ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ರಾಮತೀರ್ಥಕ್ಕೆ ಬೇಕಿದೆ ಕಾಯಕಲ್ಪ

ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಜನರ ಒತ್ತಾಯ
Last Updated 19 ಜನವರಿ 2020, 19:30 IST
ಅಕ್ಷರ ಗಾತ್ರ

ಯಡ್ರಾಮಿ: ಜಿಲ್ಲಾ ಕೇಂದ್ರ ಕಲಬುರ್ಗಿಯಿಂದ 85 ಕಿ.ಮೀ ದೂರದಲ್ಲಿರುವ ಯಡ್ರಾಮಿ ಗ್ರಾಮವು ಈಗ ತಾಲ್ಲೂಕು ಕೇಂದ್ರವಾಗಿದೆ. ಪ್ರಾಚೀನ ಶಾಸನಗಳಲ್ಲಿ ‘ಎಳರಾಮೆ’, ‘ಎಳರಾವೆ’ ‘ಸರ್ವ ನಮಸ್ಯದ ಆಗ್ರಹಾರ’, ‘ದಕ್ಷಿಣ ವಾರಾಣಾಸಿ ಎಳರಾಮೆ’ ಎಂದೆಲ್ಲ ಉಲ್ಲೇಖಗೊಂಡಿರುವ ಈ ಊರು ಮುಂದೆ ಜನರ ಆಡು ಭಾಷೆಯಲ್ಲಿ ಯಡ್ರಾಮಿ ಎಂದು ಪ್ರಚಾರಕ್ಕೆ ಬಂತು.

ಹಿಂದೆ ಸಗರ– 500ಕ್ಕೆ ಸೇರಿದ್ದ ಈ ಊರು ಹಲವು ಮಹತ್ವದ ಚಾರಿತ್ರಿಕ ಅಂಶಗಳಿಗೆ ದಾಖಲೆಯಾಗಿ ಉಳಿದುಕೊಂಡಿದೆ.

ಈ ಊರಿನಲ್ಲಿ ಇಲ್ಲಿಯವರೆಗೆ 15 ಶಾಸನಗಳು ದೊರೆತಿವೆ. ಇವುಗಳಲ್ಲಿ 1095ರ ಶಾಸನವು ಹೈಹಯ ಕುಲದ ದಾಸಿರಾಜನು ತನ್ನ ತಂದೆ ಚಾಮುಂಡನ ಹೆಸರಲ್ಲಿ ಕೆಂಬಾವಿ ದಾರಿಯಲ್ಲಿ ಬಾವಿಯನ್ನು ತೋಡಿಸಿ, ಅಲ್ಲಿದ್ದ ಸ್ವಯಂಲಿಂಗಕ್ಕೆ ದೇಗುಲ ಮಾಡಿಸಿದ ಮತ್ತು ಆ ದೇವಾಲಯದಲ್ಲಿ ದಿನನಿತ್ಯ 12 ಜನ ಬ್ರಾಹ್ಮಣರ ಭೋಜನಕ್ಕಾಗಿ ವರ್ಷಕ್ಕೆ ಹತ್ತು ಗದ್ಯಾಣ ಬಡ್ಡಿ ಹುಟ್ಟುವಂತೆ ದೇವರಿಗೆ 30 ಗದ್ಯಾಣ ದಾನ ಕೊಟ್ಟ ವಿಷಯವನ್ನು ತಿಳಿಸುತ್ತದೆ.

ಈ ಊರು ‘ಬಲ್ಲದ ಕನ್ನಡಕ್ಕರದ ವಿದ್ಯಾಸ್ಥಾನ’ ಆಗಿತ್ತೆಂಬ ಮಹತ್ವದ ಅಂಶ ಈ ಶಾಸನದಿಂದ ಗೊತ್ತಾಗಿದೆ. ಇದೇ ದೇವಾಲಯಕ್ಕೆ ಸಂಬಂಧಿಸಿದ 1121ರ ಶಾಸನವು 6ನೇ ವಿಕ್ರಮಾದಿತ್ಯನ ಮಹಾ ಮಂಡಳೇಶ್ವರನಾದ ಹೈಹಯ ಕುಲದ ದೇವರಸನು ಎಳರಾಮೆಯ ಜನ್ನನ ಬಾವಿಯ ಸ್ವಯಂಭು ದೇವರಲ್ಲಿಗೆ ಬಂದಿದ್ದಾಗ ಪೂಜಾ ವಿಧಿಗೆಂದು ವಿವಿಧ ಸುಂಕಗಳನ್ನು ದಾನಕ್ಕೆ ಬಿಟ್ಟ ಅಂಶ ತಿಳಿಸುತ್ತದೆ.

ಇನ್ನೊಂದು ಶಾಸನ ಎಳಮೇಲ ಸಿಂಹಪರ್ಷೆಯ ಅಮೃತರಾಶಿ ಪಂಡಿತರು ಶ್ರೀ ರಾಮೇಶ್ವರ ದೇವಾಲಯದ ಮಠದ ಆಚಾರ್ಯರಾಗಿದ್ದ ಅಂಶವನ್ನು ತಿಳಿಸಿದರೆ, ಮತ್ತೊಂದು ಸಂತೆ ಹಣವನ್ನು ದೇವರಿಗೆ ದಾನ ಕೊಟ್ಟ ವಿಷಯವನ್ನು ತಿಳಿಸುತ್ತದೆ. ಇಲ್ಲಿ ಈಗಲೂ ಸಹ ಸೋಮವಾರದಂದು ಸಂತೆ ನಡೆಯುತ್ತದೆ.

ಶಾಸನದಲ್ಲಿ ಉಕ್ತವಾಗಿರುವ ಎಳರಾಮೆಯ ತೀರ್ಥವೇ ಇಂದಿನ ರಾಮತೀರ್ಥವಾಗಿದ್ದು, ಇಲ್ಲಿ 11-12ನೇ ಶತಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತೀರ್ಥದ ನಡುವೆ ಈಗ ಮಸೀದಿ ಇದೆ. ತೀರ್ಥದ ಸುತ್ತ ಇರುವ ಪ್ರಾಂಗಣದಲ್ಲಿ ಹಿಂದಿನ ಅವಶೇಷಗಳನ್ನು ಬೀಳಿಸಿ ಕೊಠಡಿ ನಿರ್ಮಿಸಲಾಗಿದೆ. ಈ ತೀರ್ಥದ ಬಲಭಾಗದಲ್ಲಿ ಜೀರ್ಣೋದ್ದಾರ ಗೊಂಡಿರುವ ಬಸವಣ್ಣನ ಗುಡಿ ಇದೆ. ಗುಡಿಯ ಮುಂದೆ ಶಿಲಾಶಾಸನ ಕಲ್ಲು, ಸೂರ್ಯ ಹಾಗೂ ಗಣಪತಿಯ ಶಿಲ್ಪಗಳಿವೆ. ಗೌಡರ ಓಣಿಯಲ್ಲಿ ಪೂರ್ವಾಭಿಮುಖವಾಗಿರುವ ಗರ್ಭಗೃಹ, ತೆರೆದ ಅಂತರಾಳ ಹಾಗೂ ನವರಂಗವುಳ್ಳ ರಾಮೇಶ್ವರ ದೇವಾಲಯವಿದೆ. ಗರ್ಭಗೃಹದಲ್ಲಿ ಶಿವಲಿಂಗ ಇದೆ. ಇದರ ನವರಂಗ ಭಾಗ ಹಾಳಾಗಿದ್ದು, ಹಿಂದೆ ಇದಕ್ಕೆ ಕಕ್ಷಾಸನವಿದ್ದ ಕುರುಹು ಕಾಣಬಹುದು.

ಯಡ್ರಾಮಿಯು ಹಿಂದೆ 300 ಮಹಾಜನರನ್ನು ಹೊಂದಿ ಪ್ರಮುಖ ಧಾರ್ಮಿಕ, ವಾಣಿಜ್ಯ, ಮತ್ತು ವಿದ್ಯಾಕೇಂದ್ರವಾಗಿ ಮೆರೆದ ಆಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ.

ಯಡ್ರಾಮಿ ಗ್ರಾಮದ ‘ಎಳರಾಮ’ ದೇವಾಲಯ ಇಂದು ನೋಡಲು ಹೆಚ್ಚೇನೂ ಉಳಿದಿಲ್ಲ. ಉಳಿದಿರುವುದು ಜಾಲಿಕಂಟಿಗಳು, ಇನ್ನೇನು ಬೀಳುತ್ತವೆಯೋ ಅನ್ನುವ ಕಟ್ಟಡಗಳು ಕಾಣಸಿಗುತ್ತವೆ. ಸಂಬಂಧಿಸಿದ ಇಲಾಖೆಯವರು ಗಮನ ಹರಿಸಿ ಉಳಿದಿರುವ ಕೆಲವು ಅವಶೇಷಗಳನ್ನಾದರೂ ರಕ್ಷಿಸಿ ಮುಂದಿನ ಪೀಳಿಗೆಗೆ ಯಡ್ರಾಮಿಯ ಇತಿಹಾಸ ತೋರಿಸಲು ನೆರವಾಗಬೇಕಾಗಿದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT