ಬುಧವಾರ, ಏಪ್ರಿಲ್ 1, 2020
19 °C
ಯುಗಾದಿ ಹಬ್ಬಕ್ಕೂ ಮಂಕು, ಮನೆಯಲ್ಲೇ ಉಳಿದ ಜನರು

ಆತಂಕದ ನಡುವೆ ಸ್ತಬ್ಧವಾದ ಕೊಡಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊರೊನಾದಿಂದ ಯುಗಾದಿ ಹಬ್ಬದ ಆಚರಣೆಯು ಕೊಡಗಿನಲ್ಲಿ ಕಳೆಗುಂದಿತ್ತು. ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಹಬ್ಬದ ವಾತಾವರಣ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇರಲಿಲ್ಲ. ಹಬ್ಬದ ಮರು ದಿವಸವಾದ ಗುರುವಾರವೂ ಯಾರಲ್ಲೂ ಸಂಭ್ರಮ ಇರಲಿಲ್ಲ. ಎಲ್ಲರೂ ಮನೆಯಲ್ಲೇ ಉಳಿಯುವ ಪ್ರಯತ್ನ ಮಾಡಿದರು.

ಸಡಗರ, ಸಂಭ್ರಮದಿಂದ ಆಚರಿಸಬೇಕಾಗಿದ್ದ ಯುಗಾದಿ ಹಬ್ಬವನ್ನು ಗ್ರಾಮೀಣ ಪ್ರದೇಶದ ಜನರೂ ಸರಳವಾಗಿ ಆಚರಿಸಿದರು.

ಮನೆಗೇ ಬೆವಿನಸೊಪ್ಪು, ಮಾವಿನಸೊಪ್ಪಿನ ತೋರಣವನ್ನು ಕಟ್ಟಿ ಮನೆಯನ್ನು ಸಿಂಗರಿಸಲೂ ಮನಸ್ಸು ಇರಲಿಲ್ಲ. ಮನೆಯಲ್ಲಿಯೇ ದೇವರಿಗೆ ನಮಸ್ಕರಿಸಿ ಬೇವು ಬೆಲ್ಲವನ್ನು ತಿಂದು ಸರಳವಾಗಿ ಆಚರಿಸಿದರು.

ಹಳ್ಳಿಗೆ ತರಕಾರಿ

ಬೆಟ್ಟಗೇರಿ, ಅಪ್ಪಂಗಳ, ತಾಳತ್ತಮನೆ ಮತ್ತು ಭಾಗಮಂಡಲ ರಸ್ತೆಯಲ್ಲಿ ತರಕಾರಿಗಳು ಗೂಡ್ಸ್ ವಾಹನ ಮೂಲಕ ರಸ್ತೆಗಳಿಗೆ ಇಳಿದವು. ಗ್ರಾಹಕರೂ ಕೂಡ ಮುನ್ನೆಚ್ಚರಿಕೆಯಿಂದ ತರಕಾರಿ ಕೊಂಡುಕೊಳ್ಳಲು ಮುಂದಾದರು. ಕೆಲವರು ಮಾಸ್ಕ್ ಧರಿಸದೆಯೇ ತರಕಾರಿ ಕೊಂಡರು. ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗೆ ಆರು ಗಂಟೆ ಮೀಸಲಿಟ್ಟಿದೆ.

ತರಕಾರಿ, ದಿನಸಿಗೆ ಬೇಡಿಕೆ

ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಇನ್ನಿತರ ದಿನಬಳಕೆ ವಸ್ತುಗಳಿಗೆ ಜಿಲ್ಲೆಯಲ್ಲಿ ತೀವ್ರ ಬೇಡಿಕೆ ಸೃಷ್ಟಿಯಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು. ಸದ್ಯಕ್ಕೆ ಅಂಗಡಿಗಳಲ್ಲಿ ದಾಸ್ತಾನು ಇದೆ. ಇನ್ನೆೆರಡು ದಿನದಲ್ಲಿ ಅದು ಖಾಲಿಯಾಗಲಿದೆ. ಆ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟ ಸೃಷ್ಟಿಯಾಗುವ ಎಲ್ಲ ಸಾಧ್ಯತೆಯಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೆಲವೆಡೆ ಸಾಮಗ್ರಿ ಖರೀದಿಸಿದ್ದು ಕಂಡುಬಂತು. ಇನ್ನು ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು.
ಕೆಲವು ವರ್ತಕರು ದುಪ್ಪಟ್ಟು ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಿದರು. ಅಂಗಡಿ ಮುಂದೆ ಒಂದು ಮೀಟರ್‌ಗೆ ಒಂದು ಬಾಕ್ಸ್‌ ಹಾಕಲಾಗಿತ್ತು. ನಗರದ ಸೂಪರ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನರು ಕಂಡುಬಂದರು. ಹಾಲು ಖರೀದಿಗೆ ಜನರ ಸಾಲು ಹೆಚ್ಚಿತ್ತು.

12ರ ನಂತರ ಲಾಕ್‌ಡೌನ್

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರ ನಂತರ ಜಿಲ್ಲೆ ಲಾಕ್‌ಡೌನ್ ಆಯಿತು. ಪೊಲೀಸರು ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು. ಕೆಲಕಾಲ ವಾಹನಗಳ ಸಂಚಾರ ಇದ್ದರೂ ಮಧ್ಯಾಹ್ನ 1 ಗಂಟೆಯ ನಂತರ ಕೊಡಗು ಸ್ತಬ್ಧವಾಯಿತು.

353 ಮಂದಿ ಹೋಂ ಕ್ವಾರಂಟೈನ್‌

ಕೋವಿಡ್-19 ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರಿಸಲಾಗಿದೆ.

ಬುಧವಾರ ಸಂಜೆಯವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 139, ವಿರಾಜಪೇಟೆ ತಾಲ್ಲೂಕಿನಲ್ಲಿ 114 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 109 ಜನರನ್ನು ಪತ್ತೆ ಹಚ್ಚಲಾಗಿದೆ.

ಈ ಪೈಕಿ 353 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ ಮಾಡಲಾಗಿದೆ.

ಒಟ್ಟು 34 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 1 ಪ್ರಕರಣ ದೃಢಪಟ್ಟಿದ್ದು, 10 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿರುತ್ತದೆ. 23 ಪ್ರಕರಣಗಳಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ 3 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು