ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಕ್ಕಟ್ಟೆ ಪ್ರಚಾರ ಕೊಡ್ತಿದ್ದೀರಿ; ಥ್ಯಾಂಕ್ಸ್'–ವಿಚಾರಣೆ ವೇಳೆ ರುದ್ರಗೌಡ ಉಡಾಫೆ

ಪಿಎಸ್ಐ ನೇಮಕಾತಿ ಅಕ್ರಮ: ವಿಚಾರಣೆ ವೇಳೆ ಉಡಾಫೆ ತೋರಿದ ರುದ್ರಗೌಡ ಡಿ. ಪಾಟೀಲ
Last Updated 24 ಏಪ್ರಿಲ್ 2022, 11:33 IST
ಅಕ್ಷರ ಗಾತ್ರ

ಕಲಬುರಗಿ: ‘ನೀವು ನನಗೆ ಪುಕ್ಕಟ್ಟೆ ಪ್ರಚಾರ ಕೊಡ್ತಿದ್ದೀರಿ; ಥ್ಯಾಂಕ್ಸ್‌ ಸರ್...’

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಬಂಧಿತನಾದ ರುದ್ರಗೌಡ ಡಿ. ಪಾಟೀಲ ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ ಉಡಾಫೆಯ ಮಾತುಗಳು ಇವು.

ಮಹಾರಾಷ್ಟ್ರಕ್ಕೆ ಹೋಗಿ ವಶಕ್ಕೆ ಪಡೆದ ತನಿಖಾಧಿಕಾರಿಗಳ ತಂಡ, ಭಾನುವಾರ ನಸುಕಿನ 3ಕ್ಕೆ ಕಲಬುರಗಿಗೆ ಕರೆತಂದಿತು. ಆಗಲೂ ಮಾಧ್ಯಮದವರ ಕ್ಯಾಮೆರಾಗಳನ್ನು ನೋಡಿದ ಆರೋಪಿ ನಗುತ್ತಲೇ ‘ಹೈ’ ಎನ್ನುವಂತೆ ಕೈ ಬೀಸಿದ. ಮತ್ತೊಮ್ಮೆ ತಿರುಗಿ ಬೆರಳುಗಳ ಮೂಲಕ ‘ವಿಕ್ಟರಿ’ ಸಿಂಬಲ್‌ ತೋರಿಸಿದ.

ಬೆಳಿಗ್ಗೆ 9ರ ವೇಳೆಗೆ ವಿಚಾರಣೆ ನಡೆಸುವಾಗಲೂ ರುದ್ರಗೌಡ ‘ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎನ್ನುವ ಧಾಟಿಯಲ್ಲೇ ಉಡಾಫೆಯ ಉತ್ತರ ಕೊಟ್ಟ ಎಂದು ಮೂಲಗಳು ಮಾಹಿತಿ ನೀಡಿವೆ.

‘545 ಪಿಎಸ್‌ಐ ನೇಮಕಾತಿ ಸೇರಿದಂತೆ ಇತರ ಪರೀಕ್ಷೆಗಳಲ್ಲೂ ಈ ವ್ಯಕ್ತಿ ಅಕ್ರಮ ಎಸಗಿದ ಸಾಧ್ಯತೆ ಇದೆ. ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಲೀಕ್‌ ಮಾಡುವುದರಲ್ಲಿ ಈ ಆರೋಪಿ ಪಳಗಿದ್ದಾನೆ. ತನ್ನೊಂದಿಗೆ ಇರುವ ಕೆಲ ಹುಡುಗರನ್ನು ಬೆಂಗಳೂರಿನ ಲಾಡ್ಜ್‌ ಒಂದರಲ್ಲಿ ಕೂರಿಸಿ, ಹೈಟೆಕ್‌ ಬ್ಲೂಟೂತ್‌ಗಳನ್ನು ಬಳಸಿ, ಪರೀಕ್ಷಾ ಕೇಂದ್ರದೊಳಗೆ ಇರುವ ತನ್ನ ‘ಗಿರಾಕಿ’ಗಳಿಗೆ ಉತ್ತರ ರವಾನಿಸುತ್ತಿದ್ದ. ಇಷ್ಟೆಲ್ಲ ತಯಾರಿ ಮಾಡಿದ ಮೇಲೆ ಸ್ನೇಹಿತರೊಂದಿಗೆ ಹೊರರಾಜ್ಯಕ್ಕೆ ಹೋಗಿ ನಿರಾತಂಕವಾಗಿ ಸುತ್ತಾಡುತ್ತಿದ್ದ. ಒಂದು ವೇಳೆ ಪರೀಕ್ಷೆಯ ಸಂದರ್ಭದಲ್ಲಿ ಅಭ್ಯರ್ಥಿ ಸಿಕ್ಕಿಬಿದ್ದರೆ ''ತಾನು ರಾಜ್ಯದಲ್ಲೇ ಇರಲಿಲ್ಲ, ಇದಕ್ಕೂ ತನಗೂ ಸಂಬಂಧವಿಲ್ಲ'' ಎಂದು ಹೇಳಿ ತಪ್ಪಿಸಿಕೊಳ್ಳಲು ಅವನು ಮಾಡುವ ಉಪಾಯವಿದು’ ಎಂದು ಮೂಲಗಳು ಹೇಳಿವೆ.

ಸಿಕ್ಕಿಬಿದ್ದ ತಾ.ಪಂ ಮಾಜಿ ಸದಸ್ಯ:

ರುದ್ರಗೌಡ ಜೊತೆಗೆ ಅಕ್ರಮಕ್ಕೆ ಕೈಜೋಡಿಸಿ ಸಿಕ್ಕಿಬಿದ್ದಿರುವ ಮಲ್ಲಿಕಾರ್ಜುನ ಅಲಿಯಾಸ್‌ ಮಲ್ಲುಗೌಡ ಪಾಟೀಲ ಅಫಜಲಪುರ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ. 2014ರಲ್ಲಿ ಬಿದನೂರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಹಗರಣದಲ್ಲಿ ರುದ್ರಗೌಡನಿಂದ ಮಲ್ಲಿಕಾರ್ಜುನ ₹50 ಲಕ್ಷ ಹಣ ಪಡೆದಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

ಮಲ್ಲಿಕಾರ್ಜುನ ಪತ್ನಿಯ ತವರು ಮನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಅಕ್ರಮ ಹೊರಬಿದ್ದಾಗ ಇಬ್ಬರೂ ಸೊಲ್ಲಾಪುರಕ್ಕೆ ಹೋಗಿದ್ದರು. ರುದ್ರಗೌಡಗೆ ಪತ್ನಿ ಮನೆಯಲ್ಲಿ ಆಶ್ರಯ ನೀಡಿದ ಆರೋಪವನ್ನೂ ಮಲ್ಲಿಕಾರ್ಜುನ ಎದುರಿಸಬೇಕಾಗಿದೆ.

ಇವರೊಂದಿಗೆ ಹಗರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಆದರೆ, ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT