ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನೆರಳು ಮಾಡದ ಪಾಲಿಕೆ

ಚರ್ಮ ಚುರುಗುಟ್ಟುವಂಥ ಬಿಸಿಲು, ನಗರದ ವೃತ್ತ– ಚೌಕಗಳಲ್ಲಿ ದ್ವಿಚಕ್ರ ವಾಹನ ಸವಾರರ ಪರದಾಟ
Last Updated 6 ಏಪ್ರಿಲ್ 2022, 4:56 IST
ಅಕ್ಷರ ಗಾತ್ರ

ಕಲಬುರಗಿ: ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ರಣಬಿಸಿಲಿನಿಂದ ಜನರನ್ನು ರಕ್ಷಿಸಲು ಕೆಲವು ನಗರಗಳಲ್ಲಿ ಚಪ್ಪರ ಹಾಕಲಾಗಿದೆ. ಆದರೆ, ಕಲಬುರಗಿಯಲ್ಲಿ ಉಷ್ಣಾಂಶ 42 ಡಿಗ್ರಿ ದಾಖಲಾದರೂ ಮಹಾನಗರ ಪಾಲಿಕೆಗೆ ಇನ್ನೂ ‘ಬಿಸಿಮುಟ್ಟಿಲ್ಲ’.

ದಿನೇದಿನೇ ಏರುತ್ತಿರುವ ಬಿಸಿಲಿನಿಂದಾಗಿ ಜನ ಪರದಾಡುತ್ತಿದ್ದಾರೆ. ಅದರಲ್ಲೂ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಒಂದೂವರೆ ನಿಮಿಷ ಚುರುಗುಟ್ಟುವ ಬಿಸಿಲನ್ನು ಅನುಭವಿಸಬೇಕಾಗಿದೆ. ನೆರೆಯ ವಿಜಯಪುರದಲ್ಲಿ ಕೂಡ ಈಗ 40 ಡಿಗ್ರಿ ತಾಪಮಾನವಿದೆ. ಅಲ್ಲಿನ ಮಹಾನಗರ ಪಾಲಿಕೆಯು ಪ್ರಮುಖ ವೃತ್ತ, ಚೌಕ್‌ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹಸಿರು ಹೊದಿಕೆ (ನೆಟ್‌) ಹಾಕಿ ಜನರಿಗೆ ನೆರಳು ಒದಗಿಸಿದೆ. ಆದರೆ, ಮಾರ್ಚ್‌ ಕೊನೆಯ ವಾರದಿಂದಲೇ ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ದಾಟಿದೆ. ಪ್ರತಿ ಬಾರಿಯೂ ಇದೇ ಸಮಯಕ್ಕೆ ಉರಿಬಿಸಿಲು ಆರಂಭವಾಗುತ್ತದೆ. ಅದರಿಂದ ಜನ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಆದರೆ, ಇದೂವರೆಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ವೃತ್ತ, ಚೌಕಗಳಲ್ಲಿ ನೆರಳು ಒದಗಿಸುವ ಆಲೋಚನೆಯೇ ಬಂದಿಲ್ಲ ಎನ್ನುವುದು ವಾಹನ ಸವಾರರ ದೂರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ರಾಷ್ಟ್ರಪತಿ ಚೌಕ, ಚಂದ್ರಶೇಖರ ಬಿಲಗುಂದಿ ವೃತ್ತ (ಖರ್ಗೆ ಸರ್ಕಲ್‌), ಜಗತ್ ಸರ್ಕಲ್‌, ಅನ್ನಪೂರ್ಣಾ ಕ್ರಾಸ್‌, ಆಳಂದ ನಾಕಾ, ಮುಸ್ಲಿಂ ಚೌಕ್, ಹುಮನಾಬಾದ್‌ ಸರ್ಕಲ್, ಶಹಾಬಾದ್‌ ರಿಂಗ್‌ ರೋಡ್‌ ಸರ್ಕಲ್‌ಗಳಲ್ಲಿ ಸಿಗ್ನಲ್‌ ದೀಪಗಳು ಉರಿಯುತ್ತವೆ. ಸಾಮಾನ್ಯವಾಗಿ ಬೆಳಿಗ್ಗೆ 8ರ ಹೊತ್ತಿಗೇ ಬಿಸಿಲಿನ ಪ್ರಖರತೆ ಅನುಭವಕ್ಕೆ ಬರುತ್ತದೆ. ಶಾಲೆ, ಕಾಲೇಜು, ಕಚೇರಿ ಕೆಲಸ, ದುಡಿಮೆಗೆ ಹೋಗುವವರು ಎಲ್ಲ ಸಿಗ್ನಲ್‌ಗಳಲ್ಲೂ ನಿಲ್ಲುತ್ತಾರೆ. ಮಧ್ಯಾಹ್ನದ ಊಟದ ಹೊತ್ತಿಗಂತೂ ಸೂರ್ಯ ಬೆಂಕಿಯುಂಡೆಯಂತೆ ಭಾಸವಾಗುತ್ತಾನೆ.

‘ಹೈದರಾಬಾದ್‌ ನಗರದಲ್ಲಿ ಪ್ರತಿ ವರ್ಷ ಈ ರೀತಿಯ ಹಸಿರು ಬಟ್ಟೆಯ ಪೆಂಡಾಲ್‌ ಹಾಕುವ ಜತೆಗೆ, ಸಿಗ್ನಲ್‌ಗಳಲ್ಲಿ ಬೈಕ್‌, ಕಾರ್‌ಗಳಿಗೆ ತನ್ನೀರು ಸಿಂಪಡಿಸುವ ವ್ಯವಸ್ಥೆಯನ್ನೂ ಮಾಡುತ್ತಾರೆ. ಹೈದರಾಬಾದ್‌ನಷ್ಟೇ ತಾಪಮಾನ ಕಲಬುರಗಿಯಲ್ಲೂ ಇರುತ್ತದೆ. ಆದರೆ, ಇಲ್ಲಿನ ಪಾಲಿಕೆ ಜನರ ಸಂಕಷ್ಟವನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ’ ಎನ್ನುವುದು ಬೈಕ್‌ ಸವಾರ ಪದ್ಮನಾಭ ಶಿರೂರ
ಅವರ ದೂರು.

‘ಎ.ಸಿ ಕಾರ್‌ಗಳಲ್ಲಿ ಸಂಚರಿಸುವವರು ಹೇಗೋ ತಾಳಿಕೊಳ್ಳಬಹುದು. ಆದರೆ ಸರ್ಕಾರಿ ಬಸ್‌, ಆಟೊ, ಟೆಂಪೊ, ಬೈಕ್‌ ಸವಾರರ ಕತೆ ಏನು? ಈ ವಾಹನಗಳಲ್ಲಿ ಸಂಚರಿಸುವುದು ಬಹುಪಾಲು ಬಡ ಹಾಗೂ ಮಧ್ಯಮ ವರ್ಗದವರು. ಬೇಸಿಗೆಯಿಂದ ರಕ್ಷಿಸಿ ಎಂದು ಕೇಳಿದರೆ ‘ದೆಹಲಿಯಲ್ಲಿಯೂ ಬಿಸಿಲಿದೆ, ಅಲ್ಲಿ ಮಾಡಿಲ್ಲ ಹಾಗಾಗಿ ಇಲ್ಲಿಯೂ ವ್ಯವಸ್ಥೆ ಮಾಡುವುದಿಲ್ಲ’ ಎಂದು ಉತ್ತರ ನೀಡುತ್ತಾರೆ. ಕಲಬುರಗಿಗೂ, ದೆಹಲಿಗೂ ಹೋಲಿಕೆ ಮಾಡುವುದು ಯಾವ ರೀತಿಯ ಜಾಣತನ’ ಎನ್ನವುದು ಜಗತ್‌ ಸರ್ಕಲ್‌ನಲ್ಲಿ ಚಹಾ ಅಂಗಡಿ ಇಟ್ಟುಕೊಂಡ ಶಂಕರಯ್ಯ ಮಠದ ಅವರ ಪ್ರಶ್ನೆ.

*

ಜನರ ಒತ್ತಾಯ ಏನು?

ಕಲಬುರಗಿ ನಗರದ ಯಾವುದೇ ವೃತ್ತ, ಚೌಕಗಳಲ್ಲಿ ಮರದ ನೆರಳು ಇಲ್ಲ. ಹಾಗಿದ್ದ ಮೇಲೆ ಸಿಗ್ನಲ್‌ ದೀಪ ಉರಿಯುವವರೆಗೆ ನಾಲ್ಕೂ ದಿಕ್ಕಿನಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು. ಟೆಂಟ್‌ಗಳನ್ನು ಹಾಕಿ ಅನುಕೂಲ ಮಾಡಿ.

ಸುಧಾ ಶೆಟ್ಟಿ, ಉಪನ್ಯಾಸಕಿ, ಕಲಬುರ್ಗಿ

ನಗರದ ಮಾರುಕಟ್ಟೆಗಳಲ್ಲಿ ಕಾಲಿಡುವುದಕ್ಕೂ ಆಗುತ್ತಿಲ್ಲ. ಕೆಲವು ಅಂಗಡಿಗಳವರು ತಾವೇ ಚಪ್ಪರ ಹಾಕಿಕೊಂಡಿದ್ದಾರೆ. ಆದರೆ, ಗ್ರಾಹಕರು ರಸ್ತೆಯಲ್ಲಿ, ಫುಟ್‌ಪಾತ್‌ನಲ್ಲಿ ಸುಡುವ ಬಿಸಿಲಿನಲ್ಲೇ ಓಡಾಡಬೇಕು. ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ ಜಂಟಿಯಾಗಿ ಅಗತ್ಯವಿದ್ದಲ್ಲಿ ಗಿಡ ನೆಡಲು ಮುಂದಾಗಬೇಕು. ಇದೇ ಶಾಶ್ವತ ಪರಿಹಾರ.

ಲತಾ ಬಿಲಗುಂದಿ, ದಿನಸಿ ವ್ಯಾಪಾರಿ

ಮಧ್ಯಾಹ್ನ ಬೈಕ್‌, ಆಟೊಗಳಲ್ಲಿಯೇ ಹೆಚ್ಚು ಜನ ಓಡಾಡುತ್ತಾರೆ. ಸಿಗ್ನಲ್‌ಗಳಲ್ಲಿ ನಿಂತರೆ ಬೆವರ ಮಜ್ಜನ ಅನಿವಾರ್ಯ. ಮಹಿಳೆಯರು, ಮಕ್ಕಳು, ಅಂಗವಿಕಲರು, ವೃದ್ಧರು, ಅಶಕ್ತರು, ಹೃದ್ರೋಗಿಗಳು, ಮೂರ್ಛೆರೋಗ, ಚರ್ಮ ತೊಂದರೆ ಇದ್ದವರ ಪಾಡು ಹೇಳತೀರದು. ಯಾರಿಗಾದರೂ ಅಪಾಯ ಸಂಭವಿಸುವ ಮುನ್ನ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸಬೇಕು.

ಬಸವರಾಜ ಜವಳಿ, ರಾಜ್ಯ ಕಾರ್ಯದರ್ಶಿ, ರಾಜ್ಯ ದಲಿತ ಮಾದಿಗ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT