ಗುರುವಾರ , ಫೆಬ್ರವರಿ 20, 2020
27 °C
‘ಮಕ್ಕಳ ಸಾಹಿತ್ಯ ಗೋಷ್ಠಿ’

ದ್ರೋಣಾಚಾರ್ಯರ ತಪ್ಪನ್ನು ಮಾಡಬೇಡಿ;ಸಾಹಿತಿ ಎ.ಕೆ.ರಾಮೇಶ್ವರ ಸಲಹೆ

ಭೀಮಣ್ಣ ಬಾಲಯ್ಯ Updated:

ಅಕ್ಷರ ಗಾತ್ರ : | |

Prajavani

ಡಾ.ಎಂ.ಎಸ್‌.ಲಠ್ಠೆ ವೇದಿಕೆ (ಕಲಬುರ್ಗಿ): ‘ಶಿಕ್ಷಕರು ದ್ರೋಣಾಚಾರ್ಯರು ಮಾಡಿದ ತಪ್ಪನ್ನು ಮಾಡಬಾರದು’ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಸಲಹೆ ನೀಡಿದರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ‘ಮಕ್ಕಳ ಸಾಹಿತ್ಯ ಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

‘ದ್ರೋಣಾಚಾರ್ಯರು ಏಕಲವ್ಯನ ಬೆರಳ ಕಿತ್ತುಕೊಳ್ಳುವ ಮೂಲಕ ಚಾರಿತ್ರಿಕ ಮೋಸ ಮಾಡುತ್ತಾರೆ. ಯಾರೂ ಆ ತಪ್ಪನ್ನು ಮಾಡಬಾರದು’ ಎಂದರು.

‘ಪೋಷಕರು ತಮ್ಮ ಮಕ್ಕಳಿಗೆ ಅನಿರ್ಬಂಧಿತ ಪ್ರೀತಿ ಉಣಬಡಿಸುವ ಮೂಲಕ ಸುಂದರ ಬಾಲ್ಯ ನೀಡಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಸಲಹೆ ನೀಡಿದರು.

ಶಾಲೆ, ಕುಟುಂಬ ಹಾಗೂ ಸಮಾಜ ಮಕ್ಕಳಿಗೆ ಬಂಧಿಖಾನೆಗಳಾಗಿ ಮಾರ್ಪಟ್ಟಿವೆ. ಅವರ ಸ್ವತಂತ್ರ ಆಲೋಚನೆಗಳಿಗೆ ಸ್ಥಳವೇ ಇಲ್ಲ. ಸೂತ್ರದ ಗೊಂಬೆಯಂತೆ ವರ್ತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮಾಧ್ಯಮದ ಶಾಲೆ, ಮಕ್ಕಳಿಗೆ ಸುಂದರವಾದ ಬಾಲ್ಯವನ್ನು ನೀಡುತ್ತದೆ. ಇಂಗ್ಲಿಷ್‌ ಮಾಧ್ಯಮ ಶಾಲೆ ಅದರಿಂದ ಅವರನ್ನು ವಂಚಿತವಾಗಿಸುತ್ತದೆ. ಆದ್ದರಿಂದ ತಪ್ಪದೆ, ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಿ ಎಂದು ಹೇಳಿದರು.

ಮಕ್ಕಳ ಮನಸ್ಸುಗಳು ಬದಲಾಗಿವೆ. ಈಗ ಅವರಿಗೆ ಅಜ್ಜಿಯ ಕಥೆಗಳ ಮೇಲೆ ಸಿನಿಕತನ ಬಂದಿದೆ. ಅವರ ಮನೋಭಾವನೆಯನ್ನು ಅರ್ಥ ಮಾಡಿಕೊಂಡು, ಮುಗ್ಧತೆಯನ್ನು ಹಾಗೂ ಬೆರಗನ್ನು ಪೋಷಿಸುವ ಸಾಹಿತ್ಯ ರಚಿಸಬೇಕು. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಮಗ್ರವಾಗಿ ಸಿಗುತ್ತಿಲ್ಲ. ಸರ್ಕಾರ ಸರಣಿ ಸಂಪುಟಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಪ್ರತಿ ಶಾಲೆಯಲ್ಲೂ ಗ್ರಂಥಾಲಯ ನಿರ್ಮಿಸಬೇಕು. ಪುಸ್ತಕಗಳ ಅಧ್ಯಯನಕ್ಕೆ ಸಮಯ ನಿಗದಿಪಡಿಸಬೇಕು. ಅಂದಾಗ ಮಾತ್ರ ಮಕ್ಕಳ ವಿಕಾಸವಾಗುತ್ತದೆ ಎಂದರು.

ಪತ್ರಿಕೆಗಳು, ನಿಯತಕಾಲಿಕೆಗಳು ಸಹ ಮಕ್ಕಳ ಸಾಹಿತ್ಯಕ್ಕೆ ಸಾಕಷ್ಟು ಸ್ಥಳಾವಕಾಶ ನೀಡುತ್ತಿಲ್ಲ. ಶಿಕ್ಷಕರೇ ನಿಯತಕಾಲಿಕೆಯನ್ನು ಹೊರತರಬೇಕು ಎಂದರು.

ರಾಜ್ಯದಲ್ಲಿ ದೈತ್ಯಾಕಾರದ ಬಾಲ ವಿಕಾಸ ಅಕಾಡೆಮಿ ಕಟ್ಟಡಗಳು ನಿರ್ಜೀವವಾಗಿ ನಿಂತುಕೊಂಡಿವೆ. ಅಲ್ಲಿಯ ಸಿಬ್ಬಂದಿಗೆ ಸಂಬಳವಿಲ್ಲ. ಸರ್ಕಾರಕ್ಕೆ ಮಕ್ಕಳ ಮೇಲೆ ಕಾಳಜಿ ಇದ್ದರೆ, ಈ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಹೇಳಿದರು.

ರಾಜಶೇಖರ ಕುಕ್ಕುಂದ ‘ಮಕ್ಕಳ ಮೇಲೆ ತಂತ್ರಜ್ಞಾನದ ಪ್ರಭಾವ’ದ ಕುರಿತು ಮಾತನಾಡಿ,‘ಮಕ್ಕಳು ಒತ್ತಡಗಳಿಂದ ತಪ್ಪಿಸಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಅದು ವ್ಯಸನವಾಗಿ ಮನೋ ವಿಪ್ಲವಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.

ತಂತ್ರಜ್ಞಾನದ ಹುಚ್ಚು ಮನುಷ್ಯ ಸಂಬಂಧದ ಮೌಲ್ಯವನ್ನು ಗೌಣವಾಗಿಸುತ್ತಿದೆ. ದೃಷ್ಟಿ ಹಾಗೂ ಶ್ರವಣ ದೋಷದಂಥ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ತಂತ್ರಜ್ಞಾನ ರಹಿತವಾದ ಕೊಠಡಿ ನಿರ್ಮಿಸಿ, ಮನೆಮಂದಿಯಲ್ಲ ಒಂದೆಡೆ ಕುಳಿತು ಮಾತನಾಡುವ ಅಗತ್ಯ ಇದೆ ಎಂದರು.

ಜಂಬುನಾಥ ಕಂಚ್ಯಾಣಿ ಮಾತನಾಡಿ, ‘ಕನ್ನಡದ ವಿಮರ್ಶಾ ಪರಂಪರೆ ಮಕ್ಕಳ ಸಾಹಿತ್ಯಕ್ಕೂ ತೆರೆದುಕೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಮಕ್ಕಳ ಸಾಹಿತ್ಯ ಅಧ್ಯಯನ ಪೀಠಗಳನ್ನು ತೆರೆಯಬೇಕು’ ಎಂದರು.

ಎಂ.ಚಂದ್ರಶೇಖರ ಸ್ವಾಗತಿಸಿದರು. ವಿಜಯಲಕ್ಷ್ಮಿ ರೆಡ್ಡಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು