ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸಮಸ್ಯೆಗಳ ಸುಳಿಯಲ್ಲಿ ಸಿದ್ಧೇಶ್ವರ ಕಾಲೊನಿ

ನಗರಕ್ಕೆ ಹತ್ತಿರ, ಅಭಿವೃದ್ಧಿಯಿಂದ ದೂರ; ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಸಮಸ್ಯೆ
Last Updated 5 ನವೆಂಬರ್ 2020, 2:27 IST
ಅಕ್ಷರ ಗಾತ್ರ

ಕಲಬುರ್ಗಿ: ಮನೆಗಳ ಮುಂದೆಯೇ ಕಸದ ರಾಶಿ ಜೊತೆಗೆ ಮುಳ್ಳಿನ ಗಿಡಗಳು. ಮರಿಗಳೊಂದಿಗೆ ಮಲಗಿರುವ ಹಂದಿ, ನಾಯಿಗಳು. ಚರಂಡಿಯಲ್ಲಿ ತುಂಬಿಕೊಂಡಿರುವ ತ್ಯಾಜ್ಯ..

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಎದುರುಗಡೆ ಇರುವ ಸಿದ್ಧೇಶ್ವರ ಕಾಲೊನಿಯಲ್ಲಿನ ದುಸ್ಥಿತಿ ಇದು.

ಈ ಕಾಲೊನಿ ಕಲಬುರ್ಗಿ ಗ್ರಾಮೀಣ ಕ್ಷೇತ್ರಕ್ಕೆ ಒಳಪಟ್ಟಿದೆ. ಕುಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇಲ್ಲಿನ ಬಹುತೇಕ ನಿವಾಸಿಗಳು ಕೂಲಿ ಕಾರ್ಮಿಕರೇ ಆಗಿದ್ದಾರೆ. ಕೆಲವರು ನಗರಕ್ಕೆ ಕಟ್ಟಡ ಕೆಲಸಕ್ಕೆ ತೆರಳಿದರೆ, ಇನ್ನೂ ಕೆಲವರು ಕೃಷಿ ಕೆಲಸಗಳಿಗೆ ಹೋಗುತ್ತಾರೆ.

ಈ ಕಾಲೊನಿಯಲ್ಲಿ ಅಭಿವೃದ್ಧಿಯೆಂಬುದು ಮರೀಚಿಕೆ ಆಗಿದೆ.ಇಲ್ಲಿ ಬದುಕು ಕಟ್ಟಿಕೊಂಡು 30 ವರ್ಷಗಳೇ ಕಳೆದವು. ನಮಗಿನ್ನು ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ದೂರುತ್ತಾರೆ ನಿವಾಸಿಗಳು.

ಸಾರ್ವಜನಿಕ ಶೌಚಾಲಯ ಇಲ್ಲ: ಕಾಲೊನಿಯಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ. ಇದರಿಂದಾಗಿ ಇಲ್ಲಿನ ಮಹಿಳೆಯರು, ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಬೀದಿ ನಾಯಿ, ಹಂದಿಗಳ ಭಯದಲ್ಲೇ ಮುಳ್ಳಿನ ಹಾದಿಯಲ್ಲಿ ಚಂಬು ಹಿಡಿದು ಸಾಗುವುದು ಅನಿವಾರ್ಯವಾಗಿದೆ. ಕಾಲೊನಿಯ ಮಹಿಳೆಯರು ರಾತ್ರಿ ವೇಳೆ ಗಿಡಗಳ ಹಿಂದೆ ಬಹಿರ್ದೆಸೆಗೆ ತೆರಳುವ ದುಸ್ಥಿತಿ ಇದೆ ಎಂದು ಸೀತಾಬಾಯಿ ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ಯಾನ ಇಲ್ಲ: ಕಾಲೊನಿಯ ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ವಾಯುವಿಹಾರಕ್ಕೆ ತೆರಳಲು ಇಲ್ಲಿ ಸಾರ್ವಜನಿಕ ಉದ್ಯಾನ ಇಲ್ಲ. ಇಲ್ಲಿನ ಮಕ್ಕಳು ಓಣಿಗಳಲ್ಲೇ ಗಾಲಿ(ಟೈರ್) ಹಿಡಿದು ಓಡುವುದು ಸಾಮಾನ್ಯ. ‘ನಗರದಲ್ಲಿನ ಮಕ್ಕಳು ದೊಡ್ಡ ದೊಡ್ಡ ಕ್ರೀಡಾಂಗಣಗಳಲ್ಲಿ ಆಟವಾಡುತ್ತಾರೆ. ನಮಗೆ ರಸ್ತೆಗಳೇ ಕ್ರೀಡಾಂಗಣಗಳಾಗಿವೆ’ ಎನ್ನುತ್ತಾರೆ ವಿದ್ಯಾರ್ಥಿ ಸುನೀಲ್ ಕುಮಾರ.

ಚರಂಡಿ ಸಮಸ್ಯೆ: ಈ ಕಾಲೊನಿಯ ನಿವಾಸಿಗಳು ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಬೇಸತ್ತಿದ್ದಾರೆ. ಚರಂಡಿ ಜಾಸ್ತಿ ಎತ್ತರದಲ್ಲಿ ಇಲ್ಲದಿರುವುದರಿಂದ ಮಳೆ ಬಂದಾಗ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಸದ್ಯ ಚರಂಡಿ ನೀರು ಖಾಸಗಿ ಜಮೀನಿಗೆ ಹೋಗುತ್ತಿದೆ. ಜಮೀನಿನ ಮಾಲೀಕರು ಅಲ್ಲಿ ಕಟ್ಟಡ ನಿರ್ಮಿಸಿದರೆ ಚರಂಡಿ ನೀರು ಮನೆಗಳಿಗೆ ನುಗ್ಗುವ ಭೀತಿ ಇದೆ ಎನ್ನುತ್ತಾರೆ ಕಾಲೊನಿಯ ಶರಣಮ್ಮ.

‘ಮನೆ ಕಟ್ಟಿಸಿಕೊಡಿ’: ‘ಈ ಕಲ್ಲು, ಮಣ್ಣಿನ ಗೂಡಿನಲ್ಲೇ ಜೀವನ ಸಾಗಿಸುತ್ತಿದ್ದೇವೆ. ಒಂದು ಸೂರು ಕೊಡಿ ಅಂತ ಜನಪ್ರತಿನಿಧಿಗಳನ್ನು ಕೈ ಮುಗಿದು ಕೇಳಿದರೂ, ನಮಗೆ ಮನೆ ಮಾತ್ರ ಕಟ್ಟಿಸಿಕೊಡುತ್ತಿಲ್ಲ. ಸರ್ಕಾರ ಇನ್ನಾದರೂ ನಮಗೆ ಮನೆ ಕಟ್ಟಿಸಿಕೊಡಲಿ’ ಎಂದು ಲಕ್ಷ್ಮೀಬಾಯಿ ಹಾಗೂ ಗೊಲ್ಲಮ್ಮ ಒತ್ತಾಯಿಸಿದರು.

ಪ್ರಸ್ತಾವ ಸಲ್ಲಿಸಿ ಒಂದೂವರೆ ವರ್ಷ ಆಯ್ತು: ‘ಕಾಲೊನಿಯಲ್ಲಿ ತೀರಾ ಬಡಕುಟುಂಬಗಳಿವೆ. ಸರಿಯಾದ ಮನೆಗಳಿಲ್ಲದ ಕಾರಣ ಇಲ್ಲಿನ ಜನ ಮಳೆ ಬಂದಾಗ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆಶ್ರಯ ಯೋಜನೆಯಲ್ಲಿ 38 ಮನೆಗಳನ್ನು ಮಂಜೂರು ಮಾಡಬೇಕು ಎಂದು ಗ್ರಾಮ ಪಂಚಾಯಿತಿ ವತಿಯಿಂದ ತಾಲ್ಲೂಕು ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಿ ಒಂದೂವರೆ ವರ್ಷ ಕಳೆಯಿತು. ಆದರೆ ಇದುವರೆಗೂ ಮನೆ ಮಂಜೂರು ಆಗಿಲ್ಲ’ ಎಂದು ಕಾಲೊನಿ ನಿವಾಸಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಯ್ಯ ಗುತ್ತೇದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT