ಮಂಗಳವಾರ, ಜುಲೈ 5, 2022
24 °C
ಮತ್ತೆ ಬಾರಿಸಿತು ಢಣಢಣ ಗಂಟೆ, ಶಾಲೆ ಮೈದಾನದಲ್ಲಿ ಚಿಣ್ಣರ ಕಲರವ

ಕಲಬುರಗಿ: ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಬೇಸಿಗೆ ರಜೆಯ ಮಜಾ ಅನುಭವಿಸಿದ ಮಕ್ಕಳೆಲ್ಲ ಸೋಮವಾರ ಶಾಲೆಗಳತ್ತ ಮರಳಿದರು. ನಗರದ ಬಹುತೇಕ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಹರ್ಷದಿಂದ ಸ್ವಾಗತಿಸಿ, ಶಾಲಾ ಪ್ರಾರಂಭೋತ್ಸವಕ್ಕೆ ಕಳೆತಂದರು. ಮತ್ತೆ ಕೆಲವೆಡೆ ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕಾರ ಮಾಡಿ, ರಂಗೋಲಿ ಹಾಕಿ ಮಕ್ಕಳ ಮನಸನ್ನು ಖುಷಿಪಡಿಸಿದರು.

ತಾರಫೈಲ್‌ ಬಡಾವಣೆಯ ಸರ್ಕಾರಿ ಪ್ರೌಢಶಾಲೆ, ಸೂಪರ್‌ ಮಾರ್ಕೆಟ್ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ (ಎಂಪಿಎಚ್‌ಎಸ್‌), ಗಾಜಿಪುರ ಚೇತನ ಯೂತ್‌ ಫೋರಂನ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ಯಾ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಹೊಸ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ‍್ರೌಢಶಾಲೆ, ಜಿಡಿಎ ಬಡಾವಣೆ, ಬ್ರಹ್ಮಪುರ, ಆಸೀಫ್‌ ಗಂಜ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೋಮಿನ್‌ಪುರದ ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಸಂಭ್ರಮ ಕಳೆಗಟ್ಟಿತು.

ಶಿಕ್ಷಕರು ಮನೆ–ಮನೆಗೆ ಭೇಟಿ ನೀಡಿ ಶಾಲೆ ಶುರುವಾದ ಸುದ್ದಿ ತಿಳಿಸಿ ಮಕ್ಕಳನ್ನು ಕೈಹಿಡಿದು ಕರೆದುಕೊಂಡು ಬಂದರು. ಮತ್ತೆ ಕೆಲವು ಪಾಲಕರು ಸ್ವಯಂ ಪ್ರೇರಣೆಯಿಂದ ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕರೆತಂದರು. ಕೆಲವೆಡೆ ಆರಂಭದ ದಿನವೇ ಶಿಕ್ಷಕರು ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಬೆಳಿಗ್ಗೆ 9.30ರ ಹೊತ್ತಿಗೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದರು. ಬೈಕ್‌, ಆಟೊ, ಬಸ್‌ಗಳಲ್ಲಿ ಬಂದ ಮಕ್ಕಳು ಶಾಲೆ ಅಂಗಳ ತಲುಪುತ್ತಿದ್ದಂತೆ ಗೆಳೆಯ– ಗೆಳತಿಯರನ್ನು ನೋಡಿ ಖುಷಿಯಿಂದ ಕುಣಿದರು. ಬೆಳಿಗ್ಗೆ 10ಕ್ಕೆ ಶಾಲೆಯ ಗಂಟೆ ಬಾರಿಸಿತು. ಧ್ವಜಕಟ್ಟೆಯ ಮುಂದೆ ಪ್ರಾರ್ಥನೆ ಆರಂಭವಾಯಿತು. ರಾಷ್ಟ್ರಗೀತೆ ಹಾಡಿದ ಬಳಿಕ ಮಕ್ಕಳು ತಮ್ಮ ತರಗತಿಯತ್ತ ಓಡಿದರು.

*

ಮೊದಲ ದಿನ ಶೇ 45ರಷ್ಟು ಹಾಜರಾತಿ
ಸೋಮವಾರ 1ರಿಂದ 10ನೇ ತರಗತಿಯವರೆಗೆ ಎಲ್ಲ ಶಾಲೆಗಳಲ್ಲೂ ಪಾಠಗಳು ಆರಂಭವಾದವು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಕಂಡುಬಂತು. ಆದರೆ, ನಗರದ ಎಲ್ಲ ಖಾಸಗಿ ಶಾಲೆಗಳಲ್ಲಿ ಶೇ 80ಕ್ಕೂ ಹೆಚ್ಚು ಮಕ್ಕಳು ಹಾಜರಿದ್ದರು.

ಒಟ್ಟಾರೆ ಜಿಲ್ಲೆಯಲ್ಲಿ ಶೇ 45ರಷ್ಟು ಮಕ್ಕಳ ಹಾಜರಾತಿ ಕಂಡುಬಂದಿದೆ. ಸದ್ಯ ಬೇಸಿಗೆ ರಜೆ ಮುಗಿದಿದೆ. ಜೂನ್‌ 1ರಂದು ಶಾಲೆಗೆ ಬರುವುದು ಮಕ್ಕಳ ರೂಢಿ. ಆದರೆ, ಕಾರಣಾಂತರಗಳಿಂದ ಈ ಬಾರಿ ಎರಡು ವಾರ ಮುಂಚಿತವಾಗಿಯೇ ಶಾಲೆ ಆರಂಭಿಸಲಾಗಿದೆ. ಇನ್ನೂ ಹಲವು ಮಕ್ಕಳು ರಜೆಯ ಸಂಭ್ರಮದಲ್ಲಿದ್ದಾರೆ. ಒಂದೆರಡು ದಿನ ಕಳೆದ ಮೇಲೆ ಮತ್ತೆ ಹಾಜರಾತಿ ಹೆಚ್ಚಲಿದೆ ಎಂದು ಡಿಡಿಪಿಐ ಅಶೋಕ ಭಜಂತ್ರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು