ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ, ನಾಗರಿಕತೆಯಲ್ಲೂ ಅನುವಾದ: ಪ್ರೊ.ಶಿವಪ್ರಕಾಶ್‌ ಅಭಿಮತ

ನವದೆಹಲಿಯ ಜೆಎನ್‌ಯು ಪ್ರಾಧ್ಯಾ‍ಪಕ ಪ್ರೊ.ಶಿವಪ್ರಕಾಶ್‌ ಅಭಿಮತ
Last Updated 23 ಜನವರಿ 2021, 10:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅನುವಾದ ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲ; ಭಾಷೆ, ಸಂಸ್ಕೃತಿ ಹಾಗೂ ನಾಗರಿಕತೆಯಲ್ಲೂ ಸಾಧ್ಯವಾಗುತ್ತದೆ. ಬಹು ಸಂಸ್ಕೃತಿ, ಬಹುಭಾಷೆಯ ನೆಲೆಯಾದ ಭಾರತದಲ್ಲಿ ಅನುವಾದಕ್ಕೆ ಹೆಚ್ಚು ಅವಕಾಶ ಸಿಕ್ಕಿದೆ’ ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ.ಎಚ್.ಎಸ್. ಶಿವಪ್ರಕಾಶ್‌ ಪ್ರತಿಪಾದಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಭಾರತೀಯ ಸಾಹಿತ್ಯದಲ್ಲಿ ಅನುವಾದ ಮತ್ತು ಸೃಜನಶೀಲತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರೀಕ್ ಭಾಷೆಯಲ್ಲಿ ಚಂದ್ರನನ್ನು ಸ್ತ್ರೀಲಿಂಗವಾಗಿ, ಸಂಸ್ಕೃತದಲ್ಲಿ ಪುಲ್ಲಿಂಗವಾಗಿ ಕರೆಯಲಾಗುತ್ತದೆ. ಭಾಷಾ ಚಿಂತನೆಯಲ್ಲಿ ಕಲ್ಪನೆಯನ್ನು ಬದಲಾಯಿಸುತ್ತ ಬರಲಾಗಿದೆ. ಇದರೊಂದಿಗೇ ಸಾಂಸ್ಕೃತಿಕ ಅನುವಾದಗಳೂ ನಡೆದುಹೋಗಿವೆ’ ಎಂದರು.

‘ಭಾಷೆ ನಮ್ಮ ಮನಲೋಕವನ್ನು ವಿಸ್ತರಿಸುತ್ತದೆ. ಅನುವಾದ ಕೇವಲ ಭಾಷಿಕ ಹಂತದಲ್ಲಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಆಗುತ್ತದೆ. ಆದರೆ, ಭಾರತೀಯ ಭಾಷಾಜ್ಞಾನಿಗಳು ಹಾಗೂ ಸಾಹಿತಿಗಳು ಪಾಶ್ಚಿಮಾತ್ಯ ಶೈಲಿಯ ಅನುವಾದ ಕ್ರಮ ಅನುಸರಿಸುತ್ತಿದ್ದಾರೆ. ಅದನ್ನು ಬಿಟ್ಟು ಭಾರತೀಯ ಪರಂಪರೆಯಲ್ಲಿಯೇ ಅನುವಾದ ಕಟ್ಟಿಕೊಳ್ಳಬೇಕು’ ಎಂದರು.

‘ಬುದ್ಧನ ತ್ರಿಪಿಠಕಗಳು ಚೀನಿ, ಟಿಬೆಟ್ ಭಾಷೆಗಳಿಗೆ ಅನುವಾದವಾಗದಿದ್ದರೆ ಏಷ್ಯಾದ ಇತಿಹಾಸದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅದು ಬುದ್ಧನ ಕಾಲದಲ್ಲಿ ಸಾಧ್ಯವಾಗದ ಕಾರಣ ಅವನ ಚಿಂತನೆಗಳು ಸೀಮಿತವಾದವು’ ಎಂದು ಹೇಳಿದರು.

‘ಸಂಸ್ಕೃತಿಕ ಅನುವಾದವನ್ನು ಪ್ರಮುಖವಾಗಿ ಸಾಹಿತ್ಯ ಚರಿತ್ರೆಯಲ್ಲಿಯೇ ಕಾಣಬಹುದು. ಇದಕ್ಕೆ ಪಂಪನ ಮಹಾಭಾರತವನ್ನು ಉದಾಹರಿಸಬಹುದು. ಪಂಪನ ದೃಷ್ಟಿಯಲ್ಲಿ ಕಂಡಿದ್ದ ಮಹಾಭಾರತ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪಠ್ಯವನ್ನು ಬದಲಾಯಿಸುತ್ತ, ರೂಪಾಂತರಗೊಳ್ಳುತ್ತ ಸಾಗಿದೆ. ಇನ್ನೊಂದು ಪ್ರಕಾರವೆಂದರೆ ಅನೂಕುಲಕ್ಕೆ ತಕ್ಕಂತೆ ಅನುವಾದಿಸುವುದು. ಉದಾಹರಣೆಗೆ, ಜಿನಸೇನಾಚಾರ್ಯರ ಪೂರ್ವ ಪುರಾಣದ ಹಾಗೂ ಪಂಪನ ಆದಿಪುರಾಣ ವಸ್ತು ಒಂದೇ ಆಗಿದೆ. ಆದರೂ ಹೇಳುವ ಕ್ರಮ, ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಅದು ಅನುಕೂಲಕ್ಕೆ ತಂಕ್ಕಂತೆ ಅನುವಾದಿಸುವ ಕ್ರಮ’ ಎಂದು ವಿವರಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ‘ಪ್ರೊ.ಎಚ್.ಎಸ್. ಶಿವಪ್ರಕಾಶ್ ಅವರು ಅನೇಕ ಪಠ್ಯಗಳನ್ನು ಆವಾಹಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹೊಸ ಪ್ರತಿಮಾ ಲೋಕವನ್ನು ಸೃಷ್ಟಿಸಿದವರು. ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗ ಮಾಡಿದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತಾಡಿ, ಸಾಹಿತ್ಯದಲ್ಲಿ ಅನುವಾದ ಪ್ರಕಾರ ಇಲ್ಲದಿದ್ದರೆ ನಾವೆಲ್ಲ ಕುಬ್ಜರಾಗುತ್ತಿದ್ದೆವು. ಮನುಷ್ಯ ಕುಲದ ಒಳತಿಗಾಗಿ ಅನ್ಯ ಚಿಂತನೆಗಳು ಮನುಷ್ಯ ಮುಖಿಯಾಗಿದ್ದರೆ ಅವುಗಳನ್ನು ನಮ್ಮದು ಎಂದು ಒಪ್ಪಿಕೊಳ್ಳಬೇಕು. ಅಂತರ್‍ಶಿಸ್ತೀಯ ಅಧ್ಯಯನ ಸದಾ ನಡೆಯುತ್ತಲೇ ಇರಬೇಕು. ಮನ್ಯಷ ಮುಖಿ ಆಲೋಚನೆಗಳನ್ನು ಸದಾ ಬೆಂಬಲಿಸಬೇಕು. ಕಲಿಕೆ ನಿರಂತರ ಚಲನಶೀಲವಾಗಿರಬೇಕು’ ಎಂದರು.

ಸಾಹಿತಗಳಾದ ಸುರೇಶ ಬಡಿಗೇರ, ಸುಬ್ಬರಾವ್ ಕುಲಕರ್ಣಿ, ಶ್ರೀನಿವಾಸ ಶಿರನೂರಕರ್, ವೆಂಕಟೇಶ ಮುದಗಲ್ ಇದ್ದರು. ಹಣಮಂತ ಮೇಲಕೇರಿ ಸ್ವಾಗತಿಸಿದರು. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಸಿದ್ಧಲಿಂಗ ದಬ್ಬಾ ವಂದಿಸಿದರು. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯ ದಮನ: ಕಳವಳ

ಕಲಬುರ್ಗಿ: ‘ಒಬ್ಬ ಕೂಲಿ ಕಾರ್ಮಿಕ ಮಹಿಳೆಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಒಬ್ಬ ಸಾಹಿತಿಗೂ ಇರುತ್ತದೆ. ಆದರೆ, ಸಾಹಿತಿಯ ಅಭಿವ್ಯಕ್ತಿ ಸಾಮರ್ಥ್ಯ ದೊಡ್ಡದಾಗಿದ್ದರಿಂದ ಅವರ ಮಾತು, ಬರವಣಿಗೆ ಮಹತ್ವ ಪಡೆಯುತ್ತವೆ. ಕೆಲವು ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದವರು ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆ ಆಗುತ್ತಿದೆ’ ಎಂದು ಪ್ರೊ.ಎಚ್.ಎಸ್. ಶಿವಪ್ರಕಾಶ್‌ ಕಳವಳ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಾಹಿತಿ ‘ಹಂಪನಾ’ ಅವರನ್ನು ಪೊಲೀಸ್‌ ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರಕಾಶ್‌ ಈ ರೀತಿ ಉತ್ತರಿಸಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿನ ಕಾಲಘಟ್ಟದಲ್ಲಿ ದಮನಗೊಳ್ಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT