ಕಲಬುರಗಿ: ‘ಇಗೋ ಬಂತು ಹೊಸ ವರುಷವು ಮರ ಮರದಲ್ಲಿ ಹೂ ಚಿಗುರಿನ ಹಿಗ್ಗು...’
ಪ್ರಕೃತಿ ನಂಟಿನ ಮತ್ತು ಹೊಸತನದ ಭಾವ ತರುವ ನವಸಂವತ್ಸರದ ಯುಗಾದಿ ಹಬ್ಬವನ್ನು ಬುಧವಾರ ಆಚರಿಸಲು ತೊಗರಿ ಕಣಜ ಸನ್ನದ್ಧವಾಗಿದೆ.
ಹಿಂದೂಗಳಿಗೆ ವರ್ಷದ ಮೊದಲ ಹಬ್ಬಕ್ಕೂ, ಎಲೆಯುದಿರಿದ ಮರದ ಕೊಂಬೆಯ ಚಿಗುರಿಗೂ, ಕೃಷಿ ಚಟುವಟಿಕೆಗಳಿಗೂ ಯುಗಾದಿಯೇ ‘ಆದಿ’ಯಾಗಿದೆ. ಈ ಹೊಸ ವರ್ಷ ತಮ್ಮ ಬಾಳಲ್ಲಿ ಒಳಿತನ್ನು ತರಲಿ ಎಂಬ ಆಸೆಯದೊಂದಿಗೆ ಹಿಂದೂ ಕುಟುಂಬಗಳು ಹಬ್ಬದ ಸಡಗರದಲ್ಲಿ ತೊಡಗಿವೆ.
ಹಬ್ಬದ ಹಿಂದಿನ ದಿನವಾದ ಮಂಗಳವಾರದಂದು ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಶಹಬಜಾರ್, ರಾಮಮಂದಿರ ವೃತ್ತ ಸೇರಿದಂತೆ ಹಲವೆಡೆ ಜನರು ಖರೀದಿಯಲ್ಲಿ ನಿರತವಾಗಿದ್ದರು. ಬೇವು–ಬೆಲ್ಲದ ಮಿಶ್ರಣ, ಬಾಳೆದಿಂಡು, ಕಬ್ಬು, ಕುಂಬಳಕಾಯಿ, ಪೂಜಾ ಸಾಮಗ್ರಿಗಳ ಮಾರಾಟ ಕಂಡು ಬಂತು. ಮತ್ತೆ ಕೆಲವರು ವಾಹನ ಖರೀದಿ, ಹೊಸ ಬಟ್ಟೆ ಖರೀದಿಗೆ ಮಾಲ್, ಶೋರೂಮ್‌ಗಳಿಗೆ ಮುಗಿಬಿದ್ದರು.
ಕಾಜು, ಬಾದಾಮ್, ಖರ್ಜೂರ, ತರಬೂಜ್ ಬೀಜ, ಕಿಸ್ಮಿಸ್, ಪಿಸ್ತಾ, ಕಲ್ಲುಸಕ್ಕರೆಯಂತಹ ವಿವಿಧ ಸಿಹಿ ಹಾಗೂ ತಿನಿಸುಗಳ ಮಾರಾಟವೂ ಇತ್ತು. ಹಸಿಗೊಬ್ಬರಿ, ಖಾರೀಕ್, ಪುಟಾಣಿ, ಕಲ್ಲುಸಕ್ಕರೆ, ಸೋಪು, ಕಿಸ್ಮಿಸ್ ಪದಾರ್ಥಗಳನ್ನು ಸೇರಿಸಿದ ಮಿಶ್ರಣದ ಪ್ರತಿ ಪ್ಯಾಕೇಟ್‌ಗೆ ₹20 ದರದಲ್ಲಿ ಖರೀದಿ ಆಯಿತು.
ಯುಗಾದಿ ಮತ್ತು ಹಿಂದಿನ ದಿನ ಮನೆಯನ್ನು ಸಾರಣೆ ಕಾರಣೆಗಳಿಂದ ಸ್ವಚ್ಛಗೊಳಿಸಿದರು. ಬಾಗಿಲುಗಳನ್ನು ಮಾವಿನ ತೋರಣದಿಂದ ಸಿಂಗರಿಸಿದರು. ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಅಭ್ಯಂಗ ಸ್ನಾನ ಮಾಡುವರು. ಇದು ಕಹಿ ಎಲ್ಲ ಕಳೆಯಿತು ಎಂಬ ನಂಬಿಕೆ ಹಿಂದೂಗಳದ್ದು.
ಹಬ್ಬದ ದಿನ ಹೋಳಿಗೆ, ಶಾವಿಗೆ ಊಟದ ಜತೆಗೆ ‘ಬೇವು ಬೆಲ್ಲ’ ಸವಿಯುವರು. ಬೇವಿನ ಹೂಗಳು, ಒಣದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಕೊಬ್ಬರಿ, ಮಾವು, ಬೆಲ್ಲಗಳಲ್ಲದೆ ಹಣ್ಣಿನ ತಿರುಳುಗಳನ್ನು ಹಾಕಿ ಹೊಸ ಗಡಿಗೆಯಲ್ಲಿ ಬೇವು ಮಾಡಿ ಮನೆಗೆ ಬಂದವರಿಗೆ ಬೇವು ಕುಡಿಯಲು ಕೊಟ್ಟು ಅವರನ್ನು ಸತ್ಕರಿಸುವುದು ಸಾಮಾನ್ಯವಾಗಿ ಕಂಡುಬರಲಿದೆ.
ಯುಗಾದಿಯಂದು ಬೆಳಿಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ ನಡೆಯಲಿವೆ. ಪೂಜೆಗೆ ಬೇಕಾದ ಹೂಗಳು, ಗಂಧ, ಅರಿಸಿನ, ಕುಂಕುಮ, ಉತ್ತತ್ತಿ, ಬಾದಾಮ್, ಅರಿಸಿನ ಬೊಟ್ಟು, ಲೋಬಾಣ, ಊದುಕಡ್ಡಿ, ತೆಂಗಿನಕಾಯಿ, ಕರ್ಪೂರ ಸೇರಿದಂತಹ ಸಾಮಗ್ರಿಗಳಿಗೂ ಹೆಚ್ಚು ಬೇಡಿಕೆ ಇತ್ತು.
ಹಬ್ಬಕ್ಕೆ ಬೆಲೆ ಏರಿಕೆಯ ಬರೆ
ಯುಗಾದಿಯ ‘ಬೇವು ಬೆಲ್ಲ’ ತಯಾರಿಕೆಯಲ್ಲಿ ಹಣ್ಣು ಮತ್ತು ಡ್ರೈಫ್ರೂಟ್ಸ್‌ಗಳಿಗೆ ಮೊದಲ ಆದ್ಯತೆ ಇದೆ. ಆದರೆ, ಈ ವರ್ಷ ಬಹುತೇಕ ಹಣ್ಣುಗಳ ದರ ನೂರರ ಗಡಿದಾಟಿದವು. ಒಂದು ಕೆ.ಜಿ ಖರೀದಿಸುವವರು ಅರ್ಧ ಕೆ.ಜಿ.ಗೆ ಸೀಮಿತವಾದರು’ ಎಂದು ಹಣ್ಣಿನ ವ್ಯಾಪಾರಿ ಜಾಫರ್ ಹೇಳಿದರು.
‘₹60ಕ್ಕೆ 1 ಕೆಜಿ ದ್ರಾಕ್ಷಿ, ₹20ಕ್ಕೆ 1 ಕೆಜಿ ಕಲ್ಲಂಗಡಿ, 3 ಸೇಬಿಗೆ ₹100, ₹100ಕ್ಕೆ 1 ಕೆ.ಜಿ ಸಪೋಟ ದರವಿದೆ’ ಎಂದರು.
‘ಮಾಲ್ ಸಂಸ್ಕೃತಿಯಿಂದ ಸಾಂಪ್ರದಾಯಿಕ ಅಂಗಡಿಗಳಲ್ಲಿನ ಬಟ್ಟೆ ಖರೀದಿಯು ಕಳೆಗುಂದುತ್ತಿದೆ. ಬಹುತೇಕ ಗ್ರಾಹಕರು ಆನ್‌ಲೈನ್, ಶಾಪಿಂಗ್ ಮಾಲ್‌ಗಳತ್ತ ಮುಖ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಯುಗಾದಿಯ ಬಟ್ಟೆ ಖರೀದಿ ಇಳಿಕೆಯಾಗುತ್ತಿದೆ’ ಎಂದು ದೇವಾನಂದ ಮಳಿಗೆಯ ಚಂದ್ರಶೇಖರ ಸುತ್ರಾವೆ ಹೇಳಿದರು.
ಕೃಷಿ ಚಟುವಟಿಕೆಗಳಿಗೆ ‘ಯುಗಾದಿ’ ಮುನ್ನುಡಿ
ಯುಗಾದಿ ಬಂತೆಂದರೇ ಕೃಷಿ ಚಟುವಟಿಕೆಗಳಿಗೆ ಜೀವ ಬಂದಂತೆ. ಜಮೀನಿನ ಗುತ್ತಿಗೆ, ಗೇಣಿ ವ್ಯವಹಾರದ ಒಪ್ಪಂದ ಯುಗಾದಿ ದಿನ ಕುದುರುತ್ತವೆ.
ಜಮೀನು ಪಡೆದ ರೈತರು ಸೂರ್ಯೋದಯಕ್ಕೂ ಮುನ್ನ ತಮ್ಮ ಎತ್ತು, ಗಾಡಿ ಹಾಗೂ ಕೃಷಿ ಪರಿಕರಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ. ಭೂಮಿಗೆ ಪೂಜೆ ಮಾಡಿ, ಭಕ್ತಿಯಿಂದ ನಮಸ್ಕರಿಸಿ ಐದು ಸುತ್ತು ಗಳೇ ಹೊಡೆಯುತ್ತಾರೆ. ಮನೆಗೆ ಬಂದು ಎತ್ತುಗಳನ್ನು ತೊಳೆದು ಪೂಜೆ ಮಾಡಿ ಹೋಳಿಗೆ, ಅನ್ನ ತಿನಿಸಿ ಮರುದಿನದಿಂದ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.
ಮರಗಳಲ್ಲಿ ವಸಂತದ ಸೊಗಸು
ಮಾಗಿಯ ಚಳಿಗೆ ಸಂಪೂರ್ಣವಾಗಿ ಎಲೆ ಕಳೆದುಕೊಂಡಿದ್ದ ಗಿಡ–ಮರಗಳಲ್ಲಿ ವಸಂತದ ಹಸಿರು ತುಂಬಿಕೊಂಡ ಸೊಗಸು ಕಣ್ಣುಗಳಿಗೆ ಮುದ ನೀಡುತ್ತಿದೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಕಂಡುಬರುವ ಬೇವಿನ ಮರಗಳಲ್ಲಿ ಹೂಗಳ ಪರಿಮಳ, ಗಾಳಿಯ ತಂಪು ‘ಬ್ಯಾಸಿಗೆ ದಿವಸಕ ಬೇವಿನ ಮರತಂಪು ಭೀಮಾರತಿ ಎಂಬ ಹೊಳೆ ತಂಪು ಹಡೆದವ್ವ ನೀ ತಂಪು ನನ್ನ ತವರೀಗೆ’ ಎಂಬ ಜಾನಪದ ಹಾಡು ನೆನಪಿಸುವಂತಿದೆ.
ಪ್ರಕೃತಿಯ ಮರುಹುಟ್ಟಿನಲ್ಲಿ ಮಾವು, ಹೊಂಗೆ ಸೇರಿದಂತೆ ಹಲವು ಮರಗಳಲ್ಲಿ ಚೈತ್ರದ ಚಿಗುರು ನಳನಳಿಸುತ್ತಿದೆ. ಹೋಳಿಗೆ ಘಮ, ಬೇವಿನ ಪಾನಕ, ಬೆಲ್ಲದ ಸಾಂಗತ್ಯಕ್ಕೆ ‘ಯುಗಾದಿ’ ಸಜ್ಜಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.