ರಾಮ ಕೆಪಿಎಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ  400ರಿಂದ 1200ಕ್ಕೆ ತಲುಪಿದೆ. ಐದು ಸ್ಮಾರ್ಟ್ ಕ್ಲಾಸ್ 45 ಕಂಪ್ಯೂಟರ್ ಪ್ರಯೋಗಾಲಯಗಳಿವೆ. ಸ್ಯಾಮ್‌ಸಂಗ್‌ ಕಂಪನಿ 40 ಟ್ಯಾಬ್‌ ಕೊಟ್ಟಿದ್ದು ದಾನಿಗಳು ಶಾಲೆ ಸುಧಾರಣೆಗೆ ಬೆನ್ನಿಗೆ ನಿಂತಿದ್ದಾರೆ‌‌.

***

ಸಿಎಂ ತವರು ಶಾಲೆಗೆ ಹೊಸ ಕೊಠಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸದ್ಯ ಎಲ್ ಕೆಜಿಯಿಂದ 10ನೇ ತರಗತಿವರೆಗೆ 850 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಎಲ್‌ ಕೆಜಿಗೆ 60 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕನ್ನಡ–ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ‌‌. ಸಾಖಷ್ಟು ಶಿಕ್ಷಕರೂ ಇದ್ದಾರೆ. 19 ಕೊಠಡಿಗಳ ಪೈಕಿ ಆರು ಶಿಥಿಲಗೊಳ್ಳುತ್ತಿದ್ದು ಆರು ಹೊಸ ಕೊಠಡಿ ನಿರ್ಮಾಣಕ್ಕೆ ₹ 1.3 ಕೋಟಿ ಅನುದಾನ ಮಂಜೂರಾಗಿದೆ.

ಕೆಪಿಎಸ್‌ನ ಮೂರು ವಿಭಾಗಗಳನ್ನು ಶೀಘ್ರ ಆಡಳಿತಾತ್ಮಕವಾಗಿ ಒಂದುಗೂಡಿಸಲಾಗುವುದು
–ಬಿ.ವಿ.ಕಾವೇರಿ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ
ಹಲವೆಡೆ ಕೆಪಿಎಸ್‌ ಶಾಲೆಗಳು ಖಾಸಗಿ ಶಾಲೆಗಳನ್ನೂ ಮೀರಿಸಿವೆ. ಎಲ್ಲಾ ಶಾಲೆಗಳೂ ಆ ರೀತಿಯಾಗಲು ಅವಕಾಶವಿದೆ
–ಎಂ.ರೇಣುಕಮ್ಮ , ಹಿರಿಯ ಸಹ ಶಿಕ್ಷಕಿ, ಮಂಡ್ಯ ಕೆಪಿಎಸ್‌
ಕಟಕೋಳ ಕೆಪಿಎಸ್‌ನಲ್ಲಿ ಕಲಿಕಾ ಚಟುವಟಿಕೆ ಉತ್ತಮವಾಗಿದೆ. ಇಂಗ್ಲಿಷ್‌ ವಿಭಾಗಕ್ಕೆ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಬೇಕು
–ಸುಶೀಲ ಕುಮಾರ ತಂಗೋಜಿ, ವಿದ್ಯಾರ್ಥಿಯ ತಂದೆ, ಕಟಕೋಳ ಬೆಳಗಾವಿ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT