ಮಡಿಕೇರಿ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಕೊಡಗು ಜಿಲ್ಲೆಯ ಪೆರಾಜೆ, ಚೆಂಬು, ಸಂಪಾಜೆ, ಮದೆನಾಡು ಹಾಗೂ ಮಡಿಕೇರಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಈ ವೇಳೆ ಅವರು ಚೆಂಬು ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಅಧಿಕಾರಿಗಳನ್ನು ಕರೆಸಿಕೊಂಡು ತಕ್ಷಣವೇ 2 ಟವರ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಸೂಚಿಸಿದರು.
ಜನರು ಮತ್ತೊಂದು ಟವರ್ ಅಗತ್ಯ ಇದೆ ಎಂದು ಇದೇ ವೇಳೆ ಮನವಿ ಮಾಡಿದರು. ಅಧಿಕಾರಿಗಳು ಸಂಜೆಯವರೆಗೂ ಗ್ರಾಮದಲ್ಲೇ ಇದ್ದು, ನೂತನ ಟವರ್‌ಗಳ ನಿರ್ಮಾಣಕ್ಕೆ ಜಾಗ ಗುರುತು ಮಾಡುವ ಪ್ರಕ್ರಿಯೆ ನಡೆಸಿದರು.
ಚೆಂಬು ಗ್ರಾಮದಲ್ಲಿ ಅಭಿನಂದನೆ ಸ್ವೀಕರಿಸಿದ ಯದವೀರ್ ಅವರಿಗೆ ದಬ್ಬಡ್ಕ ಸಮೀಪ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಜನರು ಮನವಿ ಮಾಡಿದರು. ಈಗಾಗಲೇ ನಿರ್ಮಲಾ ಸೀತಾರಾಮನ್ ಅವರಿಂದ ₹ 1 ಕೋಟಿ ಅನುದಾನ ಬಂದಿದೆ. ಆದರೆ, ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡದೇ ಇರುವುದು ಕಾಮಗಾರಿಗೆ ತೊಡಕಾಗಿದೆ ಎಂಬ ಅಂಶವನ್ನು ಗಮನಕ್ಕೆ ತಂದರು.
ಜೊತೆಗೆ, ಚೆಂಬು ಗ್ರಾಮವನ್ನು ದತ್ತು ತೆಗೆದುಕೊಂಡು ಅಥವಾ ವಿಶೇಷವಾಗಿ ಪರಿಗಣಿಸಿ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಬೇಕು ಎಂಬ ಒತ್ತಾಯವೂ ಮುಖಂಡರಿಂದ ಕೇಳಿ ಬಂತು.
ವಿವಿಧ ಸಹಕಾರ ಸಂಘಗಳು, ಯುವಕ ಮಂಡಲಗಳು ಹಾಗೂ ಸಂಘ, ಸಂಸ್ಥೆಗಳು ಅನುದಾನ ಕೊಡುವಂತೆ ಸಂಸದರಲ್ಲಿ ಮನವಿ ಮಾಡಿದವು.
ಇದಕ್ಕೂ ಮುನ್ನ ಯದುವೀರ್ ಅವರು ಪೆರಾಜೆ ಗ್ರಾಮದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘ಜನರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಅವರು ಸ್ವಾವಲಂಬಿಗಳಾಗಿ ಬದುಕು ನಡೆಸುವುದಕ್ಕೆ ಸಹಕಾರ ಸಂಘಗಳೇ ಕಾರಣ. ಇಂತಹ ಸಂಘಗಳಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ’ ಎಂದು ಶ್ಲಾಘಿಸಿದರು.
ಸಂಘದ ನೂತನ ಪ್ರವೇಶ ದ್ವಾರವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ ಗಣಪತಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಮುಖಂಡರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಮಹೇಶ್ ಜೈನಿ, ಸುಬ್ರಹ್ಮಣ್ಯ ಉಪಾಧ್ಯಾಯ, ಕಾಂಗೀರ ಸತೀಶ್ ಭಾಗವಹಿಸಿದ್ದರು.
ಬಳಿಕ ಮದೆನಾಡಿಗೆ ಬಂದ ಯದುವೀರ್ ಅಲ್ಲಿ ಕಾರ್ಯಕರ್ತರನ್ನು ಭೇಟಿಯಾದರು. ಮಡಿಕೇರಿಯಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು, ಪಕ್ಷದ ಮುಂದಿನ ಕಾರ್ಯಗಳ ಕುರಿತು ಚರ್ಚೆ ನಡೆಸಿದರು.
ಒಂದೇ ದಿನ 5 ಕಡೆಗೆ ಭೇಟಿ ನೀಡಿದ ಸಂಸದ ಹಲವೆಡೆ ಸಾರ್ವಜನಿಕರಿಂದ ಅಹವಾಲು ಆಲಿಕೆ ವಿಶೇಷ ಅನುದಾನ ಕೋರಿ ಹಲವು ಸಂಘಟನೆಗಳಿಂದ ಅರ್ಜಿ ಸಲ್ಲಿಕೆ
ಪೆರಾಜೆ ಚೆಂಬು ಮದೆನಾಡು ಗ್ರಾಮಗಳಿಗೆ ಭೇಟಿ ಮಡಿಕೇರಿಯಲ್ಲಿ ಪ್ರಮುಖರ ಸಭೆ ಹಲವು ಬೇಡಿಕೆಗಳಿಗೆ ಸಂಸದ ಸ್ಪಂದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.