ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ನಡೆಸುವಲ್ಲಿ ಕಾಂಗ್ರೆಸ್‌ ವಿಫಲ: ರಾಜ್ಯ ಸರ್ಕಾರದ ಡಾ.ಸುಧಾ ಹಾಲಕಾಯಿ ಆಕ್ರೋಶ

Published 20 ಮೇ 2024, 14:25 IST
Last Updated 20 ಮೇ 2024, 14:25 IST
ಅಕ್ಷರ ಗಾತ್ರ

ಕಲಬುರಗಿ: ‘ಹಲವು ಭರವಸೆ ನೀಡಿ ಬಹುಮತದಿಂದ ಅಧಿಕಾರಕ್ಕೇರಿದ ಕಾಂಗ್ರೆಸ್‌ ಪಕ್ಷ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯೆ ಡಾ. ಸುಧಾ ಹಾಲಕಾಯಿ ಟೀಕಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಶಿಕ್ಷಣ ಕ್ಷೇತ್ರದ ಗೊಂದಲ ಮುಂದುವರಿದಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕುಸಿದಿದೆ. ಸಿಇಟಿಯಲ್ಲಿ ಪಠ್ಯದಿಂದ ಹೊರತಾದ ಪ್ರಶ್ನೆಗಳನ್ನು ಕೇಳಿ ಅಧ್ವಾನ ಮಾಡಲಾಯಿತು. ಒಟ್ಟಾರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಅಧಿಕಾರ ನಡೆಸಲು ಶೇ 10ರಷ್ಟೂ ಅರ್ಹತೆ ಇಲ್ಲ. ಎ,ಬಿ,ಸಿ ಗ್ರೇಡ್‌ಗಳನ್ನು ಬಿಡಿ, ಎಲ್ಲ ರಂಗಗಳಲ್ಲೂ ಸಂಪೂರ್ಣವಾಗಿ ವಿಫಲವಾಗುವ ಮೂಲಕ ಅವರ ಸರ್ಕಾರ ಒಂದು ವರ್ಷದಲ್ಲಿ ಋಣಾತ್ಮಕ ಅಂಕಗಳನ್ನು ಪಡೆದಿದೆ’ ಎಂದು ಲೇವಡಿ ಮಾಡಿದರು.

‘ಗ್ಯಾರಂಟಿ ಯೋಜನೆಗಳಿಗೆ ಗಮನ ನೀಡುತ್ತಿರುವ ಸರ್ಕಾರ ಅಭಿವೃದ್ಧಿಯನ್ನು ಮರೆತಿದೆ. ಕಳೆದೊಂದು ವರ್ಷದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳವಳಕಾರಿ ಮಟ್ಟಕ್ಕೆ ಕುಸಿದಿದೆ. ಕಲ್ಯಾಣ ಭಾಗದ ಜಿಲ್ಲೆಗಳಂತೂ ಕೊನೆಯ ಸ್ಥಾನಕ್ಕೆ ತಲುಪಿವೆ. ಇದಕ್ಕೆಲ್ಲ ಯಾರು ಹೊಣೆ? ಸಮೀಕ್ಷೆಗಳು, ಅಧ್ಯಯನಗಳ ಫಲವಾಗಿ ಜಾರಿಗೊಳಿಸಿದ ಎನ್‌ಇಪಿಯನ್ನು ಕಾಂಗ್ರೆಸ್‌ ಸರ್ಕಾರ ಸೇಡಿನ ರಾಜಕಾರಣ ಮಾಡಿ ತೆಗೆದುಹಾಕಿ, ರಾಜ್ಯದ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿತು. ಅದರ ಫಲವೇ ಈ ಫಲಿತಾಂಶ’ ಎಂದು ಆರೋಪಿಸಿದರು.

‘ಸರ್ಕಾರ ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಿದ್ದು, ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಹೀಗಾಗಿ ಯಾವುದೇ ಸಮಸ್ಯೆಗೂ ನಾವು ಅಧಿಕಾರಿಗಳನ್ನು ಟೀಕಿಸದಂತೆ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಅಲ್ಲದೇ, ‘ಮುಂದಿನ ಚುನಾವಣೆಗಳಲ್ಲಿ ಜನರು ಜಾಗೃತರಾಗಿ ಮತಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜುಗೌಡ ಎನ್‌., ಗಿರಿರಾಜ ಎಸ್‌.ವೈ., ಜ್ಯೋತಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ’

ಕೋಟನೂರು(ಡಿ) ಗ್ರಾಮದಲ್ಲಿ ನಡೆದ ದಾಳಿ ಘಟನೆಯ ಸಂತ್ರಸ್ತರ ಕುಟುಂಬದ ಸದಸ್ಯೆ ಕವಿತಾ ಪಾಟೀಲ ಮಾತನಾಡಿ ‘ಪ್ರಕರಣದ ಪ್ರಮುಖ ಆರೋಪಿಗಳಾದ ದಿನೇಶ ದೊಡ್ಡಮನಿ ಶ್ರೀನಿವಾಸ ದೊಡ್ಡಮನಿ ಅವರನ್ನು ಈತನಕ ಆರೋಪಿ 1 ಆರೋಪಿ 2 ಎಂದು ಗುರುತಿಸಿಲ್ಲ. ಈತನಕ ಅವರ ಬಂಧನವೂ ಆಗಿಲ್ಲ. ಕೂಡಲೇ ಇಬ್ಬರನ್ನೂ ಬಂಧಿಸಬೇಕು’ ಎಂದು ಆಗ್ರಹಿಸಿದರು. ಅಲ್ಲದೇ ‘ಈತನಕ ನಮಗೆ ನಮ್ಮ ಆಟೊವನ್ನೂ ಮರಳಿಸಿಲ್ಲ ಅದನ್ನು ಮರಳಿಸಬೇಕು. ಕೇವಲ ಹಲ್ಲೆ ಘಟನೆಯನ್ನು ಮಾತ್ರವೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಅದರೊಂದಿಗೆ ಜನವರಿ 23ರ ಘಟನೆಯನ್ನೂ ಸೇರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು. ಸಂತ್ರಸ್ತರ ಕುಟುಂಬದ ಮತ್ತೊಬ್ಬ ಸದಸ್ಯೆ ಪ್ರಿಯಾಂಕಾ ಪಾಟೀಲ ‘ಆರೋಪಿಗಳನ್ನು ವಶಕ್ಕೆ ಪಡೆಯುವ ಮುನ್ನವೇ ಅವರಿಗೆ ಜಾಮೀನು ಹೇಗೆ ಸಿಗುತ್ತದೆ? ಪೊಲೀಸರು ರಾಜಕಾರಣಿಗಳ ಬೆಂಬಲ ಇರುವ ಕಾರಣ ಆರೋಪಿಗಳು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT