ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ನಿಮ್ಮ ಹಬ್ಬದ ಊಟ

Last Updated 3 ನವೆಂಬರ್ 2021, 6:49 IST
ಅಕ್ಷರ ಗಾತ್ರ

ಕೊರೊನಾ, ಮಲೇರಿಯಾ, ಡೆಂಗಿಜ್ವರದ ಉಪಟಳ ಇನ್ನೂ ಸಂಪೂರ್ಣ ಕಡಿಮೆಯಾಗಿಲ್ಲ. ತುಸು ನಿಯಂತ್ರಣಕ್ಕೆ ಬಂದಿವೆ ಅಷ್ಟೇ. ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾದ ಅವಶ್ಯಕತೆ ಈಗಲೂ ಇದೆ. ಹಾಗಾಗಿ, ಹಬ್ಬದ ಸಂದರ್ಭದಲ್ಲೂ ಸಮತೋಲಿತ ಆಹಾರವನ್ನೇ ಸಿದ್ಧ ಮಾಡಿಕೊಳ್ಳಬೇಕು.

ದೀಪಾವಳಿಯೂ ಸೇರಿದಂತೆ ನಮ್ಮ ಎಲ್ಲ ಹಬ್ಬಗಳಲ್ಲೂ ನಾವು ಭೂರಿ ಭೋಜನ ಸವಿಯುತ್ತೇವೆ. ವಿವಿಧ ಬಗೆಯ ಸಿಹಿಖಾದ್ಯ, ಎಣ್ಣೆಯಲ್ಲಿ ಕರಿದ ಪದಾರ್ಥ, ತುಪ್ಪದಲ್ಲಿ ಮಾಡಿದ ಉಂಡೆ, ಹಪ್ಪಳ, ಉಪ್ಪಿನಕಾಯಿ,ಫಾಸ್ಟ್‌ಫುಡ್‌ ಸೇರಿದಂತೆ ಎಲ್ಲವನ್ನೂ ಏಕಕಾಲಕ್ಕೆ ಚಪ್ಪರಿಸುವುದು ರೂಢಿ. ಆದರೆ, ಇದು ಸರಿಯಾದ ಆಹಾರ ಕ್ರಮವಲ್ಲ. ಹೀಗೆ ಏಕಕಾಲಕ್ಕೆ ಅತಿಯಾದ ಸಿಹಿ, ಅತಿಯಾದ ಹುಳಿ, ಉಪ್ಪು, ಖಾರ, ಎಣ್ಣೆಯ ಪದಾರ್ಥಗಳು ನಮ್ಮಲ್ಲಿ ಕೊಬ್ಬನಂಶವನ್ನು ಹೆಚ್ಚಿಸುತ್ತವೆ. ಕೊಬ್ಬು ನಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚು. ಅದರಲ್ಲೂ ಮಕ್ಕಳು, ವೃದ್ಧರು, ಹೃದ್ರೋಗಿಗಳು, ಅಧಿಕ ರಕ್ತದೊತ್ತಡ ಇದ್ದವರು, ಮಧುಮೇಹಿಗಳಿಗೆ ಅಪಾಯವನ್ನೂ ಮಾಡಬಹುದು. ಹಾಗಾಗಿ, ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಕಡೆಗಣಿಸಬೇಡಿ.

ದರ ತುಸು ಹೆಚ್ಚಾದರೂ, ಹಣ್ಣು– ತರಕಾರಿಗಳನ್ನೇ ಹೆಚ್ಚಾಗಿ ಬಳಸಿ. ಹಬ್ಬವು ಇನ್ನಷ್ಟು ಕಲರ್‌ಫುಲ್‌ ಆಗಬೇಕು ಎಂದು ನಿಮಗೆ ಅನಿಸಿದ್ದರೆ ವಿವಿಧ ಬಣ್ಣಗಳ ಹಣ್ಣುಗಳನ್ನೇ ತಿನ್ನಿ. ಗಡ್ಡೆ, ಗೆಣಸು, ಸವತೆಕಾಯಿ, ಮೂಲಂಗಿ, ಈರುಳ್ಳಿ, ಎಲೆಕೋಸು, ನುಗ್ಗೆಕಾಯಿ ಸೇರಿದಂತೆ ಎಲ್ಲ ರೀತಿಯ ತರಕಾರಿಗಳನ್ನೂ ಅಡುಗೆಯಲ್ಲಿ ಯಥೇಚ್ಚವಾಗಿ ಬಳಸಿ. ಸಾಧ್ಯವಾದಷ್ಟು ಕರಿಯದೇ, ಕುದಿಸದೇ ಇರುವ ಅಡುಗೆಯನ್ನೇ ಹಬ್ಬದ ವಿಶೇಷವಾಗಿ ಸಿದ್ಧಪಡಿಸಿಕೊಳ್ಳಿ.

ಮಧ್ಯಾಹ್ನದ ಊಟದಲ್ಲಿ ಮೊಸರು, ಮಜ್ಜಿಗೆ, ಹಸಿ ತರಕಾರಿ, ರಾತ್ರಿ ಹಾಲು ಬಳಸಿದರೆ ದೈಹಿಕ ಉಷ್ಣತೆಯಲ್ಲಿ ಸಮತೋಲನ ಕಾಪಾಡಬಹುದು. ಈಗ ಚಳಿಯಿಂದ ಚರ್ಮ ಸುಕ್ಕುಗಟ್ಟುವ ಸಾಧ್ಯತೆ ಇರುತ್ತದೆ. ನೀರಿನಂಶ ಹೆಚ್ಚಿರುವ ಪದಾರ್ಥ ಸೇವಿಸಿದರೆ ಇದಕ್ಕೂ ಪರಿಹಾರ ಸಿಕ್ಕಂತಾಗುತ್ತದೆ.

ಸಿಹಿ ಪದಾರ್ಥಗಳನ್ನೇ ಸಿದ್ಧಪಡಿಸಬೇಕು ಎನ್ನುವುದಾದರೆ ಯಥೇಚ್ಚವಾಗಿ ಸಿರಿಧಾನ್ಯಗಳನ್ನು ಬಳಸಿ. ಒಳ್ಳೆಣ್ಣೆ, ಶಿಲ್ಕಿ ತುಪ್ಪ, ಡಾಲ್ಡಾ, ಮೈದಾಗಳು ಅಡುಗೆಯ ಸತ್ವವನ್ನು ಹಾಳುಮಾಡುತ್ತವೆ ಎನ್ನುವುದು ಗಮನದಲ್ಲಿರಲಿ.

ಡಾ.ವಿಜಯಶ್ರೀ ಮಠದ, ಕನ್ಸಲ್ಟಂಟ್‌, ನಾರಾಯಣ ಹೆಲ್ತ್‌, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT