ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಕೌಶಲ ಕೇಂದ್ರ ಆರಂಭಿಸಿ: ಮಲ್ಲಿಕಾರ್ಜುನ ಖರ್ಗೆ ಸಲಹೆ

Published 28 ಜನವರಿ 2024, 5:26 IST
Last Updated 28 ಜನವರಿ 2024, 5:26 IST
ಅಕ್ಷರ ಗಾತ್ರ

ಕಲಬುರಗಿ: ‘ಬಿಎ, ಎಂಎ ಓದಿದವರಿಗೆ ಇಂದಿನ ದಿನಗಳಲ್ಲಿ ನೌಕರಿ ಸಿಗುತ್ತಿಲ್ಲ. ಆದ್ದರಿಂದ ಕೌಶಲ ಅಭಿವೃದ್ಧಿ ಇಲಾಖೆಯಿಂದ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಕೌಶಲ ತರಬೇತಿ ಕೇಂದ್ರ ಆರಂಭಿಸಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಬೇಕು’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಸಲಹೆ ನೀಡಿದರು.

ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ (ಎಚ್‌ಕೆಇ)ಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ₹ 19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‌‘ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಜಿಟಿಟಿಸಿ ಹಾಗೂ ಕೆಜಿಟಿಟಿಐ ಎಂಬ ತರಬೇತಿ ಸಂಸ್ಥೆಗಳನ್ನು ಜರ್ಮನಿ ಸರ್ಕಾರದ ಸಹಯೋಗದೊಂದಿಗೆ ಆರಂಭಿಸಿದ್ದೆ. ಇದರಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಇಂದು ವಿದೇಶದಲ್ಲಿ ನೆಲೆಸಿದ್ದಾರೆ. ನಾನೊಮ್ಮೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ವೇಳೆ ಕಲಬುರಗಿಯ ವಿದ್ಯಾರ್ಥಿ ಭೇಟಿಯಾಗಿದ್ದ. ಇಷ್ಟು ದೂರ ಏಕೆ ಬಂದೆ ಎಂದಾಗ ಐಟಿಐ ಕಲಿತಿದ್ದರಿಂದ ಇಲ್ಲಿ ಬಂದು ನೆಲೆಸಿದ್ದೇನೆ ಎಂದನು. ಕೆಕೆಆರ್‌ಡಿಬಿಯಿಂದ ಆರ್ಥಿಕ ನೆರವನ್ನು ಪಡೆದುಕೊಂಡು ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಕೇಂದ್ರ ಆರಂಭಿಸಬೇಕು. ಅಧಿಕಾರ ಇದ್ದಾಗಲೇ ಇದೆಲ್ಲವನ್ನೂ ಮಾಡಿ ಮುಗಿಸಬೇಕು. ಜನಪರವಾಗಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಚ್‌ಕೆಇ ಸಂಸ್ಥೆ ನೆಲೆಯೂರಲು ಅಂದು ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ಅವರ ಔದಾರ್ಯದ ಗುಣ ಕಾರಣ. ಹಿಂದುಳಿದ ಭಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು ಎಂಬ ಯೋಜನೆ ರೂಪಿಸಿದ ನಿಜಲಿಂಗಪ್ಪ ಅವರು ಕಲಬುರಗಿ, ಬೆಳಗಾವಿ, ದಾವಣಗೆರೆ ಹಾಗೂ ಮೈಸೂರುಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡಿದರು. ಇದರಿಂದಾಗಿಯೇ ತಾಂತ್ರಿಕ ಶಿಕ್ಷಣ ಕಲಬುರಗಿಯಂತಹ ಹಿಂದುಳಿದ ಜಿಲ್ಲೆಯ ಜನರಿಗೂ ಸಿಗುವಂತಾಯಿತು. ಎಚ್‌ಕೆಇ ಸಂಸ್ಥೆಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಓದಿರುವ ದಿನಗಳ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ವೈ.ಎಸ್. ರಾಜಶೇಖರರೆಡ್ಡಿ ಆಗಾಗ ನನ್ನ ಬಳಿ ಹೇಳುತ್ತಿದ್ದರು‘ ಎಂದು ಖರ್ಗೆ ಅವರು ಮೆಲುಕು ಹಾಕಿದರು.

‘ಕಲ್ಯಾಣ ಕರ್ನಾಟಕಕ್ಕೆ 371 (ಜೆ) ತರಲು ಸಾಕಷ್ಟು ಶ್ರಮ ಹಾಕಿದ್ದೇನೆ. ಅದರ ಪರಿಣಾಮವಾಗಿಯೇ 100 ವೈದ್ಯಕೀಯ ಸೀಟುಗಳ ಬದಲಾಗಿ ಇಂದು ಪ್ರತಿ ವರ್ಷ ಏಳು ಜಿಲ್ಲೆಗಳ ಮಕ್ಕಳಿಗೆ 1316 ವೈದ್ಯಕೀಯ ಸೀಟುಗಳು ಸರ್ಕಾರಿ ಕೋಟಾದಲ್ಲಿ ಸಿಗುತ್ತಿವೆ. 6902 ಎಂಜಿನಿಯರಿಂಗ್ ಸೀಟುಗಳು, 420 ದಂತ ವೈದ್ಯಕೀಯ ಸೀಟುಗಳು ಸಿಗುತ್ತಿವೆ. ಈ ಭಾಗಕ್ಕೆ 371(ಜೆ) ಬೇಡಿಕೆ ಇಟ್ಟಾಗ ಎನ್‌ಡಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಎಲ್‌.ಕೆ. ಅಡ್ವಾಣಿ ಅವರು ಆಗುವುದಿಲ್ಲ ಎಂದು ತಳ್ಳಿ ಹಾಕಿದ್ದರು. ಆದರೆ, ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿ ಅವರಿಗೆ ಮನವರಿಕೆ ಮಾಡಿಕೊಟ್ಟು ಈ ಬಗ್ಗೆ ಸಂಸತ್ತಿನಲ್ಲಿ ಅಂಗೀಕಾರಗೊಳಿಸುವಂತೆ ಮನವಿ ಮಾಡಿದ್ದೆವು‘ ಎಂದು ವಿವರಿಸಿದರು.

ಎಸ್‌ಎಸಿ ಕಟ್ಟಡದ ವಾಸ್ತುಶಿಲ್ಪಿಯೂ ಆದ ಎಚ್‌ಕೆಇ ಸೊಸೈಟಿ ನಿರ್ದೇಶಕ ಬಸವರಾಜ ಜೆ. ಖಂಡೇರಾವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಸತ್ಕರಿಸಿದರು.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಯು.ಬಿ. ವೆಂಕಟೇಶ, ಎಚ್‌ಕೆಇ ಸೊಸೈಟಿ ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರೆ, ಆಡಳಿತ ಮಂಡಳಿ ಸದಸ್ಯರಾದ ಮಹಾದೇವಪ್ಪ ರಾಂಪುರೆ, ಡಾ. ಎಸ್‌.ಬಿ. ಕಾಮರಡ್ಡಿ, ಅರುಣಕುಮಾರ ಪಾಟೀಲ, ರಜನೀಶ ವಾಲಿ, ವೀರೇಂದ್ರ ಪಾಟೀಲ, ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌.ಎಂ. ಪಾಟೀಲ ಇತರರು ವೇದಿಕೆಯಲ್ಲಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ವೈದ್ಯಕೀಯ ಸೀಟುಗಳು ದೊರೆಯುತ್ತಿವೆ. ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯುವುದು ನಮ್ಮ ಸರ್ಕಾರದ ಗುರಿ
ಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
‘ದಾನ ಮಾಡುವ ಗುಣ ಕಡಿಮೆ’
‘ಶಿರಸಂಗಿ ಲಿಂಗರಾಜರಂತಹ ಜಮೀನ್ದಾರರು ನಿಸ್ವಾರ್ಥದಿಂದ ಸಮಾಜದ ಶಿಕ್ಷಣಕ್ಕಾಗಿ ತಮ್ಮ ಆಸ್ತಿಯನ್ನು ದಾನ ಮಾಡಿದರು. ಹೀಗಾಗಿಯೇ ಇಂದು ಬೆಳಗಾವಿ ವಿಭಾಗದಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಬೆಳೆದು ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿವೆ. ಅಂತಹ ದಾನ ಮಾಡುವ ಗುಣ ನಮ್ಮಲ್ಲಿ ಕಡಿಮೆ ಇದೆ. ದಾನ ಮಾಡುವ ಬದಲು ಏನಾದರೂ ಕೊಂಡೊಯ್ಯಲು ಸಿಗುತ್ತದೆಯೇ ಎನ್ನುವವರೇ ಅಧಿಕ‘ ಎಂದು ಮಲ್ಲಿಕಾರ್ಜುನ ಖರ್ಗೆ ವಿಷಾದಿಸಿದರು. ಸಮಾಜ ಬೆಳೆಯುವುದೇ ದಾನಿಗಳಿಂದ. ಹೀಗಾಗಿ ಉದಾರವಾಗಿ ತಮ್ಮಲ್ಲಿರುವುದನ್ನು ದಾನ ಮಾಡಬೇಕು ಎಂದು ಸಲಹೆ ನೀಡಿದರು. ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಆ ಬಗ್ಗೆ ಶ್ಲಾಘಿಸುವ ಗುಣವೂ ಇಲ್ಲ. 371 (ಜೆ) ಬಂದಿದ್ದರಿಂದ ಪ್ರತಿ ವರ್ಷ ಈ ಭಾಗ ಅಭಿವೃದ್ಧಿಯಾಗುತ್ತಿದೆ. ಇಎಸ್‌ಐ ಆಸ್ಪತ್ರೆ ಇದ್ದುದರಿಂದ ಉತ್ತಮ ಚಿಕಿತ್ಸೆ ದೊರೆಯುವ ಜೊತೆಗೆ ಮೆಡಿಕಲ್ ಸೀಟುಗಳೂ ಸಿಕ್ಕಿವೆ. ಏನೋ ಒಂದು ಸರ್ಕಾರದಿಂದ ಬಂದಿದೆ ಎನ್ನುತ್ತಾರೆಯೇ ಹೊರತು ಅದನ್ನು ತರಲು ಎಷ್ಟು ಶ್ರಮ ಹಾಕಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ ಎಂದರು.
‘ಒಂದು ಅಂಕ ಕಡಿಮೆ ಬಂದಿದ್ದಕ್ಕೆ ಮಂತ್ರಿಯಾದೆ’
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ ವೇಳೆ ಡಿ.ಎಂ. ನಂಜುಂಡಪ್ಪ ಅವರು ವಿಭಾಗ ಮುಖ್ಯಸ್ಥರಾಗಿದ್ದರು. ನನಗೆ ಶೇ 59 ಅಂಕ ಬಂದಿತ್ತು. 60 ಕೊಟ್ಟಿದ್ದರೆ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿ ಯಾವುದೋ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುತ್ತಿದ್ದೆ. ಆದರೆ ಶೇ 59 ಅಂಕ ಬಂದಿದ್ದರಿಂದ ಕಾರ್ಮಿಕ ಸಂಘಟನೆ ನಾಯಕನಾದೆ. ನಂತರ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವನೂ ಆದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂದಿನ ದಿನಗಳನ್ನು ಮೆಲುಕು ಹಾಕಿದರು. ‘ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ನಂಜುಂಡಪ್ಪ ಅವರು ಯೋಜನಾ ವಿಭಾಗದ ಕಾರ್ಯದರ್ಶಿಯಾಗಿದ್ದರು. ಬ್ಯಾಕ್‌ಲಾಗ್ ಹುದ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವೇಳೆ ಅವರನ್ನು ಕರೆಸಿಕೊಂಡು ನನ್ನ ಗುರುತಿದೆಯೇ ಎಂದು ಕೇಳಿ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ. ನೀವು ಒಂದು ಅಂಕ ಹೆಚ್ಚು ಕೊಡದೇ ಇರುವುದಕ್ಕೆ ನಾನು ಮಂತ್ರಿಯಾದೆ ಎಂದು ಅವರಿಗೆ ನೆನಪಿಸಿದೆ’ ಎಂದು ಖರ್ಗೆ ಚಟಾಕಿ ಹಾರಿಸಿದರು.
ಕಾಲಮಿತಿಯಲ್ಲಿ ಮುಗಿಸಿದ್ದೇವೆ: ಬಿಲಗುಂದಿ
ಕಲಬುರಗಿಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರದ ನಿರ್ಮಾಣಕ್ಕೆ ನನ್ನ ಅಧಿಕಾರವಧಿಯಲ್ಲೇ ಶುರು ಮಾಡಿದ್ದೆ. ಇದೀಗ ಅವಧಿ ಮುಗಿಯುವುದರೊಳಗಾಗಿಯೇ ಪೂರ್ಣಗೊಳಿಸಿದ ತೃಪ್ತಿ ಇದೆ ಎಂದು ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಹೇಳಿದರು. ‘ಬೀದರ್‌ನಲ್ಲಿ ಸೈನಿಕ ಶಾಲೆ ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಸೊಸೈಟಿ ವತಿಯಿಂದ ಸಿಬಿಎಸ್‌ಇ ಶಾಲೆಯನ್ನು ಶೀಘ್ರ ಆರಂಭಿಸಲಾಗುವುದು. ಬೀದರ್ ರಾಯಚೂರಿನಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT