ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ತನಾರತಿ ಉತ್ಸವವು ಸಹಸ್ರಾರು ಭಕ್ತರ ಮಧ್ಯೆ ಭಕ್ತಿ ಭಾವದಿಂದ ನೆರವೇರಿತು.
ಅಕ್ಷಯತದಿಗೆ ಅಮಾವಾಸ್ಯೆಯ ಅಂಗವಾಗಿ ಕೋರಿಸಿದ್ದೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಮಾಡಲಾಯಿತು. ಪೀಠಾಧಿಪತಿ ಸಿದ್ದತೋಟೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಹಲವು ಮಠಾಧೀಶರ ಸಮ್ಮುಖದಲ್ಲಿ ಮಾಸಿಕ ಶಿವಾನುಭವ ಚಿಂತನ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗುರುವಾರ ಬೆಳಿಗ್ಗೆ ಸಿದ್ದತೋಟೇಂದ್ರ ಶಿವಾಚಾರ್ಯರು ಪಾರಂಪರಿಕ ಉಡುಪು ಧರಿಸಿ ತನಾರತಿ ಉತ್ಸವದ ನೇತೃತ್ವ ವಹಿಸಿದ್ದರು. ಪುರವಂತಿಕೆ, ಪೂರ್ಣಕುಂಭ, ಬಾಜಾ-ಭಜಂತ್ರಿ, ವೈದಿಕರ ವೇದಘೋಷಗಳೊಂದಿಗೆ ಮಧ್ಯರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದ ವರೆಗೂ ನಡೆಯಿತು.
ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿದ ಭಕ್ತರು, ಗೋಧಿ ಹಿಟ್ಟಿನಿಂದ ಸಿದ್ಧಪಡಿಸಿದ ದೀಪಗಳನ್ನು ತಲೆಯ ಮೇಲೆ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸಿ ಪುನೀತರಾದರು.