ಕಲಬುರಗಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ಟೇಷನ್ ಬಜಾರ್‌ನ ವಿಠ್ಠಲ ಮಂದಿರದಲ್ಲಿ ಕೃಷ್ಣನ ಲೀಲೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾದ ಮೊಸರು ಗಡಿಗೆ ಒಡೆಯುವ ಹಾಗೂ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣನ ರಥೋತ್ಸವ ಸಂಭ್ರಮದಿಂದ ಜರುಗಿತು.
ಮೊಸರು ಗಡಿಗೆ ಒಡೆಯುವ ಸಡಗರವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ದೇವಸ್ಥಾನ ಆವರಣದಲ್ಲಿ ಸೇರಿದ್ದರು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ– ಪುನಸ್ಕಾರಗಳು ನಡೆದವು. ಕೃಷ್ಣನ ಮೂರ್ತಿಗೆ ತುಳಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ವಿಠ್ಠಲ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಗಾಥಾ ಪಾರಾಯಣ, ಕೀರ್ತನೆ, ಭಜನೆಯಂತಹ ಕಾರ್ಯಕ್ರಮಗಳಿಗೆ ಮೊಸರು ಕುಡಿಕೆ ಒಡೆಯುವುದರೊಂದಿಗೆ ಗುರುವಾರ ತೆರೆಬಿತ್ತು.
ಬೆಳಿಗ್ಗೆಯೇ ಶ್ರೀಕೃಷ್ಣನ ಮೂರ್ತಿಗೆ ಮಹಾಪೂಜೆ, ಅಲಂಕಾರ ಮಾಡಲಾಯಿತು. ಹರಿ ಕೀರ್ತನೆಯ ಬಳಿಕ ಶ್ರೀಕೃಷ್ಣ ಪಲ್ಲಕ್ಕಿ ಉತ್ಸವ ಜರುಗಿತು. ದೇವಸ್ಥಾನದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಪ್ರಮುಖ ರಸ್ತೆಯಲ್ಲಿ ಶ್ರೀಕಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು. ಮೊಸರು ಗಡಿಗೆಯನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಕೃಷ್ಣನ ಭಕ್ತರು ಭಜನೆ, ಭಕ್ತಿಗೀತೆಗಳು ಹಾಡಿ ಸಂಭ್ರಮಿಸಿದರು.
ದೇವಸ್ಥಾನದ ಆವರಣದಲ್ಲಿ ಎತ್ತರದ ಹಗ್ಗಕ್ಕೆ ಕಟ್ಟಿದ್ದ ಮೊಸರು ಗಡಿಗೆ ಒಡೆಯಲು ಹತ್ತಾರು ಯುವಕರು ಮಾನವ ಪಿರಾಮಿಡ್ ರಚಿಸಿದರು. ತುದಿಯಲ್ಲಿ ಇದ್ದ ಯುವಕ ಮೊಸರು ಗಡಿಗೆ ಒಡೆಯುತ್ತಿದ್ದಂತೆ ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತರು ಜೈಘೋಷ ಮೊಳಗಿಸಿದರು.
ಯುವಕರು ಮತ್ತು ಯುವತಿಯರು ಕೈ–ಕೈಹಿಡಿದು ಗಿರಿಗಿಟ್ಲೆ ಆಡಿದರು. ಮಹಿಳೆಯರು ವೃತ್ತಕಾರವಾಗಿ ನಿಂತು ಪರಸ್ಪರ ಕೈಹಿಡಿದು ಕುಣಿದು ಸಂಭ್ರಮಿಸಿದರು. ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇಸ್ಕಾನ್‌ನಲ್ಲಿ ಕೀರ್ತನೆ: ನಗರದ ಸ್ಟೇಷನ್ ಬಜಾರ್‌ನ ಹೇರೂರ ಅಪಾರ್ಟ್‌ಮೆಂಟ್‌ನಲ್ಲಿನ ಇಸ್ಕಾನ್ ಭಕ್ತಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ, ಅಭಿಷೇಕ, ಪ್ರವಚನ, ಆರತಿ, ಕೀರ್ತನೆ, ಮಹಾಪ್ರಸಾದ ವಿತರಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.