ಕುಶಾಲನಗರ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮತಾಂಧ ಶಕ್ತಿಗಳ ವಿರುದ್ಧ ಮಂಗಳವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಘೋಷಣೆ ಮೊಳಗಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ,‘ಎಲ್ಲಾ ಧರ್ಮದವರನ್ನು ಒಳಗೊಂಡ ಕಾಂಗ್ರೆಸ್ ಪಕ್ಷ ಸಹಜವಾಗಿ ಯಾವುದೇ ಧರ್ಮೀಯರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಖಂಡನೀಯ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ,‘ಇತರೆ ಧರ್ಮೀಯರ ವಿರುದ್ಧ ಧ್ವೇಷ ಸಾಧಿಸುವ ಮತಾಂಧ ಮನಸ್ಥಿತಿಗಳ ವಿರುದ್ಧ ಕಾಂಗ್ರೆಸ್ ಸದಾ ಧ್ವನಿ ಎತ್ತಲಿದೆ. ಎಲ್ಲೆಡೆ ಸಾಮರಸ್ಯ, ಸಹಬಾಳ್ವೆ ನೆಲೆಸಬೇಕೆಂಬುದೇ ಕಾಂಗ್ರೆಸ್ ಧ್ಯೇಯ. ಮಾನವನ ಐಕ್ಯತೆಗೆ ಎಲ್ಲೆಲ್ಲಿ ಭಂಗ ಬರುವೆಲ್ಲೆಡೆ ಹೋರಾಟ ನಡೆಸಿ ಅನ್ಯಾಯಕ್ಕೊಳಗಾದ ಕಣ್ಣೀರು ಒರೆಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬರುತ್ತಿದೆ’ ಎಂದರು.
‘ಹಿಂದೂ ಸಾಮ್ರಾಜ್ಯದ ಸಾಮ್ರಾಟ ಎಂದು ಕರೆಸಿಕೊಳ್ಳುವ ಪ್ರಧಾನಿ ಮೋದಿ ಪಕ್ಕದ ರಾಷ್ಟ್ರದಲ್ಲಿ ಹಿಂದೂಗಳಿಗೆ ಉಂಟಾಗುತ್ತಿರುವ ಅನ್ಯಾಯ ತಡೆಗಟ್ಟಲು ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.
‘ಮುಸ್ಲಿಂ ರಾಷ್ಟ್ರಗಳನ್ನು ಭಾರತದೊಂದಿಗೆ ಒಗ್ಗೂಡಿಸುವ ಅಖಂಡ ಭಾರತ ಪರಿಕಲ್ಪನೆ ಹಾಸ್ಯಾಸ್ಪದ. ಇದರಿಂದ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಲಿದ್ದಾರೆ’ ಎಂದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮತ್ತು ವಕೀಲ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ‘ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯ ಶಾಜಿ, ಪುರಸಭಾ ಸದಸ್ಯರಾದ ದಿನೇಶ್, ಶಿವಶಂಕರ್, ನವೀನ್ ಗೌಡ, ಹರೀಶ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಸುನಿತಾ, ಕೃಷ್ಣೇಗೌಡ, ಜಗದೀಶ್, ಶಿವಕುಮಾರ್, ಮೈಸಿ ಕತ್ತಣ್ಣಿರ ಇದ್ದರು.