ಮಂಗಳವಾರ, ಮಾರ್ಚ್ 2, 2021
21 °C
ಕಲ್ಯಾಣ ಕರ್ನಾಟಕ ಭಾಗದ ಕೊರೊನಾ ಸೇನಾನಿಗಳಿಗೆ ಪ್ರಶಸ್ತಿ ಪ್ರದಾನ

ಸೇವೆಗೆ ಪ್ರೇರಣೆಯಾದ ‘ಪ್ರಜಾವಾಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲಾಕ್‌ಡೌನ್‌ನಂಥ ಸಂಕೀರ್ಣ ಕಾಲಘಟ್ಟದಲ್ಲೂ ಜೀವದ ಹಂಗು ತೊರೆದು ಸೇವೆ ಮಾಡಿದವರ ಕಣ್ಣುಗಳಲ್ಲಿ ಸಾರ್ಥಕ ಭಾವ ಮೂಡಿತು. ಕೊರೊನಾ ವೈರಾಣು ವಿರುದ್ಧ ಹೋರಾಡಿ ಜನರನ್ನು ರಕ್ಷಿಸಿದ ಆ ಸೇನಾನಿಗಳಲ್ಲಿ ಮತ್ತೆ ಹೊಸ ಹುಮ್ಮಸ್ಸು ‍ಪುಟಿಯಿತು. ತಮಗೆ ಗೊತ್ತಿಲ್ಲದಂತೆಯೇ ತಮ್ಮ ಸೇವೆ, ಸಾಮರ್ಥ್ಯ ಹಾಗೂ ಸಮರ್ಪಣಾ ಭಾವವನ್ನು ‘ಪ್ರಜಾವಾಣಿ’ ಗುರುತಿಸಿದ ಬಗ್ಗೆ ಹೆಮ್ಮೆ ಇತ್ತು.

‘ಪ್ರಜಾವಾಣಿ’ಯ ಕಲಬುರ್ಗಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಜಾವಾಣಿ ಕೊರೊನಾ ಸೇನಾನಿಗಳು–2021’ ಪ್ರಶಸ್ತಿ ಸ್ವೀಕರಿಸಿದ ಸಾಧಕರ ಮುಖದಲ್ಲಿ ಕಂಡುಬಂದ ಭಾವವಿದು.

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಂದ 21 ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ  ಕಲಬುರ್ಗಿ, ಬೀದರ್‌, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸಾಧಕರಿಗೆ ಭಾನುವಾರ  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಬುರ್ಗಿಯ ಜಿ–99 ಹಾಗೂ ಜಿ–55 ಸಮಾಜ ಸೇವಾ ಸಂಸ್ಥೆಗಳ ಮುಖ್ಯಸ್ಥ ಶರಣು ಪಪ್ಪಾ, ‘ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದ ನಮ್ಮನ್ನು ಗುರುತಿಸಿ ‘ಪ್ರಜಾವಾಣಿ’ ಪತ್ರಿಕೆ ಈ ಅಪರೂಪದ ಗೌರವವನ್ನು ನೀಡಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಆಹಾರ, ದಿನಸಿ ವಸ್ತುಗಳನ್ನು ವಿತರಿಸುವ ಸುದ್ದಿ ಪತ್ರಿಕೆಯಲ್ಲಿ ಬಂದ ಬಳಿಕ ಉಳಿದವರೂ ಇಂತಹ ಸಮಾಜಮುಖಿ ಕೆಲಸಕ್ಕೆ ಮುಂದಾದರು. ಹೀಗಾಗಿ, ಸಾಕಷ್ಟು ಜನರು ಹಸಿವಿನಿಂದ ಬಳಲುವುದು ತಪ್ಪಿದಂತಾಯಿತು. ಇದೀಗ ನಮ್ಮ ಸಂಸ್ಥೆಗಳಿಂದ ಉಚಿತ ಡಯಾಲಿಸಿಸ್‌ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಬಡವರು ಅದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

ಬೀದರ್‌ನ ಯುವಾ ಟೀಮ್ ಸ್ಥಾಪಕ ವಿನಯ ಮಾಳಗೆ, ‘2012ರಲ್ಲಿ 30 ಜನರ ಯುವಾ ಟೀಮ್‌ ಸಂಸ್ಥೆಯನ್ನು ಆರಂಭಿಸಲಾಗಿದ್ದು, ನಗರದಲ್ಲಿ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತ ಬಂದಿದ್ದೇವೆ. ಕಂಟೇನ್ಮೆಂಟ್ ವಲಯಗಳಲ್ಲಿರುವ ಬಡವರಿಗೆ ಆಹಾರದ ಕಿಟ್‌ಗಳನ್ನು ಕೊಟ್ಟಿದ್ದೆವು. ನಿಸ್ವಾರ್ಥ ಸೇವೆಯನ್ನು ಗುರುತಿಸಿದ ‍‘ಪ್ರಜಾವಾಣಿ’ಯಿಂದಾಗಿ ಇನ್ನಷ್ಟು ಸ್ಫೂರ್ತಿ ಬಂದಂತಾಗಿದೆ’ ಎಂದರು.

ಬೀದರ್‌ ಜಿಲ್ಲೆಯ ಕಮಲ ನಗರದ ಮಹಿಳಾ ‍ಪೊಲೀಸ್‌ ಕಾನ್‌ಸ್ಟೆಬಲ್ ಸಂಗೀತಾ ಗಾಯಕವಾಡ ಅವರು, ‘ಈ ಖುಷಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯಲಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಕಲಬುರ್ಗಿ ಬ್ಯುರೊ ಮುಖ್ಯಸ್ಥ ಗಣೇಶ ಡಿ. ಚಂದನಶಿವ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಅಶೋಕಕುಮಾರ್ ಪಾಟೀಲ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಗುರುಪ್ರಕಾಶ ಮುಗಳಿ ಅವರು, ಸಾಧಕರನ್ನು ಆಯ್ಕೆ ಮಾಡಿದ ಬಗೆ, ಅವರ ಸೇವಾ ಹಿರಿಮೆ ಬಗ್ಗೆ ಮಾತನಾಡಿದರು.

ಸಾಧಕರ ಶೋಧ..

‘ಪ್ರಜಾವಾಣಿ’ ಸಾಧಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ  ಅರ್ಜಿ ಆಹ್ವಾನಿಸಿರಲಿಲ್ಲ. ಜಿಲ್ಲಾ ವರದಿಗಾರರು, ತಾಲ್ಲೂಕು ವರದಿಗಾರರು ಕೆಲ ಸಾಧಕರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಲಬುರ್ಗಿಯ ಬ್ಯುರೊ ಕಚೇರಿಗೆ ಕಳುಹಿಸಿದ್ದರು. ಆ ಮಾಹಿತಿಯನ್ನು ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಶಿವಗಂಗಾ ರುಮ್ಮಾ, ಕಲಬುರ್ಗಿಯ ಹಿಂಗುಲಾಂಬಿಕಾ ಆಯುರ್ವೇದಿಕ್‌ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿರ್ಮಲಾ ಕೆಳಮನಿ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಸಾಧಕರನ್ನು ಆಯ್ಕೆ ಮಾಡಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರು ಮಾಡಿದ ಕೆಲಸಗಳ ಬಗ್ಗೆ ಅವರೇ ವಿವರಿಸಿದ ಹಾಗೂ ತೀರ್ಪುಗಾರರ ಮಾತುಗಳನ್ನುಳ್ಳ ವಿಡಿಯೊ ಪ್ರಸಾರ ಮಾಡಲಾಯಿತು.

₹ 50.80 ಲಕ್ಷ ದೇಣಿಗೆ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಯಚೂರು ಜಿಲ್ಲೆ ಸಿಂಧನೂರು ಪುನರ್ವಸತಿ ಕ್ಯಾಂಪ್‌ನ ಜನಕಲ್ಯಾಣ ಸಂಸ್ಥೆಯ ಸ್ಥಾಪಕ ಪ್ರೆಸೇನ್ ರಫ್ತಾನ್, ‘ಕೋವಿಡ್‌ ಹಾವಳಿ ಸಂದರ್ಭದಲ್ಲಿ ಜಮ್ಮು ಕಾಶ್ಮೀರ, ಅಸ್ಸಾಂ, ತ್ರಿಪುರಾ ಸೇರಿದಂತೆ ವಿವಿಧೆಡೆ ಸಿಲುಕಿಕೊಂಡಿದ್ದ ಜಿಲ್ಲೆಯ ಬಂಗಾಳಿ ಪುನರ್ವಸತಿ ಕೇಂದ್ರದಲ್ಲಿ ಇದ್ದವರನ್ನು ಸಂಪರ್ಕಿಸಿ ಅವರ ಆಧಾರ್ ಕಾರ್ಡ್, ಬ್ಯಾಂಕ್‌ ಖಾತೆ ವಿವರವನ್ನು ಪಡೆದು ₹ 50.80 ಲಕ್ಷ ಹಣವನ್ನು ಜಮಾ ಮಾಡಲಾಯಿತು. ನಮ್ಮ ಸಂಸ್ಥೆಯ ಈ ಕಾರ್ಯಕ್ಕಾಗಿ ಆನ್‌ಲೈನ್‌ ಮೂಲಕ ನಿಧಿ ಸಂಗ್ರಹವನ್ನು ಮಾಡಿ ನಿರಾಶ್ರಿತರಿಗೆ ನೆರವಾಗುತ್ತಿದ್ದೇವೆ’ ಎಂದರು. 

‘ಪ್ರಜಾವಾಣಿ ಕೊರೊನಾ ಸೇನಾನಿ’ ಪ್ರಶಸ್ತಿ ಪುರಸ್ಕೃತರು

* ಡಾ. ರೇಣುಕಾ ಕಟ್ಟಿ, ವೈದ್ಯೆ, ಮಕ್ತಂಪುರ ಆರೋಗ್ಯ ಕೇಂದ್ರ, ಕಲಬುರ್ಗಿ

* ನಾಗೇಶ್ವರಿ ಎಂ.ಬೆನ್ನೂರಕರ್, ಸ್ಟಾಫ್ ನರ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ಚಿತ್ತಾಪುರ

* ಶರಣು ಪಪ್ಪಾ, ಜಿ 99, ಜಿ 55 ತಂಡಗಳ ಸ್ಥಾಪಕ, ಕಲಬುರ್ಗಿ

* ರಾಚಣ್ಣ ಪಿ.ಬಿಸಗೊಂಡ, ‘ಡಿ’ ಗ್ರೂಪ್ ನೌಕರ, ಜಿಮ್ಸ್, ಕಲಬುರ್ಗಿ

* ರಕ್ಷಿತಾ ಲಾಡವಂತಿ, ಪ್ರೇರಣಾ ಸಂಘ ಸ್ಥಾಪಕಿ, ಕಲಬುರ್ಗಿ

* ಮಡಿವಾಳಪ್ಪ, ಕಾನ್‌ಸ್ಟೆಬಲ್‌, ಯಾದಗಿರಿ

* ಬಸವ ಸೇವಾ ಸಮಿತಿಯ ನಾಗರಾಜ ಮಡಿವಾಳ ಹಾಗೂ ನಂದಯ್ಯಸ್ವಾಮಿ, ಕಕ್ಕೇರಾ, ಯಾದಗಿರಿ

* ಹೊನ್ನಮ್ಮ ಮಲ್ಲಪ್ಪ, ನಗರಸಭೆ ಪೌರಕಾರ್ಮಿಕರು, ಯಾದಗಿರಿ

* ಮೊಹಮ್ಮದ್‌ ಸೋಯೊಬೋದ್ದಿನ್, ಎಚ್‌ಆರ್‌ಎಸ್‌ ಸ್ಥಾಪಕ, ಬೀದರ್

* ಸವಿತಾ ಕೋರೆ, ಸ್ಟಾಫ್ ನರ್ಸ್, ಬ್ರಿಮ್ಸ್, ಬೀದರ್

* ವಿನಯ ಮಾಳಗೆ, ‘ಯುವಾ’ ಟೀಮ್ ಸ್ಥಾಪಕ, ಬೀದರ್

* ಸಂಗೀತಾ ಗಾಯಕವಾಡ, ಕಾನ್‌ಸ್ಟೆಬಲ್‌, ಕಮಲನಗರ

* ಪ್ರೆಸೇನ್ ರಫ್ತಾನ್, ಜನಕಲ್ಯಾಣ ಸಂಸ್ಥೆಯ ಸ್ಥಾಪಕ, ಸಿಂಧನೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು