ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಅಭಿಯಾನ

ಸಚಿವ ಕೃಷ್ಣ ಬೈರೇಗೌಡ ಸಭೆ; ಚುರುಕುಗೊಂಡ ಕಂದಾಯ ಇಲಾಖೆ
Published 6 ಫೆಬ್ರುವರಿ 2024, 6:01 IST
Last Updated 6 ಫೆಬ್ರುವರಿ 2024, 6:01 IST
ಅಕ್ಷರ ಗಾತ್ರ

ಮಡಿಕೇರಿ: ದಶಕಗಳಿಂದ ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಗ್ರಾಮಸಭೆ ನಡೆಸಿ, ಅಭಿಯಾನ ಕೈಗೊಳ್ಳಲು ಇಲ್ಲಿ ಸೋಮವಾರ ಪಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಿರ್ಧರಿಸಿತು.

ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಜಿಲ್ಲೆಯ ಎಲ್ಲ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸೇರಿದಂತೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಅಂತ್ಯವಿಲ್ಲದ ಸಮಸ್ಯೆ ಎಂಬಂತಾಗಿರುವ ಜಮ್ಮಾಬಾಣೆ ಸಮಸ್ಯೆ ಪರಿಹಾರಕ್ಕೆ ಹಲವು ಮಾರ್ಗೋಪಾಯಗಳನ್ನು ಕುರಿತು ಚರ್ಚಿಸಿದರು.

ಶಾಸಕರು, ಅಧಿಕಾರಿಗಳು, ಸಿಬ್ಬಂದಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು. ಸಭೆಯ ಬಹುಪಾಲು ಸಮಯ ಇದಕ್ಕೆಂದೇ ಮೀಸಲಾಯಿತು. ಕೊನೆಗೆ, ಸಮಸ್ಯೆ ಇತ್ಯರ್ಥಗೊಳಿಸಲು ಅಭಿಯಾನದ ಮಾದರಿಯಲ್ಲಿ ಗ್ರಾಮಸಭೆ ನಡೆಸಲು ತೀರ್ಮಾನಿಸಲಾಯಿತು.

ಆತಂಕ ವ್ಯಕ್ತಪಡಿಸಿದ ಕಂದಾಯ ನಿರೀಕ್ಷಕರು

ಸಭೆಯಲ್ಲಿ ಹಲವು ಮಂದಿ ಕಂದಾಯ ನಿರೀಕ್ಷಕರು ಈ ಕುರಿತು ಸ್ಪಷ್ಟವಾದ ಮಾರ್ಗಸೂಚಿ ಬೇಕು. ಇಲ್ಲದೇ ಹೋದರೆ ಮುಂದೊಂದು ದಿನ ಕಾನೂನು ತೊಡಕಿನ ಸುಳಿಗೆ ನಾವುಗಳು ಸಿಲುಕುವ ಸಾಧ್ಯತೆಗಳಿವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಪಟ್ಟೇದಾರರು ಇಲ್ಲದಿದ್ದರೆ, ಅವರು ವಿದೇಶಕ್ಕೆ ಹೋಗಿದ್ದರೆ ಸಮಸ್ಯೆ ಇತ್ಯರ್ಥ ಕಷ್ಟಸಾಧ್ಯ. ಕುಟುಂಬದ ಎಲ್ಲರೂ ಒಟ್ಟಿಗೆ ಸಿಗುವುದೂ, ಒಪ್ಪಿಗೆ ನೀಡುವುದೂ ಮತ್ತೂ ಕಷ್ಟ ಎಂದು ಕೆಲವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಕುರಿತು ಒಂದು ಮಾರ್ಗಸೂಚಿಯನ್ನು ಹೊರಡಿಸಲಾಗುವುದು. ಇದಕ್ಕೆ ಜಿಲ್ಲಾಧಿಕಾರಿಯೇ ಕರಡು ಮಾರ್ಗಸೂಚಿ ರಚಿಸಿ ಕಳುಹಿಸಲಿ. ಅದನ್ನು ಪರಿಶೀಲಿಸಿ ಅಂತಿಮ ಮಾರ್ಗಸೂಚಿ ಹೊರಡಿಸಲಾಗುವುದು. ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ, ಯಾವುದೇ ಕಾನೂನು ತೊಡಕುಗಳು ಬರುವುದಿಲ್ಲ’ ಎಂದು ಧೈರ್ಯ ತುಂಬಿದರು. ಜೊತೆಗೆ, ಇದೇ ವೇಳೆ ಪೈಸಾರಿ ಜಾಗಗಳಿಗೆ ಪಹಣಿ ನೀಡುವ ಅಭಿಯಾನವನ್ನೂ ಕೈಗೊಳ್ಳಬೇಕು’ ಎಂದೂ ನಿರ್ದೇಶನ ನೀಡಿದರು.

ಸಭೆಯ ಮೊದಲಿಗೆ ಮಾತನಾಡಿದ ಅವರು, ‘ಜನರು ನಮ್ಮನ್ನು ಹಾಗೂ ಅಧಿಕಾರಿಗಳನ್ನು ಇಲ್ಲಿ ತಂದು ಕೂರಿಸಿರುವುದೇ ಅವರ ಸಮಸ್ಯೆ ಇತ್ಯರ್ಥಕ್ಕೆ. ಮುಂದೊಂದು ದಿನ ಸಮಸ್ಯೆಗಳು ಬರುತ್ತವೆ ಎಂದು ಕಣ್ಣು ಮುಚ್ಚಿ ಕುಳಿತರೆ ಸಮಸ್ಯೆ ಹಾಗೆಯೇ ಇರುತ್ತದೆ. ಮೊದಲು ನಮ್ಮ ಮನೋಭಾವ ಬದಲಿಸಿಕೊಂಡು ಸಮಸ್ಯೆ ಇತ್ಯರ್ಥ ಕುರಿತು ಚಿಂತಿಸಿದರೆ ನೂರು ಮಾರ್ಗಗಳು ತೆರೆದುಕೊಳ್ಳುತ್ತವೆ’ ಎಂದು ಮೊದಲಾಗಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು.

‘ನೆಮ್ಮದಿ ಕಸಿಯುವ ಇಲಾಖೆ ಎನಿಸದೇ ನೆಮ್ಮದಿ ತರುವ ಇಲಾಖೆ ಎಂಬ ಹೆಸರು ಕಂದಾಯ ಇಲಾಖೆಗೆ ಬರಬೇಕು. ಜನರು ತಮ್ಮ ಕೆಲಸ ಬಿಟ್ಟು ಅವರ ಸಮಸ್ಯೆ ನಿವಾರಣೆಗೆ ನಮ್ಮ ಕಚೇರಿ ಅಲೆಯುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟುಗೂಡಿ ಕಾರ್ಯನಿರ್ವಹಿಸಿದರೆ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ತಲೆ ಎತ್ತಿ ನಡೆಯುವುದು ಸಾಧ್ಯ’ ಎಂಬಂತಹ ಕಿವಿಮಾತುಗಳನ್ನೂ ಹೇಳುವ ಮೂಲಕ ಗಮನ ಸೆಳೆದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ‘ಜಿಲ್ಲೆಯಲ್ಲಿ ಸುಮಾರು 25 ಸಾವಿರ ಮಂದಿಯ ಭೂಮಿ ಜಮ್ಮಾಬಾಣೆ ಸಮಸ್ಯೆಗೆ ಸಿಲುಕಿದ್ದಾರೆ. ಗ್ರಾಮಸಭೆ ಮಾಡಿ ಜನರಿಂದ ಒಪ್ಪಿಗೆ ಪಡೆದು, ತಕರಾರು ಇಲ್ಲದ ಕಡೆ ತಕ್ಷಣವೇ ಸರ್ವೇ ಮಾಡಿ, ಸಾಗುವಳಿ ಮಾಡುತ್ತಿರುವವರ ಹೆಸರಿಗೆ ಹಿಸ್ಸಾ ಪಹಣಿ ಮಾಡಿಕೊಡಲಾಗುವುದು. ಇದಕ್ಕಾಗಿ ಸರ್ವೇ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ಸರ್ವೇ ಕಾರ್ಯಕ್ಕೆ ಹೆಚ್ಚುವರಿಯಾಗಿ ಪರವಾನಗಿ ಪಡೆದ ಸರ್ವೇಯರ್‌ಗಳನ್ನು ನಿಯೋಜಿಸಲಾಗುವುದು. ಜೊತೆಗೆ, ಅತ್ಯಾಧುನಿಕ ಉಪಕರಣಗಳನ್ನೂ ನೀಡಲಾಗುವುದು. ತಿಂಗಳಲ್ಲಿ ಎಷ್ಟು ಪ್ರಕರಣ ಬಗೆಹರಿಸಬಹುದು ಎಂಬ ಕುರಿತು ವೇಳಾಪಟ್ಟಿ ನೀಡಲು ಜಿಲ್ಲಾಧಿಕಾರಿಗೆ ಹೇಳಿರುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT