ಕಲಬುರಗಿ: ‘ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಪಂಚಾಯಿತಿಗಳಿಂದ ಪಾರ್ಲಿಮೆಂಟ್‌ವರೆಗೆ ಉತ್ತಮ ನಾಯಕರು ಬೆಳೆದು, ಒಳ್ಳೆಯ ಆಡಳಿತ ನಡೆಸಬೇಕು ಎಂದು ಬಯಸಿದ್ದು, ಅವರ ವಿಚಾರಗಳನ್ನು ಸಾಕಾರಗೊಳಿಸಲು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಗಳು ಅವಿರತವಾಗಿ ಶ್ರಮಿಸಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಭಾಗದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
‘ಪಂಚಾಯಿತಿಗಳಲ್ಲಿ ಒಳ್ಳೆಯ ನಾಯಕರು ಹೊರಹೊಮ್ಮಿದರೆ ಮಾತ್ರ ಪಾರ್ಲಿಮೆಂಟ್‌ನಲ್ಲಿ ಉತ್ತಮ ನಾಯಕ ಸಿಗುತ್ತಾರೆ. ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಪಂಚಾಯಿತಿಯ ಅಧ್ಯಕ್ಷರಾಗಿದ್ದ ಬಿ.ಡಿ.ಜತ್ತಿ, ವಿಲಾಸ್‌ರಾವ್ ದೇಶಮುಖ ಅವರು ಮುಂದೆ ಮುಖ್ಯಮಂತ್ರಿಗಳಾದರು. ನಾನು, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ ಸಹ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಇವತ್ತು ಶಾಸಕರು, ಮಂತ್ರಿಗಳಾಗಿದ್ದೇವೆ. ನಾಯಕರನ್ನು ಬೆಳೆಸುವ ಪರಂಪರೆ ಪಂಚಾಯಿತಿಗಳಿಗಿದೆ’ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಪಂಚಾಯಿತಿಗಳು ನಾಯಕರನ್ನು ಬೆಳೆಸುವ ಕಾರ್ಖಾನೆಗಳಾಗಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಪಂಚಾಯಿತಿಗಳಿಂದ ಬಂದಿದ್ದಾರೆ’ ಎಂದರು.
‘ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಆಸೆಯ ಸಾಕಾರಗೊಳಿಸಲು ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದರು. ಕೇವಲ ಸಲಹಾ ಮಂಡಳಿಯಾಗಿದ್ದ ಪಂಚಾಯಿತಿಗಳು, 73ನೇ ತಿದ್ದುಪಡಿ ಬಳಿಕ ಸಾಂವಿಧಾನಿಕ ಅಧಿಕಾರ ಪಡೆದವು. ಯೋಜನೆಗಳ ತಯಾರಿ, ಅನುದಾನ ಹಂಚಿಕೆ ಮತ್ತು ಮೇಲ್ವಿಚಾರಣೆ ಮಾಡತೊಡಗಿದವು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಸ್ತಕ್ಷೇಪ ಕೊನೆಗೊಂಡು, ಗ್ರಾಮೀಣ ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ್, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ‘ಕುಡಾ’ ಅಧ್ಯಕ್ಷ ಮಜರ್ ಆಲಂ ಖಾನ್, ಆರ್‌ಡಿಪಿಆರ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತರಾದ ಅರುಂಧತಿ ಚಂದ್ರಶೇಖರ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಕಲ್ಯಾಣ ಕರ್ನಾಟಕ ಭಾಗದ ಸಿಇಒಗಳು ಸೇರಿ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.