ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಶುಕ್ರವಾರ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಿರೀಕ್ಷಿತವಾದ ಮನವಿಯೊಂದು ಸಿಕ್ಕಿತು.
ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಬಳಿ ಮಡಿಕೇರಿ– ಕುಟ್ಟ ಸಂಪರ್ಕಿಸುವ ರಸ್ತೆ ಕುಸಿತದ ವೀಕ್ಷಣೆ ಮಾಡಿ ವಾಪಸ್ ಹಿಂದಕ್ಕೆ ಹೋಗುತ್ತಿದ್ದಂತೆ ಇವರ ದಾರಿಯನ್ನೆ ಕಾಯುತ್ತಿದ್ದ ಹತ್ತಾರು ಮಂದಿ ಕೈಮುಗಿದು ನಿಲ್ಲಿಸಿದರು.
ರಸ್ತೆಯ ಮೇಲಿಂದಲೇ ಭಾರ ಇಳಿಜಾರಿನಲ್ಲಿ ನೀರಿನ ಮಧ್ಯೆ ಇದ್ದ ಮೂರು ಎಕ್ರೆ ಪೈಸಾರಿಯಲ್ಲಿದ್ದ ತಮ್ಮ ಪುಟ್ಟ ಪುಟ್ಟ ಗುಡಿಸಲುಗಳನ್ನು ಕೈ ಚಾಚಿ ತೋರಿಸಿದ ಅವರು, ‘ನಮಗೆ ಇಲ್ಲಿ ನಡೆಯಲು ಒಂದು ಸಣ್ಣ ರಸ್ತೆಯನ್ನಾದರೂ ಮಾಡಿಕೊಡಿ’ ಎಂದು ಮನವಿ ಮಾಡಿದರು.
‘ಸೊಂಟ ಮುಳುಗುವ ತನಕದ ನೀರಿನಲ್ಲಿ ನಾವು ಬರಬೇಕಿದೆ. ಸೂಕ್ತ ರಸ್ತೆಯನ್ನು ನಿರ್ಮಿಸಿಕೊಡಿ’ ಎಂದು ಕೋರಿಕೆ ಸಲ್ಲಿಸಿದರು.
ಸ್ಥಳೀಯರ ಜೊತೆ ಕೆಲಹೊತ್ತು ಚರ್ಚೆ ನಡೆಸಿದ ಸಿದ್ದರಾಮಯ್ಯ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿ ತೆರಳಿದರು.
ಇದಕ್ಕೂ ಮುನ್ನ ಅವರು ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಬಳಿ ಮಡಿಕೇರಿ– ಕುಟ್ಟ ರಸ್ತೆ ಕುಸಿತದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುಡ್ಡ ಕುಸಿತದ ಪರಿಣಾಮಗಳನ್ನು ಮತ್ತು ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಬಳಿಕ ಅವರು, ಕೆದಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ, ಹೆಚ್ಚಿನ ಮಳೆಯಿಂದ ಹಾನಿಯಾಗಿರುವ ರಸ್ತೆಯನ್ನು ಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸ್‌ರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕುಶಾಲನಗರ: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಮಹಾಮಳೆಗೆ ವಾಸದ ಮನೆ ಗೋಡೆ ಕುಸಿದ ಹಾನಿಯಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವೀಕ್ಷಿಸಿದರು.
ಅಲ್ಲಿನ ಕುಟುಂಬದವರಿಗೆ ಧೈರ್ಯ ತುಂಬಿದರು. ಮನೆ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜ್ ಶಾಸಕರಾದ ಡಾ.ಮಂತರ್‌ಗೌಡ ಎ.ಎಸ್.ಪೊನ್ನಣ್ಣ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮುಖಂಡರಾದ ವಿ.ಪಿ.ಶಶಿಧರ್ ಪ್ರಮೋದ್ ಉತ್ತಪ್ಪ ಯಾಕುಬ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.