ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತಣ್ಣಗಾದ ಭಾವಚಿತ್ರ ಅಳವಡಿಕೆ ವಿವಾದ

ಕಲಬುರಗಿಯ ಶಹಾಬಜಾರ್‌ ನಾಕಾದಲ್ಲಿ ಪೊಲೀಸ್ ಭದ್ರತೆ; ವೃತ್ತದ ಬಳಿ ಬ್ಯಾರಿಕೇಡ್
Last Updated 22 ಜನವರಿ 2022, 16:06 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಶಹಾಬಜಾರ್‌ ನಾಕಾದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರ ಹಾಗೂ ರಾಮನ ಭಾವಚಿತ್ರವನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಎದ್ದಿದ್ದ ವಿವಾದವು ತಣ್ಣಗಾಗಿದೆ.

ಕಳೆದ ಗುರುವಾರ ಕೋಲಿ ಸಮಾಜ ಹಾಗೂ ರಜಪೂತ ಸಮುದಾಯದ ಎರಡು ಗುಂಪುಗಳ ಮಧ್ಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿತ್ತು. ಪರಿಸ್ಥಿತಿಯ ಗಂಭೀರತೆಯನ್ನ ಅರಿತ ಕಲಬುರಗಿ ಪೊಲೀಸ್ ಕಮಿಷನರ್‌ ಡಾ. ವೈ.ಎಸ್. ರವಿಕುಮಾರ್ ಅವರು ಶನಿವಾರ ರಾತ್ರಿ 10ರವರೆಗೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ವಿಧಿಸಿದ್ದರು.

ಶಹಾ ಬಜಾರ್‌ ನಾಕಾದ ವಿವಾದಿತ ಸ್ಥಳದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆ ಒದಗಿಸಲಾಗಿತ್ತು. ಆ ಸ್ಥಳದಲ್ಲಿ ಜನರು ಗುಂಪು ಸೇರದಂತೆ ಪೊಲೀಸರು ನಿಗಾ ವಹಿಸಿದ್ದರು. ಶುಕ್ರವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಸಮಾಜದ ಕೆಲ ಮುಖಂಡರು ಮಾಲಾರ್ಪಣೆ ಮಾಡಿದರು.

ಕಟ್ಟೆ ಕಟ್ಟಲು ಯತ್ನ: ಅಂಬಿಗರ ಚೌಡಯ್ಯ ಭಾವಚಿತ್ರ ಅಳವಡಿಸಿದ ಸ್ಥಳದಲ್ಲಿಯೇ ರಾಮನ ಭಾವಚಿತ್ರವನ್ನು ಅಳವಡಿಸುವ ಉದ್ದೇಶದಿಂದ ಒಂದು ಗುಂಪಿನವರು ಏಕಾಏಕಿ ಇಟ್ಟಿಗೆ ಬಳಸಿ ಕಟ್ಟೆಯನ್ನು ಕಟ್ಟಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಲಿ ಸಮಾಜದ ಮುಖಂಡರು ತಕ್ಷಣ ಅಲ್ಲಿಗೆ ಧಾವಿಸಿ ಪ್ರತಿಭಟನೆ ನಡೆಸಿದರು. ಆ ಜಾಗದಲ್ಲಿಯೂ ಬ್ಯಾರಿಕೇಡ್ ಅಳವಡಿಸಲಾಗಿತ್ತು.

‘ರಾಮನ ಭಾವಚಿತ್ರವನ್ನು ಅಂಬಿಗರ ಚೌಡಯ್ಯ ಭಾವಚಿತ್ರ ಇರುವ ಜಾಗದಲ್ಲಿ ಪ್ರತಿಷ್ಠಾಪನೆ ಮಾಡುವ ನಿರ್ಧಾರದಿಂದ ಒಂದು ಗುಂಪಿನವರು ಹಿಂದೆ ಸರಿದಿದ್ದಾರೆ. ಇದರಿಂದಾಗಿ ನಾವು ಈ ವಿವಾದ ಬೆಳೆಸಲು ಇಚ್ಛಿಸುವುದಿಲ್ಲ. ಈ ಬಗ್ಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ಗಮನಕ್ಕೂ ತಂದಿದ್ದು, ಅವರ ಬೆಂಬಲಿಗರಿಗೆ ತಿಳಿ ಹೇಳುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಸ್ಥಳದಲ್ಲಿ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪಿಸಲು ಅನುಮತಿ ಪಡೆಯಲು ಯತ್ನಿಸಲಾಗುವುದು’ ಎಂದುಕೋಲಿ ಕಬ್ಬಲಿಗ ಬುಡಕಟ್ಟು ಸುಧಾರಣೆ ಸಮಿತಿರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಹೇಳಿದರು.

**

ಕಳೆದ 40 ವರ್ಷಗಳಿಂದ ಚೌಡಯ್ಯನವರ ಭಾವಚಿತ್ರವಿದ್ದು, ನಮ್ಮ ಸಮಾಜದವರು ಇದನ್ನು ಪವಿತ್ರ ಜಾಗವೆಂದು ಪರಿಗಣಿಸಿದ್ದಾರೆ. ಹೀಗಾಗಿ, ಅಧಿಕಾರಿಗಳು ಎರಡು ಸಮುದಾಯಗಳ ಮಧ್ಯೆ ಘರ್ಷಣೆ ನಡೆಯಲು ಅವಕಾಶ ನೀಡಬಾರದು.
-ಲಚ್ಚಪ್ಪ ಜಮಾದಾರ,ರಾಜ್ಯ ಅಧ್ಯಕ್ಷ, ಕೋಲಿ ಕಬ್ಬಲಿಗ ಬುಡಕಟ್ಟು ಸುಧಾರಣೆ ಸಮಿತಿ

**

ನಮ್ಮ ಸಮುದಾಯದ ಕೆಲ ಯುವಕರು ಅಲ್ಲಿ ಭಾವಚಿತ್ರ ಅಳವಡಿಸಲು ಮುಂದಾಗಿರುವ ವಿಚಾರ ಗಮನಕ್ಕೆ ಬಂದಿದೆ. ಈ ಬೆಳವಣಿಗೆಗೂ ರಜಪೂತ ಸಮುದಾಯಕ್ಕೂ ಸಂಬಂಧವಿಲ್ಲ.
-ಸಂಜಯ್ ಸಿಂಗ್,ರಜಪೂತ ಸಮುದಾಯದ ಮುಖಂಡ

**

ನಿಷೇಧಾಜ್ಞೆ ಶನಿವಾರ ರಾತ್ರಿಗೆ ಮುಕ್ತಾಯವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರಿಂದ ಮತ್ತೆ ನಿಷೇಧಾಜ್ಞೆ ವಿಸ್ತರಿಸುವುದಿಲ್ಲ. ಎರಡು–ಮೂರು ದಿನಗಳ ಬಳಿಕ ಎರಡೂ ಗುಂಪಿನವರನ್ನು ಕರೆಸಿ ಮಾತುಕತೆ ನಡೆಸುತ್ತೇವೆ.
-ಡಾ.ವೈ.ಎಸ್‌. ರವಿಕುಮಾರ್,ಕಲಬುರಗಿ ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT