ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಹೋರಾಟ ಹತ್ತಿಕ್ಕುವ ಯತ್ನ: ಆರೋಪ

ಗಡಿನಾಡ ಕನ್ನಡಿಗರ ಮೇಲೆ ಮುಂದುವರೆದ ದಬ್ಬಾಳಿಕೆ: ಆರೋಪ
Last Updated 19 ಡಿಸೆಂಬರ್ 2022, 11:06 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕಕ್ಕೆ ಸೇರುವುದಾಗಿ ನಿರ್ಣಯ ಕೈಗೊಂಡ ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ ಮೇಲೆ ಅಲ್ಲಿನ ಜಿಲ್ಲಾಡಳಿತ ಒತ್ತಡ ಹಾಕಿ ನಿರ್ಣಯ ವಾಪಸ್‌ ಪಡೆದುಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ದೂರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ಗಡಿನಾಡ ಕನ್ನಡಿಗರಿಗೆ ಸೂಕ್ತ ಮೂಲಸೌಕರ್ಯ ಒದಗಿಸದಮಹಾರಾಷ್ಟ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಇಲ್ಲಿನ 11 ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರುವುದಾಗಿ ನಿರ್ಣಯ ಕೈಗೊಂಡು ಡಿ.5ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಲ್ಲಿನ ಜಿಲ್ಲಾಡಳಿತವು ಒತ್ತಾಯಪೂರ್ವಕವಾಗಿ ಕರ್ನಾಟಕಕ್ಕೆ ಸೇರುವ ನಿರ್ಣಯ ವಾಪಸ್‌ ಪಡೆದುಕೊಂಡಿದೆ. ಒಪ್ಪದಿದ್ದರೆ ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆ ಮಾಡುವ ಬೆದರಿಕೆ ಒಡ್ಡಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದೆ ಎಂದು ಅವರು ಆರೋಪಿಸಿದರು.

ಡಿಸೆಂಬರ್‌ 2ರಂದು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ 17 ಮಂದಿ ಕನ್ನಡಿಗರಿಗೆ ಡಿ.12ರಂದು ಅಕ್ಕಲಕೋಟದ ದಕ್ಷಿಣ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನೋಟಿಸ್‌ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು.

ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಿದ್ದರೆ ಇಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.ಕಾನೂನು ಸುವ್ಯವಸ್ಥೆಯಲ್ಲಿ ಗೊಂದಲ ನಿರ್ಮಾಣ ಆಗದಂತೆ ನೋಡಿಕೊಳ್ಳಬೇಕು. ನೀವು ಕೈಗೊಳ್ಳುವ ಆಂದೋಲನದ ಬಗ್ಗೆ ನಮಗೆ ತಿಳಿಸಿದೇ ಇದ್ದಲ್ಲಿ, ಇದರಿಂದ ಕಾನೂನು ಸುವ್ಯವಸ್ಥೆಯಲ್ಲಿ ಆಗುವ ತೊಂದರೆಗೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದರು.

ಮಹಾಜನ ಆಯೋಗದ ವರದಿಯ ಪ್ರಕಾರ ಅಕ್ಕಲಕೋಟದ ಜಿಲ್ಲೆಯ 134, ದಕ್ಷಿಣ ಸೋಲಾಪುರದ 65, ಜತ್‌ ಜಿಲ್ಲೆಯ 44 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕಿರುವುದರಿಂದ ಈ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಯಾವುದೇ ಮೂಲಸೌಕರ್ಯ ಕಲ್ಪಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಿಗರೇ ಆಗಿರುವ ಸೋಲಾಪುರ ಸಂಸದ ಡಾ.ಜೆ.ಸಿದ್ದೇಶ್ವರ ಸ್ವಾಮೀಜಿ, ಅಕ್ಕಲಕೋಟೆ ಶಾಸಕ ಸಚಿನ್‌ ಕಲ್ಯಾಣ ಶೆಟ್ಟಿ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಕರ್ನಾಟಕದ ಯಾವೊಬ್ಬ ಸಚಿವರು ಹಾಗೂ ಶಾಸಕರೂ ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಲಕ್ಷ್ಯ; ಮುಚ್ಚಿದ 48 ಶಾಲೆಗಳು

ಮಹಾರಾಷ್ಟ್ರ ಗಡಿಯಲ್ಲಿ 2005ರಲ್ಲಿ ಸುಮಾರು 120ಕ್ಕೆ ಹೆಚ್ಚು ಕನ್ನಡ ಶಾಲೆಗಳಿದ್ದು, ಅವುಗಳ ಪೈಕಿ ಈಗ ಕೇವಲ 72 ಶಾಲೆಗಳು ಮಾತ್ರ ಉಳಿದುಕೊಂಡಿವೆ. ಅಗತ್ಯ ಸೌಕರ್ಯ ಕಲ್ಪಿಸದ ಕಾರಣ 48 ಶಾಲೆಗಳು ಮುಚ್ಚಿವೆ ಎಂದು ಸೋಮಶೇಖರ ಜಮಶೆಟ್ಟಿ ಹೇಳಿದರು.

ಕನ್ನಡ ಶಾಲೆಗಳಲ್ಲಿ ಇಂದಿಗೂ ಶಿಕ್ಷಕರ ಕೊರತೆ ಇದೆ. ಅಲ್ಲದೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಅಂಗನವಾಡಿಗಳಲ್ಲಿ ಶಿಕ್ಷಕರಿಗೆ ಕನ್ನಡ ಗೊತ್ತಿದ್ದರೂ ಕನ್ನಡ ಕಲಿಸುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ಅಂಗನವಾಡಿಯಿಂದಲೇ ಕನ್ನಡವನ್ನು ಅಳಿಸುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ವಿರೋಧಿ ವಿರೋಧಿ ನಡೆ

ಮಹಾರಾಷ್ಟ್ರ ಪೊಲೀಸರ ಗೂಂಡಾಗಿರಿಯ ಪ್ರವೃತ್ತಿ, ದಬ್ಬಾಳಿಕೆಯು ಖಂಡನೀಯ. ಗಡಿನಾಡ ಕನ್ನಡಿಗರ ಸಮಸ್ಯೆ ಬಗೆಹರಿಸಿದ ಅಲ್ಲಿನ ಜಿಲ್ಲಾಡಳಿತದ ಕ್ರಮವು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ. ಜನರ ಸಂವಿಧಾನಬದ್ಧ ಹಕ್ಕುಗಳ ನಿರಾಕರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ ಹೇಳಿದರು.

ಮರಾಠಿ ಭಾಷಿಕರ ಬಗ್ಗೆ ನಾವು ಯಾವುದೇ ಸೇಡು, ದ್ವೇಷಭಾವನೆ ಹೊಂದಿಲ್ಲ. ಅವರನ್ನು ಕನ್ನಡಿಗರು ಸಹೋದರಂತೆ ನಡೆಸಿಕೊಳ್ಳುತ್ತಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಅವರ ಅಭಿವೃದ್ಧಿಗೆ ಶ್ರಮಿಸಿದಂತೆ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಅಭಿವೃದ್ಧಿಗಾಗಿ ಅಲ್ಲಿನ ಸರ್ಕಾರ ಬಸವೇಶ್ವರರ ಹೆಸರಿನಲ್ಲಿ ವೀರಶೈವ–ಲಿಂಗಾಯತ ನಿಗಮ ಸ್ಥಾಪಿಸಬೇಕು. ಅಲ್ಲದೇ ಕನ್ನಡಿಗರ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಗಡಿನಾಡ ಕನ್ನಡಿಗರ ನಿರ್ಲಕ್ಷ್ಯ ಹಾಗೂ ಅವರ ಕುರಿತು ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರುಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕು ಹಾಗೂ ಇತರೆ ಪಕ್ಷಗಳು ಅವರಿಗೆ ದನಿಗೂಡಿಸಬೇಕು. ಒಂದು ವೇಳೆ ಚರ್ಚೆ ಆಗದಿದ್ದರೆ 8 ದಿನಗಳ ಬಳಿಕ ಬೆಳಗಾವಿಯಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT