ಗುರುವಾರ, 9 ಅಕ್ಟೋಬರ್ 2025
×
ADVERTISEMENT
ADVERTISEMENT

ಕಲಬುರಗಿ | ಬಲಿಗಾಗಿ ಕಾದಿರುವ ರಸ್ತೆ ಗುಂಡಿಗಳು

ಜಲ್ಲಿಕಲ್ಲು ಎದ್ದಿಲ್ಲದ, ಡಾಂಬರ್ ಕಿತ್ತು ಹೋಗದ ರಸ್ತೆ ಹುಡುಕುವುದೇ ದುಸ್ತರ
Published : 22 ಮೇ 2023, 5:19 IST
Last Updated : 22 ಮೇ 2023, 5:19 IST
ಫಾಲೋ ಮಾಡಿ
Comments
ಶಹಾಬಾದ್ ನಗರದ ರೈಲ್ವೆ ಮೇಲ್ಸೇತುವೆ–ಕನಕದಾಸ ವೃತ್ತದವರೆಗಿನ ರಸ್ತೆಯಲ್ಲಿ ಕಿತ್ತಿರುವ ಡಾಂಬರ್
ಶಹಾಬಾದ್ ನಗರದ ರೈಲ್ವೆ ಮೇಲ್ಸೇತುವೆ–ಕನಕದಾಸ ವೃತ್ತದವರೆಗಿನ ರಸ್ತೆಯಲ್ಲಿ ಕಿತ್ತಿರುವ ಡಾಂಬರ್
ಕಾಳಗಿ ತಾಲ್ಲೂಕಿನ ಕೋಡ್ಲಿ - ಸೇರಿ ಬಡಾ ತಾಂಡಾ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು
ಕಾಳಗಿ ತಾಲ್ಲೂಕಿನ ಕೋಡ್ಲಿ - ಸೇರಿ ಬಡಾ ತಾಂಡಾ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು
ಸೇಡಂನ ಊಡಗಿ ರಸ್ತೆಯ ಆಶ್ರಯ ಕಾಲೊನಿಯಲ್ಲಿ ಚರಂಡಿ ಮ್ಯಾನ್‌ಹೋಲ್‌ನಲ್ಲಿ ಬಿದ್ದ ಕಲ್ಲು ಅಪಾಯಕ್ಕೆ ಆಹ್ವಾನಿಸುವಂತಿದೆ
ಸೇಡಂನ ಊಡಗಿ ರಸ್ತೆಯ ಆಶ್ರಯ ಕಾಲೊನಿಯಲ್ಲಿ ಚರಂಡಿ ಮ್ಯಾನ್‌ಹೋಲ್‌ನಲ್ಲಿ ಬಿದ್ದ ಕಲ್ಲು ಅಪಾಯಕ್ಕೆ ಆಹ್ವಾನಿಸುವಂತಿದೆ
ಕಲಬುರಗಿಯ ಕುವೆಂಪು ನಗರದ ರಸ್ತೆ ಡಾಂಬರ್‌ ಕಿತ್ತು ಹೊರ ಬಂದು ಜಲ್ಲಿ ಕಲ್ಲುಗಳು– ಪ್ರಜಾವಾಣಿ ಚಿತ್ರ
ಕಲಬುರಗಿಯ ಕುವೆಂಪು ನಗರದ ರಸ್ತೆ ಡಾಂಬರ್‌ ಕಿತ್ತು ಹೊರ ಬಂದು ಜಲ್ಲಿ ಕಲ್ಲುಗಳು– ಪ್ರಜಾವಾಣಿ ಚಿತ್ರ
ಕಲಬುರಗಿಯ ಕೆಕೆಆರ್‌ಡಿ ಕಚೇರಿಯ ಸಮೀಪದ ರಸ್ತೆಯ ದುಸ್ಥಿತಿ– ಪ್ರಜಾವಾಣಿ ಚಿತ್ರ
ಕಲಬುರಗಿಯ ಕೆಕೆಆರ್‌ಡಿ ಕಚೇರಿಯ ಸಮೀಪದ ರಸ್ತೆಯ ದುಸ್ಥಿತಿ– ಪ್ರಜಾವಾಣಿ ಚಿತ್ರ
ಹದಗೆಟ್ಟ ಹಾದಿಯಲ್ಲಿ ನಿತ್ಯ ಪ್ರಯಾಣ
ಯಡ್ರಾಮಿ: ಮಳ್ಳಿ ನಾಗರಹಳ್ಳಿ ವಡಗೇರಾ ಹಂಗರಗಾ(ಕೆ) ಶಿವಪುರ ಮಲ್ಲಾ ಬಳಬಟ್ಟಿ ಅಂಬರಖೇಡ ಮುತ್ತಕೋಡ ಯತ್ನಾಳ ಕೋಣಸಿರಸಿಗಿ ಕುಕನೂರ ಸೋಮನಾಥಹಳ್ಳಿ ಚಿಗರಹಳ್ಳಿ ಕ್ರಾಸ್‌ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳ ರಸ್ತೆ ಹದಗೆಟ್ಟಿವೆ. ಇದೇ ರಸ್ತೆಗಳಲ್ಲಿ ನಿತ್ಯ ಪ್ರಯಾಣಿಸುವ ಅನಿವಾರ್ಯತೆ ಇದೆ. ಮಳ್ಳಿ– ನಾಗರಹಳ್ಳಿ ರಸ್ತೆ ಉದ್ದಕ್ಕೂ ತಗ್ಗುಗುಂಡಿ ಬಿದ್ದಿದ್ದರಿಂದ ವಾಹನ ಸವಾರರು ಹರಸಾಹಸ ಪಟ್ಟು ಹೋಗುವಂತಿದೆ. ಯಡ್ರಾಮಿ–ವಡಗೇರಾ ಮಾರ್ಗವಾಗಿ ಮಲ್ಲಾ ರಸ್ತೆಯು ಹದಗೆಟ್ಟಿದೆ. ಯಡ್ರಾಮಿಯಿಂದ ಜೇವರ್ಗಿಗೆ ತೆರಳುವ ರಸ್ತೆ ಚಿಗರಹಳ್ಳಿಯವರೆಗೆ ಕಿರಿದಾಗಿದೆ. ಹಲವು ವಾಹನಗಳು ಅಪಘಾತಕ್ಕೀಡಾಗಿವೆ. ಆದರೂ ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆ ವಿಸ್ತರಣೆ ದುರಸ್ತಿಗೆ ಮುಂದಾಗುತ್ತಿಲ್ಲ. ಮೂರು ಬಾರಿ ಗೆದ್ದಿರುವ ಶಾಸಕರೂ ಸಹ ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ
ಕಾಳಗಿ: ತಾಲ್ಲೂಕಿನ ಬಹುತೇಕ ಮುಖ್ಯರಸ್ತೆಗಳು(ರಾಜ್ಯ ಹೆದ್ದಾರಿ) ಸುಧಾರಿಸಿ ಜನರಿಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿವೆ. ಕೆಲವೆಡೆ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತು ಪ್ರಯಾಣಿಕರಿಗೆ ಹೈರಾಣ ಮಾಡುತ್ತಿವೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಂಗಳಿ-ತೆಂಗಳಿ ಕ್ರಾಸ್ ನಡುವಿನ 6 ಕಿ.ಮೀ ರಸ್ತೆ ಪೈಕಿ ಸುಮಾರು 3 ಕಿ. ಮೀ. ರಸ್ತೆ ವಾಹನ ಸವಾರರ ಜೀವ ಹಿಂಡುತ್ತಿದೆ. ತೆಂಗಳಿ-ಹೊಸ ಹೆಬ್ಬಾಳ ರಸ್ತೆ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದ ಗೋಟೂರ-ಚಿಂಚೋಳಿ (ಎಚ್) ಮತ್ತು ರೇವಗ್ಗಿ-ಅರಣಕಲ್ ನಡುವಿನ ಪ್ರಮುಖ ರಸ್ತೆ ನ್ಯಾಯಾಲಯದ ವ್ಯಾಜ್ಯದ ನೆಪದಲ್ಲಿ ದುರಸ್ತಿಗೊಂಡಿಲ್ಲ. ಚಿಂಚೋಳಿ(ಎಚ್) ರಸ್ತೆಯ ಎರಡೂ ಬದಿಯಲ್ಲಿ ಮುಳ್ಳಿನ ಗಿಡಗಳು ಬೆಳೆದು ವಾಹನ ಸವಾರರಿಗೆ ತರಚುತ್ತಿವೆ. ಕಾಳಗಿ-ಕೋಡ್ಲಿ ಕ್ರಾಸ್ ಮುಖ್ಯರಸ್ತೆ ವಿಸ್ತರಣೆ ಎರಡು ವರ್ಷಗಳಿಂದ ಪೂರ್ಣಗೊಂಡಿಲ್ಲ. ಕೋಡ್ಲಿ-ಸೇರಿ ಬಡಾ ತಾಂಡಾದ ನಡುವೆ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇದೇ ಮಾರ್ಗದ ಸಾಸರಗಾಂವ ರಸ್ತೆ ಕಾಮಗಾರಿ ಅರ್ಧ ಡಾಂಬರ್ ಕಂಡು ಇನ್ನರ್ಧ ಮರುಮ್‌ನ ದೂಳು ಎಬ್ಬಿಸಿದೆ. ಪಸ್ತಪುರ-ರುಮ್ಮನಗೂಡ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.
ಕಳಪೆ ಕಾಮಗಾರಿ
ಸಂಚಾರ ಹೈರಾಣ ಅಫಜಲಪುರ: ಪಟ್ಟಣದಿಂದ ಗ್ರಾಮಗಳನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಕಳಪೆ ಕಾಮಗಾರಿಯಿಂದ ಹದಗೆಟ್ಟಿವೆ. ಕೆಲವು ರಸ್ತೆಗಳಿಗೆ ಎರಡು-ಮೂರು ಬಾರಿ ದುರಸ್ತಿ ಮಾಡಿದರೂ ಸಂಚಾರ ಯೋಗ್ಯವಾಗಿಲ್ಲ. ಕಳೆದ 10 ವರ್ಷಗಳಿಂದ ತಗ್ಗುದಿಣ್ಣೆಗಳನ್ನು ಮುಚ್ಚುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗುತ್ತಿಲ್ಲ. ರಸ್ತೆ ಮರು ನಿರ್ಮಾಣದ ವ್ಯವಸ್ಥೆಗೆ ಸಾಕಷ್ಟು ಅನುದಾನ ನೀಡಿದರೂ ಸುಧಾರಣೆ ಕಂಡಿಲ್ಲ. ಭೀಮಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಮರಳು ಸಾಗುವ ವಾಹನಗಳು ಸುಮಾರು 10 ಗ್ರಾಮಗಳ ರಸ್ತೆಗಳ ಮೂಲಕ ಹಾದು ಹೋಗುತ್ತಿವೆ. ಈ ಮಾರ್ಗದಲ್ಲಿ ರಸ್ತೆಗಳು ಹಾಳಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು. ಪದೇ ಪದೇ ದುರಸ್ತಿ ಮಾಡಿದರು ಪ್ರಯೋಜನ ಆಗುತ್ತಿಲ್ಲ. ಮಳೆಗಾಲದಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಗ್ರಾಮೀಣ ರಸ್ತೆಗಳಲ್ಲಿ ಅಧಿಕ ಭಾರದ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಬೇಕು. ರಸ್ತೆಗೆ ತಗಲುವ ವೆಚ್ಚವನ್ನು ಹೆಚ್ಚಿಸಿ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು ಎನ್ನುತ್ತಾರೆ ಜೇವರ್ಗಿ ಗ್ರಾಮದ ಶರಣಬಸಪ್ಪ ಬಿರಾದಾರ್. ಪಟ್ಟಣದ ಅಂಬೇಡ್ಕರ್–ಹಳೆ ಪುರಸಭೆ ರಸ್ತೆ ಘತ್ತರಗಾ–ಸೊಲಾಪುರ ರಸ್ತೆ ವಿಜಯಪುರ- ಕಲಬುರಗಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ವಾಹನಗಳ ಸುಲಭ ಸಂಚಾರಕ್ಕೆ ತೊಡಕ್ಕಾಗುತ್ತಿದೆ.
ಗುಂಡಿಗಳಿಂದ ರಸ್ತೆ ಆವೃತ
ಶಹಾಬಾದ್: ಇಲ್ಲಿನ ಸ್ವಾಗತ ಕಮಾನ್‌ನಿಂದ ಬಸವೇಶ್ವರ ವೃತ್ತ ಹಾಗೂ ಕನಕದಾಸ ವೃತ್ತದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಜೇವರ್ಗಿಗೆ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆ ಹದಗೆಟ್ಟಿದೆ. ರೈಲ್ವೆ ಮೇಲ್ಸೇತುವೆ ಬಳಿಯಿಂದ ಕನಕದಾಸ ವೃತ್ತವರಗಿನ ರಸ್ತೆಯು ತಗ್ಗು ಗುಂಡಿಗಳಿಂದ ಆವೃತವಾಗಿದೆ. ಹಲವು ಬೈಕ್‌ ಸವಾರರು  ಆಯಾ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಕೆಲವರು ನಿಯಂತ್ರಣ ತಪ್ಪಿ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ನಿತ್ಯ ಒಂದಿಲ್ಲೊಂದು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು. ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಶಾಸಕರು ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿದ್ದರು. ಕಳಪೆ ಕಾಮಗಾರಿಯಿಂದ ರಸ್ತೆಯ ಪ್ರಯಾಣ ಯೋಗ್ಯವಾಗಿಲ್ಲ. ಕಾಮಗಾರಿ ಮುಗಿಯುವ ಮುನ್ನ  ಬಿಲ್ ಎತ್ತಲಾಗಿದೆ. ಬಿಲ್ ಪಾವತಿ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಸುಮಾರು 5 ವರ್ಷದಿಂದ ಇಲ್ಲಿಯವರೆಗೆ ರಸ್ತೆ ನಿರ್ಮಾಣ ಕೈಗೊಂಡಿಲ್ಲ ಎಂದರು. ಸಿಮೆಂಟ್‌ ಸುಣ್ಣ ಕಲ್ಲು ಸಾಗಣೆಯ ಹಲವು ಲಾರಿಗಳು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ತಗ್ಗು ಗುಂಡಿಗಳಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕರು ಇತ್ತ ಗಮನಹರಿಸಿ ರಸ್ತೆಯ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುತ್ತಾರೆ ಈರಣ್ಣ ಕಾರ್ಗಿಲ್.
ಮರಳು ಲಾರಿ ಸಂಚಾರ; ರಸ್ತೆ ಹಾಳು
ಚಿತ್ತಾಪುರ: ಸಕಾಲಕ್ಕೆ ಸುಧಾರಣೆ ಕಾಣದೆ ಹಲವು ರಸ್ತೆಗಳು ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಭಾಗೋಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದ ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಮರಳು ತುಂಬಿದ ವಾಹನಗಳ ಓಡಾಸಿಂದ ರಸ್ತೆ ಹಾಳಾಗಿದೆ ಎಂಬುದು ಜನರ ಆಕ್ರೋಶ. ದಂಡೋತಿ–ಇವಣಿ ನಡುವೆ ಅಧಿಕ ಭಾರದ ಮರಳು ತುಂಬಿದ ವಾಹನಗಳು ಹಗಲು ರಾತ್ರಿ ಎನ್ನದೆ ಸಂಚರಿಸಿ ರಸ್ತೆಯನ್ನು ಹಾಳು ಮಾಡಿವೆ. ಕಲಬುರಗಿ-ಸೇಡಂ ಹೆದ್ದಾರಿಯಿಂದ ಇವಣಿ ಗ್ರಾಮಕ್ಕೆ ಸಂಪರ್ಕಿಸುವ ಡಾಂಬರ್ ಕಿತ್ತು ಬಂದಿದೆ. ಭಾಗೋಡಿ ಗ್ರಾಮದಿಂದ ಬೆಳಗುಂಪಾ-ಇವಣಿ ಕ್ರಾಸ್‌ ಗುಂಡಗುರ್ತಿ ಸಮೀಪದ ಕಲಬುರಗಿ-ಸೇಡಂ ಹೆದ್ದಾರಿಯೂ ಹಾಳಾಗಿದೆ. ಮರಳು ತುಂಬಿದ ವಾಹನಗಳಿಂದ ರಸ್ತೆ ಹಾಳಾಗುತ್ತಿದ್ದರೂ  ಸಂಬಂಧಿತ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂಬುದು ಸ್ಥಳೀಯರ ಬೇಸರ. ಬೆಳಗುಂಪಾ-ಪೇಠಶಿರೂರ ಕ್ರಾಸ್‌ನಿಂದ ಕಾಟಮ್ಮದೇವರಹಳ್ಳಿ ಗ್ರಾಮದವರೆಗೆ ರಸ್ತೆ ಹಾಳಾಗಿದ್ದು  ಅಧಿಕಾರಿಗಳು ಸುಧಾರಣೆಗೆ ಮುಂದಾಗಲಿಲ್ಲ. ಗ್ರಾಮಸ್ಥರೇ ಕಲ್ಲು ಮಣ್ಣು ಮುರುಮ್ ಹಾಕಿ ದುರಸ್ತಿ ಮಾಡಿಕೊಂಡಿದ್ದಾರೆ.
ಅಪಾಯಕ್ಕೆ ಆಹ್ವಾನಿಸುವ ರಸ್ತೆ
ಸೇಡಂ ಪಟ್ಟಣದ ಊಡಗಿ ರಸ್ತೆಯ ಆಶ್ರಯ ಕಾಲೊನಿಯಲ್ಲಿ ರಸ್ತೆಯ ಮಧ್ಯೆ ತಗ್ಗು ಗುಂಡಿಗಳು ಬಿದ್ದಿದ್ದು ಪ್ರಯಾಣಿಕರನ್ನು ಅಪಾಯಕ್ಕೆ ಆಹ್ವಾನಿಸುವಂತಿವೆ. ಒಳಚರಂಡಿಯ ಮ್ಯಾನ್ ಹೋಲ್‌ಗಳ ರಸ್ತೆಯ ಮಧ್ಯದಲ್ಲಿ ನಿರ್ಮಾಣವಾಗಿವೆ. ಅವುಗಳನ್ನು ದೊಡ್ಡ–ದೊಡ್ಡ ಕಲ್ಲುಗಳಿಂದ ಮುಚ್ಚಲಾಗಿದೆ. ಕೆಲವು ಮ್ಯಾನ್‌ಹೋಲ್‌ಗಳು ಒಳಗೆ ಬಿದ್ದಿದ್ದರೇ ಮತ್ತೆ ಕೆಲ ಕಲ್ಲುಗಳು ಮೊಳಕಾಲುದ್ದ ಎದ್ದು ನಿಂತು ಬೈಕ್ ಕಾರು ಆಟೊ ಸವಾರರನ್ನು ಅಪಾಯಕ್ಕೆ ಕರೆಯುವಂತಿವೆ. ಸ್ಪಲ್ಪವೇ ಅಲಕ್ಷ್ಯದಿಂದ ವಾಹನ ಓಡಿಸಿದರೆ ಜೀವಕ್ಕೆ ಆಪತ್ತು ಬರಲಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ‘ಶಾಲಾ ಮಕ್ಕಳು ವೃದ್ಧರು ಮಹಿಳೆಯರು ಸೇರಿದಂತೆ ಹಲವರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಿ ಜನರ ಸುರಕ್ಷೆಯ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜ ಆಗಿಲ್ಲ’ ಎನ್ನುತ್ತಾರೆ ಬಡಾವಣೆಯ ನಿವಾಸಿ ಶರಣಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT