ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಂಜುಂಡಪ್ಪ ವರದಿ ಪರಿಷ್ಕರಣೆ ಏಕೆ?

Last Updated 22 ಸೆಪ್ಟೆಂಬರ್ 2021, 11:10 IST
ಅಕ್ಷರ ಗಾತ್ರ

‘ಕರ್ನಾಟಕ ರಾಜ್ಯದಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ. ಎಂಟು ವರ್ಷಗಳವರೆಗೆ ಒಟ್ಟಾರೆ ₹16 ಸಾವಿರ ಕೋಟಿ ಮೊತ್ತದ ವಿಶೇಷ ಅನುದಾನವನ್ನು ಈ ತಾಲ್ಲೂಕುಗಳಲ್ಲಿ ಸಮರ್ಪಕವಾಗಿ ವೆಚ್ಚಮಾಡಿದರೆ ಪ್ರಾದೇಶಿಕ ಅಸಮಾನತೆ ನಿವಾರಿಸಬಹುದು’

ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರು ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 2002ರಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದ್ದ ವರದಿಯಲ್ಲಿ ಹೀಗೆ ಹೇಳಿದ್ದರು.

ಈ ವರದಿಯ ಮಾನದಂಡದ ಆಧಾರದ ಮೇಲೆಯೇ ರಾಜ್ಯ ಸರ್ಕಾರ ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಇದುವರೆಗೆ ₹ 35 ಸಾವಿರ ಕೋಟಿಗೂ ಅಧಿಕ ಮೊತ್ತ ವಿನಿಯೋಗಿಸಿದೆ. ಆದರೂ ‘ಅಸಮಾನತೆ’ ಹಾಗೇ ಇದೆ!

‘ನಂಜುಂಡಪ್ಪ ವರದಿ ಸಿದ್ಧಪಡಿಸಿದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ.ನೀತಿ ಆಯೋಗ, ವಿಶ್ವಸಂಸ್ಥೆಯ ವರದಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಆಧಾರವಾಗಿ ಇಟ್ಟುಕೊಂಡು ನಂಜುಂಡಪ್ಪ ವರದಿ ಪರಿಷ್ಕರಿಸಲಾಗುವುದು’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರ್ಗಿಯಲ್ಲಿ ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ಯಲ್ಲಿ ಘೋಷಿಸಿದ್ದಾರೆ. ಹೀಗಾಗಿ ಈ ವರದಿ ಪರಿಷ್ಕರಣೆಯ ಬೇಡಿಕೆಗೆ ಬಲ ಬಂದಿದೆ.

ಸಮಿತಿ ಬಗ್ಗೆ: ಪ್ರಾದೇಶಿಕ ಅಸಮತೋಲನ ನಿವಾರಿಸಲು ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ರಚಿಸಿದ್ದರು. ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ (39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ, 35 ಹಿಂದುಳಿದ ಹಾಗೂ 61 ಅಭಿವೃದ್ದಿ ಹೊಂದಿದ ತಾಲ್ಲೂಕು) ಎಂದು ಸಮಿತಿ ಗುರುತಿಸಿತ್ತು. 2003 ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಸರ್ಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ ₹16 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು. ಸಾಮಾನ್ಯ ಬಜೆಟ್ ಮೂಲಕ ₹15 ಸಾವಿರ ಕೋಟಿ ರೂಪಾಯಿ ಅನುದಾನ ಬರುತ್ತದೆ. ಅದನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.

ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು.

ವಿಳಂಬ: ಅಂದಿನ ಸರ್ಕಾರ ಈ ವರದಿಯನ್ನು ತಕ್ಷಣ ಜಾರಿಗೊಳಿಸಲಿಲ್ಲ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ, 2007–08ನೇ ಸಾಲಿನಲ್ಲಿ ಈ ಶಿಫಾರಸು ಅನುಷ್ಠಾನಕ್ಕೆ ಮುಂದಾಯಿತು. ರಾಜ್ಯ ಸರ್ಕಾರ ಆ ವರ್ಷ ಇದಕ್ಕಾಗಿ ₹1571.50 ಕೋಟಿ ವಿಶೇಷ ಅನುದಾನ ಮೀಸಲಿಟ್ಟಿತು. ಆ ನಂತರ ಪ್ರತಿ ವರ್ಷವೂ ಇದಕ್ಕೆ ಪ್ರತ್ಯೇಕ ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಈ ವರದಿಯ ಮಾನದಂಡಗಳ ಆಧಾರದ ಮೇಲೆಯೇ ಅನುದಾನ ಹಂಚಿಕೆ ಮಾಡುತ್ತಿದೆ.

2014ರಲ್ಲಿ ಧಾರವಾಡದ ಸಿಎಂಡಿಆರ್‌ ಸಂಸ್ಥೆಯು ಈ ವರದಿಯ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಿ, ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಸೂಚಿಸಿದಂತೆ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಈಗ 40 ಆಗಿವೆ. ಅವುಗಳಲ್ಲಿ ಹೈದರಾಬಾದ್‌ಕರ್ನಾಟಕ ಪ್ರದೇಶದಲ್ಲಿ ಇದ್ದ 21 ಅತ್ಯಂತ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ಈಗ 24 ತಾಲ್ಲೂಕುಗಳಿಗೆ ಏರಿದೆ ಎಂದು ಹೇಳಿತ್ತು. ಆ ನಂತರ ನಂಜುಂಡಪ್ಪ ವರದಿಯ ಅನುಷ್ಠಾನ ಮತ್ತು ಅದರಿಂದ ಆಗಿರುವ ಬದಲಾವಣೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಯತ್ನ ಆಗಲೇ ಇಲ್ಲ.

ಪರಿಷ್ಕರಣೆ ಸೂಕ್ತ: ‘ಡಾ. ನಂಜುಂಡಪ್ಪ ಅವರು 16 ಅಂಶಗಳನ್ನು ಪರಿಗಣಿಸಿದ್ದರು. ತಾಲ್ಲೂಕು ಮುಖ್ಯಾಲಯ ಮತ್ತು ಗ್ರಾಮೀಣ ಪ್ರದೇಶ ಎಂದು ಪರಿಗಣಿಸದೆ ಇಡೀ ತಾಲ್ಲೂಕನ್ನು ಘಟಕವಾಗಿ ಪರಿಗಣಿಸಿ ವರದಿ ನೀಡಿದ್ದಾರೆ. 19 ವರ್ಷದ ಹಿಂದಿನ ವರದಿಯ ಪ್ರಕಾರವೇ ಈಗ ಹಣ ವಿನಿಯೋಗಿಸುವುದು ಎಷ್ಟು ಸರಿ. ಈ ವರದಿ ಬಂದಾಗ ಕೆಲ ತಾಲ್ಲೂಕು ಅತಿ ಹಿಂದುಳಿದಿದ್ದವು. ಕೆಲವು ಈಗ ಪ್ರಗತಿ ಹೊಂದಿವೆ. ಕೆಲ ತಾಲ್ಲೂಕುಗಳು ವಿಭಜನೆಯಾಗಿ ಹೊಸ ತಾಲ್ಲೂಕು ರಚನೆಯಾಗಿವೆ. ವಾಸ್ತವಾಂಶದ ಮೇಲೆ ಅನುದಾನ ಹಂಚಿಕೆಯಾಗಬೇಕು’ ಎನ್ನುವುದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಅವರ ಪ್ರತಿಪಾದನೆ.

‘ನಂಜುಂಡಪ್ಪ ವರದಿ ಪ್ರಾದೇಶಿಕ ಅಸಮತೋಲನ ನಿವಾರಣೆಯ ವಿಷಯದಲ್ಲಿ ಭಗವದ್ಗೀತೆ ಇದ್ದಂತೆ. ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆಯ ಪ್ರಮಾಣ ಆಗಿನಕ್ಕಿಂತ ಈಗ ಹೆಚ್ಚಾಗಿದೆ. ಕೆಲ ಗ್ರಾಮಗಳಲ್ಲಿ ಸಾಕ್ಷರತೆಯ ಪ್ರಮಾಣ ಶೇ 10ಕ್ಕಿಂತ ಕಡಿಮೆ ಇದೆ. ಲಿಂಗಾನುಪಾತ ಹೆಚ್ಚಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೇ ಸೀಮಿತವಾಗಿ ಗ್ರಾಮಗಳನ್ನು ಘಟಕವಾಗಿ ಇಟ್ಟುಕೊಂಡು ಹೊಸದಾಗಿ ಅಧ್ಯಯನ ನಡೆಸಿ ಅದರ ಆಧಾರದ ಮೇಲೆ ಅನುದಾನ ಹಂಚಿಕೆಯಾಗಬೇಕು’ ಎನ್ನುವುದು ಅರ್ಥಶಾಸ್ತ್ರ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಅವರ ಸಲಹೆ.

‘ನಂಜುಂಡಪ್ಪ ವರದಿಯ ಮಾನದಂಡದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಅನುದಾನ ವೆಚ್ಚಮಾಡುತ್ತಿದ್ದೇವೆ. ಮಂಡಳಿಯಿಂದ ಈವರೆಗೆ ಈ ಭಾಗದಲ್ಲಿ ಮಾಡಿರುವ ವೆಚ್ಚ ಮತ್ತು ಅದರಿಂದ ಆಗಿರುವ ಪ್ರಗತಿಯ ಅಧ್ಯಯದ ಜವಾಬ್ದಾರಿಯನ್ನು ‘ಅರ್ನ್ಸ್ಟ್ ಆ್ಯಂಡ್ ಯಂಗ್ ಗ್ಲೋಬಲ್’ ಸಂಸ್ಥೆಗೆ ವಹಿಸಿದ್ದೇವೆ. ಡಿಸೆಂಬರ್‌ ವೇಳೆಗೆ ಮಧ್ಯಂತರ ವರದಿ ಬರುವ ಸಾಧ್ಯತೆ ಇದೆ’ ಎನ್ನುವುದು ಕೆಕೆಆರ್‌ಡಿಬಿ ಅಧ್ಯಕ್ಷದತ್ತಾತ್ರೇಯ ಪಾಟೀಲ ರೇವೂರ ಅವರ ವಿವರಣೆ.

‘ಹೊಸದಾಗಿ ಸಮೀಕ್ಷೆ ನಡೆದರೆ, ತಮ್ಮ ‘ಹಿಂದುಳಿದ ತಾಲ್ಲೂಕು’ ಮುಂದುವರೆದ ತಾಲ್ಲೂಕು ಪಟ್ಟಿಯಲ್ಲಿ ಸೇರಿದರೆ ಹೇಗೆ. ಹಾಗಾದರೆ ಈಗ ಬರುತ್ತಿರುವ ವಿಶೇಷ ಅನುದಾನದ ಪ್ರಮಾಣ ಕಡಿಮೆಯಾಗಲಿದೆ ಎಂಬ ಆತಂಕ ಬಹುಪಾಲು ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂಬುದು ಹೆಸರು ಬಹಿರಂಗ ಪಡಿಸಲು ಒಲ್ಲದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT