ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕ, ಯುವತಿಯರು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ‘ಕಲಿಕೆ ಜೊತೆ ಕೌಶಲ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 25 ಸಾವಿರ ಯುವಜನತೆಗೆ ತರಬೇತಿ ನೀಡಲಿದೆ. ಮುಂದಿನ ವರ್ಷದಿಂದ ಪ್ರತಿ ವರ್ಷ 50 ಸಾವಿರ ಯುವಜನರಿಗೆ ತರಬೇತಿ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭರವಸೆ ನೀಡಿದರು.
ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಕೆಕೆಆರ್‌ಡಿಬಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಗಳ ಸಹಯೋಗದಲ್ಲಿ ಉದ್ಯೋಗ ಆವಿಷ್ಕಾರ ಯೋಜನೆಯಡಿ ಕಂಪ್ಯೂಟರ್ ಹಾರ್ಡ್‌ವೇರ್ ಆಂಡ್ ನೆಟ್‌ವರ್ಕಿಂಗ್ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಕುರಿತ 30 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಡೇರಿದ್ದರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗಿಗಳು ಇರಬೇಕಿತ್ತು. ಆದರೆ, ವಾಸ್ತವ ಬೇರೆಯೇ ಇದೆ’ ಎಂದರು.
‘ಉದ್ಯೋಗ ಸೃಷ್ಟಿಯಾದರೆ ಬರೀ ವ್ಯಕ್ತಿಗಿಲ್ಲ ಇಡೀ ಕುಟುಂಬಕ್ಕೆ ಅನುಕೂಲವಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇಂದ್ರೀಯ ವಿ.ವಿ. ರಾಜ್ಯ ಸರ್ಕಾರದ ಅಧೀನದ ವಿ.ವಿ, ಖಾಸಗಿ ವಿ.ವಿ. ಸೇರಿದಂತೆ 13 ವಿಶ್ವವಿದ್ಯಾಲಯಗಳಿವೆ. ಪ್ರತಿ ವರ್ಷ ಪದವಿ, ಸ್ನಾತಕೋತ್ತರ ಪದವಿ ಪಡೆಯುವ 1.5 ಲಕ್ಷ ವಿದ್ಯಾರ್ಥಿಗಳ ಪೈಕಿ ಕೇವಲ ಶೇ 18ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಹೀಗಾಗಿ, ಮೊಬೈಲ್ ದುರಸ್ತಿ, ಬ್ಯೂಟಿ ಪಾರ್ಲರ್, ಕಂಪ್ಯೂಟರ್ ತರಬೇತಿಯಂತಹ ಕೌಶಲಗಳನ್ನು ಕಲಿಸಲಾಗುತ್ತಿದೆ. ಉತ್ತಮ ಶಿಕ್ಷಣ ಪಡೆದ ಯುವಕರಿಗೆ ಒಂದು ಕೌಶಲ ಕಲಿಯುವುದು ಅವರ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುತ್ತದೆ’ ಎಂದು ಪ್ರತಿಪಾದಿಸಿದರು.
ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಮಾತನಾಡಿ, ‘ಗ್ರಾಮೀಣ ಪ್ರದೇಶದ ಕಟ್ಟಕಡೆಯ ಯುವಕನಿಗೂ ಕೌಶಲ ಸಿಗಬೇಕು ಎನ್ನುವ ಉದ್ದೇಶದಿಂದ ಮಂಡಳಿಯು ಉದ್ಯೋಗ ಆವಿಷ್ಕಾರ ಯೋಜನೆ ಜಾರಿಗೆ ತಂದಿದೆ. ಇದೀಗ ಸಿಡಾಕ್ ನೊಂದಿಗೆ ಸೇರಿ 30 ದಿನಗಳ ವಿವಿಧ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಯುವಜನತೆ ಪಡೆದುಕೊಳ್ಳಬೇಕು’ ಎಂದರು.
ಸಿಡಾಕ್ ಜಂಟಿ ನಿರ್ದೇಶಕ ಜಿ.ಯು ಹುಡೇದ ಮಾತನಾಡಿ, ‘ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ನಿರುದ್ಯೋಗಿ ಯುವಕರಿಗೆ ಕೌಶಲದ ಜತೆಗೆ ಮಾರ್ಕೆಟಿಂಗ್ ಕುರಿತು ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಕಲಬುರಗಿ ಜಿಲ್ಲೆಯ ಕಲಬುರಗಿ, ಜೇವರ್ಗಿ, ಯಡ್ರಾಮಿ, ಆಳಂದ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಉದ್ಯಮಶೀಲತೆಯ ಕುರಿತು ತರಬೇತಿ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ (ಸಿಡಾಕ್) ನಿರ್ದೇಶಕ ಬಿ.ಎಂ ಗೋಟೂರ ಮಾತನಾಡಿ, ‘ವಿವಿಧ ತರಬೇತಿ ಪಡೆಯುವ ಯುವಕ, ಯುವತಿಯರಲ್ಲಿನ ಕಲೆಯನ್ನು ಹೊರತಂದು ಅದನ್ನು ವ್ಯಾಪಾರೀಕರಣ ಮಾಡಬೇಕಾಗಿದ್ದು, ಇನ್ನೊಬ್ಬರಿಗೆ ಕೆಲಸ ಕೊಡುವ ವೃತ್ತಿಯನ್ನು ಆರಂಭಿಸಬೇಕು. ಇಲ್ಲಿ ತರಬೇತಿ ಪಡೆದು ಜೀವನದಲ್ಲಿ ಸ್ವಯಂ ಉದ್ಯೋಗಿಗಳಾಗಬೇಕು’ ಎಂದು ಆಶಿಸಿದರು.
ಸಿಡಾಕ್ ಸಂಪನ್ಮೂಲ ವ್ಯಕ್ತಿ ಸೈಯದ್ ಅಷ್ಪಾಕ್ ಅಹ್ಮದ್ ಹಾಗೂ ಸಿಡಾಕ್ ಕೇಂದ್ರದ ಸಿಬ್ಬಂದಿ ಹಾಗೂ ತರಬೇತಿಗೆ ಆಯ್ಕೆಯಾದ ಯುವಕ, ಯುವತಿಯರು ಭಾಗವಹಿಸಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಮಂಡಳಿಯು 'ಕಲಿಕೆ ಜತೆ ಕೌಶಲ' ಯೋಜನೆಗೆ ₹ 10 ಕೋಟಿ ಮೀಸಲಿಟ್ಟಿದೆ. ಯಾವ ಸರ್ಕಾರ ಬಂದರೂ ಈ ಯೋಜನೆ ಮುಂದುವರೆಯಲಿದೆಡಾ.ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.