ವಿರಾಜಪೇಟೆ: ‘ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಕಾಡು ಗೊಮಾಳವನ್ನು ಗೋಮಾಳವಾಗಿ ಉಳಿಸಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅದರಂತೆ ಜಿಲ್ಲಾಧಿಕಾರಿ 47.47 ಎಕರೆ ಜಮೀನನ್ನು ಗೋಮಾಳ ಎಂದು ಮೀಸಲಿರಿಸಿ ಆದೇಶ ನೀಡಿದ್ದಾರೆ’ ಎಂದು ಆರ್ಜಿ ಗೋಮಾಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ರಾಮಯ್ಯ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಜಿಯ ತೆರ್ಮೆ ಕಾಡಿನ ಸರ್ವೆ ಸಂಖ್ಯೆ 315/1ರಲ್ಲಿ 89.06 ಎಕರೆ ಜಮೀನನ್ನು 25.09.1960ರಲ್ಲಿ ಅಂದಿನ ಜಿಲ್ಲಾಧಿಕಾರಿ ಆರ್ಜಿ, ಬೇಟೋಳಿ ಮತ್ತು ಬಾಳುಗೋಡು ಗ್ರಾಮಸ್ಥರು ದನಗಳನ್ನು ಮೇಯಿಸಲಿಕ್ಕಾಗಿ ಗೋಮಾಳ ಎಂದು ಮೀಸಲಿರಿಸಿ ಆದೇಶಿಸಿದ್ದರು’ ಎಂದು ತಿಳಿಸಿದರು.
‘ಆದರೆ, ಗೋಮಾಳ ಜಮೀನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶವಿಲ್ಲದಿದ್ದರೂ 1980ರ ನಂತರ ಬಂದ ಕೆಲ ಜಿಲ್ಲಾಧಿಕಾರಿಗಳು ಸರ್ಕಾರದ ನಿರ್ದೇಶನ ಪಾಲಿಸದೆ, ವಿವಿಧ ಉದ್ದೇಶಗಳಿಗೆ ಮತ್ತು ಕೆಲ ಖಾಸಗಿಯವರಿಗೆ ಜಮೀನು ಮಂಜೂರು ಮಾಡಿದ್ದರು. ಈ ಹಿನ್ನಲೆಯಲ್ಲಿ ಆರ್ಜಿ ತೆರ್ಮೆಕಾಡು ಗೋಮಾಳ ಸಂರಕ್ಷಣಾ ಸಮಿತಿಯು ಈ ಮಂಜೂರಾತಿಗಳನ್ನು ವಜಾ ಮಾಡಬೇಕೆಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ವಾದ ವಿವಾದ ಆಲಿಸಿದ ನ್ಯಾಯಾಲಯ ಗೋಮಾಳದ ಜಮೀನನ್ನು ಖಾಸಗಿಯವರಿಗೆ ಮಂಜೂರು ಮಾಡಿದ್ದ ಜಿಲ್ಲಾಧಿಕಾರಿ ಆದೇಶ ವಜಾಗೊಳಿಸಿರುತ್ತದೆ’ ಎಂದರು.
‘ಗೋಮಾಳ ಸಮಿತಿ ಉಳಿದ ಮಂಜೂರಾತಿಗಳನ್ನು ಸಹ ವಜಾ ಮಾಡಬೇಕೆಂದು ಹೈಕೋರ್ಟ್‌ಗೆ ಅರ್ಜಿ ಹಾಕಿದಾಗ, ಮಂಜೂರಾತಿಯಾದ ಜಮೀನಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣ ಅವುಗಳನ್ನು ಹೊರತುಪಡಿಸಿ, ವಿಚಾರಣೆಯ ಸಂದರ್ಭದಲ್ಲಿ ಖಾಲಿಯಿದ್ದ ಸರ್ವೆ ಸಂಖ್ಯೆ 315/1ರಲ್ಲಿ ಉಳಿದ 47.47 ಎಕರೆ ಜಮೀನನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕೆಂದು ಆದೇಶಿಸಿದೆ’ ಎಂದು ಹೇಳಿದರು.
ಗೋಮಾಳ ಸಮಿತಿ ಕಾರ್ಯದರ್ಶಿ ಕೆ.ಎಸ್ ಅಯ್ಯಣ್ಣ, ಖಜಾಂಚಿ ಬಿ.ವಿ.ಹೇಮಂತ್, ಸದಸ್ಯರಾದ ಬಿ.ಆರ್.ಗಣೇಶ್, ವಿವೇಕ್ ರೈ, ಕುಶಾಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.