ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕುನಾಡಿನ ಗ್ರಾಮೀಣ ಉತ್ಸವಗಳಿಗೆ ಕೊರೊನಾ ಅಡ್ಡಿ

Last Updated 1 ಏಪ್ರಿಲ್ 2020, 13:41 IST
ಅಕ್ಷರ ಗಾತ್ರ

‌‌ನಾಪೋಕ್ಲು: ಏಪ್ರಿಲ್ ಪೂರ್ತಿ ನಾಲ್ಕುನಾಡಿನಲ್ಲಿ ಮನೆಮಾಡಿರುತ್ತಿದ್ದ ಗ್ರಾಮೀಣ ಉತ್ಸವಗಳ ಸಂಭ್ರಮಕ್ಕೆ ಈ ಬಾರಿ ಕೊರೊನಾ ಅಡ್ಡಿಯಾಗಿದೆ.

ನಾಡಿನೆಲ್ಲೆಡೆ ಭಕ್ತರನ್ನು ಒಗ್ಗೂಡಿಸುವ ವೈವಿಧ್ಯಮಯ ಧಾರ್ಮಿಕ ಉತ್ಸವಗಳು ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಆಚರಣೆಗಳಾಗಿ ನಡೆದುಕೊಂಡು ಬಂದಿದ್ದು ಸರ್ಕಾರದ ಕಟ್ಟುನಿಟ್ಟಿನ ಆದೇಶದಿಂದಾಗಿಇದೇ ಮೊದಲ ಬಾರಿಗೆ ಎಲ್ಲ ಆಚರಣೆಗೂ ತಡೆ ಬಿದ್ದಿದೆ. ಇದರಿಂದಾಗಿ ಗ್ರಾಮೀಣ ಜನರು ನಿರಾಸೆ ಅನುಭವಿಸುವಂತಾಗಿದೆ.

ಕೋವಿಡ್ 19 ರ ಆತಂಕದಿಂದಾಗಿ ಕೆಲವು ದೇವಾಲಯಗಳಲ್ಲಿ ವಾರ್ಷಿಕ ಉತ್ಸವವನ್ನು ಸ್ಥಗಿತಗೊಳಿಸಲಾಗಿದೆ. ವಾರ್ಷಿಕ ಉತ್ಸವಕ್ಕೆ ಪೂರ್ವಭಾವಿಯಾಗಿ ಮಾರ್ಚ್‌ನಲ್ಲಿ ಕೆಲವೊಂದು ಆಚರಣೆಗಳನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಆದರೆ ಈಗ ಉಳಿದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವು ಉತ್ಸವಗಳನ್ನಷ್ಟೇ ಮುಂದೂಡಲಾಗಿದೆ.

ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ನೂತನ ಧ್ವಜ ಪ್ರತಿಷ್ಠೆ ಹಾಗೂ ಮಹಾಬಲಿಪೀಠದ ಪುನರ್ ಪ್ರತಿಷ್ಟೆ ಸಮಾರಂಭ ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನೆರವೇರಿತ್ತು. ಏ 14 ರಿಂದ 22 ರವರೆಗೆ ವಾರ್ಷಿಕ ಉತ್ಸವ ನಡೆಸಲು ದೇವಾಲಯದ ಆಡಳಿತ ಮಂಡಳಿ ಸಿದ್ಧತೆ ನಡೆಸಿತ್ತು. 11ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರಾಚೀನ ದೇವಾಲಯದಲ್ಲಿ ಪಾರ್ವತಿ ಪರಮೇಶ್ವರರ ಜೋಡಿ ದೇವರ ನೃತ್ಯಬಲಿ ವಿಶೇಷವಾಗಿದ್ದು ಕೊರೊನಾ ಭೀತಿ ಈ ವಾರ್ಷಿಕ ಉತ್ಸವಕ್ಕೆ ಅಡ್ಡಿ ಮಾಡಿದೆ.

ಬಲಮುರಿಯ ಅಗಸ್ತ್ಯೇಶ್ವರ ದೇವಾಯದ ವಾರ್ಷಿಕ ಉತ್ಸವದ ಧಾರ್ಮಿಕ ಆಚರಣೆಗಳು ಮಾರ್ಚ್‌ನಲ್ಲಿ ಒಂದು ವಾರ ನೆರವೇರಿದ್ದು, ಏಪ್ರಿಲ್ 3 ರಂದು ಇಲ್ಲಿನ ಮಾಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠೆ ನೆರವೇರಿಸಲು ದೇವಾಲಯದ ಜೀರ್ಣೋಧ್ದಾರ ಸಮಿತಿ ತೀರ್ಮಾನಿಸಿತ್ತು.ಈ ಕಾರ್ಯಕ್ಕೂ ಕೊರೊನಾ ಕರಿನೆರಳು ಬಿದ್ದಿದೆ.

ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿ ಪ್ರತಿವರ್ಷ ಏಪ್ರಿಲ್ 12 ಮತ್ತು 13 ರಂದು ನಡೆಯುವ ಪನ್ನಂಗಾಲ ತಮ್ಮೆ ದೇವಿಯ ಉತ್ಸವಕ್ಕೆ ಲಾಕ್ ಡೌನ್ ಅಡ್ಡಿಯಾಗಿದೆ.

‘ಓಲೆಗರಿಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಈ ಕೊಡೆ ಹಬ್ಬದಲ್ಲಿ ಬಳಸಲಾಗುತ್ತದೆ. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ಧತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ. ಹರಕೆಯ ಎತ್ತುಗಳೊಂದಿಗೆ ದೇವಾಲಯಕ್ಕೆ ಭಕ್ತರು ಆಗಮಿಸುವುದು, ದೇವರ ಮೂರ್ತಿ ಹಾಗೂ ಕೊಡೆ ಮೆರವಣಿಗೆ, ಭಕ್ತರು ಭಾವಪರವಶತೆಯಿಂದ ತಲೆಗೆ ಕತ್ತಿಯಿಂದ ಹೊಡೆದುಕೊಂಡು ಆವೇಶಭರಿತರಾಗಿ ನರ್ತಿಸುವುದು ಮುಂತಾದ ಸಾಂಪ್ರದಾಯಿಕ ಆಚರಣೆಗಳು ಇಲ್ಲಿ ಜರುಗುತ್ತಿದ್ದು ತಲೆತಲಾಂತರದ ಉತ್ಸವವನ್ನು ಕೊರೊನಾ ಭೀತಿಯಿಂದಾಗಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ‘ ಎಂದು ಯವಕಪಾಡಿ ನಿವಾಸಿ ತಮ್ಮಯ್ಯ ಹೇಳಿದರು.

ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ರಾಟೆ ಉತ್ಸವ ನಡೆಯುವುದೂ ಸಂಶಯವಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕದಂತಿರುವ ಈ ಉತ್ಸವದ ಅಂಗವಾಗಿ ಬೇಡು ಹಬ್ಬ, ದೇವರ ರಾಟೆ ಉತ್ಸವ, ಭದ್ರಕಾಳಿ, ಶಾಸ್ತಾವು ಹಾಗೂ ಕ್ಷೇತ್ರಪಾಲ ಕೋಲಗಳಿಗೂ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT