ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ₹35ಕ್ಕೆ ಊಟ ಕೊಡುವ ಸ್ವಾಮಿ ಖಾನಾವಳಿ!

ಗಂಜ್‌ ಪ್ರದೇಶಕ್ಕೆ ಬರುವ ರೈತರು, ಕೂಲಿಕಾರ್ಮಿಕರೇ ಮುಖ್ಯ ಗ್ರಾಹಕರು
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 22 ಫೆಬ್ರುವರಿ 2024, 4:37 IST
Last Updated 22 ಫೆಬ್ರುವರಿ 2024, 4:37 IST
ಅಕ್ಷರ ಗಾತ್ರ

ಕಲಬುರಗಿ: ಎರಡು ಚಪಾತಿ ಅಥವಾ ರೊಟ್ಟಿ, ಎರಡು ತರಹದ ಪಲ್ಯ, ಶೇಂಗಾ ಹಿಂಡಿ, 1 ಕಪ್‌ ಮಜ್ಜಿಗೆ, ಅನ್ನ, ಸಾಂಬಾರು ಊಟಕ್ಕೆ ₹35 ಮಾತ್ರ!

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಊಟದ ದರ ಕೇಳಿ ಆಶ್ಚರ್ಯವಾದರೂ ಸತ್ಯ. ಇಲ್ಲಿನ ಗಂಜ್‌ ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸ್ವಾಮಿ ಖಾನಾವಳಿಯಲ್ಲಿ ₹35ಕ್ಕೆ ಊಟ ದೊರೆಯುತ್ತದೆ. ಮಧ್ಯಾಹ್ನ 1ರಿಂದ 3.30ರವರೆಗೆ ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆ ಆಗುತ್ತಿದ್ದಂತೆ ಗ್ರಾಹಕರು ಜಮಾಯಿಸುತ್ತಾರೆ.

ಮುದ್ದಾ ಟ್ರೇಡರ್ಸ್ ಎದುರುಗಡೆ ಸ್ವಾಮಿ ಖಾನಾವಳಿ ಇದೆ. 100 ಮೀಟರ್‌ ಅಂತರದಲ್ಲಿರುವ ದಾನೇಶ್ವರಿ ಟ್ರೇಡಿಂಗ್‌ ಕಂಪನಿ ಎದುರು ಟಂಟಂನಲ್ಲಿ ಇದೇ ದರಕ್ಕೆ ಪಾರ್ಸೆಲ್‌ ಕೂಡ ಕೊಡಲಾಗುತ್ತದೆ. ಖಾನಾವಳಿಯಲ್ಲಿ ಪ್ರತಿದಿನ 100 ಊಟ ಖರ್ಚಾದರೆ, ಟಂಟಂನಲ್ಲಿ 200 ಊಟ ಪಾರ್ಸೆಲ್‌ ನೀಡಲಾಗುತ್ತದೆ.

ಮಾರುಕಟ್ಟೆ ಪ್ರದೇಶದಲ್ಲಿ 8 ವರ್ಷಗಳ ಹಿಂದೆ ರೊಟ್ಟಿ ಮಹಾದೇವಿ ಅವರು ಸ್ವಾಮಿ ಖಾನಾವಳಿ ಆರಂಭಿಸಿದ್ದಾರೆ. ಅವರ ಪುತ್ರ ಮಲ್ಲಿಕಾರ್ಜುನ ನಂದಿಕೋಲಮಠ ಮುನ್ನಡೆಸುತ್ತಿದ್ದಾರೆ. ಖಾನಾವಳಿ ಇಕ್ಕಟ್ಟಾಗಿದ್ದರೂ ಕೆಳಗಡೆ ಸ್ಟೂಲ್‌ ಮೇಲೆ ಮತ್ತು ಅಟ್ಟದ ಮೇಲೆ ಕುಳಿತು ಊಟ ಮಾಡಬಹುದು. ಭಾನುವಾರ ಸೇರಿದಂತೆ ಎಪಿಎಂಸಿ ರಜಾ ದಿನಗಳಲ್ಲಿ ಬಂದ್‌ ಇರುತ್ತದೆ.

ಖಾನಾವಳಿಗೆ ಯಾವುದೇ ಬೋರ್ಡ್‌ ಇಲ್ಲದಿದ್ದರೂ ಸಾಕಷ್ಟು ಖ್ಯಾತಿ ಹೊಂದಿದೆ. ಗಂಜ್‌ ಪ್ರದೇಶಕ್ಕೆ ಹಳ್ಳಿಗಳಿಂದ ಬರುವ ರೈತರು, ಕೂಲಿಕಾರ್ಮಿರು, ಗ್ಯಾರೇಜ್‌ ಕಾರ್ಮಿಕರು, ಆಟೊ ಚಾಲಕರೇ ಮುಖ್ಯ ಗ್ರಾಹಕರು. ಅತ್ಯಂತ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಮನದುಂಬಿ ಹರಸುತ್ತಾರೆ.

‘ಬೇರೆ ಖಾನಾವಳಿಗಳಲ್ಲಿ ಸಾಮಾನ್ಯವಾಗಿ ಒಂದು ಊಟಕ್ಕೆ ₹70ರಿಂದ ₹100 ದರ ಇದೆ. ಸ್ವಾಮಿ ಖಾನಾವಳಿಗೆ 6–7 ವರ್ಷಗಳಿಂದ ಬರುತ್ತಿದ್ದೇವೆ. ಮನೆಯ ಊಟದಂತೆ ಅಡುಗೆ ರುಚಿಯಾಗಿರುತ್ತದೆ’ ಎಂದು ಊಟ ಸವಿಯುತ್ತಿದ್ದ ಕಾಶಿರಾಯ ಗುಂಡಪ್ಪ, ಅಭಿಷೇಕ ಮರತೂರಕರ್‌, ಜಿತೇಂದ್ರ ಹೇಳಿದರು.

‘ನನ್ನಮ್ಮ ಕಣ್ಣಿ ಮಾರುಕಟ್ಟೆಯಿಂದ ತರಕಾರಿ ತಂದರೆ, ನಾನು ಎಪಿಎಂಸಿಯಿಂದ ಜೋಳ, ಗೋಧಿ, ಅಕ್ಕಿ ಮತ್ತು ಕಾಳುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಅಜ್ಜಿ, ಅಮ್ಮ, ಪತ್ನಿ ಖಾನಾವಳಿ ನಡೆಸಲು ನೆರವಾಗುತ್ತಾರೆ. ಮಾಣಿಕೇಶ್ವರಿ ಕಾಲೊನಿಯಲ್ಲಿ ರೊಟ್ಟಿ ಕೇಂದ್ರವೂ ಇದೆ. 7ನೇ ತರಗತಿ ನಂತರ ವಿದ್ಯೆ ತಲೆಗೆ ಹತ್ತಲಿಲ್ಲ. ಸರ್ಕಾರಿ ನೌಕರಿ ಗಗನ ಕುಸುಮ. ಬಡತನ ಬೇರೆ. ಆದರೆ, ಜೀವನ ಸಾಗಿಸಲು ಕೆಲಸ ಬೇಕೇಬೇಕು. ಹಾಗಾಗಿ, ಸ್ವಯಂ ಉದ್ಯೋಗ ಕಂಡುಕೊಂಡಿದ್ದೇನೆ. ನಾಲ್ಕು ಜನರಿಗೆ ಕೆಲಸ ಕೊಟ್ಟಿರುವ ಖುಷಿ ಕೂಡ ಇದೆ’ ಎಂದು ಮಲ್ಲಿಕಾರ್ಜುನ ನಂದಿಕೋಲಮಠ ಹೇಳುತ್ತಾರೆ. ಸಂಪರ್ಕಕ್ಕೆ ಮೊ:9148910909.

ಕಲಬುರಗಿಯ ಗಂಜ್‌ ಪ್ರದೇಶದಲ್ಲಿ ಸ್ವಾಮಿ ಖಾನಾವಳಿಯಿಂದ ಟಂಟಂನಲ್ಲಿ ಊಟ ಪಾರ್ಸೆಲ್‌ ಕೊಡುತ್ತಿರುವ ಮಲ್ಲಿಕಾರ್ಜುನ ನಂದಿಕೋಲಮಠ
ಕಲಬುರಗಿಯ ಗಂಜ್‌ ಪ್ರದೇಶದಲ್ಲಿ ಸ್ವಾಮಿ ಖಾನಾವಳಿಯಿಂದ ಟಂಟಂನಲ್ಲಿ ಊಟ ಪಾರ್ಸೆಲ್‌ ಕೊಡುತ್ತಿರುವ ಮಲ್ಲಿಕಾರ್ಜುನ ನಂದಿಕೋಲಮಠ

ನಾವು ಬೇರೆಯವರಿಗೆ ಸಹಾಯ ಮಾಡಿದರೆ ದೇವರು ನಮಗೆ ಯಾವುದೋ ರೂಪದಲ್ಲಿ ಕೈಹಿಡಿದು ನಡೆಸುತ್ತಾನೆ ಎಂಬ ನಂಬಿಕೆ ಇದೆ. ಖಾನಾವಳಿಯಿಂದ ನಷ್ಟವೇನೂ ಇಲ್ಲ. ದಿನಗೂಲಿಯಂತು ಸಿಗುತ್ತದೆ.

–ಮಲ್ಲಿಕಾರ್ಜುನ ನಂದಿಕೋಲಮಠ ಸ್ವಾಮಿ ಖಾನಾವಳಿ

ಪ್ರತಿದಿನ ₹35 ಕೊಟ್ಟು ಊಟ ಪಾರ್ಸೆಲ್‌ ತೆಗೆದುಕೊಳ್ಳುತ್ತೇನೆ. ಈಗಿನ ದಿನಗಳಲ್ಲಿ ಕಡಿಮೆ ದರದಲ್ಲಿ ಒಳ್ಳೆಯ ಊಟ ಸಿಗುವುದು ಕಷ್ಟ. ನನ್ನಂತಹ ಎಷ್ಟೋ ಜನರಿಗೆ ಸ್ವಾಮಿ ಖಾನಾವಳಿ ಆಸರೆಯಾಗಿದೆ.

–ಶಾಂತಾಬಾಯಿ ಚಿಂಚನಸೂರ

ಸ್ವಾಮೀಜಿ ಮಾತು ಪ್ರೇರಣೆ

‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಮುಂದುವರಿಸಿ ಎಂದು ಜೇವರ್ಗಿ ತಾಲ್ಲೂಕಿನ ಬಿಳವಾರದ ಲಿಂ.ವಿಶ್ವನಾಥ ಸ್ವಾಮೀಜಿ ಹೇಳಿದ್ದರು. ಅವರ ಮಾತೇ ನಮಗೆ ಪ್ರೇರಣೆ. ಈ ಮೊದಲು ₹30ಕ್ಕೆ ಊಟ ಕೊಡುತ್ತಿದ್ದೆವು. ಇತ್ತೀಚೆಗೆ ಅಕ್ಕಿ ದರ ಹೆಚ್ಚಾಗಿದ್ದರಿಂದ ದೀಪಾವಳಿಯಿಂದ ₹5 ಹೆಚ್ಚಿಸಿದ್ದೇವೆ’ ಎಂದು ಮಲ್ಲಿಕಾರ್ಜುನ ನಂದಿಕೋಲಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT