ಮಂಗಳವಾರ, ಸೆಪ್ಟೆಂಬರ್ 28, 2021
26 °C
ಜನರಿಗೆ ಅರಿವಿನ ಕೊರತೆ

ಅಂಗಾಂಗ ದಾನ: 5 ಜಿಲ್ಲೆಗಳಿಗೆ ಒಂದೇ ಆಸ್ಪತ್ರೆ, ಒಬ್ಬರೇ ಸಿಬ್ಬಂದಿ!

ಭೀಮಣ್ಣ ಬಾಲಯ್ಯ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅಂಗಾಂಗ ದಾನ ಶ್ರೇಷ್ಠ ದಾನಗಳಲ್ಲಿ ಒಂದು. ಆದರೆ, ಮಾಹಿತಿ ಹಾಗೂ ನೋಂದಾಯಿತ ಆಸ್ಪತ್ರೆಗಳ ಕೊರತೆಯಿಂದ ಈ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ.

ಇಲ್ಲಿನ ಚಿರಾಯು ಆಸ್ಪತ್ರೆ ಮಾತ್ರ ‘ಜೀವ ಸಾರ್ಥಕತೆ’ ಯೋಜನೆ ಅಡಿ ನೋಂದಾಯಿಸಿಕೊಂಡಿದೆ. ವಿಜಯಪುರ, ಬೀದರ್‌, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಜನ ಅಂಗಾಂಗ ದಾನಕ್ಕೆ ಇಲ್ಲಿಗೆ ಬರುವುದು ಅನಿವಾರ್ಯ. ಅಂಗಾಂಗ ದಾನಕ್ಕೆ ಮುಂದಾದ ವ್ಯಕ್ತಿಯ ಮಿದುಳು ನಿಷ್ಕ್ರಿಯ ಸಂಭವಿಸಿದ ಕುರಿತು ಇಲ್ಲಿನ ತಜ್ಞ ವೈದ್ಯರೇ ದೃಢಿಕರಿಸಬೇಕು.

ವಿಜಯಪುರದ ಖಾಸಗಿ ಆಸ್ಪತ್ರೆಯೊಂದು ಅರ್ಜಿ ಸಲ್ಲಿಸಿದೆ. ಅದಕ್ಕೆ ಇನ್ನು ಪರವಾನಗಿ ಸಿಕ್ಕಿಲ್ಲ. ಆದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಜನ ಅಂಗಾಂಗ ದಾನಕ್ಕೆ ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಒಬ್ಬರೇ ಸಿಬ್ಬಂದಿ: ಅಂಗಾಂಗ ದಾನ ಪ್ರವೃತ್ತಿ ಹೆಚ್ಚಿಸಲು ಸರ್ಕಾರ ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ‘ಜೀವ ಸಾರ್ಥಕತೆ’ ವಿಭಾಗ ತೆರೆದಿದೆ. ಅದಕ್ಕೆ ಒಬ್ಬರೇ ಸಿಬ್ಬಂದಿ ಇದ್ದಾರೆ. ಅವರೇ ಐದು ಜಿಲ್ಲೆಗಳಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಅರಿವು ಮೂಡಿಸಬೇಕು. ಕಾರ್ಯಕ್ರಮ ಮಾಡಬೇಕು. ಮಿದುಳು ನಿಷ್ಕ್ರಿಯ ಸಂಭವಿಸಿದ ವ್ಯಕ್ತಿಗಳ ಸಂಬಂಧಿಕರ ಮನವೊಲಿಸಬೇಕು. ಆದ್ದರಿಂದ ಕಲಬುರ್ಗಿ ಹೊರತುಪಡಿಸಿ ಇತರ ಜಿಲ್ಲೆಗಳ ಜನ ಅಂಗಾಂಗ ದಾನಕ್ಕೆ ಮುಂದೆ ಬರುತ್ತಿಲ್ಲ.

ನಾಲ್ವರಿಂದ ಅಂಗಾಂಗ ದಾನ: ಇಲ್ಲಿನ ಚಿರಾಯು ಆಸ್ಪತ್ರೆಯಲ್ಲಿ ಇಲ್ಲಿಯವರೆಗೂ ನಾಲ್ವರು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಮೂವರಿಂದ ತಲಾ ಮೂರು ಕಣ್ಣು, ಮೂತ್ರಪಿಂಡ ತೆಗೆದುಕೊಳ್ಳಾಗಿದೆ. ಇನ್ನೊಬ್ಬರ ದೇಹದಿಂದ ಯಕೃತ್‌ ತೆಗೆದು ಬೇರೆಯವರಿಗೆ ಕಸಿ ಮಾಡಲಾಗಿದೆ. ಚಿರಾಯು ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲು ಮಾತ್ರ ಪರವಾನಗಿ ನೀಡಲಾಗಿದೆ. ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ನೇತ್ರ ಬ್ಯಾಂಕ್‌ ಇದ್ದು, ಕಣ್ಣು ಕಸಿ ಮಾಡಲಾಗುತ್ತದೆ.

ಅಂಗಾಂಗ ದಾನ ಪ್ರಕ್ರಿಯೆ: ಮಿದುಳು ಸಾವು ಸಂಭವಿಸಿದ ವ್ಯಕ್ತಿಯ ಸಂಬಂಧಿಕರು ಅಂಗ ದಾನಕ್ಕೆ ಒಪ್ಪಿದ ಪಕ್ಷದಲ್ಲಿ ಫಾರಂ ಸಂಖ್ಯೆ–8 ಅನ್ನು ಭರ್ತಿ ಮಾಡಿ ಸಂಬಂಧಿಸಿದ ಆಸ್ಪತ್ರೆಗಳಿಗೆ ಕೊಡಬೇಕು. ಬಳಿಕ ನೋಂದಾಯಿತ ಆಸ್ಪತ್ರೆಯವರು ಆ ವ್ಯಕ್ತಿಯನ್ನು ಪರಿಶೀಲಿಸಿ ಮಿದುಳು ಸಾವು ಸಂಭವಿಸಿದ ಕುರಿತು ಫಾರಂ ಸಂಖ್ಯೆ–10 ರಲ್ಲಿ ಎರಡು ಬಾರಿ ದೃಢಿಕರಿಸಬೇಕು. ಬಳಿಕ ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿ ಅಗತ್ಯ ಇರುವ ಅಂಗಾಂಗ ತೆಗೆದುಕೊಳ್ಳಲಾಗುತ್ತದೆ.

ಕೋವಿಡ್‌ ಅಡ್ಡಿ: ಅಂಗಾಂಗ ದಾನ ಪ್ರಕ್ರಿಯೆಗೆ ಕೋವಿಡ್ ಸಹ ಅಡ್ಡಿಯಾಗಿದೆ. ಈ ಸಂದರ್ಭದಲ್ಲಿ ಪ್ರಚಾರ ನಿಲ್ಲಿಸಲಾಗಿತ್ತು. ಅಲ್ಲದೆ, ಅಂಗಾಂಗ ತೆಗೆದುಕೊಳ್ಳಲು ತೊಂದರೆಯಾಗುತ್ತಿತ್ತು. ಆದ್ದರಿಂದ ಇದಕ್ಕೆ ವೇಗ ಸಿಕ್ಕಿರಲಿಲ್ಲ. ಕೋವಿಡ್‌ಗಿಂತ ಪೂರ್ವದಲ್ಲಿ
ರಾಜ್ಯದಲ್ಲಿ 105 ಜನ ಅಂಗಾಂಗ ದಾನ ಮಾಡಿದ್ದು, ಆರೋಗ್ಯ ಇಲಾಖೆ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ. ಕೋವಿಡ್ ನಂತರ ಆ ಸಂಖ್ಯೆ ಇಳಿಕೆಯಾಗಿದೆ.

ಕಾಯ್ದಿರಿಸಿದ ಪಟ್ಟಿ: ಅಂಗಾಂಗ ಕಸಿಯ ಅಗತ್ಯ ಇರುವವರು ಆರೋಗ್ಯ ಇಲಾಖೆಯಲ್ಲಿ ಮೊದಲೇ ನೋಂದಾಯಿಸಿಕೊಳ್ಳಬೇಕು. ಬಳಿಕ ಅವರ ಪಟ್ಟಿ ತಯಾರಿಸಲಾಗುತ್ತದೆ. ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಕಸಿ ಮಾಡಲಾಗುತ್ತದೆ.

ಆಸ್ಪತ್ರೆಗಳಲ್ಲಿ ಆರ್ಗನ್‌ ರಿಟ್ರೀವಲ್‌ ಕೇಂದ್ರ
ಅಂಗಾಂಗ ತೆಗೆದು ನಿಗದಿತ ಅವಧಿಯಲ್ಲಿ ಕಸಿ ಮಾಡುವ ಆಸ್ಪತ್ರೆಗಳಿಗೆ ಕಳುಹಿಸಲು ಕಷ್ಟವಾಗುತ್ತಿರುವುದರಿಂದ ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಆರ್ಗನ್‌ ರಿಟ್ರೀವಲ್‌ ಸೆಂಟರ್‌ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಆ.13 ರಂದು ನಡೆದ ವಿಶ್ವ ಅಂಗಾಂಗ ದಾನ ದಿನದ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಯೋಜಿಸಲಾಗಿದೆ.

ವಿಮಾನ ನಿಲ್ದಾಣದಿಂದ ಅನುಕೂಲ
ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿರುವುದರಿಂದ ಅನುಕೂಲವಾಗಿದೆ. ಅಂಗಾಂಗಗಳನ್ನು ಈಗ ಕ್ಷಿಪ್ರ ಗತಿಯಲ್ಲಿ ಸಾಗಿಸಬಹುದು. ಹಿಂದೆ ಕಡಿಮೆ ಜೀವಿತಾವಧಿ ಹೊಂದಿದ ಅಂಗಾಂಗಳನ್ನು ಸಾಗಿಸಲು ತೊಂದರೆ ಅನುಭವಿಸಬೇಕಾಗಿತ್ತು. ಆದ್ದರಿಂದ ಆ ತರಹದ ಅಂಗಾಂಗಳನ್ನು ಇಲ್ಲಿಂದ ಸಾಗಿಸುತ್ತಿರಲಿಲ್ಲ. ಈಗ ಅಂಗಾಂಗ ಬೇಕಾದವರೇ ವಿಮಾನದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ವಿಮಾನ ನಿಲ್ದಾಣ ಪ್ರಾಧಿಕಾರದವರೂ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು