ಶುಕ್ರವಾರ, ಮಾರ್ಚ್ 24, 2023
30 °C
ಕೆಕೆಆರ್‌ಡಿಬಿ ಯೋಜನೆಯಡಿ ಕಾಮಗಾರಿ; ಎಡವಿ ಬೀಳುತ್ತಿರುವ ಜನ

ಕಲಬುರಗಿ:‘ಗೃಹ ಪ್ರವೇಶ’ಕ್ಕೆ ಪೈಪ್‌ಲೈನ್ ಅಡ್ಡಿ!

ವಿಶ್ವರಾಧ್ಯ ಎಸ್.ಹಂಗನಳ್ಳಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಶಹಾಬಾದ್ ನೂತನ ತಾಲ್ಲೂಕಿನ ತೊನಸನಳ್ಳಿ (ಎಸ್) ಗ್ರಾಮ ದಲ್ಲಿ ಮನೆಗಳ ಮುಂದೆ ಹಾಕಿರುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯೇ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ!

ತೊನಸನಳ್ಳಿ (ಎಸ್) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಾಮಗಾರಿ ಕೈಗೊಳ್ಳಲಾಗಿದೆ. ಈ ಪ್ರಯುಕ್ತ ಕಾಗಿಣಾ ನದಿಯಿಂದ ಪೈಪ್‌ಲೈನ್ ಹಾಕಲಾಗುತ್ತಿದೆ. ಆದರೆ, ‘ಈ ಪೈಪ್‌ಲೈನ್ ಮನೆಯ ಮುಂದೆ ನೆಲದಿಂದ ಮೇಲಮಟ್ಟದಲ್ಲಿ ಅಥವಾ ಸಿಸಿ ರಸ್ತೆ ಮೇಲೆ ಹಾಕಲಾಗಿದೆ. ನೆಲ ಮತ್ತು ಪೈಪ್‌ ಮಧ್ಯೆ ನಾಲ್ಕು ಇಂಚಿನಷ್ಟು ಅಂತರವಿದೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಆದಿಯಾಗಿ ಓಡಾಡುವಾಗ ಎಡವಿ ಬೀಳುವಂತಾಗಿದೆ’ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದಲ್ಲಿ ಅಂದಾಜು 650 ಮನೆಗಳಿದ್ದು, 2,500 ಜನಸಂಖ್ಯೆ ಇದೆ. ಶಹಾಬಾದ್ ತಾಲ್ಲೂಕು ಕೇಂದ್ರದಿಂದ ಜೇವರ್ಗಿ ಮಾರ್ಗವಾಗಿ 6 ಕಿ.ಮೀ ಅಂತರದಲ್ಲಿದೆ.

ಕೆಕೆಆರ್‌ಡಿಬಿ ಮ್ಯಾಕ್ರೊ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ಕಾಮಗಾರಿ ವಹಿಸಲಾಗಿದೆ. ₹ 2.96 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು 2021ರ ಮಾರ್ಚ್‌ 26ರಂದು ಕಾರ್ಯಾದೇಶ ನೀಡಲಾಗಿದೆ. ಕಳೆದ ನವೆಂಬರ್‌ 6 ರವರೆಗೆ ₹ 1.83 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ.

‘ಮನೆಗಳ ಮುಂದೆಯೇ ನೀರಿನ ಪೈಪ್‌ ಹಾಕಿದ್ದಾರೆ. ಇದನ್ನು ನೆಲದ ಒಳಗೆ ಹಾಕಬೇಕು ಅಥವಾ ಸಿ.ಸಿ ರಸ್ತೆಯನ್ನು ಅಗೆದು ಹಾಕಬೇಕು. ಇಲ್ಲವಾದಲ್ಲಿ ನಮ್ಮ ಮನೆ ಒಳಗೆ ಹೋಗಲು, ಹೊರಬರಲು ತುಂಬಾ ತೊಂದರೆ ಆಗುತ್ತದೆ. ಕತ್ತಲಲ್ಲಿ ಅಷ್ಟೇ ಅಲ್ಲದೆ ಹಗಲಿನಲ್ಲಿಯೂ ಎಡವಿ ಬೀಳುವಂತಾಗಿದೆ’ ಎಂದು ನಿವಾಸಿ ಜಗದೇವಿ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಕಲ್ಲುಬಂಡೆ ಹೆಚ್ಚಾ ಗಿದೆ. ಎಲ್ಲ ಓ‌ಣಿಗಳಲ್ಲಿ ‌ಕುಡಿಯುವ ನೀರಿನ ಪೈಪ್‌ಲೈನ್‌ ಹಾಕುವುದು ಅನಿವಾರ್ಯ. ಕೆಲ ಕಡೆ ಮನೆ ಮುಂದೆ ಹಾದುಹೋಗಿದೆ. ಜನರು ಕೂಡ ಸಹಕರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದು ಗಾ‌ಣಗೇರ ಹೇಳುತ್ತಾರೆ.

‘ರಸ್ತೆ ಮೇಲೆ, ಮನೆ ಮತ್ತು ದನದ ಕೊಟ್ಟಿಗೆ ಮುಂದೆಯೂ ನೀರಿನ ಪೈಪ್‌ಲೈನ್‌ ಹಾದು ಹೋಗಿದೆ. ಸಾರ್ವಜನಿಕರಿಗೆ ಅಷ್ಟೇ ಅಲ್ಲದೆ ದನಕರುಗಳು ಕೂಡ ಓಡಾಡಲು ತೊಂದರೆ ಉಂಟಾಗಿದೆ. ಜಾನುವಾರುಗಳ ಕಾಲಿಗೆ ತಾಕುತ್ತಿದೆ’ ಎಂದು ನಿವಾಸಿ ಬಸವರಾಜ ಹೂಗಾರ ಅಳಲು ತೋಡಿಕೊಂಡರು.

‘ನೆಲದ ಮೇಲೆ ಪೈಪ್‌ಲೈನ್‌ ಅನಿವಾರ್ಯ’

‘ತೊನಸನಳ್ಳಿ (ಎಸ್) ಗ್ರಾಮದಲ್ಲಿ ಹೆಚ್ಚಾಗಿ ಕಲ್ಲುಬಂಡೆ ಮತ್ತು ಸಿ.ಸಿ ರಸ್ತೆ ಇರುವುದರಿಂದ ಪಿವಿಸಿ ಪೈಪ್‌ ಹಾಕಿಲ್ಲ. ಅದರ ಬದಲಿಗೆ ಅನಿವಾರ್ಯವಾಗಿ ಕಬ್ಬಿಣದ (ಜಿಐ) ಪೈಪ್‌ಲೈನ್‌ ಹಾಕಲಾಗಿದೆ. ಇದನ್ನು ನೆಲದ ಮೇಲೆಯೇ ಹಾಕಬೇಕು. ಇಲ್ಲವಾದಲ್ಲಿ ನೀರು ಮತ್ತು ಮಣ್ಣಿನಿಂದ ಬೇಗ ಹಾಳಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಚಿತ್ತಾಪುರ ಉಪವಿಭಾಗದ ಸೆಕ್ಷನ್‌ ಅಧಿಕಾರಿ ರುಕುಮ್‌ ಪಟೇಲ್‌ ತಿಳಿಸಿದರು.

‘ಗ್ರಾಮದ ಪೈಪ್‌ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೆಡೆ ಈಗಾಗಲೇ ನೀರು ಕೂಡ ಸರಬರಾಜು ಮಾಡಲಾಗುತ್ತಿದೆ. ಇನ್ನು ಮನೆ ಮುಂದೆ ಪೈಪ್‌ಲೈನ್‌ ಹಾದುಹೋಗಿದ್ದರೆ ಅದಕ್ಕೆ ಸಿಮೆಂಟ್‌ ಬೆಡ್‌ ಹಾಕಿಕೊಡಲಾಗುವುದು’ ಎಂದು ಮಾಹಿತಿ ನೀಡಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು