ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸೂರ್ಯನ ಪ್ರ‘ತಾಪ’ಕ್ಕೆ ಜನ ಕಂಗಾಲು

Published 1 ಏಪ್ರಿಲ್ 2024, 5:31 IST
Last Updated 1 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ಕಲಬುರಗಿ: ನೆತ್ತಿ ಸುಡುವ ರಣ ಬಿಸಿಲಿನ ಝಳಕ್ಕೆ ತೊಗರಿ ಕಣಜ ಅಕ್ಷರಶಃ ಬೆಂಕಿ ಉಂಡೆಯಂತಾಗುತ್ತಿದೆ. ಬೆಳಿಗ್ಗೆ 9 ಗಂಟೆ ಆಗುತ್ತಲೇ ರಸ್ತೆಗಳು, ಮನೆಯ ಗೋಡೆ, ಚಾವಣಿಗಳು ರೊಟ್ಟಿ ‘ಸುಡುವ’ ಹೆಂಚಿನಂತೆ ಕಾಯುತ್ತವೆ. ಮನೆಯಿಂದ ಹೊರಹೋದರೆ ಅಸಹನೀಯ ಶಾಖ, ಮನೆಯಲ್ಲೇ ಉಳಿದರೆ ದಳದಳ ಇಳಿಯುವ ಬೆವರು. ಸೂರ್ಯನ ಪ್ರಖರ ಶಾಖ ಜನರ ಸಹಜ ಜೀವನ ಶೈಲಿಗೆ ಸೂರ್ಯಾಘಾತದಂತಹ (ಸನ್‌ಸ್ಟ್ರೋಕ್‌) ಹೊಡೆತ ಕೊಡುತ್ತಿದೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ 40ರಿಂದ 43 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡುಬಂದಿದ್ದರಿಂದ ಖಡಕ್ ಬಿಸಿಲು ಆವರಿಸಿದೆ. ಇದಕ್ಕೆ ಜನ– ಜಾನುವಾರು ತತ್ತರಿಸಿವೆ. ಜನರು ರಸ್ತೆಯ ಮೇಲೆ ಬೆವರುತ್ತ, ಕೆಂಡದಂತಹ ಬಿಸಿಲಿನ ಝಳಕ್ಕೆ ಹೈರಾಣಾಗುತ್ತಲೇ ಓಡಾಡುತ್ತಿದ್ದಾರೆ. ಮರಗಳೇ ಇಲ್ಲದೆ ‘ಕಾಂಕ್ರಿಟ್‌ ಕಲಬುರಗಿ ಸಿಟಿ’ ಎಲ್ಲಿ ಮುಟ್ಟಿದರೂ ಕಾದ ಹೆಂಚು ಮುಟ್ಟಿದ ಅನುಭವವಾಗುತ್ತದೆ.

ಇಡೀ ಜಿಲ್ಲೆ ಕೂಲಿ ಕಾರ್ಮಿಕರು, ಶ್ರಮಿಕ ವರ್ಗದವರಿಂದ ತುಂಬಿದೆ. ಹೀಗಾಗಿ, ಜನರು ಅನಿವಾರ್ಯವಾಗಿ ಖಡಕ್‌ ಬಿಸಿಲಿನಲ್ಲಿ ತಮ್ಮ ಕೆಲಸಗಳಿಗೆ ಓಡಾಡುತ್ತಿದ್ದಾರೆ. ಬಸ್, ರೈಲು, ಕಾರು, ಸರಕು ವಾಹನಗಳು, ಮನೆಗಳ ಹಾಗೂ ಮಳಿಗೆಗಳ ಕಟ್ಟಡಗಳು ತಾಪದ ಪ್ರತಾಪಕ್ಕೆ ಕೆಂಡವಾಗುತ್ತಿವೆ. ಬಿಸಿಲಿನ ಪ್ರಕೋಪ ಮನುಷ್ಯರಿಗೆ ಅಲ್ಲದೇ, ಪ್ರಾಣಿ ಮತ್ತು ಪಕ್ಷಿಗಳಿಗೂ ತಟ್ಟಿದೆ.

‘ಸೂರ್ಯನ ಪ್ರತಾಪದಿಂದ ಪಾರಾಗುವ ಸದ್ಯ ಯಾವುದೇ ಮಾರ್ಗಗಳು ಇಲ್ಲ. ಆದರೆ, ಜನದಟ್ಟಣೆಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್ ಸರ್ಕಲ್, ಖರ್ಗೆ ಸರ್ಕಲ್‌, ಅನ್ನಪೂರ್ಣಾ ಕ್ರಾಸ್‌, ಆಳಂದ ನಾಕಾ, ಮುಸ್ಲಿಂ ಚೌಕ್, ಹುಮನಾಬಾದ್‌ ಸರ್ಕಲ್, ಶಹಾಬಾದ್‌ ರಿಂಗ್‌ ರೋಡ್‌ ಸರ್ಕಲ್‌, ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ ಮತ್ತು ಅಪ್ಪನ ಗುಡಿ ರಸ್ತೆಗಳಲ್ಲಿ ಸಂಜೆ ನೀರು ಚೆಲ್ಲಿದರೆ ಒಂದಿಷ್ಟು ತಂಪಾದ ನೆಲದಲ್ಲಿ ಓಡಾಡಬಹುದು’ ಎನ್ನುತ್ತಾರೆ ಪಾದಚಾರಿ ಪೃಥ್ವಿ ಎಸ್‌. ಪಾಟೀಲ.

ಸಂಜೆ 6ರ ನಂತರ ಸೂರ್ಯ ಮರೆಯಾಗುತ್ತಾನೆ. ಆ ಬಳಿಕ ಬಿಸಿಲು ಕಡಿಮೆಯಾದರೂ ಝಳ ಮಾತ್ರ ರಾತ್ರಿ 12 ಗಂಟೆಯಾದರೂ ತಗ್ಗುವುದೇ ಇಲ್ಲ. ಹಗಲಿನಲ್ಲಿ ಬೆವರಲ್ಲಿ ಸ್ನಾನ ಮಾಡಿ, ಪ್ರಖರ ಶಾಖಕ್ಕೆ ಬಸವಳಿಯುವ ಜನರು, ರಾತ್ರಿಯ ಝಳಕ್ಕೂ ಪರಿತಪಿಸುತ್ತಿದ್ದಾರೆ. ಮುಂಗಾರು ಆರಂಭವಾಗಲು ಇನ್ನೂ ಸುಮಾರು 70 ದಿನಗಳು ಬಾಕಿ ಇವೆ. ಆದರೆ, ಶಾಖದ ಅಲೆಗಳು (ಹೀಟ್‌ ವೇವ್) ‘ಸುನಾಮಿ’ಯಂತೆ ಅಪ್ಪಳಿಸುತ್ತಿವೆ.

ಬದಲಾಗದ ಸಮಯ: ಕೆಲ ವರ್ಷಗಳಿಂದೀಚೆಗೆ ಜಿಲ್ಲಾಡಳಿತವು ಬೇಸಿಗೆ ಮುಗಿಯುವ ತನಕ ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿತ್ತು. ಆದರೆ, ಚುನಾವಣೆ ಕಾರಣಕ್ಕೆ ಎಂದಿನಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಬೇಕಿದೆ. ತೀವ್ರ ಸೆಕೆಯ ಮಧ್ಯೆಯೇ ಸಿಬ್ಬಂದಿ ಕೆಲಸ ಮಾಡುವುದು ಅನಿವಾರ್ಯವಿದೆ.

ಅತಿಯಾದ ಉಷ್ಣತೆಯಿಂದ ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು, ಕೈ–ಕಾಲು ಮತ್ತು ಮೊಣಕಾಲು ಊತ, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವುದು, ಸುಸ್ತು, ವಾಕರಿಕೆ, ತಲೆ ನೋವು, ಏರು ಗತಿಯ ಉಸಿರಾಟ, ಹಳದಿ ಬಣ್ಣದ ಮೂತ್ರ, ಅತಿಯಾದ ಬಾಯಾರಿಕೆ ಸೇರಿದಂತೆ ಇತರೆ ಸಮಸ್ಯೆಗಳು ಆಗಬಹುದು. ಹೀಗಾಗಿ, ಈ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಿದೆ ಜಿಲ್ಲಾಡಳಿತ.

‘ಜೂನ್‌ವರೆಗೆ ಮುಂದುವರಿಯುತ್ತೆ’

‘ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಬರಬೇಕಿದ್ದ ತಾಪಮಾನ ಈ ವರ್ಷ ಮಾರ್ಚ್‌ನಲ್ಲಿ ಬಂದಿದೆ. ಜಾಗತಿಕ ತಾಪಮಾನದ ವೈಪರೀತ್ಯ ಹಾಗೂ ಎಲ್‌ ನಿನೊ ವಿದ್ಯಾಮಾನದ ಪ್ರಭಾವವೇ ಇದಕ್ಕೆ ಮುಖ್ಯ ಕಾರಣ. ತಾಪಮಾನದ ಏರಿಕೆಯು ಜೂನ್ ತಿಂಗಳವರೆಗೆ ಮುಂದುವರಿಯಲಿದೆ’ ಎಂದು ಬೀದರ್‌ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಈ ಅವಧಿ ವೇಳೆಗೆ ಕಲಬುರಗಿಯಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಕೆಲವೇ ಕಡೆ ಮಾತ್ರ ಬಹಳ ಕಡಿಮೆ ಮಳೆ ಬಿದ್ದಿದೆ. ಇದು ಸಹ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಏಪ್ರಿಲ್‌ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅಕಾಲಿಕ ಮಳೆ ಬರಬಹುದು ಅಥವಾ ಬಾರದೆಯೂ ಇರಬಹುದು’ ಎಂದರು.

‘ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನೆರಳು ಮಾಡಿ’

ಬಿರು ಬಿಸಿಲಿನಿಂದ ವಾಹನ ಸವಾರರಿಗೆ ರಕ್ಷಣೆ ನೀಡಲು ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ಮಹಾನಗರ ಪಾಲಿಕೆಯು ಚಪ್ಪರದ ವ್ಯವಸ್ಥೆ ಮಾಡಬೇಕು ಎಂಬುದು ವಾಹನ ಸವಾರರ ಕೂಗು.

‘ಏರುತ್ತಿರುವ ಶಾಖದಿಂದ ಪರದಾಡುವಂತೆ ಆಗಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಒಂದೂವರೆ ನಿಮಿಷ ಚುರುಗುಟ್ಟುವ ಬಿಸಿಲನ್ನು ಅನುಭವಿಸುತ್ತಿದ್ದೇವೆ. ಪ್ರಮುಖ ವೃತ್ತ, ಚೌಕ್‌ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹಸಿರು ಹೊದಿಕೆ ಹಾಕಿ ಜನರಿಗೆ ನೆರಳು ಒದಗಿಸಬೇಕು’ ಎನ್ನುತ್ತಾರೆ ಬೈಕ್ ಸವಾರ ಮಹೇಶ್‌ ಕುಮಾರ್.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ, ‘ಎಲ್ಲ ವೃತ್ತ, ಸಿಗ್ನಲ್‌ಗಳಲ್ಲಿ ಹಸಿರು ಪರದೆ ಅಳವಡಿಸುವುದು ಪ್ರಸ್ತುತ ಸಾಧ್ಯವಿಲ್ಲ. ಆದರೆ, ಮುಂದಿನ ವರ್ಷ ಪ್ರತಿ ವೃತ್ತದಲ್ಲಿ ಸಸಿಗಳನ್ನು ನೆಡುತ್ತೇವೆ. ರಸ್ತೆಗಳು ಮತ್ತು ವೃತ್ತಗಳಲ್ಲಿ ಸಂಜೆ ನೀರು ಹಾಕಲಾಗುವುದು’ ಎಂದರು.

‘ಕೆಲಸದ ಅವಧಿ ಬದಲಾಯಿಸಿ’

‘ಜಿಲ್ಲೆಯಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದು, ನಿತ್ಯ ದುಡಿದು ಹೊಟ್ಟೆ ಹೊರುವುದು ಅನಿವಾರ್ಯ. ಹೀಗಾಗಿ, ಬೇಸಿಗೆಯಲ್ಲಿ ಅವರಿಗೆ ದೈಹಿಕ ಶ್ರಮದ ಕೆಲಸ ಮಾಡಬೇಡಿ ಎನ್ನುವಂತಿಲ್ಲ. ಕೆಲಸ ಕೊಟ್ಟ ಮಾಲೀಕರು ಕೂಲಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಕೆಲಸದ ಅವಧಿಯನ್ನು ಬದಲಾಯಿಸಬೇಕು’ ಎನ್ನುತ್ತಾರೆ ಆರೋಗ್ಯ ಇಲಾಖೆಯ ಕಲಬುರಗಿ ವಿಭಾಗದ ಸಹ ನಿರ್ದೇಶಕ ಡಾ.ಅಂಬಾರಾಯ ರುದ್ರವಾಡಿ.

‘ಬೆಳಿಗ್ಗೆ 10ರ ನಂತರ ವಿಶ್ರಾಂತಿ ಕೊಟ್ಟು ಸಂಜೆ 4ರ ಬಳಿಕ ಕಾರ್ಮಿಕರಿಂದ ಕೆಲಸ ತೆಗೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ತಂಪಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಬೇಕು. ಮಧ್ಯಾಹ್ನದ ವೇಳೆ ಕೆಲಸ ಮಾಡಬಾರದು’ ಎಂದು ಸಲಹೆ ನೀಡಿದರು.

‘ಬಿಸಿಲು ಸಂಬಂಧಿತ ಗಂಭೀರ ಸಮಸ್ಯೆಗಳಿಗೆ ಸಿಲುಕಿದವರ ಚಿಕಿತ್ಸೆಗಾಗಿಯೇ ಪ್ರತಿ ಆಸ್ಪತ್ರೆಗಳಲ್ಲಿ ಎರಡ್ಮೂರು ಹಾಸಿಗೆಗಳನ್ನು ತೆಗೆದಿರಿಸಲಾಗಿದೆ. ಬಿಸಿಲಿನಿಂದ ಪ್ರಜ್ಞೆ ತಪ್ಪಿದವರಿಗೆ, ಗಂಭೀರ ಸಮಸ್ಯೆ ಇದ್ದವರನ್ನು ಆಸ್ಪತ್ರೆಗೆ ಕರೆತರಬೇಕು. ದೇಹದಲ್ಲಿ ನಿರ್ಜಲೀಕರಣಕ್ಕೆ (ಡಿಹೈಡ್ರೇಷನ್‌) ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಬೇಸಿಗೆಯಲ್ಲಿ ಈ ನಿಯಮ ಪಾಲಿಸಿ

 • ಬಾಯಿರಿಕೆ ಇಲ್ಲದಿದ್ದರೂ ಆಗಾಗ ತಂಪಾದ ನೀರು ಕುಡಿಯುವುದು

 • ಪ್ರಯಾಣದ ವೇಳೆ ಕುಡಿಯುವ ನೀರು ಒಯ್ಯುವುದು

 • ಮನೆಯಲ್ಲಿ ತಯಾರಿಸಿದ್ದ ಪಾನಕಗಳ ಸೇವನೆ

 • ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆ ಧರಿಸುವುದು

 • ಹವಾಮಾನ ಸಂಬಂಧಿ ಮಾಹಿತಿ ತಿಳಿದುಕೊಳ್ಳುವುದು

 • ವೃದ್ಧರ, ರೋಗಿಗಳ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆ ಮಾಡಿ

 • ಮನೆಯ ಒಳಾಂಗಣ ತಂಪಾಗಿ ಇರಿಸಿ

 • ಮಧ್ಯಾಹ್ನ 12ರಿಂದ 3ರ ತನಕ ಮನೆಯಿಂದ ಹೊರ ಬರಬಾರದು

 • ಶ್ರಮದಾಯಕವಾದ ಹೊರಾಂಗಣ ಚಟುವಟಿಕೆ ಕೈಗೊಳ್ಳಬಾರದು

 • ಮದ್ಯಪಾನ, ಟೀ, ಕಾಫಿ, ಕಾರ್ಬೊನೇಟೆಡ್ ಪಾನಿಯಾಗಳಿಂದ ದೂರವಿರಿ

 • ಹೆಚ್ಚು ಪ್ರೊಟೀನ್‌ಯುಕ್ತ ಹಾಗೂ ಹಳೆಯ ಆಹಾರ ಪದಾರ್ಥ ಸೇವಿಸಬಾರದು

 • ಕಾರ್ಮಿಕರ ಕೆಲಸದ ಸ್ಥಳದಲ್ಲಿ ಕುಡಿಯಲು ತಣ್ಣನೆ ನೀರಿನ ವ್ಯವಸ್ಥೆ ಮಾಡಬೇಕು

 • ಕೆಲಸಗಾರರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಬೇಕು

 • ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT