ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕವಾದರೂ ಯಶ ಕಾಣದ ‘ಬೀಜಗ್ರಾಮ’

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಸ್ವಾವಲಂಬನೆಗೆ ತೆರೆಯದ ದಾರಿ, ರೈತರಿಂದಲೂ ನಿರಾಸಕ್ತಿ
Last Updated 1 ಜೂನ್ 2021, 1:16 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರವು ದಶಕದ ಹಿಂದೆ ಆರಂಭಿಸಿದ ‘ಬೀಜಗ್ರಾಮ ಯೋಜನೆ’ಗೆ ಇನ್ನೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ರೈತರು ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದರೂ ಯಶಸ್ಸು ಕಂಡಿಲ್ಲ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಳಪಡುವ ಏಳೂ ಜಿಲ್ಲೆಗಳು ಸೇರಿ ನಾಲ್ಕು ವರ್ಷಗಳ ಅವಧಿಯಲ್ಲಿ ಇದರ ಫಲಾನುಭವಿಯಾದವರ ಸಂಖ್ಯೆ ಕೇವಲ 2,789. ಅದರಲ್ಲೂ ಮುಕ್ಕಾಲುಭಾಗ ಫಲಾನುಭವಿಗಳು ರಾಯಚೂರು ಜಿಲ್ಲೆಯಲ್ಲಿ ಮಾತ್ರ ಇದ್ದಾರೆ.

ಉಳಿದ ಕಾಲಭಾಗದಲ್ಲಿ ಕಲಬುರ್ಗಿ, ಬೀದರ್‌, ಯಾದಗಿರಿ ರೈತರು ಯೋಜನೆಯ ಲಾಭ ಪಡೆದಿದ್ದಾರೆ. ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯಲ್ಲೂ ಇದಕ್ಕೆ ರೈತರು ಮನಸ್ಸು ಮಾಡಿಲ್ಲ.

ನಿರಾಸಕ್ತಿಗೆ ಕಾರಣಗಳೇನು?: ‘ಬೀಜಗ್ರಾಮ ಯೋಜನೆ’ ಪ್ರಕಾರ, ಒಂದು ಗ್ರಾಮದಲ್ಲಿ ಕನಿಷ್ಠ 20 ರೈತರು ಒಂದು ಗುಂಪು ಮಾಡಿಕೊಂಡು ಬಿತ್ತನೆಬೀಜ ಬೆಳೆಯಲು ಮುಂದಾಗಬೇಕು. ಸದ್ಯ ಒಬ್ಬರಿಗೆ ಒಂದು ಎಕರೆಗೆ ಮಾತ್ರ ಬೀಜೋತ್ಪಾದನೆಗೆ ಅವಕಾಶ ನೀಡಲಾಗಿದೆ. ಬಿತ್ತನೆಗೆ ನಿಗದಿ ಮಾಡಿದ ಪ್ರದೇಶ ಚಿಕ್ಕದಾದ್ದರಿಂದ ರೈತರು ಹಿಂಜರಿಯುತ್ತಿದ್ದಾರೆ.ಅಲ್ಲದೇ, ಸರ್ಕಾರ ಬಿತ್ತನೆ ಬೀಜದ ಮೇಲೆ ಸಾಕಷ್ಟು ರಿಯಾಯಿತಿ ನೀಡುತ್ತಿರುವುದು ಕೂಡ ಕಾರಣ.

ಇನ್ನೊಂದೆಡೆ ನಿಖರವಾದ ಮಾಹಿತಿ ಕೊರತೆ. ಬೀಜಗ್ರಾಮ ಯೋಜನೆಯಲ್ಲಿ ಸಿಗುವ ಸೌಕರ್ಯ ಹಾಗೂ ಸಹಾಯಗಳ ಬಗ್ಗೆ ಬಹಳಷ್ಟು ರೈತರಿಗೆ ಇನ್ನೂ ಮಾಹಿತಿಯೇ ತಲುಪಿಲ್ಲ. ಈ ದಿಸೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಬೀಜ ನಿಗಮ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಅಗತ್ಯ ಅರಿವು ಮೂಡಿಸಬೇಕಾಗಿದೆ ಎನ್ನುವುದು ರೈತರಾದ ಸಿದ್ಧರಾಮ ಶೆಟ್ಟಿ, ಶಿವಶರಣಪ್ಪ ಬಾವಿ, ಮಲ್ಲಿಕಾರ್ಜುನ ಬಿರಾದಾರ ಅವರ ಅನಿಸಿಕೆ.‌

ಯಾವ ಬೀಜ ಉತ್ಪಾದಿಸಬಹುದು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಭತ್ತ, ತೊಗರಿ, ಜೋಳ, ಕಡಲೆ, ಹೆಸರು, ಉದ್ದು, ಅಲಸಂದಿ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಎಲ್ಲ ತರದ ದ್ವಿದಳ ಧಾನ್ಯ ಹಾಗೂ ಏಕದಳ ಧಾನ್ಯಗಳನ್ನೂ ರೈತರು ಬೀಜೋತ್ಪಾದನೆ ಮಾಡಬಹುದು. ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ, ಸದ್ಯ ಕಡಲೆ ಮತ್ತು ಹೆಸರು ಬೀಜಗಳನ್ನು ಉತ್ಪಾದನೆ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿದೆ. ಉಳಿದ ಬೀಜಗಳಿಗೆ ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಕೇಂದ್ರದಿಂದ ಸಾಕಷ್ಟು ಆರ್ಥಿಕ ನೆರವು ಸಿಗಬಹುದಾದ ಯೋಜನೆ ಇನ್ನೂ ಆಮೆಗತಿಯಲ್ಲೇ ಸಾಗುತ್ತಿದೆ.

‘ಸಹಭಾಗಿತ್ವ ಯೋಜನೆಯೂ ಇದೆ’

‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ‘ರೈತ ಸಹಭಾಗಿತ್ವ ಬೀಜೋತ್ಪಾದನೆ’ ಯೋಜನೆ ಕೂಡ ಇದೆ. ಇದರಲ್ಲಿ ಸ್ವತಃ ಕೃಷಿ ವಿಜ್ಞಾನ ಕೇಂದ್ರಗಳಿಂದ ನಂಬರ್‌ ಒನ್‌ ಬೀಜಗಳನ್ನು ನೀಡಿ ಅವುಗಳ ಉತ್ಪಾದನೆಗೆ ನೆರವು ನೀಡಲಾಗುತ್ತದೆ. ಮತ್ತೆ ಅದೇ ಬೀಜಗಳನ್ನು ಖರೀದಿಸಿ ಇನ್ನುಳಿದ ರೈತರಿಗೆ ರಿಯಾಯಿತಿಯಲ್ಲಿ ಹಂಚಲಾಗುತ್ತದೆ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ರಾಜು ತೆಗ್ಗೆಳ್ಳಿ.

‘ಕೃಷಿ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ಬೀಜ ನಿಗಮದಿಂದ ಉಚಿತ ತರಬೇತಿ ಕೂಡ ನೀಡಲಾಗುತ್ತದೆ. ಕೃಷಿ ವಿಜ್ಞಾನಿಗಳೇ ಮೂರು ಬಾರಿ ಹೊಲಕ್ಕೆ ಭೇಟಿ ನೀಡುತ್ತಾರೆ’ ಎನ್ನುವುದು ಅವರ ಮಾಹಿತಿ.

ರೈತರಿಗೆ ಸಿಗುವ ಸೌಕರ್ಯಗಳೇನು?

lಬಿತ್ತನೆಬೀಜ ಉತ್ಪಾದನೆ ಮಾಡುವವರಿಗೆ ಶೇ 60ರ ರಿಯಾಯಿತಿಯಲ್ಲಿ ಬೀಜ ಪೂರೈಕೆ

lಬೀಜದ ಗುಣ, ಮಣ್ಣಿನ ಲಕ್ಷಣ ಹಾಗೂ ಉತ್ಪಾದನಾ ಕ್ರಮಗಳ ಪ್ರಾಯೋಗಿಕ ತರಬೇತಿ

lರೋಗಬಾಧೆ, ಕೀಟ ಉಪಟಳದ ನಿಯಂತ್ರಣಕ್ಕೆ ಕೃಷಿ ತಜ್ಞರಿಂದಲೇ ಪರಿಶೀಲನೆ

lಕಲ್ಯಾಣ ಕರ್ನಾಟಕ ಭಾಗದಲ್ಲಿ 11 ಬೀಜ ಘಟಕ ತೆರೆಯಲಾಗಿದ್ದು, ಅಲ್ಲಿಂದ ಅಗತ್ಯ ಪೂರೈಕೆ

lಬೀಜಗಳ ಗುಣಮಟ್ಟದ ತಪಾಸಣೆಗೆ ತಂತ್ರಜ್ಞಾನ ಸೌಕರ್ಯ

‘2.5 ಎಕರೆಗೆ ನೀಡಲು ಪ್ರಸ್ತಾವ’

‘ಬೀಜೋತ್ಪಾದನೆಗೆ ನಿಗದಿಸಿದ ಪ್ರದೇಶವನ್ನು ಒಂದು ಹೆಕ್ಟೇರ್‌ಗೆ (2.5 ಎಕರೆ) ಹೆಚ್ಚಿಸಬೇಕು ಎಂದು ಈ ವರ್ಷ ಪ್ರಸ್ತಾವ ಸಲ್ಲಿಸಿದ್ದೇವೆ’ ಎನ್ನುವುದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವಿಶೇಷ ಅಧಿಕಾರಿ (ಬೀಜ)ಡಾ.ಬಸವೇಗೌಡ ಅವರ ಹೇಳಿಕೆ. ‘ರಿಯಾಯಿತಿ ಸಿಗುತ್ತದೆ ಎಂದು ರೈತರು ಮಳಿಗೆಗಳ ಮುಂದೆ ದಿನವಿಡೀ ಸಾಲುಗಟ್ಟಿ ನಿಲ್ಲುತ್ತಾರೆ. ಅದರ ಬದಲು, ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವು ಯೋಜನೆಗಳಿದ್ದು, ಅವುಗಳನ್ನು ಬಳಸಿಕೊಳ್ಳಲು ಮುಂದೆ ಬರಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT