ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಕೆಳಗೆ ಕತ್ತಲು ಬಾರದಿರಲಿ: ಸಂಸದ ಪ್ರತಾಪಸಿಂಹ

Published 29 ನವೆಂಬರ್ 2023, 13:55 IST
Last Updated 29 ನವೆಂಬರ್ 2023, 13:55 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾವೇರಿ ನದಿ ಹುಟ್ಟುವ ಕೊಡಗು ಜಿಲ್ಲೆಯಲ್ಲಿ ‘ದೀಪದ ಕೆಳಗೆ ಕತ್ತಲು’ ಎಂಬಂತಹ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು’ ಎಂದು ಸಂಸದ ಪ್ರತಾಪಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತಿವೆ’ ಎಂದು ಅಸಮಾಧಾನ  ವ್ಯಕ್ತಪಡಿಸಿದ ಅವರು ‘ಜಿಲ್ಲೆಯ ಪ್ರತೀ ಕುಟುಂಬಕ್ಕೂ ಜಲಮೂಲವನ್ನು ಬಳಸಿಕೊಂಡು ನಲ್ಲಿ ನೀರು ಸಂಪರ್ಕ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.

ಈ ಬಾರಿ ಬರ ಇರುವ ಕಾರಣ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದೂ ಅವರು ಹೇಳಿದರು.

ಕೊಡಗು ಜಿಲ್ಲೆಯ 5 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ‘ಬರನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ₹ 35 ಕೋಟಿ ಇದೆ. ಇತ್ತೀಚೆಗೆ ಸರ್ಕಾರ ₹ 7.50 ಕೋಟಿ ಬಿಡುಗಡೆ ಮಾಡಿದೆ. ಬರ ನಿರ್ವಹಣೆ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಪ್ರತಿಕ್ರಿಯಿಸಿ, ‘ಅಧಿಕಾರಿಗಳು ಜನಜೀವನ್‌ ಮಿಷನ್ ಯೋಜನೆಯ ಕಾಮಗಾರಿ ಕುರಿತು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡಿದರೆ ಯೋಜನೆಯನ್ನು ಯಶಸ್ವಿಯಾಗಿ, ಸುಲಲಿತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿ’

‘ಕೇಂದ್ರ ಸರ್ಕಾರದಿಂದ ಒಟ್ಟು 42 ಯೋಜನೆಗಳಿವೆ. ಈ ಯೋಜನೆಗಳನ್ನು ಜನರಿಗೆ ತಲುಪಿಸಬೇಕು’ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸಂಸದ ಪ್ರತಾಪಸಿಂಹ ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಬ್ಯಾಂಕ್‍ಗಳ ಹಲವು ಕಾರ್ಯಕ್ರಮಗಳು, ಉಜ್ವಲ ಯೋಜನೆ, ಜಲಜೀವನ್ ಮಿಷನ್ ಯೋಜನೆ ಹೀಗೆ ಹಲವು ಯೋಜನೆಗಳನ್ನು ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದರು.

ರಸ್ತೆ, ಕುಡಿಯುವ ನೀರು ಹಾಗೂ ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ್, ಜಯಣ್ಣ, ಅಪ್ಪಣ್ಣ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ, ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಕುಮಾರಸ್ವಾಮಿ, ಪಿ.ಎಂ.ವಿಜಯಾ, ಯಮುನಾ ಚಂಗಪ್ಪ, ಬಿ.ಚಂದ್ರಕಲಾ, ಚೆಕ್ಕೇರ ಅಯ್ಯಪ್ಪ, ಭಾಸ್ಕರ ನಾಯಕ,
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಬಿಸಿಎಂ ಇಲಾಖಾ ಅಧಿಕಾರಿ ಕವಿತಾ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಇದ್ದರು.

ತಿರಸ್ಕೃತಗೊಂಡ ಅರ್ಜಿಗಳು: ಗಮನಹರಿಸಲು ಜಿಲ್ಲಾಧಿಕಾರಿಗೆ ಸೂಚನೆ

ಕೊಡಗು ಜಿಲ್ಲೆಯಲ್ಲಿ 63 ಕಡೆ ಬಿಎಸ್‍ಎನ್‍ಎಲ್ ಟವರ್ ನಿರ್ಮಿಸಲು ಅನುಮೋದನೆ ದೊರೆತಿದೆ. 20 ಟವರ್‌ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ನಾಗರಹೊಳೆ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಟವರ್ ನಿರ್ಮಾಣ ಮಾಡುವ ಅರ್ಜಿ ತಿರಸ್ಕೃತಗೊಂಡಿದೆ. ಈ ಕುರಿತು ಜಿಲ್ಲಾಧಿಕಾರಿ ಅವರು ಅರಣ್ಯ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪಸಿಂಹ ಸೂಚಿಸಿದರು. ಟವರ್ ನಿರ್ಮಾಣ ಕುರಿತು ಸಹಕರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಪ್ರತಿಧ್ವನಿಸಿದ ಹಾಡಿಗಳ ಸಮಸ್ಯೆ

ಸಭೆಯಲ್ಲಿ ಹಾಡಿಗಳ ಸಮಸ್ಯೆಗಳೂ ಪ್ರತಿಧ್ವನಿಸಿದವು. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯರೊಬ್ಬರು ಮಾತನಾಡಿ ‘ತಿತಿಮತಿ ವ್ಯಾಪ್ತಿಯ ಚೈನಿಹಡ್ಲು ಹಾಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಮಕ್ಕಳ ಓದಿಗೆ ತೊಂದರೆಯಾಗಿದೆ’ ಎಂದು ಅವರು ಸಭೆಯ ಗಮನಕ್ಕೆ ತಂದರು. ಈ ಕುರಿತು ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ‘ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಂಚಿತವಾಗಿ ತಿಳಿಸಿದಲ್ಲಿ ಪರಿಶೀಲಿಸಿ ಅನುಮತಿ ನೀಡಲಾಗುವುದು. ಅದು ಬಿಟ್ಟು ಕೆಲಸ ಆರಂಭಿಸುವ ಸಂದರ್ಭದಲ್ಲಿ ಗಮನಕ್ಕೆ ತರುತ್ತಾರೆ’ ಎಂದು ಅವರು ಹೇಳಿದರು. ಜಿಲ್ಲೆಯ ಹಾಡಿಗಳಲ್ಲಿ ಪೌಷ್ಠಿಕ ಆಹಾರ ವಿತರಣೆ ಜೊತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತಾಪ‍ಸಿಂಹ ಸೂಚಿಸಿದರು.

ಹೊಸ ಆಸ್ಪತ್ರೆ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಸರ್ಕಾರ ₹ 135 ಕೋಟಿ ಬಿಡುಗಡೆ ಮಾಡಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಪ್ರತಾಪಸಿಂಹ ಸೂಚಿಸಿದರು. ಈ ವೇಳೆ ಮಾತನಾಡಿದ ಕಾಮಗಾರಿ ನಿರ್ವಹಿಸುತ್ತಿರುವವರು ಮಾತನಾಡಿ ‘₹ 108 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಇತರೆ ಸೂಚನೆಗಳು

  • ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ

  • ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೆಡೆ ದೊರೆಯುವಂತಾಗಬೇಕು

  • ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಉನ್ನತ ಶ್ರೇಣಿ ಪಡೆಯುವಂತಾಗಲು ಕ್ರಮ ವಹಿಸಿ

  • ತೋಟಗಾರಿಕಾ ಇಲಾಖೆ ಸಸಿ ವಿತರಣೆ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು

  • ಸ್ವಚ್ಛ ಭಾರತ ಅಭಿಯಾನದಡಿ ಪ್ರತೀ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ವಾಹನ ಒದಗಿಸಲಾಗಿದೆ. ನಗರ ಪಟ್ಟಣ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಸ್ವಚ್ಛತೆಯತ್ತ ಗಮನಹರಿಸಬೇಕು

  • ಗಾಳಿಬೀಡು ಬಳಿ ಇರುವ ನವೋದಯ ಶಾಲೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಿ

ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಪ್ರವಾಸಿಗರಿಗೂ ಸಹ ಅರಿವು ಮೂಡಿಸಬೇಕು
ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯ
ಮಡಿಕೇರಿಯ ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು
ಮಡಿಕೇರಿಯ ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT