ಭಾನುವಾರ, ಜೂನ್ 13, 2021
21 °C
ಸೇವಾ ಭಾರತಿ ಮತ್ತು ಅನ್ನಪೂರ್ಣಾ ಶಿಕ್ಷಣ ಮತ್ತುಚಾರಿಟಬಲ್‌ ಟ್ರಸ್ಟ್‌ನಿಂದ ಕೋವಿಡ್ ಕೇರ್‌ ಕೇಂದ್ರ

ಆಮ್ಲಜನಕ ಕೊರತೆಗೆ ಶೀಘ್ರ ಪರಿಹಾರ: ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇನ್ನೂ ಏರುಗತಿಯಲ್ಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಮ್ಲಜನಕದ ಅವಶ್ಯಕತೆ ಬೀಳಲಿದೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಹೆಚ್ಚುವರಿ ಸಿಲಿಂಡರ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲ್ಲಿನ ಎಂಎಸ್‍ಕೆ ಮಿಲ್ ರಸ್ತೆಯಲ್ಲಿರುವ ಆರ್‍ಎಸ್‍ಎಸ್ ಸಂಚಾಲಿತ ಸೇವಾ ಭಾರತಿ ಮತ್ತು ಅನ್ನಪೂರ್ಣಾ ಶಿಕ್ಷಣ ಮತ್ತುಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಆರಂಭಿಸಿದ 50 ಬೆಡ್‌ಗಳ ಕೋವಿಡ್ ಕೇರ್‌ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘‌ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆಗೆ ವಿವಿಧ ಹಂತದಲ್ಲಿ ಪ್ರಯತ್ನ ನಡೆಸಲಾಗಿದೆ. ಇನ್ನೆರಡೇ ದಿನಗಳಲ್ಲಿ ಕೊರತೆ ನೀಗುವ ವಿಶ್ವಾಸವಿದೆ. ಆಮ್ಲಜನಕ ಪೂರೈಸಲು ಹೆಚ್ಚುವರಿಯಾಗಿ ಒಂದು ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತದೆ. ಅದು ನಿರಂತರವಾಗಿ ಇಲ್ಲೇ ಇರಲಿದೆ. ಟ್ಯಾಂಕರ್ ಬಂದರೆ ಬಹುಪಾಲು ಸಮಸ್ಯೆ ನೀಗಲಿದೆ’ ಎಂದೂ ಪುನರುಚ್ಚರಿಸಿದರು.

‘ನಗರದಲ್ಲೇ ಒಂದು ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಅದಕ್ಕೆ ಇನ್ನೂ ಸಮಯ ಹಿಡಿಯುವ ಕಾರಣ ತಾತ್ಕಾಲಿಕವಾಗಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ. ಗುಜರಾತ್‌ ರಾಜ್ಯದಿಂದ ಕೂಡ ಹೆಚ್ಚುವರಿ ಸಿಲಿಂಡರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ರಾಜ್ಯಕ್ಕೆ 1 ಲಕ್ಷ ಕಾನ್ಸಂಟ್ರೇಟರ್‌ ಖರೀದಿ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಕೆಲವು ಬೆಂಗಳೂರಿಗೆ ತಲುಪಲಿದ್ದು, ಪ್ರಯೋಗಿಕ ಬಳಕೆಗೆ 10 ಕಾನ್ಸಂಟ್ರೇಟರ್‌ಗಳನ್ನು ಕಲಬುರ್ಗಿಗೂ ತರಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ ರೆಮ್‌ಡಿಸಿವಿರ್‌ ಇಂಜಕ್ಷನ್‌ ಕಾಳಸಂತೆ ಮಾರಾಟ ತಡೆಯಲು ಕ್ರಮ ವಹಿಸಲಾಗಿದೆ. ಇಂಜಕ್ಷನ್‌ ಬಳಿಕೆ ಮಾಡಿದ ನಂತರ ಅದರ ಖಾಲಿ ಬಾಟಲಿಯನ್ನು ಮರಳಿ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಕಾಳಸಂತೆ ನಿಲ್ಲುತ್ತದೆ. ವೈಲ್‌ಗಳು ಎಲ್ಲಿಂದ ಮಾರಾಟವಾಗುತ್ತಿವೆ ಎಂಬುದೂ ಪತ್ತೆಯಾಗುತ್ತದೆ’ ಎಂದರು.

‘ಒಂದೇ ಶೌಚಾಲಯವನ್ನು ಸೋಂಕಿತರು ಹಾಗೂ ಅವರ ಕುಟುಂಬದವರು ಬಳಸುತ್ತಾರೆ. ಇದರಿಂದ ಸೋಂಕು ಇಡೀ ಕುಟುಂಬಕ್ಕೆ ಹರಡುವ ಸಾಧ್ಯತೆ ಇದೆ. ಸಾಧ್ಯವಿದ್ದವರು ಸೋಂಕಿತರು ಬಳಸಿದ ಶೌಚಾಲಯ ಬಿಟ್ಟು ಬೇರೆ ಬಳಸಬೇಕು. ಶೌಚಾಲಯ ಇಲ್ಲದವರಿಗಾಗಿ ಕೋವಿಡ್ ಕೇರ್‌ ಕೇಂದ್ರಗಳನ್ನು ತೆರೆಯಲಾಗಿದೆ. ಸೋಂಕಿತರು ಅಲ್ಲಿ ಸುರಕ್ಷತೆಯಿಂದ ಇರಬಹುದು’ ಎಂದು ಹೇಳಿದರು.

ಆರ್‌ಎಸ್‍ಎಸ್ ಪ್ರಮುಖ ಕೃಷ್ಣ ಜೋಶಿ, ಡಾ.ಮಂಜುನಾಥ ದೋಶೆಟ್ಟಿ ಮಾತನಾಡಿದರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ, ಮುಖಂಡರಾದ ದೊಡ್ಡಪ್ಪಗೌಡ ಪಾಟೀಲ ನರಬೋಳ, ಅಮರನಾಥ ಪಾಟೀಲ, ಡಾ.ಕುಮಾರ ಅಂಗಡಿ, ವಿಜಯ ಮಹಾಂತೇಶ, ಡಾ.ಸುಧಾ ಹಾಗಲಕಾಯಿ, ದಿವ್ಯಾ ಹಾಗರಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು