ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಡಿಬಿಯಿಂದ ₹10 ಕೋಟಿ ಬಿಡುಗಡೆ: ಕೋಟೆ ಬದಿಯ ಕಂದಕದ ಹೂಳಿಗೆ ಅಂತೂ ಮುಕ್ತಿ

Published 8 ಏಪ್ರಿಲ್ 2024, 6:11 IST
Last Updated 8 ಏಪ್ರಿಲ್ 2024, 6:11 IST
ಅಕ್ಷರ ಗಾತ್ರ

ಕಲಬುರಗಿ: ಬಹಮನಿ ಕೋಟೆಯ ಸುತ್ತಲೂ ಕೊಚ್ಚೆಯಂತಾಗಿದ್ದ ಬೃಹತ್ ಕಂದಕದ ಹೂಳು ತೆಗೆಯುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಕೊನೆಗೂ ಮುಂದಾಗಿದೆ. ಆ ಮೂಲಕ ದಶಕಗಳ ಪ್ರವಾಸಿಗಳ ಬೇಡಿಕೆ ಈಡೇರುತ್ತಿದೆ.

ಆದರೂ, ಮಾಡಬೇಕಾದ ಕೆಲಸಗಳೂ ಇನ್ನೂ ಹಲವು ಬಾಕಿ ಇದ್ದು, ಅವುಗಳನ್ನೂ ಮಾಡುವಂತೆ ಪರಂಪರೆಯ ಬಗ್ಗೆ ಕಾಳಜಿಯುಳ್ಳ ನಾಗರಿಕರು ಒತ್ತಾಯಿಸುತ್ತಿದ್ದರು. ಇದಕ್ಕೆ ಸ್ಪಂದಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಕೋಟೆಯ ಅಭಿವೃದ್ಧಿಗಾಗಿ ₹ 10 ಕೋಟಿ ಬಿಡುಗಡೆ ಮಾಡಿದೆ. ಆ ಹಣದಲ್ಲಿಯೇ ಕೋಟೆಯ ಹೊರಭಾಗದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಕೋಟೆಯ ರಕ್ಷಣೆಗಾಗಿ ನಿರ್ಮಾಣವಾಗಿದ್ದ ಕಂದಕದಲ್ಲಿ ತುಂಬಿದ್ದ ಕೊಳಚೆ ನೀರು ಹಾಗೂ ಅಂತರಗಂಗೆ, ಪಾಚಿ ಕಸವನ್ನು ಇದೀಗ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಬೃಹತ್ ಗಾತ್ರದ ಯಂತ್ರಗಳನ್ನು ಬಳಸಿ ಕಸವನ್ನು ತೆಗೆಯುವ ಕಾರ್ಯ ಇದೀಗ ಶುರುವಾಗಿದೆ. ಸಾ ಮಿಲ್‌ನಿಂದ ಸುಮಾರು 800 ಮೀಟರ್ ಉದ್ದದ ಕಂದಕದಲ್ಲಿನ ಕಸವನ್ನು ಮೇಲೆತ್ತಿ ನಂತರ ಹೂಳನ್ನು ತೆರವುಗೊಳಿಸುವ ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಹೂಳೆತ್ತಿದ ಬಳಿಕ ಕೋಟೆಗೆ ಹೊಂದಿಕೊಂಡಂತೆ ಕಾಂ‍ಪೌಂಡ್ ನಿರ್ಮಿಸಲು ಯೋಜಿಸಲಾಗಿದೆ.

ಏಳು ಬಾವಿಗಳಿಗೂ ಕಾಯಕಲ್ಪ: ಕೆಕೆಆರ್‌ಡಿಬಿ ಅನುದಾನದಲ್ಲಿ ಕಂದಕದ ಹೂಳು ತೆಗೆಯುವುದರ ಜೊತೆಗೆ ಬಹಮನಿ ಕೋಟೆಯ ಆವರಣದಲ್ಲಿರುವ ಏಳು ಬಾವಿಗಳಲ್ಲಿನ ಹೂಳು ತೆಗೆಯಲು ಮಹಾನಗರ ಪಾಲಿಕೆ ಮುಂದಾಗಿದೆ. ಕೋಟೆಯಲ್ಲಿ ಒಟ್ಟು ಎಂಟು ಬಾವಿಗಳಿದ್ದು, ಕೋಟೆಯ ತುದಿಗೆ ಹೊಂದಿಕೊಂಡಂತೆ ಇರುವ ಒಂದು ಬಾವಿಯಲ್ಲಿ ಈಗಲೂ ನೀರಿದೆ. ಉಳಿದ ಬಾವಿಗಳಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿದ್ದು, ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದೆ. ಕಂದಕದಲ್ಲಿನ ಹೂಳು ತೆಗೆಯುವುದು, ಕಾಂ‍ಪೌಂಡ್ ನಿರ್ಮಾಣ, ಬಾವಿಗಳಲ್ಲಿನ ಹೂಳು ತೆಗೆಯಲು ಒಂದು ವರ್ಷ ಬೇಕಾಗಲಿದೆ. ಈ ಎಲ್ಲ ಕಾಮಗಾರಿಗಳು ಮುಕ್ತಾಯವಾದರೆ ಕೋಟೆಗೆ ಹೊಸ ಕಳೆ ಬರಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್.

ಉದ್ಯಾನವನ ಅಭಿವೃದ್ಧಿ: ಕೋಟೆಯ ಒಳಭಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲೂ ತೀರ್ಮಾನಿಸಲಾಗಿದೆ. ಇದಕ್ಕಾಗಿ ಒಂದಷ್ಟು ಭಾಗವನ್ನು ಗುರುತಿಸಲಾಗಿದೆ. ಒಟ್ಟಾರೆ ಕೋಟೆಯ ಸಮಗ್ರ ಅಭಿವೃದ್ಧಿಗೆ ಈಗ ನೀಡಿದ ಹಣ ಸಾಕಾಗುವುದಿಲ್ಲ. ಮತ್ತೊಂದಷ್ಟು ಹಣ ನೀಡಿದರೆ ಕೋಟೆಯ ಹೊರಭಾಗದಲ್ಲಿ ಕೆಲ ಪ್ರವಾಸಿ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟೆಯ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿದ್ದು, ಕೋಟೆಯ ಹೊರಭಾಗದಲ್ಲಿನ ಕೊಳಚೆ ನೀರನ್ನು ತೆರವುಗೊಳಿಸಿ ಅಲ್ಲಿ ಸ್ವಚ್ಛ ನೀರು ಹರಿಸುವ ಮೂಲಕ ಮುಂದಿನ ದಿನಗಳಲ್ಲಿ ಬೋಟಿಂಗ್ ಸೌಲಭ್ಯ ಕಲ್ಪಿಸುವ ಚಿಂತನೆ ಇರುವುದಾಗಿ ತಿಳಿಸಿದ್ದರು. ಅದರ ಮೊದಲ ಭಾಗವಾಗಿ ಹೂಳನ್ನು ತೆರವುಗೊಳಿಸಲಾಗುತ್ತಿದೆ. 

ಐತಿಹಾಸಿಕ ಮಹತ್ವದ ಬಹಮನಿ ಕೋಟೆ
ಐತಿಹಾಸಿಕ ಮಹತ್ವದ ಬಹಮನಿ ಕೋಟೆ
ತೆರವಾಗದ ಕುಟುಂಬಗಳು
ಕಲಬುರಗಿ ಕೋಟೆಯಲ್ಲಿ 282 ಕುಟುಂಬಗಳು ಅಕ್ರಮವಾಗಿ ವಾಸವಾಗಿದ್ದು ಅವರನ್ನು ಅಲ್ಲಿಂದ ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕಿರುವುದರಿಂದ ಇನ್ನಷ್ಟು ಕಾಲಾವಕಾಶ ನೀಡುವಂತೆ ಜಿಲ್ಲಾಡಳಿತ ಕೇಳಿಕೊಂಡಿದೆ. ಇದರಿಂದಾಗಿ ಆ ಕುಟುಂಬಗಳು ಕೋಟೆಯಲ್ಲಿಯೇ ವಾಸವಾಗಿವೆ. ಯಶವಂತ ಗುರುಕರ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಕುಟುಂಬಗಳಿಗಾಗಿ ನಾಲ್ಕು ಎಕರೆ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಮುಂದಾಗಿದ್ದರು. ಆದರೆ ಅಲ್ಲಿಗೆ ಹೋಗಲು ಸಿದ್ಧರಿಲ್ಲ. ಹೀಗಾಗಿ ಸ್ಥಳಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು.

ಯಾರು ಏನಂತಾರೆ?

‘4 ಎಂಎಲ್‌ಡಿ ಕೊಳಚೆ ನೀರು ಶುದ್ಧೀಕರಣ’ ಕೋಟೆಯ ಹೊರಭಾಗದಲ್ಲಿನ ಹೊಂಡದಲ್ಲಿನ ಕೊಳಚೆ ನೀರಿನಲ್ಲಿನ ಹೂಳೆತ್ತುವ ಮೂಲಕ ಅಲ್ಲಿ ಸ್ವಚ್ಛ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಅಮೃತ್–2 ಯೋಜನೆಯಲ್ಲಿ 4 ಎಂಎಲ್‌ಡಿ ಕೊಳಚೆ ನೀರನ್ನು ಶುದ್ಧಗೊಳಿಸಿ ಅಪ್ಪನ ಕೆರೆ ಹಾಗೂ ಬಹಮನಿ ಕೋಟೆಯ ಹೊರಭಾಗದ ಕಂದಕಕ್ಕೆ ಹರಿಸಲಾಗುವುದು. ಹಂತ ಹಂತವಾಗಿ ಹಣದ ಲಭ್ಯತೆ ನೋಡಿಕೊಂಡು ಒಂದೊಂದೇ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು.

-ಆರ್.ಪಿ. ಜಾಧವ್ ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) 

‘ತೋಪಿನ ಸುತ್ತ ಸುರಕ್ಷತಾ ಗೋಡೆ’ ಬಹಮನಿ ಕೋಟೆಯಲ್ಲಿ ಎಲ್ಲರ ಆಕರ್ಷಣೆಯಾಗಿರುವ ಬೃಹತ್ ಗಾತ್ರದ ತೋಪು ಹಾಗೂ ಹಾತಿ ಗೇಟ್ ಬಳಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಗೋಡೆ ಮತ್ತು ಫ್ಲೋರಿಂಗ್ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತೀರ್ಮಾನಿಸಿದೆ. ಒಂದು ವಾರದಲ್ಲಿ ಕಾಮಗಾರಿ ಶುರುವಾಗಲಿದೆ.

-ಅನಿರುದ್ಧ ದೇಸಾಯಿ ಎಎಸ್‌ಐ ಸಹಾಯಕ ಸಂರಕ್ಷಕ

‘ಪಾದಚಾರಿ ಮಾರ್ಗ ನಿರ್ಮಿಸಬೇಕು’ ಕಲಬುರಗಿಯ ಪ್ರಮುಖ ಸ್ಮಾರಕಗಳಲ್ಲೊಂದಾದ ಬಹಮನಿ ಕೋಟೆಯಲ್ಲಿ ತೋಪು ಮಸೀದಿ ವಿದೇಶಿಯರ ಬಜಾರ್ ವೀಕ್ಷಣಾ ಗೋಪುರಗಳಿದ್ದು ಒಂದು ಸ್ಮಾರಕದಿಂದ ಇನ್ನೊಂದು ಸ್ಮಾರಕಗಳ ಮಧ್ಯೆ ಸಂಪರ್ಕ ರಸ್ತೆ ಮಾಡುವ ನಿಟ್ಟಿನಲ್ಲಿ ಪೇವರ್ಸ್‌ಗಳನ್ನು ನಿರ್ಮಿಸಬೇಕು. ಇದರಿಂದಾಗಿ ಪ್ರವಾಸಿಗರು ಸರಾಗವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಅನುಕೂಲವಾಗುತ್ತದೆ. ಕೋಟೆಯ ಒಳಭಾಗದಲ್ಲಿ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ರಾತ್ರಿಯ ವೇಳೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು.

-ಶಂಭುಲಿಂಗ ವಾಣಿ ಇತಿಹಾಸತಜ್ಞ ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT