ಸೋಮವಾರ, ಆಗಸ್ಟ್ 8, 2022
22 °C
ವಾರದಲ್ಲಿ ಮೂರು ದಿನ ಒಂದು ತಾಲ್ಲೂಕಿನಲ್ಲಿ ಸಂಚರಿಸಲಿರುವ ವಾಹನಗಳು

ಸಂಚಾರಿ ಲಸಿಕಾ ಕೇಂದ್ರವಾದ ಸಾರಿಗೆ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕುಗ್ರಾಮಗಳು, ತಾಂಡಾಗಳಲ್ಲಿನ ಜನರಿಗೂ ಕೋವಿಡ್ ಲಸಿಕೆಯನ್ನು ನೀಡುವ ಸಲುವಾಗಿ ಜಿಲ್ಲಾಡಳಿತದ ಮನವಿ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಎರಡು ಬಸ್‌ಗಳನ್ನು ಲಸಿಕೆ ವಿತರಿಸುವ ಮಿನಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, ಸಂಸ್ಥೆಯ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಬುಧವಾರ ಸೇವೆಗೆ ಸಮರ್ಪಿಸಿದರು.

ಈ ಬಸ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಜನರು ಲಸಿಕೆ ಪಡೆಯಲು ಕೊಠಡಿಯಂತೆ ಬದಲಾಯಿಸಲಾಗಿದೆ. ಲಸಿಕೆ ಪಡೆದ ಬಳಿಕ ಕೊಂಚ ಹೊತ್ತು ವಿಶ್ರಾಂತಿ ಪಡೆಯಲು ಚಾಲಕನ ಹಿಂದಿನ ಭಾಗದಲ್ಲಿ ತಲಾ ಆರು ಸೀಟುಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಕುಡಿಯುವ ನೀರು, ಗ್ಲೂಕೋಸ್, ಲಸಿಕೆಯ ಕಿಟ್‌, ಇತರೆ ಔಷಧಿಗಳನ್ನು ಇಟ್ಟುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಹಳೆಯ ಬಸ್‌ಗಳನ್ನೇ ಲಸಿಕಾ ವಾಹನವನ್ನಾಗಿ ಬದಲಾಯಿಸಲಾಗಿದ್ದು, ಕಿಟಕಿಯ ಪಕ್ಕದಲ್ಲಿ ಪರದೆಗಳನ್ನು ಅಳವಡಿಸಲಾಗಿದೆ.

ಬಸ್‌ಗಳನ್ನು ಸೇವೆಗೆ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ ಪಾಟೀಲ ತೆಲ್ಕೂರ, ‘ಜಿಲ್ಲಾಡಳಿತದ ಮನವಿ ಮೇರೆಗೆ ಸಂಸ್ಥೆಯ ನುರಿತ ಕುಶಲಕರ್ಮಿಗಳು ಕೇವಲ ಎರಡು ದಿನಗಳಲ್ಲಿ ವಾಹನವನ್ನು ಸಿದ್ಧಪಡಿಸಿದ್ದಾರೆ. ವಿವಿಧ ಗ್ರಾಮಗಳು ಹಾಗೂ ತಾಂಡಾಗಳಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗಳು, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆಶಾ ಕಾರ್ಯಕರ್ತೆಯರು ಒಂದೆಡೆ ಜನರನ್ನು ಸೇರಿಸಿ ಬಸ್‌ ಚಾಲಕರಿಗೆ ಮಾಹಿತಿ ನೀಡಬೇಕು. ಆ ಬಸ್‌ ನೇರವಾಗಿ ವೈದ್ಯಕೀಯ ಸಿಬ್ಬಂದಿಯನ್ನು ಕರೆದುಕೊಂಡು ಅಲ್ಲಿಗೆ ತೆರಳಲಿದೆ. ಜನರನ್ನು ಸೇರಿಸುವ ಹಾಗೂ ಅವರಿಗೆ ಲಸಿಕೆ ಪಡೆಯುವಂತೆ ಮನವೊಲಿಸುವ ಹೊಣೆ ಗ್ರಾಮ ಪಂಚಾಯಿತಿಯದು’ ಎಂದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾತನಾಡಿ, ‘ನಮ್ಮ ಮನವಿಯ ಮೇರೆಗೆ ಈಶಾನ್ಯ ಸಾರಿಗೆ ಸಂಸ್ಥೆಯವರು ತಕ್ಷಣ ಸಂಚಾರಿ ಲಸಿಕಾ ವಾಹನವನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಕಲಬುರ್ಗಿ ಉಪವಿಭಾಗದ ಅಫಜಲಪುರ ಹಾಗೂ ಆಳಂದ ತಾಲ್ಲೂಕಿನಲ್ಲಿ ತಲಾ ಮೂರು ದಿನ ಹಾಗೂ ಸೇಡಂ ಉಪವಿಭಾಗದ ಸೇಡಂ, ಚಿಂಚೋಳಿಯಲ್ಲಿ ಮೂರು ದಿನ ಬಸ್‌ ಮೂಲಕ ಲಸಿಕೆಯನ್ನು ವಿವಿಧ ಗ್ರಾಮಗಳಿಗೆ ತೆರಳಿ ಲಸಿಕೆ ನೀಡಲಾಗುವುದು. ಈಗೀಗ ಲಸಿಕೆ ಪಡೆಯಬೇಕು ಎಂಬ ಉತ್ಸಾಹ ಜನರಲ್ಲಿ ಕಂಡು ಬರುತ್ತಿದ್ದು, ಅಗತ್ಯ ತಕ್ಕಷ್ಟು ಲಸಿಕೆ ಜಿಲ್ಲೆಗೆ ಬರುತ್ತಿದೆ. ಯಾವುದೇ ಸಮಸ್ಯೆ ಇಲ್ಲ’ ಎಂದರು.

ಅಫಜಲಪೂರ ಶಾಸಕ ಎಂ.ವೈ. ಪಾಟೀಲ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಕೂರ್ಮರಾವ್, ಜಿಲ್ಲಾ ಪಂಚಾಯಿತಿ ಸಿಇಓ ಡಾ. ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಸಾರಿಗೆ ಸಂಸ್ಥೆ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ. ಕೊಟ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು