ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಳ್ಳಿಗೆ ರುದ್ರಭೂಮಿ, ಶೌಚಾಲಯ ಮಂಜೂರು

‘ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಹಲವು ಅರ್ಜಿಗಳ ವಿಲೇವಾರಿ
Last Updated 20 ಮಾರ್ಚ್ 2022, 3:18 IST
ಅಕ್ಷರ ಗಾತ್ರ

ಭೀಮಳ್ಳಿ (ಕಲಬುರಗಿ ತಾ.): ಭೀಮಳ್ಳಿ ಗ್ರಾಮಕ್ಕೆ ಸ್ಮಶಾನ ಮಂಜೂರು, 15 ದಿನಗಳಲ್ಲಿ ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಾಣ ಹಾಗೂ ತಿಂಗಳಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ...

ತಾಲ್ಲೂಕಿನ ಭೀಮಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಯಶವಂತ್‌ ವಿ. ಗುರುಕರ್‌ ಅವರು ನೀಡಿದ ಭರವಸೆಗಳಿವು.

ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ಸಿಂಗೆ ಮಾತನಾಡಿ, ಭೀಮಳ್ಳಿಯಲ್ಲಿ ಇದೂವರೆಗೆ ಸ್ಮಶಾನವೇ ಇಲ್ಲ. ಯಾರಾದರೂ ನಿಧನರಾದರೆ ಅವರವರ ಹೊಲದಲ್ಲೇ ಹೂಳಬೇಕಾಗಿದೆ. ಹೊಲ ಇಲ್ಲದವರು ರಸ್ತೆ ಪಕ್ಕ ಹೂಳಬೇಕು. ವಾಸಕ್ಕೆ ಮನೆ ಇಲ್ಲದಿದ್ದರೂ ಪರವಾಗಿಲ್ಲ, ಹೂಳಲು ಸ್ಮಶಾನ ಬೇಕಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗ್ರಾಮದಲ್ಲಿ 1.20 ಎಕರೆ ಜಮೀನನ್ನು ರುದ್ರಭೂಮಿಗೆ‌ ಮಂಜೂರು ಮಾಡಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ಗೀತಾ ರಾಮಚಂದ್ರಪ್ಪ ಅವರಿಗೆ ಆದೇಶದ‌ ಪ್ರತಿ ಕೂಡ ನೀಡಿದರು.

ಸಾಮೂಹಿಕ ಶೌಚಾಲಯ ಇಲ್ಲದ ಕಾರಣ ಮಹಿಳೆಯರಿಗೆ ಕಷ್ಟವಾಗಿದೆ ಎಂದು ಶರಣಪ್ಪ ಹೇಳುವಾಗಲೇ ಮಧ್ಯೆ ಮಾತು ಆರಂಭಿಸಿದ ಡಿ.ಸಿ, ‘15 ದಿನಗಳ ಒಳಗಾಗಿ ಇದನ್ನು ಮಾಡಿ ಮುಗಿಸುತ್ತೇನೆ’ ಎಂದರು.

ಭೀಮಳ್ಳಿಯಿಂದ ಕೇವಲ 4 ಕಿ.ಮೀ ದೂರದಲ್ಲಿ ಭೋಸಗಾ ಕೆರೆ ಇದೆ. ಇಲ್ಲಿಂದಲೇ ಕಲಬುರಗಿ ನಗರಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ, ಭೀಮಳ್ಳಿಗೇ ನೀರು ಬರುತ್ತಿಲ್ಲ ಎಂದು ಸದಸ್ಯರು ಮನವರಿಕೆ ಮಾಡಿದರು.‘ತಿಂಗಳ ಒಳಗಾಗಿ ಜಲಜೀವನ್‌ ಮಿಷನ್‌ಗೆಅನುಮೋದನೆ ಪಡೆದು ನೀರು ಪೂರೈಸಲು ಯತ್ನಿಸುತ್ತೇನೆ’ ಎಂದು ಯಶವಂತ್‌ ಉತ್ತರಿಸಿದರು.

ಗ್ರಾಮದ ರಸ್ತೆಗಳ ದುರಸ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶುಚಿಕಿತ್ಸಾಲಯ ಮಂಜೂರು, ಸರ್ಕಾರಿ ಉರ್ದು ಶಾಲೆಗೆ ಮೈದಾನ, ಬ್ರಿಜ್‌ ಕಂ ಬ್ಯಾರೇಜ್‌ಗಳ ಮರು ನಿರ್ಮಾಣ, ಪೊಲೀಸ್‌ ಚೌಕಿ ಸ್ಥಾಪನೆ... ಮುಂತಾದ ಬೇಡಿಕೆಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು ಎಂದೂ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್‌ ಶಸಿ, ಉಪವಿಭಾಗಾಧಿಕಾರಿ ಮೋನಾ ರೋಟ್‌, ಭೂದಾಖಲೆಗಳ ಉಪನಿರ್ದೇಶಕ ಶಂಕರ, ತಹಶೀಲ್ದಾರ್‌ ಪ್ರಕಾಶ ಕುದರಿ, ಗ್ರೇಡ್-2 ತಹಶೀಲ್ದಾರ್‌ ವೆಂಕನಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಇ.ಒ ಮಾನಪ್ಪ ಕಟ್ಟಿಮನಿ, ಭೀಮಳ್ಳಿ ಗ್ರಾ.ಪಂ ಅಧ್ಯಕ್ಷೆ ಗೀತಾ ರಾಮಚಂದ್ರ , ಪಿಡಿಒ ಸಯ್ಯದ್ ಪಟೇಲ್ ಇದ್ದರು.

ರಸ್ತೆ ಅಗೆದು ರೈತರ ಆಕ್ರೋಶ

ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ 20 ವರ್ಷವಾದರೂ ಪರಿಹಾರ ನೀಡಿಲ್ಲ ಎಂದುರೋಸಿಹೋದ ಕೆಲ ರೈತರು, ಗ್ರಾಮದೊಳಗಿನ ರಸ್ತೆ ಅಗೆದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಶನಿವಾರ ಭೀಮಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದನ್ನು ತಿಳಿದು ಭೂಮಿ ಕಳೆದುಕೊಂಡ ಮೂವರು ರೈತರು, ಜಿಲ್ಲಾಧಿಕಾರಿ ಬರುವ ಮುನ್ನವೇ ಗ್ರಾಮದ ಮುಖ್ಯರಸ್ತೆ ಅಗೆದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಅಗೆದ ರಸ್ತೆ ಮುಚ್ಚುವಂತೆ ಮನವಿ ಮಾಡಿದರು.ಪರಿಹಾರ ನೀಡುವವರೆಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು. ಪ್ರತಿಭಟನೆಯ ನಡುವೆಯೇ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಜೆಸಿಬಿ ತಂದು ತಗ್ಗು ಮುಚ್ಚಿಸಿದರು.

ಇದರಿಂದ ಆಕ್ರೋಶಗೊಂಡ ರೈತರಾದ ಶಿವಲಿಂಗಪ್ಪ ಉಪ್ಪಿನ, ವೀರಣ್ಣ ಉಪ್ಪಿನ, ಶರಣಬಸಪ್ಪ ಉಪ್ಪಿನ ಅವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

‘20 ವರ್ಷಗಳ ಹಿಂದೆ ಎರಡೂವರೆ ಎಕರೆ ಜಮೀನನ್ನು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಕಡೆಯೂ ಮನವಿ ಹಿಡಿದು ಅಲೆದಿದ್ದೇವೆ. ಎಲ್ಲ ದಾಖಲೆಗಳನ್ನೂ ನೀಡಿದ್ದೇವೆ. ಆದರೂ ಪರಿಹಾರ ಬಂದಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.

ನಂತರ ಬಂದ ಜಿಲ್ಲಾಧಿಕಾರಿ, ‘ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಮಸ್ಯೆ ಆಲಿಸಲು ಬಂದವರ ಮೆರವಣಿಗೆ!

ಜನರ ಕುಂದು ಕೊರತೆ ಆಲಿಸಿ, ಪರಿಹಾರ ನೀಡಲು ಬಂದ ಅಧಿಕಾರಿಗಳಿಗೆ ಭೀಮಳ್ಳಿ ಜನ ಪೂರ್ಣಕುಂಭ ಸ್ವಾಗತ ನೀಡಿದರು.

ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಮಹಿಳೆಯರು ಆರತಿ ಬೆಳಗಿದರು.

ಪುರುಷರು ಪಂಚೆ, ಮೈಸೂರು ಪೇಟಾ ತೊಡಿಸಿ, ಪುಷ್ಪಾಲಂಕೃತ ಟಾಂಗಾದಲ್ಲಿ ಮೆರವಣಿಗೆ ನಡೆಸಿದರು.

ಕಿರಿಯ ಪ್ರಾಥಮಿಕ ಶಾಲೆಯ ಕೆಲವು ಮಕ್ಕಳು ಬರಿಗಾಲಲ್ಲೇ ನಡೆದಕೊಂಡು ಹೋದರು. ವಿದ್ಯಾರ್ಥಿಗಳು, ಕುಂಭಕಳಸ ಹೊತ್ತ ಮಹಿಳೆಯರುಒಂದೂವರೆ ಕಿಲೋಮೀಟರ್ ಸಾಗಿದರು.

ಯಾರ್‍ಯಾರಿಗೆ ಏನೇನು ಸಮಸ್ಯೆ?

‘ಆಧಾರ್‌’ಗಾಗಿ ಕಣ್ಣೀರಿಟ್ಟ ಶರಣಮ್ಮ

80 ವರ್ಷ ವಯಸ್ಸಿನ ಶರಣಮ್ಮ ಅವರು ‘ಆಧಾರ್‌ ಕಾರ್ಡ್‌’ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಟ್ಟರು. ಸ್ಥಳದಲ್ಲಿದ್ದ ಮಳಿಗೆಯ ಸಿಬ್ಬಂದಿಯನ್ನು ಕರೆದ ಜಿಲ್ಲಾಧಿಕಾರಿ ಅಜ್ಜಿಯ ಅವಶ್ಯಕತೆ ಪೂರೈಸಲು ಸೂಚಿಸಿದರು. ಯಾರೂ ದಿಕ್ಕಿಲ್ಲದ ಶರಣಮ್ಮನಿಗೆ ಈವರೆಗೆ ಯಾವುದೇ ಸೌಕರ್ಯ ಸಿಕ್ಕಿಲ್ಲ.

*

ಪಿಂಚಣಿಗೆ ತಾತನ ಮೊರೆ

‘ನಾನು ಊರಿನ ಗುಡಿಸಲಲ್ಲಿದ್ದೇನೆ. ಆಧಾರ್‌ ಕಾರ್ಡ್‌ ಇಲ್ಲದ ಕಾರಣ ರೇಷನ್‌ ಕೂಡ ಸಿಗುತ್ತಿಲ್ಲ. ಸಾಯುವವರೆಗೆ ಅನ್ನ ಸಿಗುವಂತೆ ಮಾಡಿ’ ಎಂದು ನಾಗನಾಥ ನಾಗರಕರ್‌ ಮೊರೆ ಇಟ್ಟರು.

*

‘ದಾರು ದುಕಾನ್‌’ ಬಂದ್ ಮಾಡಿ

ಮನೆಯ ಪಕ್ಕದಲ್ಲೇ ಅನಧಿಕೃತ ದಾರು ದುಕಾನ್‌ (ಮದ್ಯದ ಅಂಗಡಿ) ತೆರೆದಿದ್ದಾರೆ. ಇದರಿಂದ ಹೆಣ್ಣುಮಕ್ಕಳಿಗೆ ಹಿಂಸೆಯಾಗುತ್ತಿದೆ. ಅದನ್ನು ಸ್ಥಳಾಂತರಿಸಬೇಕು ಎಂದು ಜಗದೇವಿ ಹಾಗೂ ವಿಜಯಲಕ್ಷ್ಮಿ ಮನವಿ ಮಾಡಿದರು. ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದ ಡಿ.ಸಿ ಈ ಕೂಡಲೇ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

*

ಮನೆ ಮುಂದಿನ ದಾರಿಯೇ ಬಂದ್‌!

‘ಪ್ರಧಾನಿ ಮೋದಿ ಬರುತ್ತಾರೆ ಎಂಬ ಗುಂಗಿನಲ್ಲಿ ತರಾತುರಿಯಲ್ಲಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಇದರ ಕಟ್ಟೆ ರಸ್ತೆಗಿಂತಲೂ ಎತ್ತರವಾಗಿದೆ. 20ಕ್ಕೂ ಹೆಚ್ಚು ಮನೆಗಳ ದಾರಿ ಬಂದಾಗಿದೆ. ವಾಹನ, ಚಕ್ಕಡಿ ಓಡಾಡಲು ಸಾಧ್ಯವಿಲ್ಲ. ಅವೈಜ್ಞಾನಿಕ ಕಾಮಗಾರಿಯ ಸಮಸ್ಯೆ ಸರಿಪಡಿಸಬೇಕು ಎಂದು ಬಸಪ್ಪ ಕಾಲಿಮೋರ್, ಹೈದರಬಿ, ಶೀಲಾ ಪಾಟೀಲ, ವಿದ್ಯಾಶ್ರೀ ಮಮದಾಪುರ ದೂರಿದರು.

*

ಫ್ರಿಡ್ಜ್‌, ಬೆಡ್‌ ಬೇಡಿದ ವಿದ್ಯಾರ್ಥಿನಿಯರು

‘ಅಡುಗೆ ಕೋಣೆಯಲ್ಲಿ ಫ್ರಿಡ್ಜ್ ಇಲ್ಲ. ತರಕಾರಿ, ಸೊಪ್ಪು ಬೇಗ ಒಣಗುತ್ತವೆ. ಅಲ್ಲದೇ. ಮಲಗಲು ಬೆಡ್‌ಗಳೂ ಇಲ್ಲ. ಜತೆಗೆ ಉದ್ಯಾನ, ಕಾಂಪೌಂಡ್‌ ನಿರ್ಮಿಸಿ’ ಎಂದು ವಿದ್ಯಾರ್ಥಿನಿಯರು ಕೋರಿದರು. ಇದಕ್ಕೆ ಸ್ಪಂದಿಸಿದ ಡಿ.ಸಿ ಶೀಘ್ರದಲ್ಲೇ ಬೆಡ್‌, ಫ್ರಿಡ್ಜ್‌ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT