ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: 4 ಸಾವಿರ ಮಂದಿ ಜಿಲ್ಲೆ ಪ್ರವೇಶಿಸುವ ನಿರೀಕ್ಷೆ

ಆಟೊ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ, ಕೆಎಸ್‌ಆರ್‌ಟಿಸಿ– ಖಾಸಗಿ ಬಸ್‌ ಸಂಚಾರಕ್ಕೆ ಅನುಮತಿ ಇಲ್ಲ
Last Updated 3 ಮೇ 2020, 15:12 IST
ಅಕ್ಷರ ಗಾತ್ರ

ಮಡಿಕೇರಿ: ಹೊರ ರಾಜ್ಯ, ಹೊರ ಜಿಲ್ಲೆಗೆ ವಿದ್ಯಾಭ್ಯಾಸ, ಉದ್ಯೋಗ, ಸಂಬಂಧಿಕರ ಮನೆಗೆ ತೆರಳಿದ್ದ ಜಿಲ್ಲೆಯವರು ಲಾಕ್‌ಡೌನ್‌ನಿಂದ ಅಲ್ಲೇ ಉಳಿದಿದ್ದರು. ಇದೀಗ ಹೊಸ ಮಾರ್ಗಸೂಚಿಯ ಪ್ರಕಾರ ಅವರಿಗೆ ಜಿಲ್ಲೆಗೆ ಮರಳಲು ಅನುಮತಿ ನೀಡಲಾಗಿದೆ. ಸಂಪಾಜೆ ಹಾಗೂ ಕೊಪ್ಪ ಚೆಕ್‌ಪೋಸ್ಟ್‌ ಮೂಲಕ ಪ್ರವೇಶಕ್ಕೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರು ಇಲ್ಲಿ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದಾಜು 3ರಿಂದ 4 ಸಾವಿರ ಜನರು ಜಿಲ್ಲೆಗೆ ಬರುವ ನಿರೀಕ್ಷೆಯಿದೆ. ಎರಡು ಚೆಕ್‌ಪೋಸ್ಟ್‌ನಲ್ಲೂ ಅವರ ಆರೋಗ್ಯ ತಪಾಸಣೆ ಮಾಡಿ, ಮೊಹರು ಹಾಕಿಯೇ ಒಳಗೆ ಬಿಡಲಾಗುವುದು. ಬಂದವರು ಎಲ್ಲರೂ ಓಡಾಟ ನಡೆಸುವಂತಿಲ್ಲ. ಹೋಂ ಕ್ವಾರಂಟೈನ್‌ನಲ್ಲೇ ಇರಬೇಕು. ಅವರು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿಯೇ ಅನುಮತಿ ನೀಡಲಾಗುವುದು’ ಎಂದು ಹೇಳಿದರು.

ಹೊರ ರಾಜ್ಯಕ್ಕೆ ತೆರಳಲು 3,886, ಕೊಡಗಿಗೆ ಬರಲು 995 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ 15 ದಿನಗಳು ತೀವ್ರ ಕಟ್ಟೆಚ್ಚರ ವಹಿಸಬೇಕಿದೆ. ಮಡಿಕೇರಿ, ಗೋಣಿಕೊಪ್ಪಲು, ಕುಶಾಲನಗರದಲ್ಲಿ ಗಂಟಲು ದ್ರವ ಸಂಗ್ರಹ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.

ತಮಿಳುನಾಡು ರಾಜ್ಯಕ್ಕೆ ತೆರಳಲು 2,242, ಅಸ್ಸಾಂ 429, ಪಶ್ಚಿಮ ಬಂಗಾಳಕ್ಕೆ 303, ಕೇರಳ 188, ಛತ್ತೀಸ್‍ಗಡ 25, ಒಡಿಶಾ 27, ರಾಜಸ್ತಾನ 45, ಮೇಘಾಲಯ 228, ಮಧ್ಯಪ್ರದೇಶ 17, ಉತ್ತರ ಪ್ರದೇಶ 126, ಆಂಧ್ರ ಪ್ರದೇಶಕ್ಕೆ 49, ಜಾರ್ಖಂಡ್‌ಗೆ 189, ಗುಜರಾತ್ 9, ಮಹಾರಾಷ್ಟ್ರದ 4 ಮಂದಿ ಸೇರಿದಂತೆ ಒಟ್ಟು 3,886 ಮಂದಿ ತೆರಳಲು ನೋಂದಣಿ ಮಾಡಿಕೊಂಡಿದ್ದಾರೆ. ಅವರೇ ಪ್ರಯಾಣದ ವೆಚ್ಚ ಭರಿಸಬೇಕು. ಸದ್ಯಕ್ಕೆ ಜಿಲ್ಲೆಗಳಿಂದ ತೆರಳುವ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ ಇಲ್ಲ. 30 ಮಂದಿ ಕಾರ್ಮಿಕರು ಒಟ್ಟಾಗಿ ಬಂದರೆ ಅವರಿಗೆ ತಮ್ಮ ಸ್ವಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಹೊರ ಜಿಲ್ಲೆಗಳಲ್ಲಿ ಸಿಲುಕಿರುವ ಕೊಡಗಿನ 706, ಹೊರ ರಾಜ್ಯದಲ್ಲಿ ಸಿಲುಕಿರುವ 279, ಹೊರ ದೇಶಗಳಲ್ಲಿ ಸಿಲುಕಿರುವ 10 ಮಂದಿ ಸೇರಿದಂತೆ 995 ಮಂದಿ ಸೇವಾಸಿಂಧು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಒಮ್ಮೆ ಬಂದರೆ ಜಿಲ್ಲೆಯಿಂದ ಸದ್ಯಕ್ಕೆ ತೆರಳುವಂತಿಲ್ಲ ಎಂದು ಹೇಳಿದರು.

ತಮ್ಮೂರುಗಳಿಗೆ ಹೋಗುವುದಿದ್ದರೆ, ಮಡಿಕೇರಿ, ನಾಪೋಕ್ಲು, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಆಟೊ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ

ವಾರದಲ್ಲಿ ನಾಲ್ಕು ದಿನ ಆಟೊ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅವಕಾಶವಿದೆ. ಆಟೊ ಚಾಲಕ ಹಾಗೂ ಒಬ್ಬ ಪ್ರಯಾಣಿಕ, ಟ್ಯಾಕ್ಸಿಯಲ್ಲಿ ಚಾಲಕ, ಇಬ್ಬರು ಪ್ರಯಾಣಿಕರಿಗೆ ಅವಕಾಶವಿದೆ. ದಿನಸಿ ಖರೀದಿ, ಆಸ್ಪತ್ರೆಗೆ ಕರೆದೊಯ್ಯಲು ಮಾತ್ರ ಅವಕಾಶ. ಸುಮ್ಮನೇ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ದಿನಸಿ ಖರೀದಿಯು ಯಥಾಪ್ರಕಾರ ವಾರದಲ್ಲಿ ನಾಲ್ಕು ದಿನ ಮಾತ್ರ ಅವಕಾಶವಿದೆ. ಬೆಳಿಗ್ಗೆ 6ರಿಂದ ಸಂಜೆ 4ರ ತನಕ ವಿನಾಯಿತಿ ನೀಡಿರುವ ಅಂಗಡಿಗಳು ಮಾತ್ರ ಕಾರ್ಯಚರಿಸಬಹುದು ಎಂದು ಮಾಹಿತಿ ನೀಡಿದರು.
ಮದ್ಯ ಅಂಗಡಿಗಳೂ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದ ಬೆಳಿಗ್ಗೆ 9ರಿಂದ ಸಂಜೆ 4ರ ತನಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಬಸ್‌ಗೆ ಇಲ್ಲ ಅನುಮತಿ:

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರಕ್ಕೆ ಜಿಲ್ಲೆಯ ಒಳಗೂ ಅನುಮತಿ ನೀಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ 1,011 ಮಂದಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಇದುವರೆಗೂ 777 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 730 ಮಂದಿ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದೆ, 51 ಮಂದಿಯ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಳೆದ 45 ದಿನಗಳಿಂದ ಜಿಲ್ಲೆಯ 14 ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಸಿಸಿ ಕ್ಯಾಮೆರಾ ಹಾಕಲಾಗಿತ್ತು. ಅನಗತ್ಯವಾಗಿ ಸಂಚರಿಸಿದ 1,167 ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವೈನ್ ಶಾಪ್ ಮುಂದೆ ಅಂತರ ಕಾಯ್ದುಕೊಳ್ಳಲು ಸೂಕ್ತ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್‌ ಅವರು ಮಾಹಿತಿ ನೀಡಿದರು.

ಸಲೂನ್‌ ಶಾಪ್‌ಗೆ ಇಲ್ಲ ವಿನಾಯಿತಿ:ವಾರದಲ್ಲಿ ನಾಲ್ಕು ದಿನ ಆಭರಣ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಸಲೂನ್‌ ತೆರೆಯಲು ಸದ್ಯಕ್ಕೆ ಅನುಮತಿ ಸಿಕ್ಕಿಲ್ಲ.

ಮಾಸ್ಕ್‌ ಹಾಕದಿದ್ದರೆ ₹ 100 ದಂಡ

ಸೋಮವಾರದಿಂದ ಜಿಲ್ಲೆಯಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್‌ ಹಾಕದಿದ್ದರೆ ಹಾಗೂ ಉಗುಳಿದರೆ ಸ್ಥಳದಲ್ಲೇ ₹ 100 ದಂಡ ಹಾಕಿ ರಶೀದಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಒಂದು ವೈನ್ಸ್‌ ಶಾಪ್‌ ಪರವಾನಗಿ ರದ್ದು

ಲಾಕ್‌ಡೌನ್‌ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆರೋಪವು ಸಾಬೀತಾಗಿದ್ದು ಕುಶಾಲನಗರ ಒಂದು ವೈನ್ಸ್‌ಶಾಪ್‌ ಪರವಾನಗಿ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದರು.
ಇನ್ನೂ ಕೆಲವು ವೈನ್ಸ್‌ಗಳಲ್ಲಿ ದಾಸ್ತಾನು ವ್ಯತ್ಯಾಸ ಕಂಡುಬಂದ ಆರೋಪವಿದೆ. ಅಬಕಾರಿ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಸೋಮವಾರ ಉಳಿದ ಪ್ರಕರಣಗಳ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT