ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸಿಪಿ, ಟಿಎಸ್ಪಿ ಅನುದಾನ ಬಳಸದ ಅಧಿಕಾರಿಗಳನ್ನು ಜೈಲಿಗೆ ಕಳಿಸಿ: ಪ್ರಿಯಾಂಕ್‌

ಅಕ್ಷರ ಗಾತ್ರ

ಕಲಬುರ್ಗಿ:ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ‌ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು.

ಮೂರು ವರ್ಷದ ಹಿಂದೆ ಅಂದಿನ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಬಿಡುಗಡೆಯಾದ ಎಸ್ ಸಿ ಪಿ / ಟಿ ಎಸ್ ಪಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಪ್ರಕಾರ ಆಯಾ ವರ್ಷದ ಬಿಡುಗಡೆಯಾದ ಅನುದಾನ ಬಳಕೆ ಮಾಡದ ಅಧಿಕಾರಿಗಳನ್ನು ಜೈಲಿಗೆ ಕಳಿಸಲು ಅವಕಾಶವಿದೆ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಎಂದು ಸಚಿವರನ್ನು ಆಗ್ರಹಿಸಿದರು.

ಸಭೆಯಲ್ಲಿದ್ದ ಅಧಿಕಾರಿಗಳು ಟೆಂಡರ್ ತೆರೆದಿಲ್ಲ. ಕಾಮಗಾರಿಯ ಟೆಂಡರ್ ಬದಲಿಸಲು ಸಂಸದ ಡಾ. ಉಮೇಶ ಜಾಧವ ಅವರು ಮೌಖಿಕ ಸೂಚನೆ ನೀಡಿದ್ದರಿಂದ ಮುಂದಿನ ಪ್ರಕ್ರಿಯೆಗಾಗಿ ನಿರ್ದೇಶನ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಮಧ್ಯ ಪ್ರವೇಶಿಸಿದ ಸಚಿವರು ಈ ಕೂಡಲೇ, ಟೆಂಡರ್ ತೆರೆದು ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಲ್ಲಾಮಾರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಈ ಹಿಂದಿನ‌ ಕೆಡಿಪಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಈ ಕುರಿತು ವರದಿ ಏನಾಯ್ತು? ಜೊತೆಗೆ ಈ ಮುನ್ನ ವಿಧಾನಸಭೆಯ ಅಧಿವೇಶನದಲ್ಲಿ ನಾನು ಹಾಗೂ ಚಿಂಚೋಳಿ ಶಾಸಕರಾದ ಅವಿನಾಶ್ ಜಾಧವ್ ಅವರು ಪ್ರಶ್ನಿಸಿದಾಗ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವರು ಉತ್ತರಿಸಿದ್ದರು. ಆದರೂ ಸದರಿ ತನಿಖೆ ಏನಾಯಿತು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಸಭೆಗೆ ಉತ್ತರಿಸಿದ ಕಿರಿಯ ಎಂಜಿನಿಯರ್ 2018ರಲ್ಲಿ ಪ್ರಾರಂಭವಾದ ಯೋಜನೆಗೆ ಒಟ್ಟು ₹124 ಕೋಟಿ ನಿಗದಿಯಾಗಿದೆ. ಸದ್ಯ ₹90 ಕೋಟಿ ಅನುದಾನ ಖರ್ಚಾಗಿ ಶೇ 90ರಷ್ಟು ಕಾಮಗಾರಿ ಮುಗಿದಿದ್ದು ಮುಂದಿನ ನಾಲ್ಕೈದು ತಿಂಗಳಲ್ಲಿ ಕೆಲಸ ಮುಗಿಸುವುದಾಗಿ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಎಂಎಲ್ಸಿ ಸುನಿಲ್ ವಲ್ಯಾಪುರೆ, ಈ ಯೋಜನೆ ಪ್ರಾರಂಭವಾದ‌ ದಿನದಿಂದಲೂ ಕಳಪೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಆಗ ಉತ್ತರಿಸಿದ ಸಚಿವರು ಹಿರಿಯ ಅಧಿಕಾರಿ ಸಭೆಗೆ ಬಂದಿಲ್ಲ ಅವರನ್ನು ಕರೆಸಲಾಗುತ್ತಿದೆ. ಕೆಡಿಪಿ ಸಭೆ ಮುಗಿದ ನಂತರ ಶಾಸಕರು ಅಧಿಕಾರಿಗಳ ಸಭೆಯಲ್ಲಿ ಇಂದೇ ಒಂದು‌ ನಿರ್ಧಾರಕ್ಕೆ ಬರಲಾಗುವುದು ಎಂದರು.

ಸಭೆ ಪ್ರಾರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಸರ್ಕಾರದ ಸಭೆ ಸಮಾರಂಭಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಕಾಂಗ್ರೆಸ್ ‌ಶಾಸಕರಾದ ಎಂ.ವೈ. ಪಾಟೀಲ, ಡಾ. ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ಸಮಾರಂಭದಲ್ಲಿ ಕಲಬುರ್ಗಿ ಉತ್ತರ ಶಾಸಕಿ ಕನೀಜ್ ಫಾತೀಮಾ ಅವರ ಹೆಸರನ್ನೇ ಕೈಬಿಡಲಾಗಿದೆ. ಮೊನ್ನೆ ನಡೆದ ಕೋವಿಡ್ ಲಸಿಕೆ ಸಮಾರಂಭದಲ್ಲಿ ಶಾಸಕರಾದ ಎಂ.ವೈ. ಪಾಟೀಲ ಅವರನ್ನು ಕರೆದಿಲ್ಲ. ಅಚ್ಚರಿಯೆಂದರೆ, ಅಫಜಲಪುರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಖಾಸಗಿ ತೋಟದಲ್ಲಿ ನಡೆಸಲಾಗಿದೆ ಎಂದು ಸಚಿವರ ಗಮನ ಸೆಳೆದರು.

ಕೆಡಿಪಿ ಸಭೆಯಲ್ಲಿ ವೇದಿಕೆಯ ಮೇಲೆ ವಿರೋಧ ಪಕ್ಷದ ‌ಮುಖ್ಯ ಸಚೇತಕ ಅಜಯ್ ಸಿಂಗ್ ಅವರಿಗೆ ‌ಆಸನ ನಿಗದಿಪಡಿಸಿಲ್ಲ. ಇದು ಶಿಷ್ಟಾಚಾರದ ಉಲ್ಲಂಘನೆ ಅಲ್ಲವೇ? ನಾವೂ ಈ ಹಿಂದೆ ಅಧಿಕಾರದಲ್ಲಿ ಇದ್ದವರೇ ಆದರೆ ನಾವು ಈ ರೀತಿ ಮಾಡಿಲ್ಲ. ಕೇವಲ ಒಂದೇ ಪಕ್ಷದ ಶಾಸಕರನ್ನು ಪರಿಗಣಿಸಿದರೆ ಹೇಗೆ ಎಂದು ಪ್ರಿಯಾಂಕ್ ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು

ಆಗ ಉತ್ತರಿಸಿದ ನಿರಾಣಿ, 'ಅಚಾತುರ್ಯ ನಡೆದಿದೆ. ಶಿಷ್ಟಾಚಾರ ಪಾಲನೆಗೆ ಕಟ್ಟುನಿಟ್ಟಿನ ಆದೇಶ ನೀಡುತ್ತಿದ್ದೇನೆ. ಮುಂದೆ ಲೋಪ ಕಂಡುಬಂದರೆ, ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಪರವಾಗಿ ಹಾಗೂ ಜಿಲ್ಲಾಡಳಿತದ ಪರವಾಗಿ ಕ್ಷಮೆಯಾಚಿಸುತ್ತೇವೆ. ದಯಮಾಡಿ ಅಜಯ್ ಸಿಂಗ್ ಅವರು ವೇದಿಕೆಯ ಮೇಲೆ ಬರಬೇಕು ಎಂದು ಆಹ್ವಾನಿಸಿದರು. ನಂತರ ಅಜಯ್ ಸಿಂಗ್ ವೇದಿಕೆ ಮೇಲೆ ಕುಳಿತರು.

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಸಚಿವರ ಗಮನ ಸೆಳೆದ ಶಾಸಕ ಪ್ರಿಯಾಂಕ್, ಚಿತ್ತಾಪುರ ತಾಲ್ಲೂಕಿನಲ್ಲಿ ಲಾಕ್ ಡೌನ್ ತೆಗೆದುಹಾಕಿದ್ದರ ಉದ್ಘಾಟನೆ ಸಮಾರಂಭ ನಡೆಸಿದ್ದನ್ನು ವಿರೋಧಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಕಳೆದ ವರ್ಷ ಸಂಸದರ ಭೇಟಿಯ ವೇಳೆ ಪ್ರಶ್ನೆ ಮಾಡಿದ್ದ ರೈತರ ಮೇಲೆ ದೂರು ದಾಖಲಾಗಿದೆ. ಈ ಕುರಿತು ನಾನು ಹಿಂದಿನ ಸಭೆಯಲ್ಲೇ ಪ್ರಶ್ನೆ ಕೇಳಿದ್ದೆ ಎಂದ ಅವರು ಪ್ರಕರಣ ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸಾರ್ವಜನಿಕರ ಮೇಲೆ ನಿಯಮ ಮೀರಿ ಶೇ 15 ಕರ ಹೇರಿದ್ದು ಸರಿಯಲ್ಲ. ಈ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ‌ಪಾಟೀಲ ತೆಲ್ಕೂರ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ‌ಮತ್ತಿಮೂಡ, ಕನೀಜ್ ಫಾತಿಮಾ, ಡಾ. ಅವಿನಾಶ್ ‌ಜಾಧವ, ವಿಧಾನಪರಿಷತ್ ಸದಸ್ಯರಾದ ಸುನೀಲ ವಲ್ಯಾಪುರ, ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ, ಜಿ.ಪಂ. ಸಿಇಓ ಡಾ. ದಿಲೀಷ್ ಶಶಿ, ಕಲಬುರ್ಗಿ ಪೊಲೀಸ್ ‌ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಡಿಎಫ್ಓ ಎಂ.ಎಂ. ವಾನತಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕೃಷ್ಣಾ ಕಾಡಾ‌ ಅಧ್ಯಕ್ಷ ‌ಶರಣಪ್ಪ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT