ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ನವೇಶನ ಮಾರಾಟ ಅಸಿಂಧುಗೊಳಿಸಿದ ಹೈಕೋರ್ಟ್‌

13 ವರ್ಷಗಳ ಹಿಂದೆ ದಾವೆ ಹೂಡಿದ್ದ ಹೋರಾಟಗಾರ ಎಸ್‌.ಕೆ. ಕಾಂತಾ
Last Updated 7 ಡಿಸೆಂಬರ್ 2019, 14:10 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಗರದ ಸೂಪರ್ ಮಾರುಕಟ್ಟೆಯಲ್ಲಿ ಸರ್ಕಾರಕ್ಕೆ ಸೇರಿದ ಮೂರು ವಾಣಿಜ್ಯ ನಿವೇಶನಗಳ ಮಾರಾಟವನ್ನು ಹೈಕೋರ್ಟ್ ಅಸಿಂಧುಗೊಳಿಸಿ, ಮಹತ್ವದ ಆದೇಶ ನೀಡಿದೆ’ ಎಂದು ಹೋರಾಟಗಾರ ಎಸ್.ಕೆ.ಕಾಂತಾ ತಿಳಿಸಿದರು.

‘ಈ ನಿವೇಶನಗಳನ್ನು ಮರಳಿ ಪಡೆಯಲು ನ್ಯಾಯಾಲಯವು ಸರ್ಕಾರಕ್ಕೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಆರು ವಾರಗಳ ಗಡುವು ಕೊಟ್ಟಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾರುಕಟ್ಟೆ ಪ್ರದೇಶಕ್ಕೆಂದು ಸರ್ಕಾರಕ್ಕೆ 40 ಗುಂಟೆ ಜಮೀನು ಇದೆ. ಇದರ ನಿವೇಶನಗಳನ್ನು ಹಾರಜು ಮಾಡಬಹುದೇ ವಿನಾ ಮಾರಾಟ ಮಾಡಲು ಬರುವುದಿಲ್ಲ. ಆದರೆ, 13 ವರ್ಷಗಳ ಹಿಂದೆ ಕಾಲವು ರಾಜಕಾರಣಿಗಳು ಪ್ರಭಾವ ಬೀರಿ ಮೂರು ನಿವೇಶನ ಮಾರಾಟ ಮಾಡಿದ್ದರು. 2007ರಲ್ಲಿ ಇದರ ವಿರುದ್ಧ ದಾವೆ ಹೂಡಿದ್ದೆ. ದೀರ್ಘ ಕಾಲದ ಬಳಿಕ ನ್ಯಾಯ ಸಿಕ್ಕಿದೆ’ ಎಂದರು.

‘ಮಾರುಕಟ್ಟೆಯಲ್ಲಿ ಸರ್ಕಾರದ ಜಾಗ 25 ವರ್ಷಗಳಿಂದ ಖಾಲಿ ಇದ್ದು, ಅನಿಧಿಕೃತ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ ಎಂದು ನಂ.145, 146, 147ರ ನಿವೇಶನಗಳನ್ನು ಖರೀದಿಸಲು ಅಥವಾ 99 ವರ್ಷಗಳ ಲೀಸ್‌ಗೆ ಕೊಡುವಂತೆ ವಿಶ್ವನಾಥ ನಾಡಗೌಡ ಎಂಬುವವರು, ಅಂದಿನ ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸಚಿವರಿಂದ ಅನುಮೋದನೆ ಸಿಕ್ಕಿತ್ತು. ನಂತರ ಆಗಿನ ಸ್ಥಳೀಯ ಶಾಸಕರು ಖರೀದಿದಾರರ ಪರವಾಗಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಿಫಾರಸು ಪತ್ರ ಬರೆದು, ಅಧಿಕಾರ ದುರುಪಯೋಗ ಪಡೆಸಿಕೊಂಡು ಸರ್ಕಾರದ ನಿವೇಶನಗಳನ್ನು ಮಾರಾಟ ಮಾಡಿದ್ದರು’ ಎಂದರು.

‘ಮೂರು ನಿವೇಶನಗಳೂ 30X40 ಚದರ್‌ ಅಡಿ ಆಗಿದ್ದು, ಅಂದಿನ ಮಾರುಕಟ್ಟೆ ದರ ಪ್ರತಿ ಚದರ್‌ ಅಡಿಗೆ ₹ 2,500 ರಂತೆ ಮಾಡಲಾಗಿತ್ತು. ನಂ.147 ನಿವೇಶನ ಕಾರ್ನರ್‌ಗೆ ಇರುವ ಕಾರಣ ಅದರ ಪ್ರತಿ ಚದರಡಿಗೆ ಶೇ 50ರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿತ್ತು’ ಎಂದು ವಿವರಿಸಿದರು.

‘ಸರ್ಕಾರ ಕೂಡಲೇ ಈ ನಿವೇಶನಗಳನ್ನು ಹಿಂ‍ಡೆದು, ನ್ಯಾಯ ಸಮ್ಮತವಾಗಿ ಬಹಿರಂಗ ಹರಾಜು ಹಾಕಬೇಕು’ ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT